ಮತದಾನದ ಹಕ್ಕು ಬಗ್ಗೆ ಜನರು ಹೆಚ್ಚು ಜಾಗೃತರಾಗುತ್ತಿದ್ದಾರೆ
Team Udayavani, May 7, 2018, 12:08 PM IST
ಕೈಕಂಬ: ‘ರೀ ಮನೆಗೆ ಪಕ್ಷದವರು ಓಟು ಕೇಳಲು ಬಂದಿದ್ದಾರೆ; ಏನು ಹೇಳಬೇಕು ಈಗ?’ ಎಂದು ಗುರುಪುರ ಕೈಕಂಬದ ಗೂಡಂಗಡಿ ಮುಂದೆ ಸ್ನೇಹಿತರೊಂದಿಗೆ ಮಾತನಾಡುತ್ತ ಕುಳಿತಿದ್ದ ಪಡ್ಡಾಯಿ ಪದವಿನ ರಿಚಾರ್ಡ್ ಮೊಬೈಲಿಗೆ ಮನೆಯಿಂದ ಕರೆ ಬಂದಿತ್ತು. ಕರೆ ಮಾಡಿದ್ದ ಪತ್ನಿಗೆ ರಿಚಾರ್ಡ್, ‘ನೋಡು, ನಮ್ಮ ಮನೆಯ ಹತ್ತಿರದ ರಸ್ತೆ ಪೂರ್ತಿ ಹಾಳಾಗಿ ಹೋಗಿದೆ. ಮೊದಲು ಅದನ್ನು ರಿಪೇರಿ ಮಾಡಿಸುವುದಕ್ಕೆ ಹೇಳು ಅವರಿಗೆ’ ಎಂದು ಪ್ರತ್ಯುತ್ತರ ನೀಡಿದರು.
ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ಸಂಬಂಧ ರಾಜಕೀಯ ಪಕ್ಷಗಳ ಮನೆಮನೆ ಭೇಟಿ ಕಾರ್ಯಕ್ರಮದ ಸಂದರ್ಭ ನಡೆದ ಸ್ವಾರಸ್ಯಕರ, ಅಷ್ಟೇ ಅರ್ಥಪೂರ್ಣವಾದ ಸಂಭಾಷಣೆ. ಇದು ಉದಯವಾಣಿ ಕ್ಷೇತ್ರ ಸಂಚಾರ ಸಮಾಚಾರ ತಂಡದ ಗಮನಸೆಳೆಯಿತು.
ಗುರುಪುರ ಕೈಕಂಬದ ಹಾರ್ಡ್‌ವೇರ್ ಅಂಗಡಿಯೊಂದರ ಬದಿಯಲ್ಲಿ ಚಹಾ ಕುಡಿಯುತ್ತ ಇಬ್ಬರು ಕೂಲಿ ಕಾರ್ಮಿಕ ಜತೆ ಕುಳಿತುಕೊಂಡಿದ್ದ ಕುಪ್ಪೆಪದವಿನ ಭರತೇಶ ಅವರನ್ನು ಚುನಾವಣೆಯ ಮೂಡ್ ಬಗ್ಗೆ ಕೇಳಿದೆವು. ‘ಇತ್ತೆ ಪೂರಾ ಚೇಂಜ್ ಆತ್‌ಂಡ್. ಅಂಚ ಚೇಂಜ್ ಆವೊಡುಲಾ… (ಈಗ ಚುನಾವಣೆಯಲ್ಲಿ ಎಲ್ಲವೂ ಬದಲಾಗಿದೆ, ಮತ್ತದು ಹಾಗೆ ಆಗಬೇಕು ಕೂಡ) ಎಂದು ಉತ್ತರಿಸಿದರು.
ಅದು ಇದು ಗಡಿಬಿಡಿ ನಡುವೆ ಚುನಾವಣೆ!
ಅಲ್ಲಿಂದ ‘ಉದಯವಾಣಿ’ ತಂಡ ಕುಪ್ಪೆಪದವಿಗೆ ಹೋಗುವ ಬಸ್ ಮೂಲಕ ಪ್ರಯಾಣಿಸಿ ಮತದಾರರ ಅಭಿಪ್ರಾಯ-ಪ್ರತಿಕ್ರಿಯೆ ಪಡೆಯುವ ಪ್ರಯತ್ನ ಮಾಡಿತು. ಕೈಕಂಬ ಬಸ್ಸು ನಿಲ್ದಾಣ ಬಸ್ ನಿಲ್ದಾಣ ಪ್ರಯಾಣಿಕರಿಂದ ತುಂಬಿತ್ತು. ಜನರು ಮೆಹಂದಿ, ಮದುವೆ ಸಮಾರಂಭ, ಭೂತದ ಕೋಲ, ನೇಮ ಈ ವಿಚಾರವನ್ನೇ ಮಾತನಾಡುತ್ತ ನಿಂತಿದ್ದರು. ಸೆಕೆಯ ಕಿರಿಕಿರಿಗೆ ಹಿಡಿಶಾಪ ಹಾಕುತ್ತ ಪಿಯು – ಎಸೆಸ್ಸೆಲ್ಸಿ ಫಲಿತಾಂಶ, ಮಕ್ಕಳ ಅಡ್ಮಿಶನ್ ನಡುವೆ ಚುನಾವಣೆಯೂ ಬಂದಿದೆ ಎನ್ನುತ್ತ ಯಾವುದಕ್ಕೂ ಪುರುಸೊತ್ತೇ ಇಲ್ಲ ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದರು.
ಮುತ್ತೂರು ಮಾರ್ಗಂಗಡಿಯಲ್ಲಿ ಕುಳವೂರಿನ ಎಚ್.ವಿ. ಹಸನಬ್ಬ ಅವರಲ್ಲಿ ಈ ಬಾರಿ ಚುನಾವಣಾ ಪ್ರಚಾರ ಹಾಗೂ ವಾತಾವರಣದ ಬಗ್ಗೆ ಕೇಳಿದಾಗ ‘ಪ್ರಚಾರ ಅಷ್ಟು ಜೋರಾಗಿಲ್ಲ. ಈಗಾಗಲೇ ಹಲವೆಡೆ ವಿವಿಧ ಪಕ್ಷಗಳ ಸಣ್ಣಗೆ ಪ್ರಚಾರ ಆರಂಭವಾಗಿದೆ. ಈ ಬಾರಿ ಪರಸ್ಪರ ಪ್ರೀತಿಯ ವಾತಾವರಣವಿದ್ದು, ಎಲ್ಲಿಯೂ ಜಗಳ ನಡೆದಿಲ್ಲ. ಇದರಿಂದ ಹೆಚ್ಚಿನ ಪ್ರಮಾಣದ ಮತದಾನವಾಗಬಹುದು’ ಎಂದರು.
ಮತಗಟ್ಟೆ ಒಳಗೆ ಯಾರಿಗೆ ಮತ -ಗೊತ್ತೇ ಆಗಲ್ಲ!
ಅಲ್ಲಿಯೇ ಇದ್ದ ಕುಳವೂರಿನ ಫಕ್ರುದ್ದೀನ್ ಅವರನ್ನು ಮಾತನಾಡಿಸಿದಾಗ ‘ಇಲ್ಲಿ ಒಳ್ಳೆಯ ಅಭಿವೃದ್ಧಿ ಕೆಲಸಗಳಾಗಿವೆ. ಆದರೆ ಮತದಾನ ಕೇಂದ್ರದ ಒಳಗೆ ಹೋದ ಮೇಲೆ ಮತದಾರ ಓಟು ಯಾರಿಗೆ ಕೊಡುತ್ತಾನೆ ಎಂಬುದು ಹೇಳಲು ಸಾಧ್ಯವಿಲ್ಲ. ಅದು ಗುಟ್ಟಾಗಿ ಇರುತ್ತದೆ’ ಎಂದರು. ಅಲ್ಲಿಂದ ರಿಕ್ಷಾ ಏರಿ ಕುಪ್ಪೆಪದವಿನ ದಾರಿಯಲ್ಲಿ ಸಾಗುತ್ತಾ ಚಾಲಕರನ್ನು ಮಾತಿಗೆಳೆದಾಗ ‘ಎಲ್ಲವೂ ಮಾಮೂಲು ಆಗಿ ಇದೆ’ ಎಂದಷ್ಟೇ ಹೇಳಿದರು.
ಕುಪ್ಪೆಪದವು ಬಸ್ಸು ನಿಲ್ದಾಣದ ಬಳಿ ಅಂಗಡಿಯಲ್ಲಿ ಕುಳಿತಿದ್ದ ನಾಲ್ವರು ಮಾತಿಗೆ ಸಿಕ್ಕಿದರು. ‘ಮೂಲು ಮೂಜಿ ಪಾರ್ಟಿ ಪ್ರಚಾರ ಮಲ್ತೊಂದು ಉಂಡು. ಈ ಸರ್ತಿ ಮಾತ್ರ ಯಾನ್ ವೋಟ್ ಪಾಡಂದೆ ಕುಲ್ಲುಜ್ಜಿ. ಆನಿ ರಜೆ ಪಾಡ್ದಾಂಡಲಾ ಓಟು ಪಾಡರ ಪೋಪೆ’ (ಈ ಬಾರಿ ಮಾತ್ರ ಮತದಾನ ಮಾಡಿಯೇ ಮಾಡುತ್ತೇನೆ. ರಜೆ ಹಾಕಿದ್ರೂ ಪರವಾಗಿಲ್ಲ ಓಟು ಮಿಸ್ ಮಾಡಲ್ಲ) ಎಂದರು ಒಬ್ಬರು. ಎಡಪದವು, ಗಂಜಿಮಠದ ಮಳಲಿ ಕ್ರಾಸ್ ರಸ್ತೆಯ ಪ್ರದೇಶದಲ್ಲಿ ಮತದಾರರು ಮತದಾನದ ಬಗ್ಗೆ ಜಾಗೃತಿ ವ್ಯಕ್ತಪಡಿಸಿದರು. ಓಟು ಮಿಸ್ ಮಾಡಿಕೊಳ್ಳುವುದಿಲ್ಲ ಎಂದರು.
ಬಹುತೇಕ ಭಾಗ ಸುತ್ತಾಡಿ, ಬಜಪೆ ಪೊಲೀಸ್ ಠಾಣೆ ರಸ್ತೆಯಾಗಿ ನಡೆದುಕೊಂಡು ಮುರನಗರಕ್ಕೆ ಹೋಗುತ್ತಿರಬೇಕಾದರೆ, ಆದ್ಯಪಾಡಿಯ ಯಶೋದಾ ಕಾಣಿಸಿದರು. ಚುನಾವಣೆ ಬಗ್ಗೆ ಅವರನ್ನು ಕೇಳಿದಾಗ ‘ವೋಟು ಬನ್ನಗ ಕೈಲಾ, ಕಾರ್‌ಲಾ ಪತ್ತುವೆರ್! ವೋಟ್ ಕೇನೆರೆ ಬರ್ಪುನಕ್ಲೆನ ಕಾರುಬಾರು ಮೂಲು ಜೋರು ಉಂಡು’ (ಚುನಾವಣೆ ಬಂದಾಗ ಕೈಯೂ ಕಾಲೂ ಹಿಡಿಯುತ್ತಾರೆ. ಇಲ್ಲಿಯೂ ಓಟು ಕೇಳುವವರ ಕಾರುಬಾರು ಜೋರು ಇದೆ.) ಎನ್ನುತ್ತ ಆದ್ಯಪಾಡಿಯತ್ತ ಬಸ್ ಏರಿದರು.
ಗುಟ್ಟನ್ನು ಬಿಟ್ಟು ಕೊಡುವುದಿಲ್ಲ
ಇಲ್ಲಿ ಪ್ರಮುಖ ಪಕ್ಷಗಳು ಒಂದೇ ತರಹ ಪ್ರಚಾರ ಮಾಡುತ್ತಿವೆ. ಮನೆ-ಮನೆ ಪ್ರಚಾರ ಮಾತ್ರ ಇದೆ. ಮತದಾರರಲ್ಲಿಯೂ ಬದಲಾವಣೆ ಆಗಿದ್ದು, ತಮ್ಮ ಮತದಾನದ ಗುಟ್ಟನ್ನು ಯಾರು ಬಿಟ್ಟುಕೊಡುವುದಿಲ್ಲ. ಇದು ಒಳ್ಳೆಯ ಬೆಳವಣಿಗೆ.
– ಸಿಲ್ವೆಸ್ಟರ್ ಫೆರ್ನಾಂಡಿಸ್, ಮಳಲಿ
ಕ್ರಾಸ್ ನಿವಾಸಿ
ನಾವು ಕೂಲಿ ಕಾರ್ಮಿಕರು, ಬಡವರು. ಕೆಲಸ ಮಾಡಿಯೇ ಜೀವನ ಸಾಗಿಸುವವರು. ಯಾರು ಬಂದರೂ ನಮಗೆ ಒಂದೇ. ಚುನಾವಣೆಯ ದಿನ ಬೆಳಗ್ಗೆ ಬೇಗ ಹೋಗಿ ಅಥವಾ ರಜೆ ಮಾಡಿಯಾದರೂ ಮತದಾನ ಮಾಡುತ್ತೇವೆ . ನಮ್ಮ ಓಟಿನಿಂದಲೇ ಜಯ ಗಳಿಸುತ್ತಾರೆ, ಮತ್ತೆ ನಮ್ಮನ್ನು ಮರೆಯುತ್ತಾರೆ.
-ಭರತೇಶ್, ಗುರುಪುರ ಕೈಕಂಬ
ಸುಬ್ರಾಯ ನಾಯಕ್ ಎಕ್ಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.