ಆಡಳಿತ ದಕ್ಷತೆಯನ್ನು ಹೆಚ್ಚಿಸುವ ಸರಕಾರ ಬರಲಿ
Team Udayavani, May 12, 2018, 6:00 AM IST
ಜೈಲಿನಲ್ಲಿರುವ ಲಾಲೂಪ್ರಸಾದ್ ಯಾದವರು ಕೂಡ ತತ್ವೋಪದೇಶ ಮಾಡುತ್ತಾರೆ. ರಾಜಕಾರಣಿಗಳು ವೃತ್ತಿ ಆರಂಭಿಸಿದಂದಿನಿಂದಲೇ ಶುರು ಮಾಡಿದ ಆಶ್ವಾಸನೆ ನೀಡುವ ಪ್ರವೃತ್ತಿ ಅವರ ಅರಿವಿಗೆ ಬಾರದೆ ಮುಂದುವರಿಯುತ್ತಿದೆ. ಎಲ್ಲ ರಾಜಕಾರಣಿಗಳೂ ಇತರರಿಗೆ ಉಪದೇಶ ಮಾಡುತ್ತಾರಷ್ಟೆ, ತಾವು ಅವನ್ನು ತಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡು ಆದರ್ಶಪ್ರಾಯರಾಗುವುದಿಲ್ಲ.
ಪ್ರಮುಖ ಮೂರು ಪಕ್ಷಗಳು ಮತದಾರರ ಮೇಲೆ ಭರವಸೆಯ ಸುರಿಮಳೆಗೈದಿವೆ. ಅಧಿಕಾರಕ್ಕೆ ಬಂದ 24 ತಾಸಿನೊಳಗಾಗಿ ರೈತರ ಸಾಲಮನ್ನಾ, ಒಂದು ವರ್ಷದೊಳಗೆ ಎಲ್ಲ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ. ಇಂಥ ದೊಡ್ಡ ಭರವಸೆಗಳ ಜತೆಗೆ ಹುಡಿಪುಡಿ ಆಶ್ವಾಸನೆಗಳನ್ನು ಎಲ್ಲ ವರ್ಗಗಳನ್ನು ದೃಷ್ಟಿಕೋನದಲ್ಲಿರಿಸಿಕೊಂಡು ಘೋಷಿಸಲಾ ಗಿದೆ. ಈ ರೀತಿ ಆಶ್ವಾಸನೆ ನೀಡುವಾಗ ಸಮಾಜವನ್ನು ಸಾಕಷ್ಟು ವಿಭಾಗಿಸಿ ಆಯಾ ವಿಭಾಗದ ದೌರ್ಬಲ್ಯ ಅಥವಾ ಅಸಹಾಯಕತೆ ಯನ್ನು ಎತ್ತಿ ತೋರಿಸಿ, ಅವುಗಳನ್ನು ಪರಿಹರಿಸುವುದಾಗಿ ಆಶ್ವಾಸನೆ ನೀಡಿ ಚುನಾವಣಾ ಪ್ರಚಾರ ಮಾಡುತ್ತಿರುವುದು ಈಗಿನ ತಂತ್ರ. ದುರದೃಷ್ಟವೇನೆಂದರೆ ಯಾವುದೇ ರಾಜಕೀಯ ಪಕ್ಷ ಸಮಾಜವನ್ನು ಪ್ರಜಾಸತ್ತಾತ್ಮಕ ದೃಷ್ಟಿಯಲ್ಲಿ ಒಂದು ಘಟಕವಾಗಿ ಕಾಣುವುದೇ ಇಲ್ಲ.
ರಾಜಕೀಯ ಪಕ್ಷಗಳು ಈ ರೀತಿ ಸಮಾಜವನ್ನು ಛಿದ್ರಛಿದ್ರವಾಗಿ ನೋಡುವುದೇಕೆ? ಅದು ಸ್ವಯಂವೇದ್ಯ. ಕೇವಲ ಓಟ್ ಬ್ಯಾಂಕ್ ಸಿದ್ಧಾಂತ. ನಮ್ಮ ಸಂವಿಧಾನದಲ್ಲಿ ಸಮಾಜವನ್ನು ಈ ರೀತಿ ವಿಭಾಗಿಸಿಲ್ಲ. ಒಬ್ಬ ಸಾಮಾನ್ಯ ಪೌರನನ್ನು ದೃಷ್ಟಿಕೋನದಲ್ಲಿರಿಸಿಕೊಂಡು ರಚಿಸಲಾ ಗಿದೆ. ಆತನ ನ್ಯಾಯಯುತವಾದ ಬೇಡಿಕೆಯನ್ನು ಈಡೇರಿಸುವಾಗ ಇಡಿಯ ಸಮಾಜವೇ ಅಭಿವೃದ್ಧಿ ಹೊಂದುತ್ತದೆ ಎನ್ನುವುದು ಉದ್ದೇಶ. ಇಲ್ಲಿ ಆತ ಎನ್ನುವುದನ್ನು ಒಂದು ವರ್ಗವಾಗಿ ಪರಿಗಣಿಸುವುದು ಪ್ರಜಾಸತ್ತೆಗೆ ಅಪಾಯಕಾರಿ ಬೆಳವಣಿಗೆ. ಪ.ಜಾತಿ., ಪ.ಪಂಗಡ, ಅಲ್ಪ ಸಂಖ್ಯಾತರು, ಮಹಿಳೆಯರು, ಗರ್ಭಿಣಿಯರು, ಮಕ್ಕಳು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಅಂಗವಿಕಲರು, ಕ್ರೀಡಾಪಟುಗಳು, ರೈತರು, ಕಾರ್ಮಿಕರು, ಹೀಗೆ ವಿವಿಧ ರೀತಿಯಲ್ಲಿ ಸಮಾಜವನ್ನು ವಿಭಾಗಿಸಿದರೆ ಸಾಮಾನ್ಯ ನಾಗರಿಕರಿಗೆಂದು ಒಂದು ಪ್ರತ್ಯೇಕ ವಾಹಿನಿಯೊಂದನ್ನು ಸೃಷ್ಟಿಮಾಡಬೇಕಾದೀತಲ್ಲವೇ? ಈಗ ವಯೋಪೂರ್ವ ನಿವೃತ್ತಿ ಹೊಂದಿದ ಐವತ್ತು ವರ್ಷದ ಓರ್ವ ವ್ಯಕ್ತಿಯನ್ನು ಯಾವ ವರ್ಗಕ್ಕೆ ಸೇರಿಸುವುದು?
ಮೇಲೆ ನಮೂದಿಸಿದ ಯಾವ ಗುಂಪಿಗೂ ಸೇರದ ವ್ಯಕ್ತಿ ಈ ದೇಶದ ಪೌರನಾಗಿದ್ದು ಆತನಿಗೆ ಸಂವಿಧಾನ ಪ್ರಕಾರ ದತ್ತವಾದ ಹಕ್ಕುಗಳನ್ನು ಬಳಸಿಕೊಳ್ಳಲು ಯಾವ ಉಪಕ್ರಮ ಸರಕಾರ ರೂಪಿಸು ತ್ತದೆ? ಆತನಿಗೂ ಸಂವಿಧಾನ ದತ್ತವಾದ ಆರೋಗ್ಯ ಮತ್ತು ರಕ್ಷಣೆ ಹಾಗೂ ಇತರ ಮೂಲಭೂತ ಹಕ್ಕುಗಳಿವೆಯಲ್ಲವೇ. ಅವನ ಪಾಲಿಗೆ ಇರುವುದು ಸಕಲರಿಗೂ ಇರುವಂಥ ಸಾಮಾನ್ಯ ಆಡಳಿತ. ಈ ಸಾಮಾನ್ಯ ಆಡಳಿತದಲ್ಲಿ ದಕ್ಷತೆ ಇದ್ದರೆ ಆತನಿಗೆ ಸಾಂವಿಧಾನಿಕವಾಗಿ ದತ್ತವಾದ ಹಕ್ಕು ಅಥವಾ ಅವಕಾಶಗಳನ್ನು ಅನುಭವಿಸಲು ಸಾಧ್ಯ. ಹಾಗೆ ಆಡಳಿತದಲ್ಲಿ ದಕ್ಷತೆ ಇಲ್ಲದಿದ್ದರೆ ಸಮಾಜವನ್ನು ವಿಭಾಗಿಸಿ ಕೆಲವು ವರ್ಗಕ್ಕೆ ವಿಶೇಷ ಸೌಲಭ್ಯ ನೀಡುವ ಯೋಜನೆಯಲ್ಲೂ ಗೋಲ್‌ಮಾಲ್ ಆಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಅರ್ಥಾತ್ ಆಡಳಿತದಲ್ಲಿ ದಕ್ಷತೆ ಇದ್ದರೆ ಮಾತ್ರ ಸಮುದಾಯದಲ್ಲಿರುವ ಎಲ್ಲ ಜನರಿಗೂ ಸಂವಿಧಾನ ದತ್ತವಾದ ಎಲ್ಲ ಸ್ವಾತಂತ್ರ್ಯ ಹಾಗೂ ಅವಕಾಶ ಗಳನ್ನು ಅನುಭವಿಸಲು ಸಾಧ್ಯವಾಗುತ್ತದೆ. ಖೇದದ ವಿಚಾರವೆಂದರೆ ಚುನಾವಣೆಯ ಕಣದಲ್ಲಿರುವ ಯಾವ ರಾಜಕೀಯ ಪಕ್ಷವೂ ಆಡಳಿ ತದ ದಕ್ಷತೆ ಹೆಚ್ಚಿಸಿ, ಭ್ರಷ್ಟಾಚಾರವನ್ನು ನಿಗ್ರಹಿಸುವ ಆಶ್ವಾಸನೆಯನ್ನು ಮಾತ್ರ ನೀಡುವುದೇ ಇಲ್ಲ.
ಇದು ಭಾರತೀಯ ಪ್ರಜಾಸತ್ತೆಯ ದೌರ್ಬಲ್ಯ ಹಾಗೂ ದೌರ್ಭಾಗ್ಯ. ದೇಶದ್ರೋಹದ ಗುರುತರ ಆರ್ಥಿಕ ಅಪರಾಧ ಎಸಗಿ ಮಕ್ಕಳ ಮದುವೆಗೂ ಬರಲಾಗದ ಸ್ಥಿತಿಯಲ್ಲಿ ಜೈಲಿನಲ್ಲಿರುವ ಲಾಲೂ ಪ್ರಸಾದ್ ಯಾದವರು ಕೂಡ ತತ್ವೋಪದೇಶ ಮಾಡುತ್ತಾರೆ. ಅವರು ರಾಜಕೀಯ ವೃತ್ತಿ ಆರಂಭಿಸಿದಂದಿನಿಂದಲೇ ಆರಂಭಿಸಿದ ಆಶ್ವಾಸನೆ ನೀಡುವ ಪ್ರವೃತ್ತಿ ಅವರ ಅರಿವಿಗೆ ಬಾರದೆ ಮುಂದುವರಿಯುತ್ತಿದೆ. ಎಲ್ಲ ರಾಜಕಾರಣಿಗಳೂ ಇತರರಿಗೆ ಉಪದೇಶ ಮಾಡುವುದಲ್ಲದೆ ತಾವು ತಮ್ಮ ನಿಜ ಜೀವನದಲ್ಲಿ ಅಳವಡಿಸಿ ಆದರ್ಶಪ್ರಾಯರಾಗಿದ್ದವರು ಇಲ್ಲ. ಹಿಂದೆ ಬೆರಳಣಿಕೆಯ ಮಂದಿ ಇದ್ದಿರಬಹುದು. ಈ ವರ್ತಮಾನ ಕಾಲದ ರಾಜಕಾರಣಿಗಳು ಸಮಾಜಕ್ಕೆ ಮಾದರಿಯಾಗಿ ರುವ ಉದಾಹರಣೆಗಳಿಲ್ಲವೆಂತಲೇ ಹೇಳಬಹುದು. ಹೀಗಿರುವಾಗ ಕರ್ನಾಟಕದ ರಾಜಕಾರಣಿಗಳು ಇದಕ್ಕೆ ಹೊರತಾಗುವರೇ? ದಿನ ಬೆಳಗಾದರೆ ಪೊಳ್ಳು ಆಶ್ವಾಸನೆ ನೀಡುವುದು ಹಾಗೂ ಒಬ್ಬರನೊಬ್ಬರು ದೂರುವುದು ಮಾತ್ರ. ಆದರೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ನಿಗ್ರಹಿಸುತ್ತೇವೆ ಹಾಗೂ ಉತ್ತಮ ಆಡಳಿತ ನೀಡುತ್ತೇವೆ ಎಂಬ ಭರವಸೆಯ ಮಾತಿಲ್ಲ.
ಸರ್ಕಾರಿ ಕಚೇರಿಗಳಲ್ಲಿನ ಅಕ್ರಮ ತಡೆಗಟ್ಟಲು ಕ್ಯಾಮರಾ ಜಾಲ ಒಂದರ ಸ್ಥಾಪನೆ ಹಾಗೂ ಅದರ ಉಸ್ತುವಾರಿಯನ್ನು ನೋಡಲು ಮೂರನೇ ಕಣ್ಣು ಎಂಬ ತಂಡದ ರಚನೆ ಮಾಡುವ ಆಶ್ವಾಸನೆಯನ್ನು ಒಂದು ಪಕ್ಷ ನೀಡಿದೆ. ಈ ತಂಡದಲ್ಲಿ ಆ ಪಕ್ಷದ ಜನರೇ ಇರುತ್ತಾರೆ ಎಂದು ಬೇರೆ ಹೇಳಬೇಕಾಗಿಲ್ಲ. ಇದು ಇನ್ನೊಂದು ಗಿಮ್ಮಿಕ್ಸ್. ಆಡಳಿತದ ದಕ್ಷತೆ ಹೆಚ್ಚಿಸಲು ಹಾಲಿ ಕಾನೂನುಗಳೇ ಸಾಕು. ಅವುಗಳ ನಿಷ್ಪಕ್ಷಪಾತ ಹಾಗೂ ಪ್ರಾಮಾಣಿಕ ಅನುಷ್ಠಾನ ಮುಖ್ಯ. ನಮ್ಮ ದೇಶದ ಆಡಳಿತದ ದುರಂತವೇ ಇದು.
ಸಂವಿಧಾನದಲ್ಲಿ ಆಡಳಿತಕ್ಕೆ ಮೂರು ಅಂಗಗಳನ್ನು ರಚಿಸಲಾಗಿದ್ದು ಅವುಗಳು ಪ್ರತ್ಯೇಕವಾಗಿ ಹಾಗೂ ಸ್ವತಂತ್ರವಾಗಿ ಕಾರ್ಯನಿರ್ವಹಿಸು ವಂತೆ ಅಧಿಕಾರ ದತ್ತವಾಗಿದೆ. ಆದರೆ ಕಾರ್ಯಾಂಗ ಸದಾ ಶಾಸಕಾಂಗದ ಅನುವರ್ತಿಯಾಗಿಯೇ ಇರಬೇಕಾದ ಪರಿಸ್ಥಿತಿಯುಂಟು. ಮುಖ್ಯಮಂತ್ರಿ ಶಾಸಕಾಂಗದ ಮುಖ್ಯಸ್ಥರು ಮಾತ್ರವಲ್ಲ ಕಾರ್ಯಾಂಗದ ನಿರ್ಣಯವನ್ನು ಪ್ರಮಾಣೀಕರಿಸುವವರು ಅವರೆ. ಅರ್ಥಾತ್ ಕಾರ್ಯಾಂಗದಲ್ಲಿ ಎಷ್ಟೇ ಓದಿದ ಹಾಗೂ ತಾಂತ್ರಿಕ ಪರಿಣತಿಯುಳ್ಳ ಅಧಿಕಾರಿಗಳೇ ಇರಲಿ ಅಂತಿಮ ನಿರ್ಣಯ ಸಚಿವರು ಹೇಳಿದಂತೆ ಎನ್ನುವುದು ವಾಸ್ತವ. ನಮ್ಮ ಸಾಂವಿಧಾನಿಕ ಪರಿಕಲ್ಪನೆಯಲ್ಲಿ ಶಾಸಕಾಂಗ ಸರ್ವ ಸಾರ್ವಜನಿಕರ ಆಯ್ಕೆ (popular choice), ಅದರ ನಡೆ ನಿರ್ಣಾಯಕ ಹಾಗೂ ಪ್ರಸ್ತುತ. ಅಂಥ ಶಾಸಕಾಂಗದ ತುತ್ತತುದಿಯಲ್ಲಿರುವ ಮುಖ್ಯಮಂತ್ರಿ ಅಭ್ಯರ್ಥಿ ತಾನು ಅಪ್ಪಟ ಪ್ರಾಮಾಣಿಕನಾಗಿರುತ್ತೇನೆ ಎಂಬ ಆಶ್ವಾಸನೆ ನೀಡಿದ್ದರೆ ಸಾಕಿತ್ತು. ಆದರೆ ಅದೊಂದನ್ನು ಬಿಟ್ಟು ಉಳಿದೆಲ್ಲವನ್ನು ಹೇಳಿದ್ದಾರೆ.
ಪ್ರಕೃತ ವಿಶ್ವದ ಗಮನ ಸೆಳೆದ ಒಂದು ರಾಜ್ಯದ ಚುನಾವಣೆ ಎಂದರೆ ಕರ್ನಾಟಕದ ಚುನಾವಣೆ. ಪ್ರಧಾನಮಂತ್ರಿಗಳು ಅನೇಕ ಬಾರಿ ಒಂದು ಸಾರ್ವಜನಿಕರನ್ನು ಉದ್ದೇಶಿಸಿ ಮಾತಾಡಿದ್ದಾರೆ. ಕರ್ನಾಟಕದ ಪ್ರಸಕ್ತ ಸರಕಾರದ ಆಡಳಿತವನ್ನು ದೂಷಿಸಿದ್ದಾರೆ. ಅದು ಹತ್ತು ಪರ್ಸೆಂಟ್ ಆಡಳಿತ ಎಂದು ಕಟಕಿಯಾಡಿದ್ದಾರೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದರೆ ಒಂದು ಪರ್ಸೆಂಟ್ ಕೂಡ ಇಲ್ಲದೆ ಆಡಳಿತ ನಡೆಸುತ್ತದೆ ಎಂದು ಪ್ರತ್ಯೇಕ ಆಶ್ವಾಸನೆ ನೀಡಲಿಲ್ಲ. ಇನ್ನು ಕರ್ನಾಟಕದ ಆಡಳಿತಾರೂಢ ಪಕ್ಷ ಸರಕಾರದ ಮುಖಂಡರು ಸುರಿವ ಆರೋಪಗಳನ್ನು ಕೊಡಹಿ, ಮುಂದಿನ ಐದು ವರ್ಷ ನಮ್ಮದೇ ಎಂದು ಬೀಗುತ್ತಿದ್ದಾರೆ. ದಕ್ಷತೆ ಎನ್ನುವ ಪದವೇ ಅವರಿಗೆ ಅಲರ್ಜಿ. ಅವರು ಆಡಳಿತದ ದಕ್ಷತೆ ಹೆಚ್ಚಿಸುವ ಭರವಸೆ ಕೊಡುವುದುಂಟೆ? ಒಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಹೇಳುವುದಿಷ್ಟೆ. ನಿಮಗೆ ಎಲ್ಲ ಕೊಡುತ್ತೇವೆ-ಸ್ವಚ್ಛ ಆಡಳಿತ ಬಿಟ್ಟು.
ಇಂದು ಮತದಾನ ನಡೆಯುತ್ತದೆ. ಕೆಲವೇ ದಿನಗಳಲ್ಲಿ ಸರಕಾರ ರಚಿಸಲ್ಪಡುತ್ತದೆ. ಯಾವುದೇ ಪಕ್ಷದ ಸರಕಾರ ಬರಲಿ ಅಥವಾ ಸಮ್ಮಿಶ್ರ ಸರಕಾರವೇ ಪ್ರಾಪ್ತವಾಗಲಿ ಸಮಸ್ತ ಸಾರ್ವಜನಿಕರು ಸಂವಿಧಾನ ದತ್ತ ಸ್ವಾತಂತ್ರ್ಯವನ್ನು ನಿರಾತಂಕವಾಗಿ ಅನುಭವಿಸಲು ಸಾಧ್ಯವಾಗುವಂತೆ ಸಾಮಾನ್ಯ ಆಡಳಿತದ ದಕ್ಷತೆಯನ್ನು ಹೆಚ್ಚಿಸಲು ಆಗ್ರಹಿಸುವ.
ಬೇಳೂರು ರಾಘವ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.