ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್‌ಗಳು
Team Udayavani, May 13, 2018, 6:40 AM IST
ಹಿಂದಿನ ವಾರದಿಂದ– ಕ್ಯಾನ್ಸರ್ ಹೊಂದಿರುವ ವ್ಯಕ್ತಿಯ ಚಿಕಿತ್ಸೆಗೆ ಎರಡು ವಿಭಿನ್ನ ವಿಧಾನಗಳನ್ನು ಅನುಸರಿಸಲಾಗುತ್ತದೆ: ಗುಣಪಡಿಸುವ ಉದ್ದೇಶದ್ದು (ಕ್ಯುರೇಟಿವ್- ಗುಣಕಾರಿ ಅಥವಾ ರ್ಯಾಡಿಕಲ್ ಎಂದು ಕರೆಯಲಾಗುತ್ತದೆ) ಮತ್ತು ನಿಯಂತ್ರಿಸುವ ಉದ್ದೇಶದ್ದು (ಪೆಲೇಟಿವ್- ಶಮನಕಾರಿ ಎನ್ನಲಾಗುತ್ತದೆ).
ರೋಗಿಯು ಗುಣ ಹೊಂದುತ್ತಾನೆ, ಕಾಯಿಲೆಯು ಮುಂದೆಂದೂ ಅವನಲ್ಲಿ ಮರುಕಳಿಸದು ಎಂಬ ಎಂಬ ಭರವಸೆ ಮತ್ತು ನಿರೀಕ್ಷೆಯನ್ನು ಇರಿಸಿಕೊಂಡು ಆತನಿಗೆ ಚಿಕಿತ್ಸೆ ನಡೆಸುವುದು ಕ್ಯುರೇಟಿವ್ ಅಥವಾ ಗುಣಕಾರಿ ಚಿಕಿತ್ಸೆಯಾಗಿದೆ. ಇಂತಹ ಚಿಕಿತ್ಸೆಯು ಸಾಮಾನ್ಯವಾಗಿ ತೀವ್ರವಾದುದಾಗಿದ್ದು, ಹೆಚ್ಚು ಅಡ್ಡ ಪರಿಣಾಮಗಳನ್ನು ಹೊಂದಿರಬಹುದಾಗಿದೆ. ಇದಕ್ಕೆ ವಿರುದ್ಧವಾಗಿ, ಪೆಲೇಟಿವ್ ಅಥವಾ ಶಮನಕಾರಿ ಚಿಕಿತ್ಸೆಯ ಉದ್ದೇಶವು ಕ್ಯಾನ್ಸರ್ ಕಾಯಿಲೆಯ ಹೊರೆಯನ್ನು ಆದಷ್ಟು ತಗ್ಗಿಸುವುದಾಗಿದೆ; ಜತೆಗೆ ಅಡ್ಡ ಪರಿಣಾಮಗಳನ್ನು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಇರಿಸಿಕೊಂಡು ಜೀವಿತಾವಧಿಯನ್ನು ಆದಷ್ಟು ವಿಸ್ತರಿಸುವುದಾಗಿದೆ.
ಮುಂದುವರಿದ ಹಂತದ ಕ್ಯಾನ್ಸರ್ ಹೊಂದಿರುವ, ಗುಣ ಹೊಂದುವ ಸಾಧ್ಯತೆಗಳು ಅತೀ ಕಡಿಮೆ ಇರುವ ಅಥವಾ ಸಾಮಾನ್ಯ ಆರೋಗ್ಯ ಸ್ಥಿತಿಯು ತೀರಾ ಕಳಪೆಯಾಗಿದ್ದು, ಗುಣಕಾರಿ ಚಿಕಿತ್ಸೆಯನ್ನು ಕೈಗೊಳ್ಳಲು ತಕ್ಕುದಾಗಿಲ್ಲದ ರೋಗಿಗಳನ್ನು ಶಮನಕಾರಿ ಉದ್ದೇಶದ ಚಿಕಿತ್ಸೆಯಿಂದ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್ ಹೊಂದಿರುವ ರೋಗಿಗಳನ್ನು ಶಸ್ತ್ರಚಿಕಿತ್ಸೆ ಮತ್ತು / ಅಥವಾ ರೇಡಿಯೋ ಥೆರಪಿ ಒಳಗೊಂಡಿರುವ ಗುಣಕಾರಿ ವಿಧಾನದಿಂದಲೇ ಬಹುತೇಕ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ.
ಚಿಕಿತ್ಸೆಯ ಬಳಿಕ ಕೆಲವು ರೋಗಿಗಳು ತಮ್ಮ ರೋಗದಿಂದ ಗುಣ ಹೊಂದುತ್ತಾರೆ ಮತ್ತು ಅನೇಕ ವರ್ಷಗಳ ಕಾಲ ಬದುಕುವ ಸಾಧ್ಯತೆಯಿರುತ್ತದೆ. ಕೆಲವು ರೋಗಿಗಳು ರೋಗ ಮರುಕಳಿಸುವುದರಿಂದ ಸಾಮಾನ್ಯವಾಗಿ ಆರು ತಿಂಗಳುಗಳಿಂದ ಮೂರು ವರ್ಷಗಳ ಅವಧಿಯಲ್ಲಿ ಮತ್ತೆ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ರೋಗ ಮರುಕಳಿಸುವ ಸಾಧ್ಯತೆಯು ಸಮಯ ಸರಿದಂತೆ ಕಡಿಮೆಯಾಗುತ್ತಾ ಹೋಗುತ್ತದೆ ಹಾಗೂ ನಾಲ್ಕರಿಂದ ಐದು ವರ್ಷಗಳ ಅವಧಿಯಲ್ಲಿ ರೋಗ ಮರುಕಳಿಸದ ರೋಗಿಗಳನ್ನು ಗುಣ ಹೊಂದಿದ್ದಾರೆ ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ.
ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್ ಮರುಕಳಿಸಿದ ರೋಗಿಗಳು ಮತ್ತೆ ಗುಣ ಹೊಂದುವ ಸಾಧ್ಯತೆಗಳು ಕಡಿಮೆ ಇದ್ದು, ಸಾಮಾನ್ಯವಾಗಿ ಕೆಲವು ತಿಂಗಳುಗಳಿಂದ ಒಂದು ವರ್ಷದ ತನಕ ಬದುಕುವ ಸಾಧ್ಯತೆ ಹೊಂದಿರುತ್ತಾರೆ. ಸಾರಾಂಶವಾಗಿ ಹೇಳಬೇಕೆಂದರೆ, ಚಿಕಿತ್ಸೆಯ ಬಳಿಕ ಒಬ್ಬ ರೋಗಿಯು ಎಷ್ಟು ಕಾಲ ಬದುಕುತ್ತಾನೆ ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ. ಗುಣಕಾರಿ ಚಿಕಿತ್ಸೆಗೆ ಒಳಪಟ್ಟು ರೋಗ ಮರುಕಳಿಸದೆ ಇದ್ದಲ್ಲಿ, ಅಂಥ ರೋಗಿಗಳು ಹಲವು ವರ್ಷಗಳ ಕಾಲ ಬದುಕುವ ಸಾಧ್ಯತೆ ಇದೆ.
8. ನನ್ನ ತಂದೆಯು ಚಿಕಿತ್ಸೆಗೆ ಮುನ್ನ ಸಾಕಷ್ಟು ಉತ್ತಮವಾಗಿಯೇ ಇದ್ದರು. ಚಿಕಿತ್ಸೆಯಿಂದ ಅವರ ಸ್ಥಿತಿ ಕೆಟ್ಟಿತು. ನಾನು ಅವರಿಗೆ ಚಿಕಿತ್ಸೆ ಕೊಡಿಸಲೇ ಬಾರದಾಗಿತ್ತು.
ಈಗಾಗಲೇ ಮೇಲೆ ತಿಳಿಸಿದಂತೆ, ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್ ಹೊಂದಿರುವ ಬಹುತೇಕ ರೋಗಿಗಳನ್ನು ಗುಣಕಾರಿ ವಿಧಾನದಿಂದ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ, ಮತ್ತು ಅಂತಹ ಚಿಕಿತ್ಸೆಯು ಗಮನಾರ್ಹ ಪ್ರಮಾಣದಲ್ಲಿ ವಿಷಾಂಶಗಳಿಗೆ ಸಂಬಂಧಿಸಿದ್ದು, ಇವುಗಳಲ್ಲಿ ಕೆಲವು ಅನೇಕ ವರ್ಷಗಳ ಕಾಲ ಉಳಿಯುತ್ತವೆ. ಶಸ್ತ್ರಚಿಕಿತ್ಸೆಯ ಇನ್ನು ಕೆಲವು ಅಡ್ಡ ಪರಿಣಾಮಗಳಲ್ಲಿ ರೂಪ ವೈಕಲ್ಯ, ಧ್ವನಿ ನಷ್ಟ, ಮಾತಿನಲ್ಲಿ ಅಸ್ಪಷ್ಟತೆ, ಮುಖ ಮತ್ತು ಕೊರಳಿನ ಪೆಡಸುತನ ಇತ್ಯಾದಿ ಸೇರಿವೆ. ರೇಡಿಯೋಥೆರಪಿಯ ಪರಿಣಾಮವಾಗಿ ಬಾಯಿ ಒಣಗುವಿಕೆ, ಆಹಾರ ನುಂಗಲು ಕಷ್ಟವಾಗುವುದು, ಪೆಡಸುತನ, ಹಲ್ಲುಗಳ ತೊಂದರೆ ಇತ್ಯಾದಿ ಉಂಟಾಗಬಹುದು. ಬಹುತೇಕ ರೋಗಿಗಳು ಈ ಅಡ್ಡ ಪರಿಣಾಮಗಳನ್ನು ಅನುಭವಿಸುತ್ತಾರೆ, ಆದರೆ ದೈನಿಕ ಕೆಲಸಕಾರ್ಯಗಳನ್ನು ನಡೆಸಲು ಶಕ್ತರಾಗಿದ್ದು, ಕಾಲಾನುಕ್ರಮದಲ್ಲಿ ದೈನಿಕ ಕಾರ್ಯಚಟುವಟಿಕೆಗಳಿಗೆ ಮರಳುತ್ತಾರೆ. ಇಂತಹ ಅಡ್ಡ ಪರಿಣಾಮಗಳ ಬಗ್ಗೆ ಮುನ್ಸೂಚನೆ ಇರುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸುವುದಾದರೆ, ಚಿಕಿತ್ಸೆಗೆ ಒಳಪಡಿಸದೇ ಇದ್ದರೆ ಕ್ಯಾನ್ಸರ್ ರೋಗವು ಕೆಲವೇ ತಿಂಗಳುಗಳಲ್ಲಿ ವೃದ್ಧಿ ಹೊಂದಿ ರೋಗಿಯ ಸಾಮಾನ್ಯ ಆರೋಗ್ಯವನ್ನು ಕೆಡಿಸುವುದು ಮತ್ತು ತೀವ್ರ ತರಹದ ಸಮಸ್ಯೆಗಳನ್ನು ಉಂಟು ಮಾಡುವುದು ಸರ್ವೇಸಾಮಾನ್ಯವಾಗಿರುತ್ತದೆ, ಚಿಕಿತ್ಸೆಗೆ ಒಳಪಡಿಸದೇ ಇದ್ದರೆ ಸಾವು ಕೂಡ ಸಂಭವಿಸುತ್ತದೆ.
ಇಷ್ಟಲ್ಲದೆ, ವಿಷಾಂಶಗಳ ಭಯದಿಂದಾಗಿ ಚಿಕಿತ್ಸೆಯನ್ನು ವಿಳಂಬ ಮಾಡುವುದರಿಂದ ರೋಗಿ ಕ್ಯಾನ್ಸರ್ ರೋಗಿ ಇನ್ನಷ್ಟು ಮುಂದುವರಿದ ಹಂತದಲ್ಲಿ ಚಿಕಿತ್ಸೆಗೆ ಒಳಪಡಬೇಕಾದ ಸ್ಥಿತಿ ಉಂಟಾಗಿ ಆಗ ಇನ್ನಷ್ಟು ತೀವ್ರವಾದ ಚಿಕಿತ್ಸೆಗೆ ಒಳಪಡಬೇಕಾಗುತ್ತದೆ; ಆಗ ಗುಣ ಹೊಂದುವ ಸಾಧ್ಯತೆಗಳು ಕಡಿಮೆ ಇರುತ್ತವೆ; ಅಡ್ಡ ಪರಿಣಾಮಗಳಿಗೆ ತುತ್ತಾಗುವ ಸಂಭವಗಳು ಹೆಚ್ಚುತ್ತವೆ. ಬೇರೆ ಮಾತುಗಳಲ್ಲಿ ಹೇಳಬೇಕೆಂದರೆ, ಕ್ಯಾನ್ಸರ್ ಕಾಯಿಲೆಯು ಒಂದು “ಮಾಡು-ಮಡಿ’ ಎಂಬಂತಹ ಸ್ಥಿತಿ, ಅಪಾಯಕಾರಿ ರೋಗವಾಗಿದ್ದು; ಇದಕ್ಕೆ ಹೆಚ್ಚು ಸಂಕೀರ್ಣವಾದ, ಕಷ್ಟಕರವಾದ ಚಿಕಿತ್ಸೆಗಳು ಮಾತ್ರವೇ ಗುಣ ಹೊಂದುವುದನ್ನು ಸಾಧಿಸುವುದಕ್ಕೆ ಇರುವ ಮಾರ್ಗಗಳಾಗಿವೆ.
9. ನನ್ನ ತಂದೆಗೆ ಮಾತ್ರ ಕ್ಯಾನ್ಸರ್ ರೋಗ ಯಾಕೆ ಮರುಕಳಿಸಿದೆ; ಆದರೆ ನನ್ನ ಸ್ನೇಹಿತನ ತಾಯಿ ಕ್ಷೇಮವಾಗಿದ್ದಾರಲ್ಲ?
ಆಕೆ ಚಿಕಿತ್ಸೆ ಪಡೆದದ್ದು ಸುಮಾರು ಐದಕ್ಕೂ ಹೆಚ್ಚು ವರ್ಷಗಳ ಹಿಂದೆ. ಕ್ಯಾನ್ಸರ್ ಎನ್ನುವುದು; ರೋಗಿಯಲ್ಲಿ ಉಂಟಾಗಿ ಆತ ಅಥವಾ ಆಕೆಯ ದೇಹದೊಳಗೆ ಹರಡಬಲ್ಲ ಸಾಮರ್ಥ್ಯ ಹೊಂದಿರುವ ಕಾಯಿಲೆಗಳ ಒಂದು ಸಮೂಹಕ್ಕೆ ಇರುವ ಹೆಸರು. ಎಲ್ಲ ಕ್ಯಾನ್ಸರ್‌ಗಳೂ ಒಂದೇ ರೀತಿಯವಲ್ಲ; ಉದಾಹರಣೆಗೆ ಹೇಳುವುದಾದರೆ, ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್‌ಗಳು ರಕ್ತದ ಕ್ಯಾನ್ಸರ್‌ಗಿಂತ ಸಂಪೂರ್ಣ ಭಿನ್ನ ಹಾಗೂ ಅವುಗಳ ಚಿಕಿತ್ಸೆಯೂ ಸಂಪೂರ್ಣವಾಗಿ ಬೇರೆ ಬೇರೆಯೇ ಆಗಿವೆ. ಪ್ರತಿಯೊಂದು ಕ್ಯಾನ್ಸರ್‌ನಲ್ಲೂ ರೋಗಿಯಿಂದ ರೋಗಿಗೆ ಅದರ ಸ್ವಭಾವದಲ್ಲಿ ವ್ಯತ್ಯಾಸ ಇರುತ್ತದೆ. ಒಬ್ಬ ರೋಗಿಯಲ್ಲಿ ಅತ್ಯಂತ ಕ್ಷಿಪ್ರವಾಗಿ ಬೆಳವಣಿಗೆ ಹೊಂದುವ ನಾಲಗೆ ಕ್ಯಾನ್ಸರ್ ಇರಬಹುದು, ಅದೇ ಇನ್ನೊಬ್ಬ ರೋಗಿಯಲ್ಲಿ ಕ್ಯಾನ್ಸರ್ ಪ್ರಗತಿ ಹೊಂದಲು ಕೆಲವಾರು ತಿಂಗಳುಗಳನ್ನೇ ತೆಗೆದುಕೊಳ್ಳಬಹುದು.
ರೋಗಿಯೊಬ್ಬನ ಗಂಟಲಿನ ಕ್ಯಾನ್ಸರ್ ರೇಡಿಯೋಥೆರಪಿಗೆ ಬಹಳ ಚೆನ್ನಾಗಿ ಪ್ರತಿಸ್ಪಂದಿಸಬಹುದು; ಆದರೆ ಇನ್ನೊಬ್ಬ ರೋಗಿಯಲ್ಲಿ ಅದು ರೇಡಿಯೋ ಥೆರಪಿಗೆ ಪ್ರತಿಕ್ರಿಯಿಸದೆ ಆತನಿಗೆ ಶಸ್ತ್ರಚಿಕಿತ್ಸೆ ಅಗತ್ಯ ಬೀಳಬಹುದು. ಇದೇ ರೀತಿಯಲ್ಲಿ ಕೆಲವು ರೋಗಿಗಳು ಚಿಕಿತ್ಸೆಯ ಬಳಿಕ ಗುಣ ಹೊಂದಬಹುದು, ಕೆಲವರಲ್ಲಿ ರೋಗ ಮರುಕಳಿಸಿ ಮತ್ತೆ ಚಿಕಿತ್ಸೆ ಅಗತ್ಯವಾಗಬಹುದು; ಕೆಲವು ರೋಗಿಗಳು ತೀವ್ರವಾದ ಅಡ್ಡ ಪರಿಣಾಮಗಳಿಗೆ ತುತ್ತಾಗಬಹುದು, ಇನ್ನು ಕೆಲವರು ಕನಿಷ್ಟ ಸಮಸ್ಯೆಗಳನ್ನು ಅನುಭವಿಸಬಹುದು. ವಿಜ್ಞಾನ ಮತ್ತು ವೈದ್ಯಕೀಯ ವಿಜ್ಞಾನ ಪ್ರಗತಿ ಹೊಂದುತ್ತಿರುವಂತೆ ಕ್ಯಾನ್ಸರ್ ಕಾಯಿ ಲೆಯ ಜೈವಿಕ ಗುಣಸ್ವಭಾವಗಳನ್ನು ಹೆಚ್ಚು ಚೆನ್ನಾಗಿ ಅರ್ಥ ಮಾಡಿಕೊಳ್ಳಲಾಗುತ್ತಿದ್ದು, ಕಾಯಿಲೆಯ ಚಿಕಿತ್ಸೆಯ ಯೋಜನೆ ಈಗ ಹಿಂದಿಗಿಂತ ಹೆಚ್ಚು ಉತ್ತಮ ವಾಗುತ್ತಿದೆ. ಆದರೂ ನಿರ್ದಿಷ್ಟ ರೋಗಿಯೊಬ್ಬನ ಚಿಕಿತ್ಸೆಯ ಫಲಿತಾಂಶವನ್ನು ನಿಖರವಾಗಿ ಅಂದಾಜು ಮಾಡುವ ಮಟ್ಟವನ್ನು ವೈದ್ಯಕೀಯ ವಿಜ್ಞಾನವು ಇನ್ನಷ್ಟೇ ತಲುಪಬೇಕಾಗಿದೆ.
10. ಈ ಕ್ಯಾನ್ಸರ್ ತಲೆದೋರದಂತೆ ನಾನೇನು ಮಾಡಬಹುದು?
ಈಗಾಗಲೇ ಮೇಲೆ ಹೇಳಿರುವಂತೆ, ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್ ಉಂಟಾಗುವುದಕ್ಕೆ ಅತ್ಯಂತ ದೊಡ್ಡ ಅಪಾಯಾಂಶ ಎಂದರೆ ತಂಬಾಕು ಬಳಕೆ ಮತ್ತು ಮದ್ಯಪಾನ. ಧೂಮಪಾನವು ಧೂಮಪಾನಿಗೆ ಮಾತ್ರವಲ್ಲದೆ ಸುತ್ತಲಿನವರಿಗೂ ಅಪಾಯವನ್ನು ಒಡ್ಡುತ್ತದೆ. ಈ ಚಟಗಳಿಗೆ ಬಲಿಯಾಗದೆ ಇರುವುದು ಅಥವಾ ಇದ್ದರೂ ಆದಷ್ಟು ಬೇಗನೆ ಅವುಗಳನ್ನು ತ್ಯಜಿಸುವುದು ವ್ಯಕ್ತಿಯೊಬ್ಬ ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್‌ಗೆ ತುತ್ತಾಗದೆ ಇರುವುದಕ್ಕಾಗಿ ತೆಗೆದುಕೊಳ್ಳಬಹುದಾದ ಅತ್ಯುತ್ತಮ ಸ್ವಯಂ ಮುನ್ನೆಚ್ಚರಿಕೆ. ಇದರ ಹೊರತಾಗಿ ಇತರ ಕ್ರಮಗಳಿಂದ ಒಳಿತಾಗುವ ಬಗ್ಗೆ ಹೆಚ್ಚು ಸಾಕ್ಷ್ಯಾಧಾರಗಳಿಲ್ಲ. ನಿರ್ದಿಷ್ಟ ಔಷಧಗಳು ಮತ್ತು ಪೌಷ್ಟಿಕಾಂಶ ಪೂರಕ ಆಹಾರಗಳ ಬಳಕೆಯ ಬಗ್ಗೆ ನಡೆಯುತ್ತಿರುವ ಸಂಶೋಧನೆಗಳು ಸೀಮಿತ ಅಥವಾ ತಾತ್ಕಾಲಿಕ ಪ್ರಯೋಜನವನ್ನು ಹೇಳುತ್ತಿವೆ. ತರಕಾರಿ ಮತ್ತು ಹಣ್ಣುಹಂಪಲುಗಳಿಂದ ಸಮೃದ್ಧವಾಗಿರುವ ಆರೋಗ್ಯಯುತ ಆಹಾರ ಕ್ರಮವನ್ನು ಅನುಸರಿಸುವುದು ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್ ಅಪಾಯವನ್ನು ಸ್ವಲ್ಪಮಟ್ಟಿಗೆ ತಗ್ಗಿಸುತ್ತದೆ. ಕೆಲವು ತಲೆಯ ಮತ್ತು ಕುತ್ತಿಗೆಯ ಕ್ಯಾನ್ಸರ್‌ಗಳು ಲೈಂಗಿಕ ಸಂಪರ್ಕ ಮತ್ತು ಮೌಖೀಕ ಸಂಪರ್ಕದ ಮೂಲಕ ಹರಡುವ ಹ್ಯೂಮನ್ ಪ್ಯಾಪಿಲೊಮಾ ವೈರಸ್ (ಎಚ್‌ಪಿವಿ)ಯ ಜತೆಗೆ ಸಂಬಂಧ ಹೊಂದಿವೆ. ಎಚ್‌ಪಿವಿ ಸೋಂಕಿಗೆ ಒಳಗಾಗುವುದನ್ನು ತಪ್ಪಿಸುವ ಎಚ್‌ಪಿವಿ ವಿರುದ್ಧ ಲಸಿಕೆ ಲಭ್ಯವಿದೆ; ಆದರೆ ವ್ಯಕ್ತಿಯೊಬ್ಬ ಎಚ್‌ಪಿವಿ ಸಂಬಂಧಿ ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆಗಳನ್ನು ಈ ಲಸಿಕೆ ಕಡಿಮೆ ಮಾಡಿರುವುದಕ್ಕೆ ಇದು ತನಕ ಯಾವುದೇ ಸಾಕ್ಷ್ಯಾಧಾರಗಳಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.