ಹಣಕ್ಕಾಗಿ ಮತ ಮಾರಿಕೊಳ್ಳಬೇಡಿ : ಹುಚ್ಚ ವೆಂಕಟ್
Team Udayavani, May 5, 2018, 7:30 AM IST
ಮಡಿಕೇರಿ: ಮತದಾನದ ಮೂಲಕ ಈ ನಾಡಿನ ಭವಿಷ್ಯ ಬರೆಯುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದ್ದು, ಹಣ, ಆಮಿಷಗಳಿಗಾಗಿ ಮತಗಳನ್ನು ಮಾರಿಕೊಳ್ಳಬೇಡಿ ಎಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಕ್ಷೇತರ ಅಭ್ಯರ್ಥಿ ಹಾಗೂ ನಟ ಹುಚ್ಚ ವೆಂಕಟ್ ಕರೆ ನೀಡಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆಯ ಹಂತದಲ್ಲಿ ಆಮಿಷಗಳಿಗೆ ಯಾರು ತಮ್ಮನ್ನು ತಾವು ಮಾರಿಕೊಳ್ಳುತ್ತಾರೋ, ಅವರು ನನ್ನ ಎಕ್ಕಡಕ್ಕೆ ಸಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣೆಯ ಸಂದರ್ಭ ಮತಗಳಿಗಾಗಿ ಚುನಾವಣಾ ಆಯೋಗ ನಿಗದಿ ಮಾಡಿರುವ 28 ಲಕ್ಷ ರೂ.ಗಳಷ್ಟು ಹಣವನ್ನು ನಾನು ಪ್ರಚಾರಕ್ಕಾಗಿ ಖರ್ಚು ಮಾಡಲಾರೆ. ವೇದಿಕೆ ಹತ್ತಿ ಪ್ರಚಾರವನ್ನು ಕೂಡ ಮಾಡುವುದಿಲ್ಲವೆಂದ ಹುಚ್ಚ ವೆಂಕಟ್, ಚುನಾವಣೆಗೆಂದು ಹಣವನ್ನು ವ್ಯಯ ಮಾಡುವ ಬದಲು ಅದನ್ನು ಸಮಾಜಕ್ಕೆ, ಬಡ ಜನರಿಗೆ ವಿನಿಯೋಗಿಸುವುದು ಸೂಕ್ತವೆಂದರು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋತರೆ ಮುಂದಿನ ಬಾರಿ ಮಂಡ್ಯದಿಂದ ಲೋಕಸಭಾ ಚುಣಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿದರು.
ಚುನಾವಣೆಯನ್ನು ಎದುರಿಸಲು ಇತರರು ಮಾಡುವಂತೆ ನಾನು ಕುಕ್ಕರ್, ಹಣ, ಮದ್ಯ, ಸೀರೆಯನ್ನು ಮತದಾರರಿಗೆ ನೀಡಲಾರೆ. ಇದರ ಬದಲಿಗೆ ಜನರ ಸೇವೆಯ ಮೂಲಕ ಈ ಸಮಾಜಕ್ಕೆ ನನ್ನ ಬೆವರು ಮತ್ತು ರಕ್ತವನ್ನು ನೀಡುತ್ತೇನೆ. ನನ್ನ ಬಗ್ಗೆ ನಂಬಿಕೆ ಇದ್ದರೆ ಮತ ಹಾಕುತ್ತಾರೆ. ಇಲ್ಲವೆಂದರೂ ಸಾಮಾಜಿಕ ಕಳಕಳಿಯಿಂದ ಹಿಂದೆ ಸರಿಯುವುದಿಲ್ಲವೆಂದರು.
ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಾನು, ತಂದೆಯ ಪಾದರಕ್ಷೆಯನ್ನೆ ನನ್ನ ಚುನಾವಣಾ ಚಿಹ್ನೆಯಾಗಿ ಮಾಡಿಕೊಂಡಿರುವುದಾಗಿ ಹುಚ್ಚ ವೆಂಕಟ್ ಸ್ಪಷ್ಟಪಡಿಸಿದರು.
ಪ್ರಕಾಶ್ ರೈಗೆ ಕೆಲಸವಿಲ್ಲ
ನಟ ಪ್ರಕಾಶ್ ರೈಗೆ ಮಾಡಲು ಕೆಲಸವಿಲ್ಲದ ಕಾರಣ ದೇಶದ ಪ್ರಧಾನಿ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಒಬ್ಬ ವ್ಯಕ್ತಿ ಶ್ರಮ ಪಟ್ಟು ಕಾರ್ಯ ನಿರ್ವಹಿಸುವಾಗ ಅವರನ್ನು ತುಳಿಯುವ ಕೆಲಸ ಮಾಡಬಾರದು. ಪ್ರಧಾನಿ ಮೋದಿಯವರ ಬಗ್ಗೆ ಮಾತನಾಡ ಬೇಕಾದರೆ ಯೋಗ್ಯತೆ ಇರುಬೇಕು ಎಂದು ಹುಚ್ಚ ವೆಂಕಟ್ ಇದೇ ಸಂದರ್ಭ ಅಸಮಾಧಾನ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.