ಹೂವು ಕೊಡುವುದೆಂದರೆ…
Team Udayavani, May 13, 2018, 6:00 AM IST
ಹೂವು ಕೊಡುವುದೆಂದರೆ ತಮಾಷೆಯಲ್ಲ. ನೀವು ನಿಮ್ಮ ಹೆಂಡತಿಗೋ, ಪ್ರೀತಿ ಪಾತ್ರರಿಗೋ ಖಾಸಗಿಯಾಗಿ ಹೂವು ಕೊಡೋವಾಗ ಸಲೀಸಾಗಿ ಆ ಹೂವಿನ ತೂಕದಷ್ಟೇ ಹಗುರಾಗಿ ಕೊಟ್ಟುಬಿಡಬಹುದು. ನಿಮ್ಮ ಗೆಳೆಯನ ಹುಟ್ಟುಹಬ್ಬಕ್ಕೆ ಬಣ್ಣ ಬಣ್ಣದ ಹೂ ಗೊಂಚಲನ್ನು, ದೊಡ್ಡ ದೊಡ್ಡ ಎಸಳಿನ ಅನಾಮಿಕ ಹೂಗಳನ್ನು, ಅಷ್ಟೂ ಸಾಕಾಗಲಿಲ್ಲವೆಂದರೆ ಹೂ ಕುಂಡವನ್ನೇ ಕೊಟ್ಟುಬಿಡಬಹುದು. ಅದು ದೊಡ್ಡ ಸಂಗತಿಯೇ ಅಲ್ಲ. ಆದರೆ, ಆದರ್ಶ ದಂಪತಿಗಳಿಗೆ ಸಮ್ಮಾನವೋ, ಹಿರಿಯ ಶಿಕ್ಷಕರಿಗೆ ಗೌರವ ಸಮಾರಂಭವೋ, ಒಂದು ದಿನದ ಜೇನು ತರಬೇತಿ ಕಾರ್ಯಾಗಾರದ ಸಭಾ ಕಾರ್ಯಕ್ರಮವೋ, ಸರಕಾರದ ವಿವಿಧ ಕಾಮಗಾರಿಗಳ ಉದ್ಘಾಟನೆಯೋ, ಅಥವಾ ರಕ್ತದಾನ ಶಿಬಿರದ ಉದ್ಘಾಟನೆಯೋ, ಹೀಗೆ ಯಾವುದೇ ಕ್ಷೇತ್ರದ ಸಾರ್ವಜನಿಕ ಸಮಾರಂಭಗಳೇ ಆಗಿರಲಿ, ಅಲ್ಲಿ ಅತಿಥಿಗಳಿಗೆ ಹೂವು ಕೊಟ್ಟು ಸ್ವಾಗತಿಸುವುದು ಇದೆಯಲ್ಲ, ಅದು ಕೆಲವೊಮ್ಮೆ ದೊಡ್ಡ ರಗಳೆ, ರಂಪಾಟ, ತಲೆಬಿಸಿ ಕೆಲಸ, ಫಜೀತಿ ಸನ್ನಿವೇಶವೂ ಆಗಿಬಿಡುತ್ತದೆ.
“”ಹೂ ಕೊಡುವುದಾ? ಅದರಲ್ಲೇನಿದೆ ಮಾರಾಯರ್ರೆ ದೊಡ್ಡ ರಗಳೆ? ಹೂ ಕೊಡುದೆಂದರೆ ಹೂ ಕೊಡುವುದು, ಒಮ್ಮೆ ಹೂವು ಕೊಟ್ಟರೆ ಸಾಕು ಮತ್ತೇನಿದೆ ಕೆಲಸ” ಅಂತ ಹೂವಿನಂತೆ ಮಾತಾಡಿ ನೀವು ಸುಮ್ಮನಾಗಬಹುದು. ಆದರೆ ಇದಕ್ಕಿಂತ ದೊಡ್ಡ ತಾಪತ್ರಯದ, ತಲೆತಿನ್ನುವ ಕೆಲಸ ಬೇರೊಂದಿಲ್ಲವೆಂದು ಗೊತ್ತಾಗಬೇಕಿದ್ದರೆ ನೀವು ಇಂತಹ ಸಮಾರಂಭದಲ್ಲಿ ಯಾರಿಗಾದರೂ ಹೂವು ಕೊಟ್ಟವರಾಗಿದ್ದರೆ ಅಥವಾ ಈ ಹೂವು ಕೊಡುವವರಿಂದ ಆ ಕ್ಷಣಕ್ಕೆ ಮುಜುಗರಕ್ಕೊಳಗಾಗಿದ್ದರೆ ಅಥವಾ ಈ ಇಬ್ಬರಿಂದಲೂ ದೂರ ಕೂತು ಕಾರ್ಯಕ್ರಮ ನೋಡುತ್ತ ಹೂವು ಕೊಡುವ ಆ ಅಮೂರ್ತ ಕ್ಷಣಕ್ಕೆ ಸಾಕ್ಷೀಭೂತರಾಗಿದ್ದರೆ ನಿಮಗೆ ನಾನು ಹೇಳುವುದು ತಟ್ಟಬಹುದು.ಮೊನ್ನೆ ನಾನು ಮತ್ತು ನನ್ನ ಗೆಳೆಯನೊಬ್ಬ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆವು. ರೇಷ್ಮೆ ಕೃಷಿ ಕುರಿತು ರೈತರಿಗೆ ಒಂದು ದಿನದ ಉಚಿತ ತರಬೇತಿ ಕಾರ್ಯಾಗಾರವದು. ಸುಮ್ಮನೆ ಆಸಕ್ತಿಯಿಂದ ಹೋಗಿದ್ದೆವು. ಎಷ್ಟೆಂದರೂ ಸರಕಾರಿ ಕಾರ್ಯಕ್ರಮ. 9.30 ಅಂದರೆ 11.30ಗೆ ಶುರುವಾಗುತ್ತದೆ. ಬೆಳಗ್ಗೆ ಕಾರ್ಯಕ್ರಮಕ್ಕೆ ಬರುವವರಿಗೆ ಮಾಡಿಟ್ಟ ಅಂಬೊಡೆ ಅಷ್ಟೊತ್ತಿಗೆ ಆರಿ ಸಪ್ಪೆಯಾಗಿ ತನ್ನ ಜೀವಸತ್ವ ಕಳೆದುಕೊಳ್ಳಲು ಶುರು ಮಾಡುತ್ತದೆ ಎನ್ನುವುದು ಗೊತ್ತಿದ್ದರೂ ನಾವು 10 ಕ್ಕೆ ಹೊರಟು ಸಭಾಂಗಣದ ಒಂದು ಮೂಲೆಯಲ್ಲಿ ಕೂತೆವು. ವೇದಿಕೆ ಖಾಲಿ ಹೊಡೆಯುತ್ತಿತು. ಕೆಲವೇ ಕ್ಷಣಗಳಲ್ಲಿ ಸಿಂಗಾರ ಮಾಡಿಕೊಂಡು ಜಿ. ಪಂ. ಸದಸ್ಯರುಗಳು, ಪುರಸಭೆಯ ಸದಸ್ಯರು, ಸರಕಾರಿ ಧುರೀಣರು ಒಬ್ಬೊಬ್ಬರೇ ವೇದಿಕೆ ಏರಿದರು. ರೇಷ್ಮೆ ಹುಳದಂತೆಯೇ ಕಾಣುತ್ತಿದ್ದ ರೇಶೆ¾ ಇಲಾಖಾಧಿಕಾರಿಯೊಬ್ಬ ಮೈಕು ತಗೊಂಡು ಕಾರ್ಯಕ್ರಮ ಶುರು ಮಾಡಿಬಿಟ್ಟ. ಕಾರ್ಯಕ್ರಮಕ್ಕೆ ಅವನದ್ದೇ ಪ್ರಾರ್ಥನೆ, ಸ್ವಾಗತವೂ ಆ ಪುಣ್ಯಾತ್ಮನದ್ದೇ. ಶುರುವಾಯಿತು, ”ಜಿ.ಪಂ. ಸದಸ್ಯರುಗಳಾದ…” ಎಂದು ಮುಂದುವರೆಸಿ 20 ಮಂದಿಗಳ ಪೂರ್ತಿ ಹೆಸರು, ಅವರ ಪರಿಚಯ ಎಲ್ಲಾ ಹೇಳಿ ಇವರಿಗೆ ಹೂ ಗೂಚ್ಛ ನೀಡಿ ಸ್ವಾಗತಿಸುವಂತೆ… ಅಂತ ಹೂ ಕೊಡುವ ತನ್ನವರ ಉದ್ದುದ್ದ ಹೆಸರು ಕರೆದು ಅತಿಥಿಗಳಿಗೆ ಹೂವು ಕೊಟ್ಟು ಸ್ವಾಗತಿಸುವಂತೆ ಆಜ್ಞಾಪಿಸಿದ.
ಕಾರ್ಯಕ್ರಮ ಶುರುವಾಗಿದ್ದರೂ ಇನ್ನೂ ಕಾಫಿ ಕುಡಿಯುತ್ತಿದ್ದ ಆ ಹೂವು ಕೊಡುವವನ್ನೊಬ್ಬ ತನ್ನ ಹೆಸರು ಕರೆದದ್ದೇ ದರ್ಶನ ಬಂದವನಂತೆ ಅಂಬೊಂಡೆ ತಿಂದ ಕೈಯಲ್ಲಿಯೇ ಓಡಿ ಬಂದು ಅತಿಥಿಯೊಬ್ಬರಿಗೆ ಹೂವು ಕೊಟ್ಟ. ಇನ್ನೊಬ್ಬ ಹೂವು ಕೊಡುವವನು ಹಿಂಬದಿ ಎಲ್ಲೋ ಕೂತು ನಿದ್ದೆ ಹೋಗಿದ್ದ. ಎಷ್ಟು ಕರೆದರೂ ಅವನ ಪತ್ತೆ ಇಲ್ಲ. ಕೊನೆಗೆ ಅವನನ್ನು ಯಾರೋ ಎಬ್ಬಿಸಿದರು. ಮಧ್ಯರಾತ್ರಿ ಭೂತ ನೋಡಿದಂತಾದ ಆ ದಢೂತಿ ದೇಹದ ಮನುಷ್ಯನಿಗೆ ವಾಸ್ತವಕ್ಕೆ ಬರಲು ಕೆಲ ನಿಮಿಷಗಳೇ ಬೇಕಾದವು. ಅಷ್ಟಾದರೆ ತೊಂದರೆ ಇರುತ್ತಿರಲಿಲ್ಲ, ಕುರ್ಚಿಯಲ್ಲಿ ಕೂತ ಅವನ ದೇಹ ಎಷ್ಟು ಮೇಲೆಬ್ಬಿಸಿದರೂ ಮೇಲಕ್ಕೆ ಬರುತ್ತಿಲ್ಲ, ಕಾಲು ಬೇರೆ ಇರುವೆಗಟ್ಟಿ ಹೋಗಿವೆ, ಕೊನೆಗೆ ಹೇಗೋ ಎದ್ದ ಆ ಮಹಾನುಭಾವ ವೇದಿಕೆ ಬಳಿ ಹೂವು ಕೊಡಲು ಹೋದಾಗ ಆತನ ಹೂವನ್ನು ಬೇರೆ ಯಾರೋ ಕೊಟ್ಟಾಗಿತ್ತು. ಆಗ ಈ ಮನುಷ್ಯನ ಮುಖ ನೋಡಬೇಕಿತ್ತು ಆರಿ ಹೋದ ಅಂಬೊಡೆಯಂತಾಗಿತ್ತು. ಅವನಿಗೆ ಕಣ್ಣ ಸನ್ನೆಯಲ್ಲೇ ಸಮಾಧಾನ ಹೇಳಿದ ಆ ರೇಷ್ಮೆ ಇಲಾಖಾ ನಿರೂಪಕ, ಮುಂದಿನ ಅತಿಥಿಗಳಿಗೆ ಹೂವನ್ನು ಅವನಿಂದಲೇ ಕೊಡಿಸಿ ಅವನಿಗೆ ಶಾಶ್ವತ ಸಮಾಧಾನಪಡಿಸಿದ. ಆದರೆ, ಆ ತಲೆಹರಟೆ ನಿರೂಪಕನಿಂದ 15 ಮಂದಿ ಅತಿಥಿಗಳಿಗೆ ಹೂವು ಕೊಡಲು ಅರ್ಧ ಗಂಟೆ ಹಿಡಿಯಿತು. ಕೊನೆಗೆ ವೇದಿಕೆಯಲ್ಲಿರುವವರಿಗೆಲ್ಲ ಹೂ ಕೊಟ್ಟಾಯಿತು. ಅಬ್ಟಾ! ಹೂವು ಕೊಡುವ ಶಾಸ್ತ್ರವಾಯಿತು ಎಂದುಕೊಳ್ಳುತ್ತಿದ್ದಾಗ ಆ ನಿರೂಪಕ ವೇದಿಕೆಯ ಮುಂಭಾಗದಲ್ಲಿ ಆಸೀನರಾಗಿದ್ದ ಕೆಲ ಗಣ್ಯರನ್ನು ಗುರುತಿಸಿ, ದೂರದಿಂದ ಆಗಮಿಸಿದ ಆ ಗಣ್ಯರಿಗೂ ಹೂಕೊಟ್ಟು ಸ್ವಾಗತಿಸಬೇಕೆಂದು ಕೋರಿದ.
ನಾನು ಹೂವು ಕೊಡುತ್ತೇನೆ ಅಂತ ಕೆಲ ಆಕಾಂಕ್ಷಿಗಳೆಲ್ಲ ಸಿದ್ಧರಾಗಿದ್ದರು. ಆ ನಿರೂಪಕ ಹೋಲ್‌ಸೆಲ್‌ನಲ್ಲಿ ಅದೆಷ್ಟು ಹೂಬುಟ್ಟಿ ತಂದಿಟ್ಟಿದ್ದನೋ ದೇವರಿಗೇ ಗೊತ್ತು. ಇದ್ದಬದ್ದ ಗಣ್ಯರಿಗೆಲ್ಲಾ ಹೂ ಕೊಡಿಸುತ್ತಲೇ ಇದ.ª ಅಷ್ಟೊತ್ತಿಗೆ ಕೆಲವೊಂದು ಗಣ್ಯರು ತಡವಾಗಿ ಸಭಾಂಗಣಕ್ಕೆ ಬರುತ್ತಿದ್ದರು. ಅವರನ್ನು ನೋಡಿದ್ದೇ ತಡ ಈ ನಿರೂಪಕ “”ಉದಾರದಾನಿ ಶ್ರೀಮಾನ್ ಸತೀಶನವರು ಈಗಷ್ಟೇ ನಮ್ಮ ಜೊತೆ ಸೇರಿದ್ದಾರೆ. ಅವರ ಜೊತೆ ಅವರ ಧರ್ಮಪತ್ನಿಯೂ…” ಅಂತೆಲ್ಲಾ ಬಲು ನಾಚಿಕೆಯಿಂದ ಹೇಳಿ “”ಅವರಿಗೂ ಹೂ ಕೊಟ್ಟು…” ಎಂದು ಶುರು ಮಾಡಿದ. ಕೊನೆ ಕೊನೆಗೆ ಒಂದಿಬ್ಬರು ಅತಿಥಿಗಳಿಗೆ ವೇದಿಕೆಗೆ ಬರುವಂತೆ ಹೇಳಿ, ತಾನೇ ಹೂ ಕೊಟ್ಟು ದೊಡ್ಡಸ್ತಿಕೆ ಮೆರೆದ. ಇನ್ನೂ ಕೆಲವಷ್ಟು ಹೂವುಗಳು ಉಳಿದಿತ್ತೆಂದು ತೋರುತ್ತದೆ, ಯಾರಿಗೆಲ್ಲಾ ಹೂ ಕೊಡಲಿ? ಅಂತ ಕೂತವರೆಲ್ಲರನ್ನೂ ಒಮ್ಮೆ ಕಿರುಗಣ್ಣಿನಿಂದ ದಿಟ್ಟಿಸಿದ ಆ ನಿರೂಪಕ. ನಮಗೆ ಕರೆಯುತ್ತಾನಾ ಪುಣ್ಯಾತ್ಮ ವೇದಿಕೆಗೆ, ಅಂತ ಕೆಲವರು ತಲೆಕೆಳಗು ಮಾಡಿ ಕೂತರು. ಕಾರ್ಯಕ್ರಮವನ್ನು ವರದಿ ಮಾಡಲು ಬಂದ ವರದಿಗಾರರು ಸುಮಾರು ಅರ್ಧಗಂಟೆ ನಡೆದ ಈ ಹೂ ಕೊಡುವ ಶಾಸ್ತ್ರವನ್ನು ನೋಡಿ ರೋಸಿ ಹೋಗಿ, “”ಸ್ವಾಮಿ ಇನ್ನೂ ಹೂ ಕೊಡ್ತಾನೇ ಇರ್ತಿರಾ? ನಮಗೆ ಬೇರೆ ಕಾರ್ಯಕ್ರಮವಿದೆ ಮಾರಾಯರ್ರೆ ಹೊರಡ್ತೇವೆ. ನೀವು ಹೂವು ಕೊಡ್ತಾನೇ ಇರಿ” ಅಂತ ಹೊರಡಲು ಸಿದ್ಧರಾದರು.
ತಬ್ಬಿಬ್ಟಾದ ನಿರೂಪಕ ಹೂವು ಕೊಡುವುದನ್ನು ಹಠಾತ್ತನೇ ಮುಗಿಸಿ ಮುಂದಿನ ಶಾಸ್ತ್ರ ಶುರು ಮಾಡಿದಾಗ ಇವನ ಹೂ ಕೊಡುವ ಪ್ರಹಸನದಿಂದ ಸಿಟ್ಟಿಗೆದ್ದಿದ್ದ ಕೆಲಮಂದಿ ನಿಟ್ಟುಸಿರಿಟ್ಟರು. ಏನೇ ಕಾರ್ಯಕ್ರಮ ಇರಲಿ, ಅತಿಥಿಗಳಿಗೆ ಹೂವು ಕೊಟ್ಟು ಸ್ವಾಗತಿಸುವ ಕ್ರಮ ಇದ್ದೇ ಇರುತ್ತದೆ. ಆದರೆ, ಸಿಕ್ಕಸಿಕ್ಕವರಿಗೆಲ್ಲ ಹೂವು ಕೊಡುವ ಸಂಪ್ರದಾಯವೂ ಇದೆ ಅಂತ ಗೊತ್ತಾದದ್ದು ಆ ಕಾರ್ಯಕ್ರಮದಲ್ಲಿಯೇ. ಹೂವು ಕೊಡುವುದು ಸಣ್ಣ ಕೆಲಸ ಅನ್ನಿಸಬಹುದು ನಿಮಗೆ, ಆದರೆ ಸಮಯಕ್ಕೆ ಸರಿಯಾಗಿ ಹೂವು ಕೊಡುವವನು ಹೂ ಕೊಡಲು ಬಾರದೇ ಕೈಕೊಟ್ಟಾಗ ಆಯೋಜಕನಾದವನು ಒಮ್ಮೆ ತಲೆಕೆರೆದುಕೊಳ್ಳುತ್ತಾನೆ.
ನಮಗೊಬ್ಬರು ಮೇಸ್ಟರಿದ್ದರು, ಅವರ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಯಾವ ಕಾರ್ಯಕ್ರಮವನ್ನೇ ಹಮ್ಮಿಕೊಳ್ಳಲಿ, ಆ ಮೇಸ್ಟ್ರರು, “”ಹೂ ಕೊಡುವವರು ಯಾರು, ರೆಡಿಯಾಗಿದ್ದಾರಾ?” ಅಂತ ಮಕ್ಕಳಲ್ಲಿ ಕೇಳುತ್ತಿದ್ದರು. ಅದ್ಯಾವ ಘನಘೋರ ಕಾರ್ಯಕ್ರಮಗಳೇ ಆಗಿರಲಿ ಅವರು ಆ ಕಾರ್ಯಕ್ರಮದ ಇತರ ವಿಷಯಗಳ ಬಗ್ಗೆ ಮಾತಾಡದೇ, ಬರೀ ಹೂವು ಕೊಡುವವರ ಬಗ್ಗೆಯೇ ಮಾತಾಡುತ್ತಿದ್ದುದು ನನಗೆ ವಿಚಿತ್ರವಾಗಿ ಕಾಣುತ್ತಿತ್ತು. ಆ ಮೇಲೆ ಗೊತ್ತಾದದ್ದು ಏನೆಂದರೆ, ಕಾಲೇಜಿನ ಬಹಳ ಕಾರ್ಯಕ್ರಮದಲ್ಲಿ ಹೂವು ಕೂಡುವವರು ಅತಿಥಿಗಳಿಗೆ ಹೂ ಕೊಡುವ ವೇಳೆಗೆನೇ ಕಣ್ಮರೆಯಾಗಿಬಿಡುತ್ತಾರೆ. ಅವರು ಮಾತ್ರ ನಾಪತ್ತೆಯಾದರೆ ತೊಂದರೆ ಇಲ್ಲ, ಬೇರೆ ಯಾರಾದರೂ ಹೂವು ಕೊಡಬಹುದೆನ್ನಿ, ಆದರೆಹೂವು ಕೊಡುವುದರಲ್ಲಿ ಕೊಂಚವೂ ಸೀರಿಯಸ್‌ನೆಸ್ ಇಲ್ಲದ ಹುಡುಗರು ಹೂವನ್ನೇ ಎತ್ತಿಕೊಂಡು ಎಲ್ಲೋ ಕಾಣೆಯಾದರೆ ಅತಿಥಿಗಳಿಗೆ ಯಾವ ಹೂ ಕೊಡುವುದು ಅನ್ನುವುದೇ ಮೇಸ್ಟ್ರ ಚಿಂತೆ. ಒಮ್ಮೆ ಒಬ್ಬ ಪಡ್ಡೆ ಹುಡುಗನಂತೂ ಅತಿಥಿಗಳಿಗೆ ಕೊಡಬೇಕಾದ ಹೂವನ್ನು ಸೀದಾ ಎತ್ತಿಕೊಂಡು ಹೋಗಿ ಅವನ ಪ್ರಿಯತಮೆಗೆ ಕೊಡುವಾಗಲೇ ಮೇಸ್ಟ್ರ ಕೈಯಲ್ಲಿ ಸಿಕ್ಕಿಬಿದ್ದಿದ್ದನಂತೆ.
ನಿರೂಪಕನಾದವನು ಈ ಕಾರ್ಯಕ್ರಮದಲ್ಲಿ ಇಂಥವರು, ಇಂಥವರಿಗೆ ಹೂವು ಕೊಟ್ಟು ಸ್ವಾಗತಿಸಬೇಕು ಅಂತ ಮೊದಲೇ ಹೂವು ಕೊಡುವವನಿಗೆ ತಿಳಿಸಿದ್ದರೂ ಹೂವು ಕೊಡುವವರು ಆ ಸಮಯಕ್ಕೆ ಬಾರದಿದ್ದರೆ ಸಿಟ್ಟು ಬರುವುದಿಲ್ಲವಾ, ಹೇಳಿ? ಇವನ ಹೂವಿಗಾಗಿ ಕಾಯುತ್ತ ಕೂರುವುದಕ್ಕೆ ಅತಿಥಿಗೂ ಒಂಥರಾ ಮುಜುಗರವಾಗುವುದಿಲ್ಲವೆ? ಏನೇ ಆಗಲಿ, ಹೂವು ಕೊಡುವ ಆ ಗಳಿಗೆ ತಮಾಷೆಯಲ್ಲದಿದ್ದರೂ ಕೆಲವೊಮ್ಮೆ ತಮಾಷೆ ಅನ್ನಿಸುವುದುಂಟು, ಇನ್ನು ಮುಂದೆ ನೀವು ಯಾವುದಾದರೂ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹೂವು ಕೊಡುವ ಪ್ರಸಂಗವನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ. ನಗುವುದಕ್ಕೆ, ನಕ್ಕು ಹಗುರಾಗುವುದಕ್ಕೆ ಹೂವು ಕೊಡುವ ಸನ್ನಿವೇಶವೇ ನೆಪವಾದರೆ ಖುಷಿಪಡಿ ಅಷ್ಟೆ.
ಪ್ರಸಾದ್ ಶೆಣೈ ಆರ್. ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Cabinet ಸರ್ಜರಿ ಸದ್ಯ ಇಲ್ಲ:ಹೈಕಮಾಂಡ್ ಭೇಟಿ ಬಳಿಕ ಸಿಎಂ, ಡಿಸಿಎಂ ಸ್ಪಷ್ಟನೆ
Tamil Nadu;ಇಂದು ಅಪ್ಪಳಿಸಲಿದೆ ‘ಫೆಂಗಲ್’ ಚಂಡಮಾರುತ!: ಶ್ರೀಲಂಕಾದಲ್ಲಿ 12 ಸಾ*ವು
1.26 ಲಕ್ಷ ಅರ್ಹರಿಗೆ ವಾರದಲ್ಲಿ ಬಗರ್ ಹುಕುಂ ಚೀಟಿ
Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ
GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.