ಹಣಕ್ಕಲ್ಲ, ಕಲೆಗಿರಲಿ ಆದ್ಯತೆ: ಏರ್ಯ
Team Udayavani, May 5, 2018, 8:50 AM IST
ಬಂಟ್ವಾಳ: ಹಣ ಗಳಿಸುವ ನಿಟ್ಟಿನಲ್ಲಿ ನಾವು ಪ್ರಜಾಸತ್ತೆಯನ್ನು, ಕಲಾ ಪ್ರಕಾರವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಹಿರಿಯ ಸಾಹಿತಿ ಡಾ| ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಹೇಳಿದರು. ಅವರು ಮೇ 4ರಂದು ನೂಜಿಬೈಲು ಅನುದಾನಿತ ಹಿ. ಪ್ರಾ. ಶಾಲಾ ವಠಾರ ಮಂಚಿಯಲ್ಲಿ ಬಿ.ವಿ. ಕಾರಂತ ರಂಗ ಭೂಮಿಕಾ ಟ್ರಸ್ಟ್ ಆಶ್ರಯದಲ್ಲಿ ಜರಗಿದ ಬಿ.ವಿ. ಕಾರಂತ ನೆನಪಿನ ಮಂಚಿ ನಾಟಕೋತ್ಸವ ದಶಮಾನ ಸಂಭ್ರಮದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಿ.ವಿ. ಕಾರಂತರ ಹೆಸರನ್ನು ಎಲ್ಲರ ಮನಸ್ಸಿನವರೆಗೆ ಕೊಂಡೊಯ್ಯಬೇಕಾದ ಜವಾಬ್ದಾರಿ ಈ ಬಿ.ವಿ. ಕಾರಂತ ರಂಗ ಭೂಮಿಕಾ ಟ್ರಸ್ಟ್‌ನದ್ದು. ಎಳೆಯರನ್ನು ಬಳಸಿಕೊಂಡು ಎಳೆಯ ಪ್ರತಿಭೆಗಳು ಭಾಗವಹಿಸುವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಬಿ.ವಿ. ಕಾರಂತರ ನಾಟಕಗಳನ್ನು ಶಾಲೆಗಳಲ್ಲಿ ಮಾಡುತ್ತಿದ್ದ ನೆನಪು ಅವಿಸ್ಮರಣೀಯ. ನಾಟಕಗಳಲ್ಲಿ ಹೆಚ್ಚು ಪ್ರಯೋಗಾತ್ಮಕ ನಾಟಕ ಗಳು ಮೂಡಿ ಬರಬೇಕು. ಬಿ.ವಿ. ಕಾರಂತರ ಹೆಸರನ್ನು ಪಿಲಿಕುಳ ನಿಸರ್ಗಧಾಮಕ್ಕೆ ಇಟ್ಟ ಹೆಮ್ಮೆ ನಮಗಿದೆ. ಅದೇ ರೀತಿ ಬಿ.ಸಿ. ರೋಡ್‌ನಲ್ಲೂ ಅವರನ್ನು ಸ್ಮರಿಸುವ ಕೆಲಸ ಆಗಲಿ ಎಂದರು. ಮುಖ್ಯ ಅತಿಥಿಗಳಾಗಿ ವಿಟ್ಲ ಕನ್ನಡ ಸಂಘದ ಅಧ್ಯಕ್ಷ ನಿವೃತ್ತ ಪ್ರಾಂಶುಪಾಲ ಅನಂತ ಕೃಷ್ಣ ಹೆಬ್ಟಾರ್, ನೂಜಿಬೈಲು ಹಿ.ಪ್ರಾ. ಶಾಲಾ ಸಂಚಾಲಕಿ ಶಾಂತಲಾ ಎನ್. ಭಟ್, ಉಪಸ್ಥಿತರಿದ್ದರು.
ಉಪಾಧ್ಯಕ್ಷ ಗಣೇಶ್ ಐತಾಳ್ ಸ್ವಾಗತಿಸಿ, ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಪ್ರಸ್ತಾವಿಸಿದರು. ಬಾಲಕೃಷ್ಣ ಶೆಟ್ಟಿ ವಂದಿಸಿದರು. ನ್ಯಾಯವಾದಿ ರವೀಂದ್ರ ಕುಕ್ಕಾಜೆ ನಿರೂಪಿಸಿದರು. ಸಭಾ ಕಾರ್ಯ ಕ್ರಮದ ಬಳಿಕ ಸುವರ್ಣ ಪ್ರತಿಷ್ಠಾನ ರಿ. ಮಂಗಳೂರು ಇವರಿಂದ ‘ಮಳೆ ನಿಲ್ಲುವವರೆಗೆ’ ಕನ್ನಡ ನಾಟಕ ಜರಗಿತು.
ರಂಗಪ್ರವೀಣ
ಈಗಿನ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಮುಳುಗಿರುವ ನಾವು ಇಂತಹ ಅಭಿರುಚಿ ನಾಟಕಗಳಿಂದ ದೂರವಿರುವುದು ಮಾತ್ರ ನೋವಿನ ಸಂಗತಿ. ಬಿ.ವಿ.ಕಾರಂತರು ಬಯಲನ್ನು ರಂಗಮಂದಿರವನ್ನಾಗಿ ಮಾಡಿಕೊಂಡ ಅದ್ವಿತೀಯ ರಂಗಪ್ರವೀಣ. ನಾಟಕದ ಎಲ್ಲ ಪ್ರಕಾರಗಳಲ್ಲಿ ಎಲ್ಲ ಅಚ್ಚನ್ನು ಒತ್ತಿದವರು. ತಮ್ಮದೇ ಆದ ಸಂಗೀತ ಉಪಕರಣಗಳನ್ನು ಬಳಸಿಕೊಂಡು ತನ್ನದೇ ಶೈಲಿಯಲ್ಲಿ ನುಡಿಸಿ ನಡೆಸಿಕೊಂಡು ಹೆಸರಾದವರು. ಬಿ.ವಿ.ಕಾರಂತರೇ ಸ್ವತಃ ಆಡಿಸಿದ ನಾಟಕಗಳ ಅಭಿನಯವನ್ನು ಕಣ್ಣಾರೆ ಕಂಡು ಅನುಭವಿಸಿದ್ದು ಮರೆಯಲಾಗದು.
– ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ, ಹಿರಿಯ ಸಾಹಿತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.