ರಿಯಲ್‌ ಎಸ್ಟೇಟ್‌ ದೆವ್ವ ಓಡಿಸಲು ರೇರಾ!


Team Udayavani, May 7, 2018, 12:45 PM IST

real-estate.jpg

ರಿಯಲ್‌ ಎಸ್ಟೇಟ್‌ ರೆಗ್ಯುಲೇಷನ್‌ ಅಂಡ್‌ ಡೆವಲಪ್‌ಮೆಂಟ್‌ ಆಕ್ಟ್ ಎಂಬುದರ ಸಂಕ್ಷಿಪ್ತ ರೂಪವೇ ರೇರಾ. ಈ ಕಾಯ್ದೆಯ ಎಲ್ಲಾ ಅಧಿನಿಯಮಗಳು ಜಾರಿಗೆ ಬಂದದ್ದು 2017ರ ಮೇ.1ರಂದು. ರೇರಾ ನಿಯಮಗಳ ಪ್ರಕಾರ, ಹೊಸದಾಗಿ ರಿಯಲ್‌ ಎಸ್ಟೇಟ್‌ ವ್ಯವಹಾರ ಆರಂಭಿಸುವ ಮೊದಲು ಪ್ರಾಧಿಕಾರದ ಮಂಜೂರಾತಿ ಪಡೆದಿರಬೇಕು.

ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎಂದು ಹಿಂದಿನವರು ನಾಣ್ನುಡಿಯ ಮಾದರಿಯಲ್ಲಿ ಸವಾಲುಗಳನ್ನು ಒಂದು ವಾಕ್ಯದಲ್ಲಿ ಹೇಳಿದ್ದಾರೆ. ಹೀಗೆ ಹೇಳುವಾಗಲೂ ಅವರಿಗೆ ಸಮಸ್ಯೆ ಕಾಲಾತೀತವಾದುದು ಎಂಬುದು ಗೊತ್ತಿರಲಿಕ್ಕಿಲ್ಲ. ಈಗಂತೂ ಮದುವೆ ಮಾಡಿಯೂ ನಿಟ್ಟುಸಿರು ಬಿಡಲಾಗುತ್ತಿಲ್ಲ. ಈ ಕಡೆ ಮನೆ ಕಟ್ಟಲು ಹೊರಟವರು, ಕೇವಲ ಹಣ, ಮರಳು, ನಿವೇಶನ, ಕಾನೂನುಗಳನ್ನಷ್ಟೇ ಸಮಸ್ಯೆಯ ಭಾಗವಾಗಿ ನೋಡಲಾಗುತ್ತಿಲ್ಲ.

ಸವಾಲುಗಳು ನೂರು ದಿಕ್ಕುಗಳಿಂದ ಬರುತ್ತವೆ. ಹಣವೊಂದಿದ್ದರೆ ಸಾಕು; ಉಳಿದ ಸಮಸ್ಯೆಗಳು ಮನೆ ಕಟ್ಟಿಸುವವನ ಮೇಲೆ ಬೀಳದಂತೆ ತಪ್ಪಿಸುವ ಕ್ರಮವಾಗಿಯೇ ಜಾರಿಗೆ ಬಂದಿದ್ದು ರಿಯಲ್‌ ಎಸ್ಟೇಟ್‌ ಉದ್ಯಮ. ಆದರೆ ಈಗ ರಿಯಲ್‌ ಎಸ್ಟೇಟ್‌ ಉದ್ಯಮ ಮಾಫಿಯಾ ಸ್ವರೂಪ ಪಡೆದಿದೆಯೆಂದ ಮೇಲೆ ಅಲ್ಲಿನ ಸಮಸ್ಯೆಗಳು ಕೂಡ ತೀಕ್ಷ್ಣವಾಗಿರುತ್ತವೆ ಎಂದು ನಂಬಬೇಕು.

ಸಮಸ್ಯೆಗಳೇ ರಿಯಲ್‌!: ಫ್ಲ್ಯಾಟ್‌ಗಳಿರಬಹುದು, ನಿವೇಶನ ಒದಗಿಸಿ ಮನೆ ಕಟ್ಟಿಕೊಡುವವರೆಗಿನ ಗುತ್ತಿಗೆ ಇರಬಹುದು, ನಮ್ಮ ಸ್ವಂತದ ಜಾಗದಲ್ಲಿ ನಾವು ಹೇಳಿದಂತೆ ಮನೆ ಕಟ್ಟಿಸಿಕೊಡುವುದಿರಬಹುದು; ಇಂಥ ಕೆಲಸಗಳು ಸಲೀಸಾಗಿ ಆಗಿಬಿಟ್ಟರೆ ಜಗತ್ತೇ ಸುಂದರ. ಆದರೆ ರಿಯಲ್‌ಎಸ್ಟೇಟ್‌ ಬ್ಯೂಸಿನೆಸ್‌ನಲ್ಲಿ ತೊಡಗಿರುವವರು, ಬಂಡವಾಳ ಹೂಡದೆ ನಮ್ಮದೇ ಹಣದಲ್ಲಿ ಮನೆ ಕಟ್ಟಿಸಿ, ಲಾಭ ಗಿಟ್ಟಿಸುವ ದಂಧೆಗೆ ತೊಡಗಿ  ಹಲವು ವರ್ಷಗಳೇ ಸಂದಿವೆ.

ಫ್ಲ್ಯಾಟ್‌ನಲ್ಲಿ ಒಂದು ಮನೆಯನ್ನು ಕಾಯ್ದಿರಿಸುವ ವ್ಯಕ್ತಿ, ಯೋಜನೆಯ ಶೇ. 75ರಷ್ಟು ಹಣವನ್ನು ಮುಂಗಡವಾಗಿ ಕಟ್ಟುತ್ತಾನೆಂದರೆ ಹತ್ತಾರು ಮನೆಯ ಒಂದು ಸಂಕೀರ್ಣದಲ್ಲಿ ನಿರ್ಮಾಣಕ್ಕೆ ಬೇಕಾದ ಹಣ ಅಲ್ಲಿಯೇ ಸೃಷ್ಟಿಯಾಗುತ್ತದೆ. ಕಟ್ಟುವಾತ ಈ ಹಣವನ್ನು ಮತ್ತೂಂದೆಡೆ ನಿವೇಶನ ಖರೀದಿಗೆ, ತನ್ನ ಐಶಾರಾಮಿ ಕಚೇರಿ, ಬದುಕಿಗೆ ವ್ಯಯ ಮಾಡಿ ಈ ಫ್ಲ್ಯಾಟ್‌ಗಳನ್ನು ಸರಿಯಾದ ಸಮಯಕ್ಕೆ ಕಟ್ಟದಿದ್ದರೆ ಹಣ ಹೂಡಿದಾತ ಸಂಕಷ್ಟಕ್ಕೀಡಾಗುತ್ತಾನೆ.

ಹಲವು ಸಂದರ್ಭಗಳಲ್ಲಿ ಈ ಫ್ಲ್ಯಾಟ್‌ಗೂ ವೇತನದಲ್ಲಿ ಇಎಂಐ ಕಟ್ಟುತ್ತ, ಅತ್ತ ಇಲ್ಲಿಗೆ ಬರಲಾರದೆ ಹಿಂದಿನ ಬಾಡಿಗೆ ಮನೆಗೇ ಬಾಡಿಗೆ ತೆರುತ್ತ, ಕೆಲಸದ ವಿಳಂಬ ಹಾಗೂ ಕಳಪೆ ಗುಣಮಟ್ಟದ ಕಚ್ಚಾವಸ್ತು ಬಳಕೆಯನ್ನು ಕಂಡು ಕೈಕೈ ಹಿಸುಕಿಕೊಳ್ಳಬೇಕಾಗುತ್ತದೆ. 2017ರವರೆಗೆ, ಫ್ಲ್ಯಾಟ್‌ ಖರೀದಿಗೆ ಮುಂದಾದ ಗ್ರಾಹಕರು ಮುಂದೆ ಸಮಸ್ಯೆಗಳಾದರೆ ಗ್ರಾಹಕ ಸಂರಕ್ಷಣಾ ಕಾಯ್ದೆಯ ಅಡಿ ಪ್ರಕರಣವನ್ನು ದಾಖಲಿಸಬಹುದಿತ್ತು.

ಈ ಕಾಯ್ದೆಯಡಿ ಪರಿಹಾರ ಪಡೆಯಬಹುದಿತ್ತಾದರೂ, ಮೇಲ್ಮನವಿ ಅವಕಾಶಗಳು ಬಿಲ್ಡರ್‌ಗೆ ಸುಖಾಸೀನ ಒದಗಿಸುವ ಸಾಧ್ಯತೆಯೂ ಹೆಚ್ಚಿತ್ತು. ಇನ್ನು ಸಿವಿಲ್‌ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಅವಕಾಶ ಇದೆ ಎಂಬುದಷ್ಟೇ ಹೇಳಲು ಯೋಗ್ಯ. ದೂರು ಇತ್ಯರ್ಥದ ಸಮಯ ದೇವರಿಗೇ ಗೊತ್ತು. ಇಂಥ ಕಾಲಘಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಮನೆ ನಿರ್ಮಾಣದ ಗುತ್ತಿಗೆ ಕೊಡುವವರಿಗೆ ವಂಚನೆ ಆಗುತ್ತಿದ್ದುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿತ್ತು.

2016ರ ಮೇ ಒಂದರಂದು ದಿ ರಿಯಲ್‌ ಎಸ್ಟೇಟ್‌ (ರೆಗು‌ಲೇಶನ್‌ ಅಂಡ್‌ ಡೆವಲಪ್‌ಮೆಂಟ್‌) ಆ್ಯಕ್ಟ್- ರೇರಾ ಜಾರಿಗೆ ಬಂದಿತ್ತು. ಇದರ ಅಡಿ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರಗಳನ್ನು ರೂಪಿಸಿಕೊಳ್ಳುವ ಹಾಗೂ ಅಗತ್ಯ ನಿಯಮಗಳನ್ನು ಕಲ್ಪಿಸುವ ಜವಾಬ್ದಾರಿ ಆಯಾ ರಾಜ್ಯ ಸರ್ಕಾರಗಳಿರುತ್ತದೆ. ಸಧ್ಯ ಆ ಕೆಲಸ ಆಗಿದೆ. ಆದರೆ ರಾಜ್ಯದಿಂದ ರಾಜ್ಯಕ್ಕೆ ನಿಯಮಗಳಲ್ಲಿ ಅಂತರವಿದೆ. ಉದಾಹರಣೆಗೆ, ರೇರಾ ದೂರು ಅರ್ಜಿ ಸಲ್ಲಿಕೆಗೆ ಮಹಾರಾಷ್ಟ್ರ ಸರ್ಕಾರ 5 ಸಾವಿರ ರೂ.ಗಳ ಶುಲ್ಕವನ್ನು ನಿಗದಿಪಡಿಸಿದ್ದರೆ ಕರ್ನಾಟಕದಲ್ಲಿ ಆ ಮೊತ್ತ ಕೇವಲ ಒಂದು ಸಾವಿರ ರೂ.

ಕಳೆದ ವರ್ಷದಿಂದ ರೇರಾ!: ರೇರಾ ಕಾಯ್ದೆಯ ಎಲ್ಲ ಅಧಿನಿಯಮಗಳು ಜಾರಿಗೆ ಬಂದಿದ್ದು ಒಂದು ವರ್ಷದ ನಂತರ. ಅಂದರೆ, 2017ರ ಮೇ ಒಂದರಂದು. ಈ ಕಾಯ್ದೆಯ ಸೆಕ್ಷನ್‌ 4.3ರ ಅನುಸಾರ ಕರ್ನಾಟಕ ರಿಯಲ್‌ ಎಸ್ಟೇಟ್‌ ರೆಗ್ಯುಲೇಶನ್‌ ಅಂಡ್‌ ಡೆವಲೆಪ್‌ಮೆಂಟ್‌ ನಿಯಮಗಳು ರೂಪುಗೊಂಡಿದ್ದು 2017ರ ಜುಲೈ 10ರಂದು. ಅಂದು ಕರ್ನಾಟಕ ಸರ್ಕಾರ ಈ ಕುರಿತ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಿತು.

ರೇರಾ ನಿಯಮಗಳ ಪ್ರಕಾರ ಹೊಸದಾಗಿ ಮಾಡುವ ರಿಯಲ್‌ ಎಸ್ಟೇಟ್‌ ಪ್ರಾಜೆಕ್ಟ್ಗಳು ಪ್ರಾಧಿಕಾರದ ಮಂಜೂರಾತಿ ಪಡೆದಿರಬೇಕು. ಈ ನಡುವೆ 2017ರ ಡಿಸೆಂಬರ್‌ ಒಂದರಂದು ಮತ್ತೂಂದು ಸುತ್ತೋಲೆ ಹೊರಡಿಸಿದ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ, ನೋಟಿಫಿಕೇಷನ್‌ ಜಾರಿಗೆ ಮುನ್ನಿನ ಅವಧಿಯಲ್ಲಿ ಚಾಲ್ತಿಯಲ್ಲಿರುವ ರಿಯಲ್‌ ಎಸ್ಟೇಟ್‌ ಯೋಜನೆಗಳಿಗೂ ನೋಂದಣಿ ಕಡ್ಡಾಯ ಎಂಬುದನ್ನು ಸ್ಪಷ್ಟಪಡಿಸಿತು.

ಹಲವು ಬಿಲ್ಡರ್‌ ಕಂಪನಿಗಳು ಕಾಯ್ದೆಯ ಜಾರಿಗೆ ಮುನ್ನವೇ ತರಾತುರಿಯಲ್ಲಿ ಯೋಜನೆಗಳನ್ನು ಆರಂಭಿಸಿ ಈ ಹದ್ದು ಕಣ್ಣಿನಿಂದ ತಪ್ಪಿಸಿಕೊಳ್ಳುವ ಘನಕಾರ್ಯ ಮಾಡಿದ್ದವು. ಜುಲೈ 10ಕ್ಕಿಂತ ಮುನ್ನ ಪ್ರಾರಂಭವಾದ ಯೋಜನೆಗಳು ಕೂಡ 90 ದಿನಗಳೊಳಗೆ ನೋಂದಣಿ ಮಾಡಿಸಿರಲೇಬೇಕು. ಒಂದೊಮ್ಮೆ ತಪ್ಪಿದಲ್ಲಿ ಯೋಜನೆಯ ಶೇ. 10ರಷ್ಟನ್ನು ದಂಡದ ಮೊತ್ತವಾಗಿ ಕಟ್ಟಿ ಪರವಾನಗಿ ಪಡೆಯಬೇಕಾಗುತ್ತದೆ.

ಅಂದರೆ, ನವೆಂಬರ್‌ ತಿಂಗಳು ಅಥವಾ ನಂತರ ನೋಂದಣಿಗೆ ಅರ್ಜಿ ಸಲ್ಲಿಸುವ ಚಾಲ್ತಿ ಯೋಜನೆಗಳು ರೇರಾ ಕಾಯ್ದೆಯ ಕಲಂ 3ರ ಉಲ್ಲಂಘನೆಯ ಅನ್ವಯ ಈ ಪ್ರಮಾಣದ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಿತ್ತು. ಬಹುಶಃ ಮಾಹಿತಿ ಹಕ್ಕಿನ ಅಡಿಯಲ್ಲಿ ಈ ಸಂಬಂಧ ಮಾಹಿತಿ ಪಡೆದರೆ ಹಲವು ಸ್ವಾರಸ್ಯಕರ ವಿಷಯಗಳು ಲಭ್ಯವಾಗಬಹುದು.

ಕರ್ನಾಟಕದ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದ ಎದುರು ಈವರೆಗೆ 2,143 ಅರ್ಜಿಗಳು ದಾಖಲಾಗಿವೆ. ಅವುಗಳಲ್ಲಿ 1563ಕ್ಕೆ ಪ್ರಾಧಿಕಾರದ ಮನ್ನಣೆಯೂ ಸಿಕ್ಕಿದೆ. 183 ಅರ್ಜಿಗಳು ಪ್ರಾಧಿಕಾರದ ಪರಿಶೀಲನೆಯಲ್ಲಿವೆ. 301 ಯೋಜನೆಗಳನ್ನು ಪ್ರಾಧಿಕಾರ ಕೂಲಂಕಶ ತನಿಖೆಗೆ ಒಳಪಡಿಸಿದೆ. ಇದರ ಜೊತೆಗೆ, 96 ಅರ್ಜಿಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಇಲ್ಲದ ಹಿನ್ನೆಲೆಯಲ್ಲಿ ತಿರಸ್ಕರಿಸಿದೆ.

ಈ ಹಂತದಲ್ಲಿ ಗ್ರಾಹಕ ಯಾವುದೇ ಯೋಜನೆಯಲ್ಲಿ ಹಣ ತೊಡಗಿಸಿ ಪ್ಲಾಟ್‌ ಕೊಳ್ಳಲು ಮುಂದಾಗುವ ಮುನ್ನ: https://rera.karnataka.gov.in/viewApprovedProjectsInHomePage ವೆಬ್‌ನಲ್ಲಿ ಇರುವ ಸಮ್ಮತಿ ಪಡೆದ ಯೋಜನೆಗಳ ಪಟ್ಟಿಯನ್ನು ಗಂಭೀರವಾಗಿ ಪರಿಶೀಲಿಸಬೇಕು. ತಿರಸ್ಕೃತ ಪ್ರಾಜೆಕ್ಟ್ ಕೂಡ ಅಧ್ಯಯನದಿಂದ ವಂಚನೆಗಳಿಂದ ದೂರ ನಿಲ್ಲಲು ಸಹಾಯ ಮಾಡುತ್ತವೆ. ಬೇರೆ ಅಂಗೀಕೃತ ಪ್ರಾಜೆಕ್ಟ್‌ನಲ್ಲಿ ಹಣ ಹೂಡುವಾಗಲೂ,

ಈ ತಿರಸ್ಕೃತ ಪ್ರಾಜೆಕ್ಟ್‌ನ ಬಿಲ್ಡರ್‌ನೆ ಹೊಸ ಯೋಜನೆ ಮಾಡುತ್ತಿದ್ದರೆ ಆತನ ಮಾಹಿತಿ, ತಿರಸ್ಕಾರದ ಕಾರಣಗಳನ್ನು ಗ್ರಾಹಕ ಮಂದಿ ಸ್ಪಷ್ಟವಾಗಿ ಅರಿತು ಅಂಥವರೊಂದಿಗೆ ವ್ಯವಹರಿಸುವುದು ಒಳಿತು. ಕರ್ನಾಟಕದ ರೇರಾ ವೆಬ್‌ ಳಾಸ https://rera.karnataka.gov.in. ಪ್ರಸ್ತುತ ಈ ನಿಯಂತ್ರಣ ಪ್ರಾಧಿಕಾರದ ಇಂಟರಿಮ್‌ ಅಥಾರಿಟಿ ಆಗಿ ಕಾರ್ಯ ನಿರ್ವಸುತ್ತಿರುವವರು ಐಎಎಸ್‌ ಅಧಿಕಾರಿ ಕಪಿಲ್‌ ಮೋಹನ್‌. ಹೌಸಿಂಗ್‌ ಬೋರ್ಡ್‌ನ ಪ್ರಧಾನ ಕಾರ್ಯದರ್ಶಿಗಳಾಗಿ, ಕರ್ನಾಟಕ ಅಪಲೇಟ್‌ ಟ್ರಿಬ್ಯುನಲ್‌ ಕೆಎಟಿಯ ಚೇರ್‌ಮನ್‌ ಆಗಿಯೂ ಅವರು ಕಾರ್ಯ ನಿರ್ವಸುತ್ತಿದ್ದಾರೆ. 

ಕಷ್ಟ ಪರಿಹಾರಕ್ಕೆ ದೂರು: ರೇರಾ ವೆಬ್‌ಸೈಟ್‌ನಲ್ಲಿ ಸಾಕಷ್ಟು ಮಾಹಿತಿಗಳು ಸಿಗುತ್ತವೆ. ಯೋಜನೆಯ ಹೆಸರು ನೋಂದಾಯಿಸಲು, ಬಿಲ್ಡರ್‌ಗಳ ವಿವರ ಪಡೆಯಲು ಮತ್ತು ಬಿಲ್ಡರ್‌, ಏಜೆಂಟ್‌ರಾಗಿ ಹೆಸರು ದಾಖಲಿಸಲು ಇಲ್ಲಿ ಅವಕಾಶವಿದೆ. ಸಂತ್ರಸ್ತ ಗ್ರಾಹಕರಿಗೆ ದೂರು ಸಲ್ಲಿಸಲು ಕೂಡ ಲಿಂಕ್‌ ಕಲ್ಪಿಸಲಾಗಿದೆ. ಕಟ್ಟಡಗಳ ನಿರ್ಮಾಣ ಮಾಡುವ ಗುತ್ತಿಗೆದಾರರ ಲಾಬಿಗೆ ಮಣಿಯದೆ ರೇರಾ ಕೆಲಸ ಮಾಡಿದರೆ ಜನರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗುತ್ತದೆ.

ರೇರಾ ಜಾರಿಗೆ ತಂದ ಕೆಲ ದಿನಗಳಲ್ಲಿ ಬಂದ ಒಂದು ದೂರನ್ನು ನೆನಪಿಸಿಕೊಳ್ಳಬಹುದು. ಫ್ಲ್ಯಾಟ್‌ ಒಂದಕ್ಕೆ ಮುಂಗಡ ಕೊಟ್ಟಿದ್ದ ಸಂದೀಪ್‌ ಟೋಲ್‌ ಬಿಲ್ಡರ್‌ ಸಮರ್ಪಕವಾಗಿ ಕಾರ್ಯನಿರ್ವಸದ ಹಿನ್ನೆಲೆಯಲ್ಲಿ ತಮ್ಮ ಮುಂಗಡ ಹಣವನ್ನು ವಾಪಾಸು ಕೇಳಿದರು. ಫೋನ್‌, ಪತ್ರ, ಇ.ಮೇಲ್‌ ಮೊದಲಾದ ಹಲವು ವಿಧಾನಗಳಲ್ಲಿ ಬಿಲ್ಡರ್‌ಗೆ ಗ್ರಾಹಕ ಸೂಚನೆ ನೀಡಿದರೂ, ಆಕಡೆಯಿಂದ ಪ್ರತಿಕ್ರಿಯೆಯಾಗಲಿ, ಹಣವಾಗಲಿ ಬರಲಿಲ್ಲ.

ಈ ಹಿನ್ನೆಲೆಯಲ್ಲಿ 2017ರ ಸೆಪ್ಟೆಂಬರ್‌ ಆರರಂದು ಸಂದೀಪ್‌ ರೇರಾಗೆ ದೂರು ಸಲ್ಲಿಸಿದರು. ಸ್ವಾರಸ್ಯ ಎಂದರೆ ಬಿಲ್ಡರ್‌ ತಕ್ಷಣ ಎಚ್ಚೆತ್ತುಕೊಂಡು, ಮುಂಗಡದ ಮೊತ್ತ 9,00,064 ರೂ.ಗಳನ್ನು ಒಂದೇ ಕಂತಲ್ಲಿ ಮರಳಿಸಿದ. ಸಂದೀಪ್‌ ಈ ಮಾಹಿತಿಯನ್ನು ಅದೇ ವರ್ಷದ ಅಕ್ಟೋಬರ್‌ 23ರಂದು ಪ್ರಾಧಿಕಾರಕ್ಕೆ ಸಲ್ಲಿಸಿ ಪ್ರಕರಣ ಹಿಂಪಡೆದರು. ಪ್ರಕರಣಕ್ಕೆ ಕೇವಲ ಒಂದೂವರೆ ತಿಂಗಳಲ್ಲಿ ಸುಖಾಂತ್ಯ ಸಿಕ್ಕಿತ್ತು. ಅದಕ್ಕೇ ರೇರಾ ಸಲಹೆ ನೀಡುತ್ತದೆ, ನೋಂದಾಯಿತ ಬಿಲ್ಡರ್‌ ಬಳಿ ಮಾತ್ರವೇ ಮನೆ ಖರೀದಿಗೆ ಮುಂದಾಗಿ!

ರೇರಾ, ಅರೆ ನ್ಯಾಯಾಂಗ ವ್ಯವಸ್ಥೆ. ಸಮಸ್ಯೆ ಎದುರಾದಾಗ ರೇರಾದ ನ್ಯಾಯಾಧಿಕಾರಿಗೆ ದೂರು ಸಲ್ಲಿಸಬೇಕು. ಅಲ್ಲಿಂದ ಸೂಕ್ತ ಪ್ರತಿಕ್ರಿಯೆ ಸಿಗದಿದ್ದಾಗ ಮೇಲ್ಮನೆ ಆಯೋಗಕ್ಕೆ ದೂರು ಒಯ್ಯಬಹುದು. ಕರ್ನಾಟಕದಲ್ಲಿ ಮನೆ ಕಟ್ಟಲು ಹೊರಟವರಿಗಾಗಿ ಇಲ್ಲಿನ ರೇರಾ ವಿವರ ಇಂತಿದೆ. ರಿಯಲ್‌ ಎಸ್ಟೇಟ್‌ ರೆಗ್ಯುಲೇಟರಿ ಅಥಾರಿಟಿ ಕರ್ನಾಟಕ, 2ನೇ ಮಹಡಿ, ಸಿಲ್ವರ್‌ ಜ್ಯೂಬಿಲಿ ಬ್ಲಾಕ್‌, ಯುನಿಟಿ ಬಿಲ್ಡಿಂಗ್‌, ಸಿಎಸ್‌ಐ ಕಾಂಪೌಂಡ್‌, ಮೂರನೇ ಅಡ್ಡರಸ್ತೆ, ಮಿಷನ್‌ ರಸ್ತೆ, ಬೆಂಗಳೂರು- 560027 ದೂರವಾಣಿ: 080 – 22249798,22249799,  ಫ್ಯಾಕ್ಸ್‌ : 22253718  ಇ ಮೇಲ್‌ ವಿಳಾಸ: [email protected] , [email protected]

* ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ

Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ

‌Viral Video: ಟಿಕ್‌ಟಾಕ್‌ ಸ್ಟಾರ್‌ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್

‌Viral Video: ಟಿಕ್‌ಟಾಕ್‌ ಸ್ಟಾರ್‌ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್

Kharge’s RSS statement for Muslim appeasement: KS Eshwarappa criticizes

Shimoga: ಮುಸ್ಲಿಂ ಸಂತೃಪ್ತಿಗೆ ಖರ್ಗೆ ಆರ್‌ ಎಸ್‌ಎಸ್ ಹೇಳಿಕೆ: ಈಶ್ವರಪ್ಪ ಟೀಕೆ

16-roopa

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್‌ ಎನ್‌ಕೌಂಟರ್‌ ಬಗ್ಗೆ ಡಿಐಜಿ ಹೇಳಿದ್ದೇನು ?

14-sky

Subramanya: ಕುಕ್ಕೆಗೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ದಂಪತಿ ಭೇಟಿ

Hospital: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ

Surat: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ

13-thirthahalli

Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿ ಬಿಟ್ಟು ವ್ಯಕ್ತಿ ನದಿಗೆ; ಶಂಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ

Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ

‌Viral Video: ಟಿಕ್‌ಟಾಕ್‌ ಸ್ಟಾರ್‌ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್

‌Viral Video: ಟಿಕ್‌ಟಾಕ್‌ ಸ್ಟಾರ್‌ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್

Kharge’s RSS statement for Muslim appeasement: KS Eshwarappa criticizes

Shimoga: ಮುಸ್ಲಿಂ ಸಂತೃಪ್ತಿಗೆ ಖರ್ಗೆ ಆರ್‌ ಎಸ್‌ಎಸ್ ಹೇಳಿಕೆ: ಈಶ್ವರಪ್ಪ ಟೀಕೆ

16-roopa

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್‌ ಎನ್‌ಕೌಂಟರ್‌ ಬಗ್ಗೆ ಡಿಐಜಿ ಹೇಳಿದ್ದೇನು ?

13(2)

Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.