ಅಂಕವಲ್ಲ, ಅದರಾಚೆಗಿನ ಗುಣಾಂಕ ಮುಖ್ಯ
Team Udayavani, May 11, 2018, 12:53 PM IST
ಇದೊಂದು ರೀತಿಯ ಅಮಲು. ಅಂಕ ಆಧಾರಿತವಾಗಿ ತೂಗುವ, ಅಳೆಯುವ, ಬೀಗುವ ತೆವಲು. ಫಲಿತಾಂಶ ನಾಳೆ ಎಂದು ಸುದ್ದಿ ಪ್ರಕಟಗೊಂಡಾಗ ಶುರುವಾಗುವ ನಡುಕ ಮರುದಿನ ಪ್ರಕಟಗೊಳ್ಳುವ ತನಕ ಮುಂದುವರಿಯುತ್ತದೆ. ಫಲಿತಾಂಶ ಬಂದಾಗ ಫಸ್ಟ್ , ಹೈಯೆಸ್ಟ್ ಎಂದು ಬಿಂಬಿಸುವ ತವಕ. ಇರಲಿ, ಯಾರಿಗೂ ಹೊಟ್ಟೆಕಿಚ್ಚಿಲ್ಲ. ಹೆಚ್ಚು ಅಂಕ ಪಡೆಯುವುದು, ಪಡೆದೆನೆಂದು ಬಿಂಬಿಸುವುದು,
ಖುಷಿಯಾಗುವುದು ತಪ್ಪಲ್ಲ. ಇಡೀ ಶೈಕ್ಷಣಿಕ ವರ್ಷ ತಪಸ್ಸಿನಂತೆ ಅಧ್ಯಯನ ನಡೆಸಿ ಹೆಚ್ಚು ಅಂಕ ಪಡೆಯುವುದು ಸಣ್ಣ ಸಾಧನೆಯೂ ಅಲ್ಲ. ಆತಂಕ ಇರುವುದು ಅಂಕದ ಪರದೆಯ ಹಿಂದೆ ಮರೆಮಾಚಲ್ಪಡುವ ಸತ್ಯ ಸಂಗತಿಗಳ ಬಗ್ಗೆ ಮತ್ತು ಫಸ್ಟೊ, ಸೆಕೆಂಡೊ, ರ್‍ಯಾಂಕೊ ಏನೋ ಒಂದು ಬಂತು. ಅನಂತರದ ದಿನಗಳಲ್ಲಿ ಈ ಅಂಕಗಾರರೆಲ್ಲ ಎಲ್ಲಿರುತ್ತಾರೆ ಹಾಗೂ ಸಾಮಾಜಿಕವಾಗಿ ಬಿಂಬಿಸುವ ಮೌಲ್ಯಗಳಾದರೂ ಏನು ಎಂಬುದರ ಬಗ್ಗೆ.
ಅಂಕ ಆಧಾರಿತವಾಗಿಯೇ ಒಂದು ಶಾಲೆಯನ್ನೋ, ವಿದ್ಯಾರ್ಥಿಯನ್ನೋ ಗುರುತಿಸುವುದಾದರೆ ಇಡೀ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಏಕೆ? ಶಿಕ್ಷಕರೇಕೆ? ಅಂತಿಮವಾಗಿ ಶಾಲೆಗಳೇಕೆ? ಒಂದು ಶಾಲೆಯಲ್ಲಿ ಒಬ್ಬನೋ ಇಬ್ಬರೋ ಅತಿ ಹೆಚ್ಚು ಅಂಕ ಪಡೆದಲ್ಲಿಗೆ ಎಲ್ಲವೂ ಸಾರ್ಥಕವಾಯಿತೇ? ಶಿಕ್ಷಣದ ಮೂಲ ಉದ್ದೇಶ ಸಮಗ್ರ ವ್ಯಕ್ತಿತ್ವ ವಿಕಾಸ, ಆ ಮೂಲಕ ಸುಸಂಸ್ಕೃತ ನಾಗರಿಕರ ರೂಪುಗೊಳ್ಳುವಿಕೆ, ಅದರ ತಳಹದಿಯಲ್ಲಿ ನಾಗರಿಕತೆಯ ಬೆಳವಣಿಗೆ ಮತ್ತು ಸ್ವಸ್ಥ ಸಮಾಜದ ನಿರ್ಮಾಣ. ಆದರೆ ಇವತ್ತು ಶಾಲೆಗಳ ಮೂಲಕ, ಫಲಿತಾಂಶದ ಮೂಲಕ ನಾವು ಏನನ್ನು ಬಿಂಬಿಸಲು ಹೊರಟಿದ್ದೇವೆ?
ರಾಜ್ಯಕ್ಕೇ ನಾವು ಮುಂಚೂಣಿಯಲ್ಲಿದ್ದೇವೆ. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸಂಸ್ಥೆ ನಮ್ಮದು ಎಂದು ಜಾಹೀರಾತು ಪ್ರಕಟಿಸುತ್ತೇವೆ. ಆದರೆ ಶಾಲೆಯ ಜೀವಾಳವಾಗಿರುವ ಬಹುಸಂಖ್ಯಾತ ವಿದ್ಯಾರ್ಥಿಗಳ ಮನಃಸ್ಥಿತಿ ಏನು ಎಂಬುದು ಯಾರಿಗೂ ಅರ್ಥವಾಗುವುದಿಲ್ಲ. ಅದೆಲ್ಲ ಪ್ರಸಿದ್ಧಿಯ ತೆವಲಿನಲ್ಲಿ, ವ್ಯಾಪಾರದ ದೃಷ್ಟಿಕೋನದಲ್ಲಿ, ಸರಕುಗಳನ್ನು ಉತ್ಪಾದಿಸುವ ಯಂತ್ರ ನಾಗರಿಕತೆಯ ಕೆಟ್ಟ ಮುಖಗಳ ನರ್ತನ ಎನ್ನೋಣವೇ? ಅಂಕಗಳ ಹಿಂದೆ ಹಣ ಮಾಡುವ ದಂಧೆ ಇದೆ. ಕೋಚಿಂಗ್ ಮತ್ತು ವಿಶೇಷ ತರಬೇತಿಗಳ ಹೆಸರಿನಲ್ಲಿ ಉತ್ತಮ ಭವಿಷ್ಯದ ಕನಸುಗಳನ್ನು ಬಿತ್ತಿ ಬೆಳೆ ಕೊಯ್ಯುವ ಸುಂದರ ಮುಖವಾಡಗಳು ಅವೆಲ್ಲ. ಇಡೀ ಶೈಕ್ಷಣಿಕ ವರ್ಷದಲ್ಲಿ ಏನಾದರೂ ಮಾಡಿ, ಅಂತಿಮವಾಗಿ ಎಷ್ಟು ಪರ್ಸೆಂಟೇಜ್ ಎಂಬ ನೆಲೆಯಲ್ಲಿ ಒಂದು ಸಂಸ್ಥೆಯನ್ನು ಅಳತೆ ಮಾಡುವುದಾದರೆ ಪಠ್ಯೇತರ, ಸಹಪಠ್ಯ ಚಟುವಟಿಕೆಗಳು, ಬೋಧನಾ ಚಟುವಟಿಕೆಗಳು, ಕ್ರೀಡಾಕೂಟ, ವಾರ್ಷಿಕೋತ್ಸವ, ಸಾಂಸ್ಕೃತಿಕ ಹಬ್ಬ, ಇತ್ಯಾದಿಗಳೆಲ್ಲ ವ್ಯರ್ಥ ಮತ್ತು ನಿಷ್ಪ್ರಯೋಜಕ. ಫಲಿತಾಂಶ ಬಂದ ತಕ್ಷಣ ಮಾಧ್ಯಮಗಳೆಲ್ಲ ಕ್ಲೀಷೆ ಎನ್ನಬಹುದಾದ ಪ್ರತಿಕ್ರಿಯೆಗಳನ್ನು, ಸಂಭ್ರಮಾಚರಣೆಯನ್ನು ದಿನವಿಡೀ ಬಿತ್ತರಿಸುತ್ತವೆ.
ಆ ಮೂಲಕ ಸಾರ್ವತ್ರಿಕವಾಗಿ ನೀಡುವ ಸಂದೇಶವಾದರೂ ಏನು ಎಂಬುದರ ಬಗ್ಗೆ ಅರಿವಿದೆಯೇ? ಹೋಲಿಕೆ, ವಿಶ್ಲೇಷಣೆಯ ಮೂಲಕ ವರ್ಗೀಕರಣ ಮತ್ತು ಅವಮಾನಿಸುವಿಕೆ ಮಾಡಿದಂತಾಗುವುದಿಲ್ಲವೇ? ಫಸ್ಟ್, ಸೆಕೆಂಡ್ ಬಂದವರೆಲ್ಲ ಅತಿ ಹೆಚ್ಚು ಆರ್ಥಿಕ ಮೂಲದ ಶಿಕ್ಷಣ ವಿಭಾಗವನ್ನು ಆಯ್ದುಕೊಳ್ಳುವ ನಿರ್ಧಾರ ಪ್ರಕಟಿಸುತ್ತಾರೆ. ನಮ್ಮ ಶಾಲೆಯ ಹೆಮ್ಮೆಯ ಸಾಧಕರಿವರು ಎಂದು ಸಮ್ಮಾನಿಸುವ, ಬ್ಯಾನರ್ ಹಾಕಿ ಅಭಿನಂದಿಸುವ ಮೂಲಕ ನಮ್ಮ ಸಂಸ್ಥೆ ಗುಣಾತ್ಮಕ ಶಿಕ್ಷಣ ನೀಡುತ್ತದೆ, ನಮ್ಮಲ್ಲಿಗೆ ಬಂದರೆ ನಿಮಗೆ ಉತ್ತಮ ಭವಿಷ್ಯ ಸಿಗುತ್ತದೆ
ಎಂದು ಬಿಂಬಿಸುವ ಪರಿ ನಿಜಕ್ಕೂ ಮೌಲ್ಯದ ಅಧಃಪತನದ ಸಂಕೇತ ಮತ್ತು ಮಾರುಕಟ್ಟೆ ಸಂಸ್ಕೃತಿಯ ಪ್ರತೀಕ.
ಯಶಸ್ಸಿನ ಗೀಳಿನಲ್ಲಿ ಇಡೀ ಸಮಾಜ ಮತ್ತು ಸಮಗ್ರ ಶೈಕ್ಷಣಿಕ ವ್ಯವಸ್ಥೆಯು ರೋಗಗ್ರಸ್ಥ ಸಮಾಜವನ್ನು ನಿರ್ಮಾಣ
ಮಾಡುತ್ತಿದೆಯೆಂಬುದರ ಅರಿವು ಯಾರಿಗೂ ಇದ್ದಂತಿಲ್ಲ. ಅಂತಿಮವಾಗಿ ಕಲಿಯುವುದು ಏಕೆ? ಶಿಕ್ಷಣ ಏಕೆ? ಸುಖೀ ಸಮಾಜದ ನಿರ್ಮಾಣಕ್ಕೆ. ಆದರೆ ನಾವು ಆದರ್ಶದ, ಗುಣಾತ್ಮಕ ಶಿಕ್ಷಣದ ಹೆಸರಿನಲ್ಲಿ ಸುಖೀ ಸಮಾಜದ ಕಲ್ಪನೆಗೆ ವಿರುದ್ಧವಾಗಿಯೇ ಶಿಕ್ಷಣ ವ್ಯವಸ್ಥೆಯನ್ನು ರೂಪುಗೊಳಿಸುತ್ತಿದ್ದೇವೆ. ಬೆರಳೆಣಿಕೆಯ ವಿದ್ಯಾರ್ಥಿಗಳ ಅಂಕ ಗಳಿಕೆಯನ್ನು ಸಂಸ್ಥೆಯ ಯಶಸ್ಸೆಂದು ಹೇಳುವುದು, ಅದುವೇ ಗುಣಾತ್ಮಕವೆಂದು ಬಿಂಬಿಸುವುದು ಬಹುಸಂಖ್ಯಾತ ವಿದ್ಯಾರ್ಥಿಗಳಿಗೆ ಮಾಡುವ ಅವಮಾನ.
ಅದಿಲ್ಲವಾದರೆ ಕಡಿಮೆ ಫಲಿತಾಂಶದ ನಿರೀಕ್ಷೆಯಲ್ಲಿ ಆತ್ಮಹತ್ಯೆ ಮತ್ತು ಕಮ್ಮಿ ಅಂಕ ಬಂತೆಂದು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ದ್ವಿಗುಣವಾಗುತ್ತಿರುವುದು ಏಕೆ? ಶಿಕ್ಷಣದ ಮಟ್ಟ ಹೆಚ್ಚಿದಂತೆ ಜನ ಹೆಚ್ಚೆಚ್ಚು ಸುಖೀಗಳಾಗುತ್ತ, ಒತ್ತಡ ರಹಿತರಾಗಬೇಕು. ಆ ಮೂಲಕ ಸಮಾಜವೂ ಸುವ್ಯವಸ್ಥಿತವಾಗಬೇಕಿತ್ತಲ್ಲ? ರ್‍ಯಾಂಕ್ ಪದ್ಧತಿಯನ್ನು ರದ್ದುಗೊಳಿಸಿದರು. ಆ ಮೂಲಕ ರ್‍ಯಾಂಕ್ ಮುಖ್ಯವಲ್ಲ, ಗುಣಮಟ್ಟದ ರ್‍ಯಾಂಕ್ ಬೇಕು, ಶಿಕ್ಷಣ ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳು ಸಮಾನತೆಯ ನೆಲೆಯಲ್ಲಿ ಮೌಲ್ಯದ ಪ್ರತೀಕವಾಗಿ ಬಿಂಬಿತವಾಗಬೇಕೆಂಬುದು ಆಶಯ
ಅದರ ಹಿಂದಿನದು. ಆದರೆ ಈಗ ಆಗುತ್ತಿರುವುದೇನು? ರ್‍ಯಾಂಕ್ ಹೋಯ್ತು ಅಂಕ ಬಂತು, ಅಂಕ ಹೋಯ್ತು ಗ್ರೇಡ್ ಬಂತು.
ಅದದ್ದೇನು? ಫಲಿತಾಂಶದ ಮೂಲಕ ರ್‍ಯಾಂಕಿಗಿಂತಲೂ ಕರಾಳ ನರ್ತನ ಶುರುವಾಯಿತು. ಯಶಸ್ಸು ಸಂಭ್ರಮಾಚರಣೆಗಲ್ಲ, ವೈಭವೀಕರಣಕ್ಕಲ್ಲ. ಕಲಿಕೆಯ ಮೂಲಕ ಮಾನವತೆ ಮೇಳೈಸುವಂತಾಗಬೇಕು. ಒತ್ತಡ ರಹಿತವಾಗಿ ಕೂಡು ಸಂಸ್ಕೃತಿಯ ಸಂಭ್ರಮ ಬರಬೇಕು. ಕಾಯಕ ಸಂಸ್ಕೃತಿಯು ಬಲಗೊಳ್ಳಬೇಕು. ಅದು ಬಿಟ್ಟು; ಫಲಿತಾಂಶವೇ ಅಂತಿಮವೆಂದು ಪರಿಗಣಿಸಿ ಆ ಶಾಲೆ ಶ್ರೇಷ್ಠ, ಈ ಶಾಲೆ ಕನಿಷ್ಠ, ಅವರು ಅಯೋಗ್ಯರು, ಇವರು ಯೋಗ್ಯರು, ಅಲ್ಲಿ ಕಲಿತರೆ ಮಾತ್ರ ಭವಿಷ್ಯ, ಇಲ್ಲಿ ಕಲಿತರೆ ಭವಿಷ್ಯವಿಲ್ಲ, ಪೇಟೆಯ ಶಾಲೆಗಳೇ ಗುಣಮಟ್ಟದ ಶಿಕ್ಷಣ
ನೀಡುವವುಗಳು, ಹಳ್ಳಿಯವು ಪ್ರಯೋಜನವಿಲ್ಲ ಇಂತಹ ಪೂರ್ವಗ್ರಹಪೀಡಿತ ಗ್ರಹಿಕೆಗಳು ಸಮಾಜಕ್ಕೆ ಅಂಟಿದ ಶಾಪ. ಇದಕ್ಕೆಲ್ಲ ತಾಳ ಹಾಕಿ ತಲೆದೂಗುವ ಪೋಷಕರಿಗೆ ಅದರ ಅರಿವಿಲ್ಲ.
ಅವರಿಗೆ ತಮ್ಮ ಸುಖದ ನಿರೀಕ್ಷೆ ಮತ್ತು ಮಕ್ಕಳ ಭವಿಷ್ಯದ್ದೇ ಚಿಂತೆ. ಶಿಕ್ಷಣ ವ್ಯವಸ್ಥೆ ಸಾಕಷ್ಟು ಸುಧಾರಿಸಬೇಕಾದ ಅನಿವಾರ್ಯತೆಯಿದೆ. ಯಾವುದೇ ಹಂತದಲ್ಲಿ ಪಾಸು-ಫೈಲು ಎಂಬ ವರ್ಗೀಕರಣವಿಲ್ಲದೆ ಶಿಕ್ಷಣ ಸಂಸ್ಥೆಯಿಂದ ವಿದ್ಯಾರ್ಥಿಗಳು ತೆರಳುವಂತಾಗಬೇಕು. “ನನ್ನ ಗ್ರೇಡಿನಲ್ಲಿ ನಾನು ರೂಢಿಸಿಕೊಂಡಿರುವ ಜೀವನ ಮೌಲ್ಯಗಳು ಪ್ರಧಾನ ಅಂಶವೆಂದು’ ವಿದ್ಯಾರ್ಥಿಗಳು ಗುರುತಿಸಿಕೊಳ್ಳುವಂತಾಗಬೇಕು. ಎಲ್ಲ ಶಿಕ್ಷಣ
ಸಂಸ್ಥೆಗಳೂ ಗುಣಾಂಕ ಆಧಾರಿತವಾಗಿಯೇ ಗುರುತಿಸಿಕೊಳ್ಳುವಂತಾಗಬೇಕು.
ಈ ಸಂಬಂಧವಾಗಿ ಸಿಬ್ಬಂದಿಗಳ ಮತ್ತು ಮೂಲಭೂತ ವ್ಯವಸ್ಥೆಗಳ ಕೊರತೆ ಯಾವ ಸಂಸ್ಥೆಗಳಲ್ಲೂ ಇರದಂತೆ ಸರಕಾರ ನೋಡಿಕೊಳ್ಳಬೇಕು. ಶಾಲೆಯಲ್ಲಿ ಮನುಷ್ಯರು ರೂಪುಗೊಳ್ಳಬೇಕು. ಫಲಿತಾಂಶದಲ್ಲಿ ಅಂಕ ಒಂದು ಸಣ್ಣ ಭಾಗ ಮಾತ್ರ ಎಂಬುದು ಪರಿಗಣಿತವಾಗಿ ಫಲಿತಾಂಶವು ಸಮಗ್ರ ವ್ಯಕ್ತಿತ್ವ ವಿಕಾಸದ ಪ್ರತಿಬಿಂಬವಾಗಬೇಕು. ಹೌದು ಆಗಬೇಕು, ಆದರೆ ಯಾರಿಗೂ ಪುರುಸೊತ್ತಿಲ್ಲ; ಏಕೆಂದರೆ ಯಾವಾಗ ಶಾಲೆ ಶುರುವಾಗಬೇಕು, ಏಕೆ ಫಲಿತಾಂಶ ಕಮ್ಮಿ ಬಂತು, ಶಿಕ್ಷಕರಿಗೆ ಅಷ್ಟು ರಜೆ/ ಸೌಲಭ್ಯ ಏಕೆ, ಯಾವ್ಯಾವ ಉಚಿತ ವಿತರಣಾ ಯೋಜನೆಗಳನ್ನು ಇನ್ನೂ ಇನ್ನೂ ಜಾರಿಗೊಳಿಸಬಹುದು ಎಂಬಿತ್ಯಾದಿಗಳಲ್ಲೇ ನಾವು ವ್ಯಸ್ತರಾಗಿದ್ದೇವೆ.
*ರಾಮಕೃಷ್ಣ ಭಟ್ ಚೊಕ್ಕಾಡಿ ಬೆಳಾಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Trump ಹೆಬ್ಬಯಕೆ: ಗ್ರೀನ್ ಲ್ಯಾಂಡ್ ಖರೀದಿಸಲು ಟ್ರಂಪ್ ಯಾಕೆ ಪ್ರಯತ್ನಿಸುತ್ತಿದ್ದಾರೆ?
Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.