ಜಗ ಮೆಚ್ಚಿದ ಆ ಐದು ಕ್ರೀಡಾಸ್ಪೂರ್ತಿಯ ಮನಕಲಕುವ ಘಟನೆಗಳು!
Team Udayavani, Sep 6, 2020, 4:05 PM IST
‘ಕ್ರೀಡಾ ಸ್ಪೂರ್ತಿ’ ಎಂಬ ಪದ ಇವತ್ತು ಎಲ್ಲಾ ರಂಗದಲ್ಲಿಯೂ ಬಳಸಲ್ಪಡುತ್ತಿದೆ. ಈ ಕ್ರೀಡೆ ಎನ್ನುವುದು ಹಾಗೆಯೇ, ಅಲ್ಲಿ ಆಟಗಾರರು ತಮ್ಮ ತಮ್ಮ ತಂಡಗಳ ಪರವಾಗಿ ಎದುರಾಳಿ ಆಟಗಾರರೊಂದಿಗೆ ಹೋರಾಡಿದರೂ ಅಲ್ಲಿ ಒಂದು ಸ್ಪೂರ್ತಿ ತುಂಬಿರುತ್ತದೆ. ಗೆಲುವೇ ಗುರಿಯಾದರೂ ಗೆದ್ದ ತಂಡ ಸೋತ ತಂಡವನ್ನು ಅಭಿನಂದಿಸುತ್ತದೆ. ಎದುರಾಳಿ ಆಟಗಾರರ ಪ್ರದರ್ಶನಕ್ಕೆ ಶಹಬ್ಬಾಸ್ ಗಿರಿಯೂ ಸಿಗುತ್ತದೆ. ಹೀಗೆ ಅದು ಕ್ರಿಕೆಟ್ ಆಗಿರಲಿ, ಹಾಕಿ, ಫುಟ್ಬಾಲೇ ಆಗಲಿ ಇಲ್ಲ ಬೇರಿನ್ಯಾವುದೇ ಕ್ರೀಡೆಯೇ ಆಗಲಿ ಅಲ್ಲಿ ಗೆಲುವಿಗಿಂತ ಹೆಚ್ಚು ಮಹತ್ವವನ್ನು ಪಡೆಯುವುದು ‘ಕ್ರೀಡಾಸ್ಪೂರ್ತಿ’ಯೇ. ವಿಶ್ವದ ವಿವಿಧ ಕಡೆಗಳಲ್ಲಿ ಬೇರೆ ಬೇರೆ ಕ್ರೀಡಾಕೂಟಗಳಲ್ಲಿ, ಪಂದ್ಯಾಟಗಳಲ್ಲಿ ಪ್ರತಿದಿನವೆಂಬಂತೆ ಈ ರೀತಿಯ ‘ಸ್ಪೂರ್ತಿ’ಯ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಮನುಷ್ಯ ಸಂಬಂಧಗಳಿಗೆ ಹೊಸ ಭಾಷ್ಯ ಬರೆದ ಐದು ಪ್ರಮುಖ ಘಟನೆಗಳನ್ನು ಇಲ್ಲಿ ನೀಡಲಾಗಿದೆ. ಬನ್ನಿ ಕ್ರೀಡಾ ಲೋಕದಲ್ಲಿನ ಮನಕಲಕುವ ಕೆಲವೊಂದು ‘ಸ್ಪೂರ್ತಿಯುತ’ ಘಟನೆಗಳು ಇಲ್ಲಿವೆ…
ಕ್ಯಾನ್ಸರ್ ಪೀಡಿತ ಮಗುವಿನ ಚಿಕಿತ್ಸೆಗಾಗಿ ಒಲಂಪಿಕ್ಸ್ ಪದಕವನ್ನೇ ಮಾರಿದ…!
ಒಲಂಪಿಕ್ಸ್ ನಲ್ಲಿ ಒಂದು ಪದಕ ಗೆಲ್ಲುವುದು ವಿಶ್ವದ ಎಲ್ಲಾ ಕ್ರೀಡಾಪಟುಗಳ ಜೀವಮಾನದ ಕನಸು. ಆದರೆ ಪೋಲಂಡ್ ದೇಶದ ಪಿಟ್ರೋ ಮೆಲಚೊವೊಸ್ಕಿ ಎಂಬ ಈ ಡಿಸ್ಕಸ್ ಎಸೆತಗಾರ ರಿಯೋ ಒಲಂಪಿಕ್ಸ್ ನಲ್ಲಿ ತನಗೆ ಸಿಕ್ಕಿದ ಬೆಳ್ಳಿ ಪದಕವನ್ನೇ ಹರಾಜಿಗಿಟ್ಟ. ಇದಕ್ಕೆ ಕಾರಣ ಮೂರು ವರ್ಷ ಪ್ರಾಯದ ಮಗುವಿನ ಕ್ಯಾನ್ಸರ್ ಚಿಕಿತ್ಸೆಗೆ ನಿಧಿ ಸಂಗ್ರಹಿಸುವ ಉದ್ದೇಶ ಆತನದ್ದಾಗಿತ್ತು. ತನ್ನ ಈ ಉದ್ದೇಶವನ್ನು ಆತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಕೂಡಲೇ ಪೋಲಂಡ್ ದೇಶದ ದಂಪತಿ ಹರಾಜಿನಲ್ಲಿ ಭಾಗವಹಿಸಿ ಆತ ಸಂಗ್ರಹಿಸಲುದ್ದೇಶಿಸಿದ್ದ ಮೊತ್ತವನ್ನು ನೀಡುವ ಭರವಸೆ ನೀಡುತ್ತಾರೆ.
ಗಾಯಗೊಂಡ ಎದುರಾಳಿಗೆ ಟಿಪ್ಸ್ ಕೊಟ್ಟು ಚಿನ್ನ ಕಳೆದುಕೊಂಡ…!
1936ರಲ್ಲಿ ಜರ್ಮನಿಯಲ್ಲಿ ನಡೆದ ಬರ್ಲಿನ್ ಒಲಂಪಿಕ್ಸ್ ವಿಶ್ವಯುದ್ಧದ ಕರಿನೆರಳಿನಲ್ಲಿ ನಡೆದ ಮಹಾನ್ ಕೂಟವಾಗಿ ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಆದರೆ ಆ ಕ್ರೀಡಾಕೂಟದಲ್ಲಿ ಆ ಕಾಲದ ಬದ್ಧ ವೈರಿ ದೇಶಗಳಾಗಿದ್ದ ಅಮೆರಿಕಾ ಹಾಗೂ ಜರ್ಮನಿಯ ಅತ್ಲೆಟ್ ಗಳಿಬ್ಬರ ನಡುವಿನ ಕ್ರೀಡಾಸ್ಪೂರ್ತಿಯೂ ಕ್ರೀಡಾ ಪುಟದಲ್ಲಿ ದಾಖಲಾಗಿದೆ. ವಿಶ್ವದಾಖಲೆ ವೀರ ಲಾಂಗ್ ಜಂಪ್ ಅತ್ಲೆಟ್ ಅಮೆರಿಕಾದ ಜೆಸ್ಸೆ ಓನ್ಸ್ ಬರ್ಲಿನ್ ಒಲಂಪಿಕ್ಸ್ ನ ಫೈನಲ್ ಅರ್ಹತಾ ಸುತ್ತಿನಲ್ಲಿ ಎರಡೆರಡು ಬಾರಿ ಫೌಲ್ ಜಂಪ್ ಮಾಡುತ್ತಾರೆ, ಈ ಸಂದರ್ಭದಲ್ಲಿ ಓನ್ಸ್ ನ ಪ್ರಬಲ ಎದುರಾಳಿಯಾಗಿದ್ದ ಯುರೋಪಿಯನ್ ದಾಖಲೆವೀರ ಜರ್ಮನಿಯ ಲೂಝ್ ಲಾಂಗ್ ಆತನ ಬಳಿಗೆ ಬಂದು ಯಾವ ರೀತಿಯಲ್ಲಿ ಓಡಿ ಜಂಪ್ ಮಾಡಬೇಕು ಎಂಬ ಕುರಿತು ಕೆಲವು ಟಿಪ್ಸ್ ನೀಡುತ್ತಾನೆ. ಬಳಿಕ ಓನ್ಸ್ ನ ಮುಂದಿನ ನೆಗೆತ ಪಾಸಾಗುತ್ತದೆ ಆ ಮೂಲಕ ಫೈನಲ್ ಪ್ರವೇಶಿಸಿದ ಆತ ಅಲ್ಲಿ ಚಿನ್ನ ಗೆಲ್ಲುತ್ತಾನೆ, ಆತನಿಗೆ ಟಿಪ್ಸ್ ನೀಡಿದ ಲಾಂಗ್ ಬೆಳ್ಳಿ ನಗು ಬೀರುತ್ತಾನೆ.
ಓಡುವಾಗ ಬಿದ್ದವರು ಎದ್ದು ಜೊತೆಯಾಗಿ ನಡೆದು ಗುರಿ ಮುಟ್ಟಿದರು!!
ಇದೂ ಸಹ ರಿಯೋ ಒಲಂಪಿಕ್ಸ್ ನ ಸಂದರ್ಭದಲ್ಲೇ ನಡೆದ ಇನ್ನೊಂದು ಕ್ರೀಡಾಸ್ಪೂರ್ತಿಯ ಘಟನೆ. ಮಹಿಳೆಯರ 5000 ಮೀಟರ್ ಓಟದ ಸ್ಪರ್ಧೆ ನಡೆಯುತ್ತಿತ್ತು. ಇನ್ನೇನು ಸ್ಪರ್ಧಿಗಳು ಗುರಿ ಮುಟ್ಟಲು 2000 ಮೀಟರ್ ಬಾಕಿ ಇದೆ ಎನ್ನುವಷ್ಟರಲ್ಲಿ ನ್ಯೂಝಿಲ್ಯಾಂಡ್ ನ ನಿಕ್ಕಿ ಹ್ಯಾಂಬ್ಲಿನ್ ಮತ್ತು ಅಮೆರಿಕಾದ ಅಬೇ ಡಿ ಅಗಸ್ಟಿನೋ ಪರಸ್ಪರ ಢಿಕ್ಕಿ ಹೊಡೆದುಕೊಳ್ಳುತ್ತಾರೆ. ತಕ್ಷಣ ಅಬೇ ಡಿ ಅಗಸ್ಟಿನೋ ಎದ್ದು ನಿಂತು ನಿಕ್ಕಿ ಹ್ಯಾಂಬ್ಲಿನ್ ಗೆ ಎದ್ದುನಿಲ್ಲಲು ಸಹಾಯ ಮಾಡಲು ಪ್ರಯತ್ನಿಸುತ್ತಾಳೆ, ಆದರೆ ಆಕೆಯ ಕಾಲಿಗೆ ಪೆಟ್ಟಾಗಿರುವ ಕಾರಣ ನಿಕ್ಕಿಗೆ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ. ಬಳಿಕ ಇವರಿಬ್ಬರೂ ಪರಸ್ಪರ ಒಬ್ಬರಿಗೊಬ್ಬರು ಆಧರಿಸಿಕೊಂಡು ಗುರಿಯನ್ನ ಮುಟ್ಟುತ್ತಾರೆ. ಇವರ ಕ್ರೀಡಾಸ್ಪೂರ್ತಿಗಾಗಿ ಇವರಿಗೆ ಫೈನಲ್ ಪ್ರವೇಶ ಸಿಗುತ್ತದೆ, ಆದರೆ ಕಾಲಿಗೆ ಪೆಟ್ಟಾಗಿದ್ದ ಕಾರಣ ಅಬೇ ಡಿ ಅಗಸ್ಟಿನೋ ಅಂತಿಮ ಸುತ್ತಿನಲ್ಲಿ ಓಡಲಾಗುವುದಿಲ್ಲ. ನಿಕ್ಕಿ ಹ್ಯಾಂಬ್ಲಿನ್ 17ನೇ ಸ್ಥಾನ ಪಡೆದುಕೊಳ್ಳುತ್ತಾಳೆ. ಆದರೆ ಒಲಂಪಿಕ್ಸ್ ನಂತಹ ಮಹಾನ್ ಕ್ರೀಡಾಕೂಟದಲ್ಲಿ ಅಮೋಘ ಕ್ರೀಡಾಸ್ಪೂರ್ತಿಯನ್ನು ಮೆರೆದ ಈ ಇಬ್ಬರು ಕ್ರೀಡಾಪಟುಗಳಿಗೆ ಒಲಂಪಿಕ್ಸ್ ನೈಜ ಕ್ರೀಡಾಸ್ಪೂರ್ತಿ ಪ್ರಶಸ್ತಿಯನ್ನು (ಫೇರ್ ಪ್ಲೇ ಅವಾರ್ಡ್) ನೀಡಿ ಗೌರವಿಸಲಾಗುತ್ತದೆ.
ಗೋಲ್ ಪೋಸ್ಟ್ ಖಾಲಿ ಇದ್ದರೂ ಗೋಲ್ ಹೊಡೆಯದ ಸ್ಟ್ರೈಕರ್!
ಚಿತ್ರ: ಕ್ರೀಡಾಸ್ಪೂರ್ತಿಯ ಪ್ರದರ್ಶನಕ್ಕಾಗಿ ಗೋಲ್ ಕೀಪರ್ ಗೆರ್ರಾರ್ಡ್ ನಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಡಿ ಕ್ಯಾನಿಯೋ.
ಇದು 2001ರ ಫುಟ್ಬಾಲ್ ಪ್ರೀಮಿಯರ್ ಲೀಗ್ ಕೂಟದಲ್ಲಿ ನಡೆದ ಘಟನೆ. ವೆಸ್ಟ್ ಹ್ಯಾಂ ಪರ ಆಡುತ್ತಿದ್ದ ಇಟಲಿ ಸ್ಟ್ರೈಕರ್ ಡಿ ಕ್ಯಾನಿಯೋಗೆ ಸುಲಭವಾಗಿ ಗೋಲ್ ಹೊಡೆಯುವ ಅಪೂರ್ವ ಅವಕಾಶವೊಂದು ಲಭಿಸಿತ್ತು. ಚೆಂಡನ್ನು ತಡೆಯಲು ಓಡಿದ ಸಂದರ್ಭದಲ್ಲಿ ಎದುರಾಳಿ ಎವರ್ಟನ್ ತಂಡದ ಗೋಲ್ ಕೀಪರ್ ಪೌಲ್ ಗೆರ್ರಾರ್ಡ್ ಮೈದಾನದಲ್ಲಿ ಬಿದ್ದು ಗಾಯಗೊಳ್ಳುತ್ತಾರೆ, ಈ ಸಂದರ್ಭದಲ್ಲಿ ತನ್ನ ಸಹ ಆಟಗಾರ ತನ್ನ ಕಡೆಗೆ ತಳ್ಳಿದ ಚೆಂಡನ್ನು ಸುಲಭವಾಗಿ ಖಾಲಿಯಾಗಿದ್ದ ಗೋಲ್ ಪೋಸ್ಟ್ ಗೆ ಹೊಡೆದು ಗೋಲ್ ದಾಖಲಿಸುವ ಅವಕಾಶ ಸುವರ್ಣಾವಕಾಶ ಡಿ ಕ್ಯಾನಿಯೋಗೆ ಇದ್ದರೂ ಆತ ತನ್ನಡೆಗೆ ಸಾಗಿಬಂದ ಚೆಂಡನ್ನು ಕೈಯಲ್ಲಿ ಹಿಡಿಯುವ ಮೂಲಕ ಕ್ರೀಡಾಸ್ಪೂರ್ತಿಯನ್ನು ಮೆರೆಯುತ್ತಾನೆ. ಈತನ ಈ ವರ್ತನೆಗೆ ಸ್ಟೇಡಿಯಂನಲ್ಲಿ ನೆರೆದಿದ್ದವರು ಎದ್ದುನಿಂತು ಗೌರವ ಸಲ್ಲಿಸುತ್ತಾರೆ.
ಕ್ರೀಸಿನಲ್ಲಿ ಕುಸಿದ ಬ್ರೆಟ್ ಲೀಯನ್ನು ಸಮಾಧಾನಿಸಿದ ಆಂಡ್ರ್ಯೂ ಫ್ಲಿಂಟಾಪ್!
ಅದು 2005ರ ಆ್ಯಶಸ್ ಸರಣಿಯ ಸಂದರ್ಭ. ಎಜ್ ಬಾಸ್ಟನ್ ಟೆಸ್ಟ್ ನ ಆ ಪಂದ್ಯದಲ್ಲಿ ಕಾಂಗಾರೂಗಳ ಗೆಲುವಿಗೆ ಕೇವಲ 2 ರನ್ನುಗಳ ಅಗತ್ಯವಿತ್ತು, ಕೈಯಲ್ಲಿ ಇದ್ದಿದ್ದು ಒಂದೇ ವಿಕೆಟ್. ಈ ಸಂದರ್ಭದಲ್ಲಿ ಮೈಕಲ್ ಕ್ಯಾಸ್ಪರೋವಿಚ್ ಔಟಾಗುತ್ತಾರೆ. ಇತ್ತ ಇಂಗ್ಲಂಡ್ ಆಟಗಾರರ ಸಂಭ್ರಮಾಚರಣೆ ಪ್ರಾರಂಭವಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಮೈದಾನದಲ್ಲಿ ಒಂದು ಅಪೂರ್ವ ಘಟನೆಗೆ ಎಲ್ಲರೂ ಸಾಕ್ಷಿಯಾಗುತ್ತಾರೆ. ಕ್ಯಾಸ್ಪೊರೋವಿಚ್ ಔಟಾದೊಡನೆ ನಾನ್ ಸ್ರ್ಟೈಕ್ ಕಡೆಯಿದ್ದ ಬ್ರೆಟ್ ಲೀ ಕ್ರೀಸಿನಲ್ಲೇ ಕುಳಿತು ಆಳಲಾರಂಭಿಸುತ್ತಾರೆ. ಆಗ ಆತನ ಬಳಿಗೆ ಬಂದ ಫ್ಲಿಂಟಾಫ್ ಎದುರಾಳಿ ಆಟಗಾರನ ಮೈದಡವಿ ಸಂತೈಸುತ್ತಾರೆ. ಇದು ಆ್ಯಶಸ್ ಸರಣಿ ಇತಿಹಾಸದಲ್ಲಿ ಉತ್ತಮ ಕ್ರೀಡಾಸ್ಪೂರ್ತಿಯ ಘಟನೆಯಾಗಿ ದಾಖಲಾಗುತ್ತದೆ. ಬ್ರೆಟ್ ಲೀಯ ಅಮೋಘ ಅಜೇಯ 43 ರನ್ನುಗಳ ಆಟ ಇಂಗ್ಲಂಡ್ ಗೆಲುವಿಗೆ ತಡೆಯಾಗಿತ್ತು.
ನಾನು ಆಗಲೇ ಹೇಳಿದಂತೆ ಪ್ರಪಂಚದ ನಾನಾ ಕಡೆಗಳಲ್ಲಿ ಪ್ರತಿನಿತ್ಯವೆಂಬಂತೆ ಈ ರೀತಿಯ ಕ್ರಿಡಾಸ್ಪೂರ್ತಿಯ ಘಟನೆಗಳು ವಿವಿಧ ಕ್ರೀಡಾಕೂಟ, ಪಂದ್ಯಾಟಗಳ ಸಂದರ್ಭದಲ್ಲಿ ದಾಖಲಾಗುತ್ತಲೇ ಇರುತ್ತವೆ. ಆದರೆ ಜಾಗತಿಕ ಮಟ್ಟದ ಕ್ರೀಡಾಕೂಟವೊಂದು ನಡೆದಾಗ ಅಥವಾ ಪ್ರಮುಖ ಪಂದ್ಯಾಟಗಳ ಸಂದರ್ಭದಲ್ಲಿ ನಡೆಯಬಹುದಾದ ಇಂತಹ ಕ್ರೀಡಾಸ್ಪೂರ್ತಿಯ ಘಟನೆಗಳು ನಮಗೆಲ್ಲಾ ಪ್ರೇರಣದಾಯಕವಾಗಿರುತ್ತದೆ ಮಾತ್ರವಲ್ಲದೇ ಅನುಕರಣೀಯವೂ ಆಗಿರುತ್ತದೆ.
ಇನ್ನು ಕ್ರಿಕೆಟ್ ವಿಷಯಕ್ಕೆ ಬರುವುದಾದರೆ, ಅದರಲ್ಲೂ ಭಾರತೀಯ ಆಟಗಾರರ ವಿಷಯಕ್ಕೆ ಬರುವುದಾದರೆ ಮೈದಾನದಲ್ಲಿ ಹಲವಾರು ರೀತಿಯ ಕ್ರೀಡಾಸ್ಪೂರ್ತಿಯ ಘಟನೆಗಳಿಗೆ ನಮ್ಮ ಆಟಗಾರರು ಪಾತ್ರರಾಗಿದ್ದಾರೆ. ಇವರಲ್ಲಿ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್, ಅನಿಲ್ ಕುಂಬ್ಳೆ ಮುಂತಾದವರೆಲ್ಲ ತಮ್ಮ ಕ್ರೀಡಾಬದುಕಿನುದ್ದಕ್ಕೂ ನಿಜ ಕ್ರೀಡಾಸ್ಪೂರ್ತಿಯನ್ನು ಮೆರೆದು ಕಿರಿಯ ಆಟಗಾರರಿಗೆ ಮಾದರಿಯಾಗಿದ್ದಾರೆ.
— ಹರಿಪ್ರಸಾದ್ ನೆಲ್ಯಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.