ಟೊಮೆಟೋ ರಾಮಾಯಣ


Team Udayavani, May 6, 2018, 6:00 AM IST

8.jpg

ನನ್ನ ಅಡಿಗಿ ಮನೀ ಪಟ್ಟದ ರಾಣಿ ಅಂದ್ರ ಇನ್ಯಾರೂ ಅಲ್ಲ, ಕಾಯಿಪಲ್ಲೆ. ದಿನದ ನನ್ನ ಸಂಜೆಯ ವಾಯುವಿಹಾರ ಕಾಯಿಪಲ್ಲೆ ಅಂಗಡಿಗೆ ಹೋಗದಿದ್ರ ವ್ಯರ್ಥ, ಅಪೂರ್ಣ. ನೋಡಿ ಸುಖ ಪಡೀಲಿಕ್ಕೇಂತ ಅಲ್ಲೇ ಹೋಗೋದು. ಮನಿ ಹತ್ರ ಒಂದೆರಡು ಇಂಥ ಅಂಗಡಿ ಅದಾವ. ಎಷ್ಟೋ ಸಲೆ ನಿರ್ವಾಹ ಇಲ್ಲದೆ ತುಟ್ಟಿ, ಬಾಸೀ ಪಲ್ಲೆ ತರುವಾಗ ಅಂಗಡಿಯವನನ್ನು ದುರಗುಟ್ಟಿ ನೋಡಕೋತ ಮನಿ ಮುಟ್ಟು ತನಕಾ ಬೈಕೋತ ಬರತೇನಿ! 

    ದೊಡ್ಡ ಕಾಯಿಪಲ್ಲೆ ಪ್ಯಾಟಿಗೆ ಹೋಗೂದಂದ್ರ ನನಗ ಹಬ್ಟಾನ ಹಬ್ಬ. ಹೋಗೋ ಸಂಭ್ರಮದಾಗ ಒಂದು ಬಾಸ್ಕೆಟ್‌ನ್ಯಾಗ ದೊಡ್ಡವು, ಸಣ್ಣವು ಪ್ಲಾಸ್ಟಿಕ್‌ ಚೀಲ ಇಟಗೊಂಡ ಬಿಸಲ ಇಳಿಯುವುದನ್ನು ನೋಡಿ ಹೊರಟ ಬಿಡತೇನಿ. ಖರೇ ಹೇಳಬೇಕಂದ್ರ ಪಲ್ಲೆ ಕೊಳ್ಳೋದಕ್ಕಿಂತ ಅದರ ತಾಜಾತನ, ಅದರ ಆಕಾರ, ಅದರ‌ ಸೌಂದರ್ಯ ನೋಡೊದಿರತದ. ಹೊಟ್ಟಿಗೆ ಹಸಿವಿದ್ದಂಗ ಕಣ್ಣಿಗೂ ಹಸಿವಿ ಇರತದ. ಪ್ರೀತಿ ಮಾತ ಕೇಳಲಿಕ್ಕೆ ಕಿವಿಗೆ ಹಸಿವು ಇರತದ. ಒಳ್ಳೆ ಸುಗಂಧದ ವಾಸನಿಗೆ ಮೂಗು. ಇನ್ನ ನಾಲಿಗೆಗಂತೂ ಥರಥರದ ರುಚಿ ಬೇಕು.  ಸ್ಪರ್ಶ ಸುಖದ ಬಗ್ಗೆ ಏನೇನ ಹೇಳಬೇಕು. ಎಷ್ಟೆಷ್ಟು ಹೇಳಬೇಕು. ಈ ಪಂಚೇಂದ್ರಿಯಗಳ ಸುಖ ಎಲ್ಲಾರಿಗೂ ಸಿಗೋದಿಲ್ಲರಿ. ಸಿಕ್ಕಷ್ಟು ಸಿಕ್ಕಿತು. ಸಿಗದಿದ್ದರೆ ಶಿವಾಯ ನಮಃ!

ಈಗ ಹಿಂಗ ಬ್ಯಾಸಿಗಿ ಹೆಜ್ಜಿವೂರಿತಾ ಬರತಾ ಅದ. ಬೆಳಗಿನ ಹತ್ತು ಗಂಟೆಕ ಇದ್ದ ಬಿಸಿಲು, ಬಿಸಲಲ್ಲಾ ಅದು ಉರಿ! ನುಗ್ಗೀಕಾಯಿ, ಮಾವಿನಕಾಯಿ, ಪ್ಯಾಟ್ಯಾಗ ಬಂದವು ಅಂದ್ರ ತೀರಿತು, ನಾ ಖಾತ್ರಿ ಪ್ಯಾಟಿ ಕಡೆ ಮುಖಾ ಮಾಡತೇನಿ. ನುಗ್ಗೀಕಾಯಿ ಸಾರು, ಮಾವಿನಕಾಯಿ ಚಟ್ನಿ ಅಂದ್ರ ನಮ್ಮನ್ಯಾಗ ಎಲ್ಲಾರೂ ಜೀವಾ ಕಳಕೊಂತಾರ. ಅದಕ್ಕಂತ ಎರಡ ಚೀಲಾ ಇಟಗೊಂಡ ದೆವ್ವ ಬಡಿದವರಂಗ ಮನ್ಯಾಗ ಯಾರಿಗೂ ಹೇಳದ ಹೊಂಟೇಬಿಟ್ಟೆ. ಬಸ್‌ ಹತ್ತಿ ಸೀಟನ್ಯಾಗ ಕುಂತದಷ್ಟೆ ನೆನಪು. ಶೇಖ ಮಮ್ಮದನಂಗ ಕನಸು ಸುರು ಆದವು. ನನಗ ನಾನ ಹೇಳಕೊಂತ ಕುಂತೆ. ಒಯ್ಯಲೇಬೇಕಾದ ಕಂಪಲ್ಸರಿ ಆಯಿಟೆಮ್ಮು ಏನಂದ್ರ ಉಳ್ಳಾಗಡ್ಡಿ, ಬಳ್ಳೊಳ್ಳಿ, ಹಸೆಶುಂಠಿ, ಲಿಂಬಿ ಹಣ್ಣು, ಕರಿಬೇವು, ಕೋತಂಬ್ರಿ, ತೆಂಗಿನಕಾಯಿ, ಕೋಸಂಬ್ರಿಗೆ ಹಸಿರು ಸವತೀಕಾಯಿ. ಇನ್ನ ಕಾಯಿಪಲ್ಲೆ ಏನ ತಗೊಳ್ಳೋದು? ತಪ್ಪಲ ಪಲ್ಲೆ ಎರಡನಕಾ ಬೇಕ ಬೇಕು. ಪಾಲಕ್‌, ಮೆಂತೆ. ಇಲ್ಲದಿದ್ರ ತಾಜಾ ಇದ್ರ ಕಿರಕ್‌ಸಾಲಿ, ಸಬ್ಬಸಗಿ ತೊಗೋಬೇಕು. ಹೋಳ ಪಲ್ಲೆಕ ಬೆಂಡೇಕಾಯಿ ಮತ್ತು ಎಣಗಾಯಿ ಮಾಡೂದಿದ್ರ ಸಣ್ಣ ಸಣ್ಣ ಬದನೆಕಾಯಿ ಇಲ್ಲಾ ಗುಳ್ಳಗಾಯಿ, ಪಚಡಿಗೆ ಮೂಲಂಗಿ ಸಿಕ್ರ ಹಕ್ಕರಕಿ ಇಲ್ಲಾ ಉಳ್ಳಾಗಡ್ಡಿ ತಪ್ಪಲಾ, ದೇವರು ದಿಂಡರಿಗೆ ಎರಡು ಮಾರು ದುಂಡಮಲ್ಲಿಗಿ,  ಬಿಡಿ ಶಾವಂತಿಗಿ ಹೂ,  ನೈವೇದ್ಯಕ್ಕ ಬಾಳೆಹಣ್ಣು. ಬಸ್ಸು ಸ್ಟ್ಯಾಂಡಿನ್ಯಾಗ ಗಕ್ಕಂತ ನಿಂತಾಗ ನನ್ನ ಶೇಖಮಮ್ಮದನ ಕನಸಿಗೆ  ಭಂಗ ಬಂದು, “ಅಯ್ಯ ಬಸ್ ಸ್ಟ್ಯಾಂಡಿಗೆ ಬಂದಬಿಟ್ಟಿತ?’ ಅಂತ ಪಕ್ಕದ ಅಪರಿಚಿತ ಹೆಣ್ಣು ಮಗಳನ್ನು ಕೇಳಿದೆ. “”ಹೌದ್ರಿ ಹೌದು. ನೀವೇನೋ ಧಾದಾಗ ಕುಂತಿದ್ರಲ್ಲ , ಮಾತಿಲ್ಲಾ ಕತಿ ಇಲ್ಲದಾಂಗ?” ಅಂದಳು. ನಸುನಕ್ಕು ಕೆಳಗಿಳಿದೆ. 

ಮನಸ್ಸಿನ್ಯಾಗ ಇಟಗೊಂಡ ನನ್ನ ಸ್ವರ್ಗ ಲೋಕದ ಕನಸು. ಪಂಚೇಂದ್ರಿಯಗಳ‌ ಆ ಎಲ್ಲಾ ಸುಖ ತಲ್ಯಾಗಿಟಗೊಂಡು ಪ್ಯಾಟಿಗೆ ನಾಲ್ಕು ಹೆಜ್ಜೆ ಇಟ್ಟೆ. ಕೊಳಕು ಕಾಯಿಪಲ್ಲೆಯ ಹೊಲಸು ನಾರುವ ನಾಲ್ಕೈದು ರಾಶಿ ಎಡಕ್ಕೆ ಬಲಕ್ಕೆ ಸ್ವಾಗತಕ್ಕಂತ ನಿಂತಂಗ ನಿಂತಿದ್ದವು. ಮೂಗು ಮುಚಗೊಂಡು, ನೆಲದಾಗ ಕಣ್ಣಿಟ್ಟು ನಡೆದೆ ಅಂದ್ರೇನು. ಆ ಗದ್ದಲದಾಗ ಗಾಣದಾಗ ಸಿಕ್ಕ ಕಬ್ಬಿನ ಗಳದಂತ ಸಿಕ್ಕೊಂಡೆ. ಯಮಧರ್ಮನಾಂಗ 80 ಕಿ. ಮೀ. ಸ್ಟೀಡನ್ಯಾಗ ಬಂದ 18 ವಯಸ್ಸಿನ ಹುಡುಗ ಕಿವಿ ಕಿವುಡ ಆಗೂಹಂಗ ಒಂದ ಸವನ ಹಾರ್ನ್ ಒದರಿಸಿದ. ಸೈಡಿಗೆ ಒಮ್ಮೆಲೇ ಸರ್ಯಾಕ ಹೋಗಿ ನೆಲಕ ಬಿದ್ದಬಿಟ್ಟೆ. ಯಾರೋ ಕೈ ಹಿಡಿದು ಎಬ್ಬಿಸಿದರು. ಪರ್ಸ ಗಟ್ಟಿ ಹಿಡಕೊಂಡ ಮುಂದೆ ಎಡಕ್ಕೆ ಬಲಕ್ಕೆ ಕಣ್ಣಾಡಿಸಿದೆ. ನನ್ನ ಸುಖದ ಆಶಾ ಇನ್ನೂ ಸತ್ತಿದ್ದಿಲ್ಲ. ರಾಶಿ ಗುಲಾಬಿ ಬಣ್ಣದ ಗಜ್ಜರಿ. ಮುಂದೆ ನೇರಳೆ ಬಣ್ಣದ ಎಳೆ ಬದನೇಕಾಯಿ ರಾಶಿ. ಹಚ್ಚನ ಹಸಿ ಮೆಣಸಿನಕಾಯಿ ರಾಶಿ. ಆಮೇಲೆ ಎಡಕ್ಕ ನೋಡಿದ್ರ ಕೆಂಡದ ಉಂಡಿ ಹಂಗ ಹೊಳೆಯೋ ರಾಶಿ ರಾಶಿ ಟೊಮೆಟೋ ಕಾಯಿ. ಟೊಮೆಟೋದಾಗ ನೆಟ್ಟ ದೃಷ್ಟಿ ಕೀಳಲಿಕ್ಕೆ ಕಾರಣ ಅಂದ್ರ ಅವನ್ನ ಮಾರೋ ಮನಶ್ಯಾನ ಕರ್ಕಶ ಕೂಗಾಟ. “”ಬರ್ರಿ ಬರ್ರಿ ಅವ್ವಾರ ಅಪ್ಪಾರ, ಇಂದ ಪುಕ್ಕಟೆ ಟೊಮೆಟೊ ಒಯ್ಯರಿ ಪುಕ್ಕಟ ಅಲಲಲಾ ಹುಳೀ ಹುಳೀ ಸಾರ ಮಾಡಿ ಮಗೀಗಟ್ಟಲೆ ಕುಡೀರಿ. ಅವ್ವಾರ ನನ್ನ ಹೊಟ್ಟೆ ಉರದರ ಉರೀಲಿ. ನಿಮ್ಮ ಹೊಟ್ಟಿ ತಣ್ಣಗಿರಲಿ. ಇಂದ ನಿಮ್ಮ ದಿನಾರಿ  ನಿಮ್ಮ ದಿನಾ ! ನಾಳೆ ಬೆಳಗಾದರೆ ಈ ಹಣ್ಣು ಇರೋದಿಲ್ಲಾ ನಾನೂ ಇರೋದಿಲ್ಲಾ ಅದಕ್ಕ ತರ್ರಿ ನಿಮ್ಮ ಚೀಲಾ ತುಂಬಿ ತುಂಬಿ ಕೊಡತೇನಿ. ಬರ್ರಿ ಅವ್ವಾ ಅವರ” ಅವನ ಧ್ವನಿ ತಾರಕಕ್ಕೇರಿತು. ಕಣ್ಣು ಕೆಂಡದುಂಡೆ. ಕೆದರಿದ ಕೂದಲು, ಹರಕು ಶರ್ಟು, ಮಾಸಿದ ಧೋತರಾ, ಮುಖದಿಂದ ಇಳಿಯುತ್ತಿರುವ ಬೆವರಿನ ನೀರು. ನಾ ಅವನ್ನ ನೋಡುತ್ತಲೇ ನಿಂತೆ. ಸುತ್ತಿಕೊಂಡ ಮಾರ್ಕೆಟ್ಟು ಅದೃಶ್ಯವಾಗಿ ಹೋಗಿತ್ತು. ಅವನ ಆ ಮಾತು ಎದಿಯಾಗ ಚೂರಿ ಹಂಗ ನಟ್ಟಿತ್ತು. ಆ ಮಾತು ಒಳಗ ಮತ್ತ ಪ್ರತಿಧ್ವನಿಸಿತು. ನನ್ನ ಹೊಟ್ಟೆ ಉರದರ ಉರೀಲಿ ನೀವು ಉಂಡ ಸುಖಾ ಪಡ್ರಿ. ಅವನ “ಪುಕ್ಕಟೆ ಒಯ್ಯರಿ’ ಅನ್ನೋ ಕೂಗು ಕಿವಿ ಸೇರಿದ್ದಷ್ಟ ಸಾಕು, ನಮ್ಮ ಮಹಿಳಾಮಣಿಗಳು ಹಿಂಗ ಓಡಿದ್ರ ನೋಡ್ರಿ, ಎದ್ದಕೋತ ಬಿದ್ದಕೋತ ಬಂದ್ರು. ನಮ್ಮ ಹಿರಿಯ ಕವಿ ಗೋಪಾಲಕೃಷ್ಣ ಅಡಿಗರ ಕವಿತಾದ ಸಾಲು ಪಕ್ಕನೆ ನೆನಪಾತು. “ಯಾವ ಮೋಹನ ಮುರಲಿ ಕರೆಯಿತೋ ದೂರ ತೀರಕೆ ನಿನ್ನನು’ ಎಲ್ಲಾರೂ ಅಡ್ರಾಸಿ ಬಂದವರ ಕ್ವಾಟಿ ಗ್ವಾಡಿಹಂಗ ಸುತ್ತ ಒರದ ನಿಂತ್ರು. ನಾ ಹೊರಗ ನಿಂತೆ. 15-20 ನಿಮಿಷದ ಮ್ಯಾಲೆ ನಾ ಅದನ್ನ° ಭೇದಿಸಿ ಟೊಮೆಟೋ ರಾಶಿ ಮುಂದ ನಿಂತೆ. ಆ ಹಣ್ಣಿನ ಕೆಂಪು ಬಣ್ಣವನ್ನ ಕಣ್ಣ ತುಂಬಕೊಂಡೆ. ಅಷ್ಟರಾಗ ಮಾರುವವ ನನ್ನ ಕೈಯಿಂದ ಚೀಲಾ ಕಸಗೊಂಡ ತುಂಬಿ ತುಂಬಿ ಮುಂದ ಹಿಡಿದಾ ನಾ “”ಏನೋ ಮಾರಾಯಾ ಇಷ್ಟೆಲ್ಲಾ ಹಣ್ಣು ಏನ ಮಾಡ್ಲಿ? ಬ್ಯಾಡ ಬ್ಯಾಡ ಅವ್ವಾ ಅವರ ಬಂಧು-ಬಳಗ ಊರಾನ್ನ ಜನಕ್ಕ ಹಂಚಿ ಬಿಡ್ರಿ” ಅನ್ನುತ್ತ ಕೈಗಿಟ್ಟ. ಅವನ ಮಾತಿಗೆ ಬೆರಗಾದೆ. 200 ರೂಪಾಯಿ ತಗದ ಅವನ ಕೈಯಾಗಿಟ್ಟು ಆ ಕರುಳು ಕರಗಿಸೋ ದೃಶ್ಯದಾಗಿಂದ ಹೊರಗೆ ಹೊಂಟೆ. ಆ ಮನಶ್ಯಾ ಬೆನ್ನ ಹತ್ತಿ ಬಂದು ಆ 200 ರೂಪಾಯಿ ಕೈಯಾಗಿಟ್ಟು ಹೋಗಿ ಬಿಟ್ಟ. ನನ್ನ ಕಣ್ಣಾಗ ನೀರು ತುಂಬಿಕೊಂಡು ಬಿಟ್ಟವು. ಬಡವನ ಹೃದಯವಂತಿಕಿ ಮತ್ತ ಅವಗ ಆದ ಅನ್ಯಾಯಕ್ಕ ಹೃದಯ ತುಂಬಿಬಂತು. ಅಲ್ಲೆ ಒಂದಕ್ಷಣ ನಿಲ್ಲಗೊಡದಾಂಗ ಅಲ್ಲಿ ನೂಕುನುಗ್ಗಲು ಗದ್ದಲ ನನ್ನ ಎಳಕೊಂಡ ಹೊರಗ ಅಟ್ಟಿ ಬಿಟ್ಟಿತು.  

ಮನಿಗೆ ಬಂದೆ ಅದರ ಗುಂಗಿನ್ಯಾಗ ಮುಂದ ಕುಂತ ಮಗನ್ನ ಮಾತಾಡಿಸದೆ ನೆಟ್ಟಗ ಬಚ್ಚಲಕ್ಕ ಹೋಗಿ ಕೈಕಾಲು ಮಾರಿ ತೊಳಕೊಂಡು, ಸೀರಿ ಬಿಟ್ಟು ನೈಟಿ ಹಾಕ್ಕೊಂಡು ಪ್ಯಾಟಿಯಿಂದ ತಂದ ಆ ಗುಡ್ಡದಂಥ ಟೊಮೆಟೋ ಚೀಲಾ ದೊಡ್ಡ ಬಿದರಿನ ಬುಟ್ಟಾಗ ಸುರವಿದೆ. ಇನ್ನ ಫ್ರಿಜ್ಜನ್ಯಾಗ ಇಡಲಿಕ್ಕೆ ಪ್ಲಾಸ್ಟಿಕ್‌ ಚೀಲಾ ತುಂಬಲಿಕ್ಕೆ ಹತ್ತಿದೆ. ಒಂದು, ಎರಡು, ಮೂರು, ನಾಲ್ಕು ಚೀಲಾ! ಇಷ್ಟ ಟೊಮೆಟೋ ಹೆಂಗ ಕರಗಿಸಬೇಕಪ್ಪ! ಅಂತ ನನ್ನನ್ನ ನಾನ ಗಟ್ಟಿ ಧ್ವನಿಯೊಳಗ ಪ್ರಶ್ನೆ ಮಾಡಿಕೊಂಡೆ. ಹೆಚ್ಚಾದ್ರ ಚೆಲ್ಲು ಅಂತ ಒಂದ ಸರಳ ಉಪಾಯ ಹೊಳೀತು. ಆದ್ರ ಟೊಮೆಟೋ ಹಣ್ಣನ್ನು ಉಣ್ಣಿರಿ ಅಂತ ಆ ಬಡರೈತ ಕೊಟ್ಟಿದ್ದನ್ನು ಚೆಲ್ಲಬೇಕು ಅನ್ನಿಸಲಿಲ್ಲÉ. ಕುಂತ ಯೋಚನೆ ಮಾಡಿದೆ. ಮಾರನೆಯ ದಿನದಿಂದ ಶುರು ಮಾಡೋಣ ಯುದ್ಧ ಅಂತ ನಿಶ್ಚಿಂತೆಯಿಂದ ಕುರ್ಚಿಗೆ ಆತು ಕೂತೆ.

ಮಾರನೇ ದಿನದಿಂದ ನನ್ನ ಅಡುಗೆಮನೀ ಟೊಮೆಟೋದ ವಿವಿಧ ಪದಾರ್ಥಗಳ ತಯಾರಿಕೆಯ ಪ್ರಯೋಗಾಲಯ ಆತು! ಟೊಮೆಟೋ ಜ್ಯೂಸು, ಉಪ್ಪಿನಕಾಯಿ, ಚಟ್ನಿ, ಕೋಸಂಬ್ರಿ, ಟೊಮೆಟೋ ಉತ್ತಪ್ಪ, ಥಾಲಿಪಟ್ಟು, ಟೊಮೆಟೋ ಪಲಾವ, ಟೊಮೆಟೋ ದ್ವಾಸಿ, ಮತ್ತ ಎಂಟದಿನಾ ಮುಂಜೆನೆ ಸಂಜಿ, ಬಿಟ್ಟೂ ಬಿಡದಂಗ ಟೊಮೆಟೋದ ರಸಕ್ಕೆ ಒಗ್ಗರಣೆ ಹಾಕಿದ ಸಾರೇ ಸಾರು. ಒಂದಿನಾ ನನ್ನ ಮಗಾ ಬಂಡೆದ್ದು “”ಅವ್ವಾ , ಪ್ಲೀಜ್‌ ಒಂದ ಮಾಡವ್ವಾ, ನನ್ನ ಮ್ಯಾಲಿನ ನಿನ್ನ ಟೊಮೆಟೋ ಪ್ರಯೋಗ ಬ್ಯಾಡ, ಇನ್ನೆರಡು ತಿಂಗಳ ಅಡಗೇ ಮನ್ಯಾಗ, ಟೊಮೆಟೋ ಕಾಲಿಡೂ ಹಾಗಿಲ್ಲ” ಅಂದ. 

“”ಪುಕ್ಕಟೆ ಅಂತ ಮೂರ್‌ ನಾಲ್ಕ ಕಿಲೋ ಕೊಂಡು ಏಳ ರಾಜ್ಯ ಗೆದ್ದಂಗ ಆಗಿರಬೇಕಲ್ಲೇನ ಅವ್ವಾ? ಸಾಕು ಸಾಕು ಅವ್ವಾ , ನಿನ್ನ ಪ್ರಯೋಗಾ ಬಂದ ಮಾಡು, ನಾನು ಎಲ್ಲಾ ಬಾಗಿಲಿಗೆ, ಕಿಡಕಿಗೆ ಟೊಮೆಟೋ ಸರಾ ಮಾಡಿ ಹಾಕತೀನಿ. ದೇವರ ಫೋಟೋಕ್ಕ ಹಾರಾ ಮಾಡತೇನಿ, ನನ್ನ ಸ್ಕೂಟರು, ನಿನ್ನ ಸ್ಕೂಟರು, ಅಪ್ಪನ ಕಾರು, ತಂಗೀ ಸೈಕಲ್ಲು,  ಎಲ್ಲಾಕ್ಕೂ ಟೊಮೆಟೋ ಹಾರಾ ಮಾಡತೇನವ್ವಾ. ಆದ್ರ ಇನ್ನಮ್ಯಾಲೆ ಟೊಮೆಟೋದ ಅಡಿಗಿ  ಪ್ರಯೋಗ ಮುಗಿಸಿಬಿಡವ್ವ ಕೈ ಮುಗಿತೀನಿ” ಅಂದ. ನಾನು ಹೊಟ್ಟಿ ಹುಣ್ಣಾಗುವಂಗ ನಕ್ಕೆ. ಅವನೂ ನಕ್ಕ. 

ನಮ್ಮ ಬಳಗದವರು, ಸ್ನೇಹಿತರು ದಿನಾ ಯಾರರೇ ಮನಿಗೆ ಬಂದೇ ಬರತಾರ. ಹತ್ತ ಹತ್ತ ಟೊಮೆಟೋನ ಹತ್ತ ಪ್ಲಾಸ್ಟಿಕ್‌ ಚೀಲಾ ಕಟ್ಟಿಟ್ಟು ಮನಸ್ಸಿನೊಳಗ ಖುಷ್‌ ಆದೆ. ಬಂದವರಿಗೆ ಹೋದವರಿಗೆ ಗಿಫ್ಟ್ ಗಿಫ್ಟ್ಂತ ಕೊಟ್ಟರ ಅವರು ಶಬ್ಯಾಸ್‌ ಕೊಡತಾರ ಅಂತ ನಕ್ಕೆ. ಆದ್ರ ನನ್ನ ಲೆಕ್ಕಾಚಾರ ತಪ್ಪಿ ಹೋತು. ಬಂದಾವರಿಗೆ ಕೊಟ್ಟ ಚೀಲಾ ಅವರ ಹೋದ ಮ್ಯಾಲೆ ನೋಡಿದ್ರ ಅಲ್ಲೆ ಇಲ್ಲೆ ಮರೀಯೊಳಗ ನನ್ನ ಮನ್ಯಾಗ ಕುಂತಬಿಟ್ಟಿದ್ದವು. ಅದೇನೋ ಅಂತಾರಲ್ಲಾ “ಬೂಮೆರಾಂಗ’ ಅಂತ ತೂರಿದ ವಸ್ತು ತಿರಗಿ ಅದ ಕೈಗೆ ಬರ್ತದಲ್ಲಾ ಹಂಗ. ಈ ಪ್ರಯೋಗಾನೂ ಫೇಲಾತು. ಇನ್ನೇನು ಮಾಡೋದು ಅಂತ ಅಂದಾಗ ಹೊಳದ ವಿಚಾರ ದಾನಾ ಮಾಡಬೇಕು ಅನ್ನಿಸಿತು. ತಕ್ಷಣ ಅಟೋರಿಕ್ಷಾ ಮಾಡಿಕೊಂಡ ದೊಡ್ಡ ಚೀಲಾ ತುಂಬಿಕೊಂಡ ಹೊಂಟೆ. ರಿûಾದಾಗ ಬರೂದು ಹೋಗುದಕ್ಕ 200 ರೂಪಾಯಿಗೆ ಹೊಂದಿಸಿದೆ. ಅನಾಥಾಶ್ರಮದ ಬಾಗಲಾ ಹೊಕ್ಕೆ. ಆಫೀಸಿನ ಕ್ವಾಣ್ಯಾಗ ಒಬ್ಬರು ಕೂತಿದ್ರು, “ಏನು ಬೇಕು?’ ಅಂದ್ರು, “”ಏನೂ ಇಲ್ಲಾ ಒಂದಿಷ್ಟು ಟೊಮೆಟೋ ಕೊಟ್ಟು ಹೋಗೋಣಾ ಅಂತಾ ಬಂದೆ” ಅಂದೆ. ಆ ಮನಶ್ಯಾ ನಕ್ಕ ಬಿಟ್ಟ. “”ಅವ್ವಾ ಅವರ ನಿನ್ನೆ ನಾವೂ ಮೂರು ಗೋಣಿ ಚೀಲಾ ತುಂಬಿ ತುಂಬಿ 50 ಕೆ.ಜಿ. ಟೊಮೆಟೋ ಹಣ್ಣು ಪುಕ್ಕಟೆಯಾಗಿ ತಂದ್ವಿರಿ” ಅಂದ. ದಾನದ ಧಿಮಾಕನ್ಯಾಗ ಕುಂಬಳಕಾಯಿ ಆಗಿದ್ದ ನನ್ನ ಮಾರಿ ಈಗ ಸುಟ್ಟ ಬದನೆಕಾಯಿ ಆತು. ಪಿಟ್‌ ಅಂತ ಅನ್ನದೆ ಹೊಂಟು ಬಂದು ಮನೀ ಸೇರಿದೆ. 200 ರೂಪಾಯಿ ಕಳದೆ, ನನ್ನ ಮಿಶನ್ನೂ ಫೇಲ್‌ ಆತು ಅಂತ ಮನಸ್ಸಿನ್ಯಾಗ ಮರ ಮರ ಮರುಗಿದೆ. 

ಹಿಂಗ ನಾಲ್ಕ  ದಿನಾ ಕಳದವು. ಇನ್ನ ಉಳಿದ ಟೊಮೆಟೋ ಹ್ಯಾಂಗ ಖರ್ಚು ಮಾಡೋದು ಅಂತ ಯೋಚನೆಯಲ್ಲಿ ಗಂಟೆಗಟ್ಟಲೇ ಕೂತೆ. ಹಾ… ಆಗ ಬುದ್ಧಗ ಜ್ಞಾನೋದಯ ಆದಂಗ ನನಗೂ ಒಂದು ಉಪಾಯದ ಉದಯ ಆತು.  ಕಂಪನೀ ನಾಟಕದ ಪಾತ್ರದಾಂಗ ಎದ್ದು ನಿಂತು ನನಗೆ ನಾನೇ ಹೇಳಕೊಂಡೆ. “”ಓ ಹುಲು ಮಾನವಾ, ನಿನಗೆ ಕೊಟ್ಟರೆ ನನಗೇನು ಬಂದೀತು? ಈ ಜಗತ್ತಿನೊಳಗ ಪ್ರಾಣಿಪಕ್ಷಿ ಇರುವಾಗ ಅವರಿಗೆ ದಾನ ಮಾಡಿದರೆ ಅವು ಒಲ್ಲೆ ಬ್ಯಾಡ ಅಂತ ಅನ್ನುವವೇ ಎಂದಾದರೂ? ಇಲ್ಲಾ” ಅನ್ನುತ್ತ ಕೊಳೆತ ಹಣ್ಣುಗಳನ್ನು ತೆಗೆದು ಉಳಿದ ಒಂದು ಕಿಲೋ ಹಣ್ಣು ಅವು ಬೆಳಗಾದರೆ ಕೊಳತೇ ಹೋಗುವಂಥವು. ಇನ್ನ ಪೇಟೆಯೊಳಗೆ ಹಸು ಪರದಾಡುವ ತುಡುಗು ದನಕ್ಕೆ ತಿನ್ನಿಸಿದರಾಯಿತು ಅಂದುಕೊಂಡೆ. ನನ್ನ ಪ್ರಾಣಿದಯೆಯ ವಿಚಾರಕ್ಕೆ ನನಗ ಹೆಮ್ಮೆ ಎನಿಸಿತು. ಮತ್ತೆ ಹೊರಟೆ ನೋಡ್ರಿ, ನನ್ನ ಸ್ವರ್ಗದಂಥ ಪೇಟೆಗೆ.

ಎದುರಿಗೆ ಒಂದು ಆಕಳು ಒಂದು ಸಿವಡು ಮಂತೆ ತುಡುಗು ಮಾಡಿದ್ದಕ್ಕೆ ಪಲ್ಲೆಯವಳು ಬಡಿಗೆಯಿಂದ ಅದರ ಮುಖಕ್ಕೆ ಮಾರಿಗೆ ಬಾರಿಸಿ, ಅರ್ಧ ತಿಂದ ಸಿವಡನ್ನು ಎಳೆದುಕೊಂಡು ಚೆಂದ ಚೆಂದ ಬೈಗುಳ ಬೈಯುತ್ತ ಹೋದಳು. ಆಕಳು ನಿರ್ವಾಹವಿಲ್ಲದೆ ಬೇರೆ ಕಡೆ ಹೊರಟಿತು. ನಾನು ಹತ್ತಿರ ಹೋಗಿ ಮೈಮೇಲೆ ಕೈಯಾಡಿಸಿ ಮನಸ್ಸಿನ್ಯಾಗ ಹಾಡಿದೆ. “ಗಂಗೆ ಬಾರೆ ಗೌರಿ ಬಾರೆ, ತುಂಗಭದ್ರೆ ತಾಯಿ ಬಾರೆ’ ಅನ್ನುತ್ತ ಟೊಮೆಟೋದ ಚೀಲಾ ಮುಂದೆ ಸುರಿವಿದೆ. ಸುರವಿದ್ದೇ ತಡ, ಯಾವ ಜನ್ಮದ ಹಸಿವಿತ್ತೋ ಏನೋ ಗಬಗಬ ತಿನ್ನತ್ತ ಒಮ್ಮೊಮ್ಮೆ ನನ್ನತ್ತ ಕೃತಜ್ಞತೆಯಿಂದ ನೋಡುತ್ತ ಹೊಟ್ಟೆ ತುಂಬಿಕೊಂಡಿತು. ಆ ಪ್ರಾಣಿಯ ಕೃತಜ್ಞತೆಯ ನೋಟ ನನ್ನ ಜನ್ಮಕ್ಕೆ ಸಾರ್ಥಕತೆ ತಂದಂತೆ ಆಗಿತ್ತು. 

ಮನೆಗೆ ಬಂದು ಉಳಿದ ಕೊಳೆತ ಟೊಮೆಟೋಗಳನ್ನು ಒಂದು ಬುಟ್ಟಿಯಲ್ಲಿಟ್ಟುಕೊಂಡು ಖನ್ನ ಮನಸ್ಸಿನಿಂದ ಹಿತ್ತಲದಲ್ಲಿ ಮೂಲೆಯೊಳಗ ಸುರುವುತ್ತ ಇಲ್ಲಿಗೆ ಟೊಮೆಟೋ ರಾಮಾಯಣದ ಕಥೆ ಮುಗಿಯಿತಪಾ ಅನ್ನುತ್ತ, ಮತ್ತೂಮ್ಮೆ ಟೊಮೆಟೋ ಪುಕ್ಕಟೆ ಕೊಟ್ಟವನನ್ನ ನೆನೆಯುತ್ತ ನಾನು ಟೊಮೆಟೊ ಖರ್ಚ ಮಾಡಲಿಕ್ಕೆ ಎಂಥ ಶತಪ್ರಯತ್ನ ಮಾಡಿದೆ ಅಂತ ಮನಸ್ಸಿನಲ್ಲೇ ಹೇಳುತ್ತ ಆ ಬಡ ರೈತನಿಗೆ ಮನಸ್ಸಿನಲ್ಲೇ ಕೈಮುಗಿದೆ. ನಮ್ಮ ಸರಕಾರ ಹೀಗೆ ಹೆಚ್ಚು ಬೆಳೆದ ರೈತರ ಕೈ ಹಿಡಿದುಕೊಂಡು ಒಂದಿಷ್ಟು ದುಡ್ಡು ಪಾವತಿಸಿದರೆ ರೈತ ಬಾಂಧವರು ಎಷ್ಟು ಖುಷಿ ಪಡಬಲ್ಲರು ಎನ್ನುತ್ತ ನಿರಾಶಾದ ಕತ್ತಲ್ಯಾಗ ಆಶಾದ ದೀಪಾ ಹಚ್ಚಿಟ್ಟೆ. 

ಎಂಟು ದಿನ ಕಳೆದಿರಬಹುದು. ಏನೋ ಕಾರಣಕ್ಕೆ ಹಿತ್ತಲಕ್ಕೆ ಹೋದೆ. ನನ್ನ ಕಣ್ಣು ಕೊಳೆತ ಟೊಮೆಟೋ ಚೆಲ್ಲಿದ ಮೂಲೆಯತ್ತ ಹೋದವು. ಓ ದೇವರೆ! ಎರಡೆರಡು ಪುಟ್ಟ ಎಲೆಗಳನ್ನು ಬಿಟ್ಟು ಎರಡೆರಡು ಕೈಯೆತ್ತಿ ಕರೆವ ಮಕ್ಕಳಂತೆ ಮೂವತ್ತು ನಾಲ್ವತ್ತು ಟೊಮೆಟೋ ಸಸಿಗಳು. ಬೇಡವೆಂದು ಚೆಲ್ಲಿದ ಟೊಮೆಟೋ ಮತ್ತೆ ಹತ್ತು ಪಟ್ಟಾಗಿ ಬೆಳೆದು ನಿಂತ ಎಳೆಯ ಸಸಿಗಳ ದೃಶ್ಯಕ್ಕೆ ನಾನು ಬೆರಗಾದೆ. ನನ್ನ ವಿಷಣ್ಣತೆ ಮಾಯವಾಗಿ ಹರ್ಷ ಉಕ್ಕಿತು. “ನೀನು ಚೆಲ್ಲಿದರೆ ಏನಾಯಿತು ಮತ್ತೆ ಬಂದಿದ್ದೇವವ್ವಾ ನಮ್ಮನ್ನು ಸ್ವಾಗತಿಸು’ ಅನ್ನುವಂತೆ ತಾಜಾ ಸಸಿಗಳು ಮೌನದ ಮಾತು ಹೇಳಿದವು. 

ನನ್ನ ಟೊಮೆಟೋ ರಾಮಾಯಣ ಮುಗಿಯಲಿಲ್ಲ. ಮತ್ತೆ ಶುರುವಾಯ್ತು ಅಂದುಕೊಂಡೆ. ರಾಮಾಯಣದ ಸೀತಾ ಕಟ್ಟಕಡೇಕ ಭೂಮಿತಾಯಿ ಸೇರಿಬಿಟ್ಲು ಆದರ ನಮ್ಮ ಟೊಮೇಟೋ ಸಸಿಗಳೆಲ್ಲ ಭೂಮ್ಯಾಗಿಂದ ಮತ್ತ ಹುಟ್ಟಿ ಬಂದವು! ಟೊಮೆಟೋ ಕೊಟ್ಟ ಆ ರೈತನ ಔದಾರ್ಯವನ್ನ ನೆನೆದು ಸಾರ್ಥಕ ಭಾವದಾಗ ಸಂತಸಪಟ್ಟೆ. “ನೀನು ಕೊಟ್ಟಿದ್ದನ್ನು ತಮ್ಮಾ ನಾ ಹಾಳು ಮಾಡಿಲ್ಲಪ್ಪಾ ಬೆಳೆದಿದ್ದೇನೆ’ ಅಂತ ಅನ್ನುತ್ತ ಕೃತಜ್ಞತೆಯಿಂದ ಕೈ ಮುಗಿದೆ.  

ಆ ಸಂಜೆಯ ಮುಗಿಲಿನತ್ತ ನೋಡಿದಾಗ ಅದರ ತುಂಬ ಬೆಳ್ಳಕ್ಕಿ ಹಿಂಡು ಮನೆಯತ್ತ ಹೊರಟ ಸುಂದರ, ಅಪರೂಪದ ನೋಟ ಕಣ್ಣತುಂಬಿಕೊಂಡಿತು. ನನ್ನ ಕೃತಜ್ಞತ ಭಾವಗಳ ಹಕ್ಕಿಗಳೂ ಹೀಗೆಯೇ ಆ ಬಡ ರೈತನತ್ತ ಹೊರಟಿವೆ ಎಂದು ಭಾವಿಸುತ್ತ ಎಷ್ಟೋ ಹೊತ್ತು ಹಾಗೇ ನಿಂತುಕೊಂಡೆ. 

ಮಾಲತಿ ಪಟ್ಟಣಶೆಟ್ಟಿ

ಟಾಪ್ ನ್ಯೂಸ್

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

1-kateel

Yakshagana; ಕಟೀಲು ದೇಗುಲದ ಆರು ಮೇಳಗಳ ತಿರುಗಾಟ ಆರಂಭ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

1-kateel

Yakshagana; ಕಟೀಲು ದೇಗುಲದ ಆರು ಮೇಳಗಳ ತಿರುಗಾಟ ಆರಂಭ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.