ಕೃಷಿ ಸಮಸ್ಯೆ ಪರಿಹಾರಕ್ಕೆ ಸ್ವಾವಲಂಬಿ ಸೂತ್ರ
Team Udayavani, May 14, 2018, 6:35 AM IST
ಈ ವರ್ಷ ಅತಿವೃಷ್ಟಿಯಾಗಿ ಫಸಲು ಹಾಳಾಯಿತು. ಜತೆಗೆ ಕಾರ್ಮಿಕರ ಕೊರತೆ, ಪ್ರಾಕೃತಿಕ ವಿಕೋಪ, ಅಕಾಲಿಕ ಮಳೆ ಎಲ್ಲ ಒಟ್ಟಿಗೆ ಬಂತು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಕೃಷಿಯ ಉಸಾಬರಿ ಬೇಡ. ಜಮೀನು ಮಾರಿ ನಗರಕ್ಕೆ ಹೋಗಿ ಆರಾಮ ಇರಬೇಕೆಂಬ ಹಂಬಲ ಇದೆ. ಆದರೆ ಜಮೀನು ಮಾರಾಟವೇ ಆಗುತ್ತಿಲ್ಲ. ಮಕ್ಕಳಿಗೆ ಕೃಷಿಯ ಬಗ್ಗೆ ಆಸಕ್ತಿ ಇಲ್ಲ. ನಮ್ಮ ವಯಸ್ಸು ಸಹಕರಿಸುವುದಿಲ್ಲ ಎಂಬ ಮಾತುಗಳು ಮಧ್ಯ ವಯಸ್ಕ ಕೃಷಿಕರದ್ದು.
ಇಲ್ಲಿ ಹತಾಶೆ, ಜುಗುಪ್ಸೆ, ವೈರಾಗ್ಯ ಎಲ್ಲವೂ ಸೇರಿದ ಭಾವನೆಗಳು ವ್ಯಕ್ತವಾಗುತ್ತವೆ. ಅಡಿಕೆ ತೋಟ ಕಡಿದು ರಬ್ಬರ್ ಬೆಳೆಸಿದಾಗ, ರಬ್ಬರ್ ಧಾರಣೆ ಕುಸಿಯಿತು. ಅಡಿಕೆ ಧಾರಣೆಯೂ ಸಮಾಧಾನಕರವಾಗಿಲ್ಲ. ಮಾರುಕಟ್ಟೆಯು ಕೃಷಿಕರ ಪರವಾಗಿಲ್ಲ ಎಂಬ ಆತಂಕ. ಈ ಎಲ್ಲ ಸಮಸ್ಯೆಗಳನ್ನು ಮತ್ತೆ ಮತ್ತೆ ಮೆಲುಕು ಹಾಕುವ ಬದಲು ಸೂಕ್ತ ಪರಿಹಾರ ಕಾಣುವ ಕಡೆಗೆ ಕೃಷಿಕರ ಮನಸು ಹೊರಳುವುದೇ ಇಲ್ಲ. ಕಾರ್ಮಿಕರ ಕೊರತೆಯನ್ನೇ ಬೆಟ್ಟ ಮಾಡಿ ಆಕಾಶವೇ ತಲೆ ಮೇಲೆ ಬಿದ್ದಂತೆ ಚಡಪಡಿಸುವ ಕೃಷಿಕರು ನಮ್ಮ ಜಮೀನಿನಲ್ಲಿ ನಾವೇ ದುಡಿಯುವ ಅಭ್ಯಾಸ ಬಹುತೇಕ ಮಂದಿ ಮಾಡುವುದಿಲ್ಲ.
ಅಡಿಕೆ ಕೊಯ್ಯುವುದು, ಅಡಿಕೆಗೆ ಔಷಧ ಸಿಂಪಡಿಸುವುದು, ತೆಂಗಿನ ಕಾಯಿ ಕೀಳುವುದು ಮೊದಲಾದ ಕೆಲಸಗಳಿಗೆ ಅನುಭವ ಬೇಕು. ಅದು ಕಠಿನವಾದ ಕೆಲಸವಾಗಿರುವುದರಿಂದ ಅನುಭವಿ ಕಾರ್ಮಿಕರನ್ನು ಬಳಸುವುದು ಯೋಗ್ಯ. ಆದರೆ ಅಡಿಕೆ ಹೆಕ್ಕುವುದು, ಅಡಿಕೆ ತೋಟದ ಸೋಗೆ ತೆರವು ಮಾಡುವುದು, ತೋಟದ ನೀರಾವರಿ ವ್ಯವಸ್ಥೆ ನಿರ್ವಹಣೆ, ಮನೆಯ ಪರಿಸರದಲ್ಲಿ ತರಕಾರಿ ತೋಟ, ರಬ್ಬರ್ ಹಾಲು ಸಂಗ್ರಹಿಸುವುದು, ತೋಟಕ್ಕೆ ಪೋಷಕಾಂಶ ವಿತರಿಸುವುದು ಮೊದಲಾದ ಸುಲಭವೆನಿಸುವ ಕೆಲಸಗಳಿಗೆ ಕಾರ್ಮಿಕರನ್ನೆ ನಂಬಿ ಕುಳಿತುಕೊಳ್ಳಬಾರದು. ಇಂದಿನ ಕೃಷಿ ಕ್ಷೇತ್ರದ ಸಮಸ್ಯೆಗಳು ಬಹುತೇಕವಾಗಿ ಕಾರ್ಮಿಕರ ಅವಲಂಬನೆಯಿಂದಲೇ ಸೃಷ್ಟಿಯಾಗುತ್ತಿದೆ. ಸ್ವಲ್ಪ ಶ್ರಮ ವಹಿಸಿ ದುಡಿಯುವ ಮನೋಭಾವ ಇದ್ದರೆ ಕೃಷಿ ಕ್ಷೇತ್ರದ ಶೇ.75ರಷ್ಟು ಕೆಲಸಗಳನ್ನು ಜಮೀನಿನ ಮಾಲಕರೇ ನಿರ್ವಹಿಸಬಹುದು. ಕೃಷಿ ಕ್ಷೇತ್ರದ ಸುಲಭವಾದ ಕೆಲಸಗಳನ್ನು ನಾವೇ ಮಾಡುವುದರಿಂದ ನಮ್ಮ ಕೌಟುಂಬಿಕ ಆದಾಯವೂ ಹೆಚ್ಚುತ್ತದೆ. ನಮ್ಮ ಶರೀರಕ್ಕೆ ಸ್ವಲ್ಪ ಮಟ್ಟಿನ ವ್ಯಾಯಾಮವೂ ದೊರೆಯುತ್ತದೆ.
ಯುವಜನಾಂಗವು ಕೃಷಿ ಕ್ಷೇತ್ರವನ್ನು ತೀರಾ ನಿರ್ಲಕ್ಷಿಸುತ್ತಿದೆ. ಅನೇಕ ಕಡೆಗಳಲ್ಲಿ ಹಿಂದೆ ಫಲವತ್ತಾಗಿದ್ದ ಭೂಮಿ ಈಗ ಬರಡು ಬಿದ್ದಿರುವುದಕ್ಕೆ ಯುವಜನಾಂಗವೇ ಕಾರಣ. ಯುವಕರು ಪ್ರತಿ ದಿನದ ಕನಿಷ್ಠ 1 ಗಂಟೆಯನ್ನು ಮನೆಯ ಸುತ್ತ ತರಕಾರಿ ಕೃಷಿ, ಹೂದೋಟ, ಕೃಷಿ ನಿರ್ವಹಣೆ, ಅಪರೂಪದ ವೃಕ್ಷ ಸಂರಕ್ಷಣೆ ಮಾಡಬೇಕು. ಮನೆಯ ಹಿರಿಯರು ಮಕ್ಕಳಿಗೆ ಕೃಷಿ ಕ್ಷೇತ್ರದ ಬಗ್ಗೆ ಪ್ರೀತಿಯನ್ನು ಹುಟ್ಟಿಸಬೇಕು. ಕೃಷಿಯ ಕಷ್ಟಗಳು ನಮಗೆ ಇರಲಿ ಮಕ್ಕಳಿಗೆ ಬೇಡ ಎಂಬ ಅತಿಯಾದ ಪ್ರೀತಿಯಿಂದ ಯುವಜನಾಂಗಕ್ಕೆ ಕೃಷಿಯ ಬಗ್ಗೆ ಆಸಕ್ತಿ ಹಾಗೂ ಅರಿವು ಮೂಡುವುದಿಲ್ಲ. ಕೇರಳ ರಾಜ್ಯದ ಕೃಷಿ ಭವನಗಳು ಸಾವಯವ ಕೃಷಿ, ತರಕಾರಿ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಪ್ರತಿ ಪೋಷಕರೂ ತಮ್ಮ ಮಕ್ಕಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡುವಂತೆ ಅವರನ್ನು ಕೃಷಿಯಲ್ಲಿ ಕ್ರಿಯಾತ್ಮಕವಾಗಿ ತೊಡಗಿಕೊಳ್ಳುವಂತೆ ಮಾಡಬೇಕು.
ಕೃಷಿಕರಲ್ಲಿ ಯೋಜನೆಯ ಬಗ್ಗೆ ನಿಖರ ಅರಿವಿರಬೇಕು. ತಮ್ಮ ಕೃಷಿಯ ಗುಣಮಟ್ಟ, ಸಾಧ್ಯತೆ, ಪರಿಣಾಮದ ಮಾಹಿತಿ ಬೇಕು. ಪ್ರಾದೇಶಿಕ ಅಸಮಾನತೆಯಿಂದ ಕೃಷಿಯಲ್ಲಾಗುವ ನಷ್ಟವನ್ನು ಅರಿತುಕೊಳ್ಳುವ ಜಾಣ್ಮೆ ಇರಬೇಕು. ಕೃಷಿಗೆ ರೋಗ ಬಂದ ಮೇಲೆ ಚಿಕಿತ್ಸೆ ಕೊಡುವುದಕ್ಕಿಂತ, ರೋಗ ಬರುವ ಮೊದಲೇ ಸೂಕ್ತ ಮುಂಜಾಗ್ರತೆ ವಹಿಸಬೇಕು. ಸರಕಾರದಿಂದ ಕೃಷಿಕರಿಗಾಗಿ ಅನೇಕ ಸೌಲಭ್ಯಗಳು ಬಿಡುಗಡೆಯಾಗುತ್ತವೆ. ಅವುಗಳನ್ನು ಸಕಾಲದಲ್ಲಿ ಸ್ವೀಕರಿಸಿ ಕೃಷಿಯ ಅಭಿವೃದ್ಧಿಗೆ ಪ್ರಯತ್ನಿಸಬೇಕು. ಅಕಾಲಿಕ ಮಳೆಯಿಂದ ಅಡಿಕೆಯನ್ನು ರಕ್ಷಿಸಲು ಪ್ಲಾಸ್ಟಿಕ್ ಗೂಡುಗಳನ್ನು ನಿರ್ಮಿಸಬೇಕು. ರಬ್ಬರ್ ಹಾಲು ಪಾತ್ರೆಯಿಂದ ಸೋರಿ ಹೋಗದಂತೆ ಮುತುವರ್ಜಿ ವಹಿಸಬೇಕು. ಕೃಷಿಯ ನಿರ್ವಹಣಾ ವೆಚ್ಚ ಕಡಿಮೆ ಮಾಡುವ ಹಿನ್ನೆಲೆಯಲ್ಲಿ ಯಾಂತ್ರೀಕೃತ ಪರಿಕರಗಳನ್ನು ಬಳಸಬೇಕು.
ಕಾರ್ಮಿಕರನ್ನು ಬಳಸಿ ತೋಟದ ಕಾಡು ಕಡಿಯುವ ಬದಲು ಯಂತ್ರವನ್ನು ಬಳಸಬೇಕು. ಅಡಿಕೆ ಸುಲಿಯಲು ಯಂತ್ರವನ್ನು ಬಳಸಬೇಕು, ಔಷಧಿ ಸಿಂಪಡಣೆಗೆ ನೂತನ ಆವಿಷ್ಕಾರಗನ್ನು ಬಳಸಿಕೊಳ್ಳಬೇಕು. ಹೀಗೆ ಯೋಗ್ಯ ಪರಿಕರವನ್ನು ಬಳಸಿಕೊಂಡು ಕೃಷಿ ಮಾಡುವ ಪದ್ಧತಿಯಿಂದ ಕೃಷಿ ಕ್ಷೇತ್ರದ ವಿವಿಧ ಸಮಸ್ಯೆಗಳನ್ನು ನಿವಾರಿಸಬಹುದು. ಕೃಷಿಯಲ್ಲಿ ಆಧುನಿಕ ತಳಿಗಳ ಅನ್ವೇಷಣೆ ಆಗಬೇಕು. ಪ್ರತಿಯೊಬ್ಬ ಕೃಷಿಕರೂ ಕೂಡ ಒಂದೇ ಕೃಷಿಯನ್ನು ಅವಲಂಬಿಸದೆ ಮಿಶ್ರ ಬೆಳೆಯನ್ನು ಬೆಳೆಸಬೇಕು. ಆಗ ಒಂದು ಕೃಷಿಗೆ ಧಾರಣೆ ಕುಸಿದರೆ, ಆ ನಷ್ಟವನ್ನು ಇನ್ನೊಂದು ಕೃಷಿಯ ಮೂಲಕ ಸರಿದೂಗಿಸಬಹುದು. ಇಂದಿನ ಮಾರುಕಟ್ಟೆಯು ವ್ಯಾಪಾರಿಗಳು ಹಾಗೂ ಮಧ್ಯವರ್ತಿಗಳ ಹಿಡಿತದಲ್ಲಿದೆ. ಕೃಷಿಕರು ಕಷ್ಟಪಟ್ಟು ಬೆಳೆಸಿದ ಫಸಲಿಗೆ ಧಾರಣೆ ನಿಗದಿಸುವ ಅಧಿಕಾರ ಕೃಷಿಕರಿಗಿಲ್ಲ. ಧಾರಣೆ ನಿಗದಿಸುವ ಅಧಿಕಾರ ವ್ಯಾಪಾರಿಗೆ ಇದೆ. ಇದು ನಿಜವಾಗಿಯೂ ದುರಂತ. ಇದರಿಂದ ಕೃಷಿಕರು ಶೋಷಣೆಗೆ ಒಳಗಾಗುವ ಸಾಧ್ಯತೆಯೂ ಇದೆ. ಫಸಲು ಎಷ್ಟೇ ಉತ್ತಮವಿದ್ದರೂ ಅದರಲ್ಲಿ ಕೊರತೆಯನ್ನು ಕಂಡು ಹಿಡಿದು ಧಾರಣೆ ತಗ್ಗಿಸುವುದಕ್ಕಾಗಿ ವ್ಯಾಪಾರಿ ಪ್ರಯತ್ನಿಸುತ್ತಾನೆ. ಕೃಷಿಕರ ಪ್ರಗತಿ ಆಗದಿರುವುದಕ್ಕೆ ಮಾರುಕಟ್ಟೆಯೂ ಕೂಡಾ ಕಾರಣವಾಗುತ್ತದೆ. ಕೃಷಿಕರ ವಸ್ತುಗಳಿಗೆ ಕೃಷಿಕರೇ ಧಾರಣೆ ನಿರ್ಧರಿಸುವ ತನಕ ಮಾರುಕಟ್ಟೆಯಲ್ಲಿ ಕೃಷಿಕರ ಮೇಲಿನ ಶೋಷಣೆ ಕಡಿಮೆಯಾಗುವುದಿಲ್ಲ.
ಒಟ್ಟಿನಲ್ಲಿ ಕೃಷಿಕರು ತಮ್ಮ ಜಮೀನಿನ ಸುಲಭವಾದ ಕೃಷಿ ಕೆಲಸಗಳನ್ನು ತಾವೇ ನಿರ್ಧರಿಸುವುದು, ತಮ್ಮ ಮಕ್ಕಳನ್ನೂ ಕೂಡ ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು, ಕೃಷಿಯ ಗುಣಮಟ್ಟ ರಕ್ಷಣೆ, ಮಿಶ್ರ ಕೃಷಿ ಪದ್ಧತಿ, ಮಾರುಕಟ್ಟೆಯ ಧಾರಣೆ ನಿರ್ಣಯದ ಅಧಿಕಾರ ಗಳಿಸಿಕೊಳ್ಳುವುದೇ ಮೊದಲಾದ ಅನೇಕ ಕೃಷಿಪರ ಕೆಲಸಗಳನ್ನು ಶಕ್ತವಾಗಿ ಕೃಷಿಕರು ಒಗ್ಗಟ್ಟಿನಿಂದ ನಿರ್ವಹಿಸಿದರೆ ಇಂದಿನ ಕೃಷಿಯಲ್ಲಿ ಸಮಸ್ಯೆಗಳೇ ಇಲ್ಲ. ಆದ್ದರಿಂದ ಕೃಷಿಕರು ಸಮಸ್ಯೆಗಳ ಸುಳಿಯಲ್ಲಿ ಸಿಲುಕದೆ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವ ಜಾಣ್ಮೆಯನ್ನು ಅಳವಡಿಸಿಕೊಳ್ಳಬೇಕು. ಹಾಗಾದಲ್ಲಿ ಕೃಷಿ ಖಂಡಿತವಾಗಿಯೂ ಕಬ್ಬಿಣದ ಕಡಲೆಯಲ್ಲ. ಕೃಷಿಯ ಸಂಪರ್ಕದಿಂದ ದೊರೆಯುವ ನೆಮ್ಮದಿ ಬೇರೆ ಯಾವ ಉದ್ಯೋಗದಲ್ಲೂ ದೊರೆಯುವುದಿಲ್ಲ.
– ವಿರಾಜ್ ಅಡೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.