ಬೇಸಿಗೆಗೆ ತಂಪು ತಂಪು ಐಸ್‌ಕ್ರೀಮುಗಳು
Team Udayavani, May 18, 2018, 6:00 AM IST
ಬೇಸಿಗೆ ಬಂದಿದೆ. ವರ್ಷದಿಂದ ವರ್ಷಕ್ಕೆ ಬೇಸಿಗೆಯ ಧಗೆ ಏರುತ್ತಲಿದೆ. ತಂಪಾದ ಪಾನೀಯ, ಐಸ್‌ಕ್ರೀಮುಗಳನ್ನು ಸವಿಯಬೇಕೆಂದು ಮನಸ್ಸು ಬಯಸುತ್ತದೆ. ಮನೆಯಲ್ಲಿಯೇ ಶುಚಿಯಾಗಿ, ರುಚಿಯಾಗಿ ಐಸ್‌ಕ್ರೀಮು ಮಾಡಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು.
ವೆನಿಲ್ಲಾ ಐಸ್‌ಕ್ರೀಮ್
ಬೇಕಾಗುವ ಸಾಮಗ್ರಿ: 2 ಕಪ್ ಹಾಲು, 1 ಕಪ್ ಹಾಲಿನ ಪುಡಿ, 1/2 ಕಪ್ ಕ್ರೀಮ್, 1/2 ಕಪ್ ಸಕ್ಕರೆ ಪುಡಿ, 1 ಸಣ್ಣ ಚಮಚ ವೆನಿಲ್ಲಾ ಎಸೆನ್ಸ್ .
ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಹಾಲು ಹಾಕಿ. ಹಾಲು ಕುದಿಯಲು ಆರಂಭವಾದ ಕೂಡಲೇ ಸಕ್ಕರೆ ಸೇರಿಸಿ ಚೆನ್ನಾಗಿ ಕದಡಿ. ತಣ್ಣಗಾದ ಮೇಲೆ ಹಾಲಿನ ಪುಡಿ, ಕ್ರೀಮ್, ವೆನಿಲ್ಲಾ ಎಸೆನ್ಸ್ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಚಿಕ್ಕ ಪಾತ್ರೆಗೆ ಹಾಕಿ 4 ಗಂಟೆ ಫ್ರಿಜರ್‌ನಲ್ಲಿಡಿ. ಎರಡು ಗಂಟೆಗೊಮ್ಮೆ ಚಮಚದಿಂದ ಮಿಶ್ರಣವನ್ನು ಕಲಕಿ ನಂತರ ಬೌಲ್‌ಗೆ ಹಾಕಿ ಸವಿದರೆ ವೆನಿಲ್ಲಾ ಐಸ್‌ಕ್ರೀಮ್ ಬಲು ರುಚಿಯಾಗಿರುತ್ತದೆ.
ಚಾಕೊಲೆಟ್ ಐಸ್‌ಕ್ರೀಮ್
ಬೇಕಾಗುವ ಸಾಮಗ್ರಿ: 2 ಕಪ್ ಸಿಹಿರಹಿತ ಚಾಕೊಲೆಟ್, 50 ಗ್ರಾಂ ಕೊಕೋ ಪೌಡರ್, 1/2 ಲೀಟರ್ ಹಾಲು, 4 ಚಿಕ್ಕ ಚಮಚ ಕಾರ್ನ್ಫ್ಲೋರ್, 4 ಚಿಕ್ಕ ಚಮಚ ಹಾಲಿನ ಹುಡಿ, 1 ಕಪ್ ಸಕ್ಕರೆ ಪುಡಿ, ಚಿಟಿಕೆ ಉಪ್ಪು .
ತಯಾರಿಸುವ ವಿಧಾನ: ಹಾಲಿನ ಪುಡಿಗೆ ಕಾರ್ನ್ಫ್ಲೋರ್ ಬೆರೆಸಿ ಬಾಣಲೆಗೆ ಹಾಕಿ ಗಂಟಾಗದಂತೆ ತೊಳಸುತ್ತಿರಿ. ತಿಳಿಯಾದ ಗಂಜಿಯಂತೆ ಆದಾಗ ಕೆಳಗಿಳಿಸಿ. ಬೇರೊಂದು ಪಾತ್ರೆಯಲ್ಲಿ ಚಾಕೊಲೇಟ್ ಚೂರುಗಳನ್ನು ಹಾಕಿ 1/4 ಕಪ್ ಕುದಿಯುವ ನೀರು ಹಾಕಿ ಚಾಕೊಲೇಟ್‌ನ್ನು ಕರಗಿಸಿ. ಸಕ್ಕರೆ, ಕೊಕೋ ಪೌಡರ್, ಹಾಲಿನ ಪುಡಿ, ಉಪ್ಪು ಸೇರಿಸಿ ಬೆರೆಸಿ. ಇದನ್ನು ಚಾಕೊಲೇಟ್ ಮಿಶ್ರಣಕ್ಕೆ ಸೇರಿಸಿ. ನಂತರ ಸಣ್ಣ ಉರಿಯಲ್ಲಿ ಒಲೆಯ ಮೇಲಿಟ್ಟು ಸಕ್ಕರೆ ಕರಗುವವರೆಗೆ ಕುದಿಸಿ. ನಂತರ ಕಾರ್ನ್ಫ್ಲೋರ್ ಮಿಶ್ರಣವನ್ನು ಸೇರಿಸಿ ಸ್ವಲ್ಪ ಗಟ್ಟಿಯಾದ ಕೂಡಲೆ ಕೆಳಗಿಳಿಸಿ. ಮಿಶ್ರಣ ಸಂಪೂರ್ಣ ತಣ್ಣಗಾದ ಮೇಲೆ ಸಣ್ಣ ಪಾತ್ರೆಗೆ ಹಾಕಿ ಎರಡು ಗಂಟೆ ಫ್ರೀಜರ್‌ನಲ್ಲಿಡಿ. ಬಳಿಕ ಹೊರತೆಗೆದು ರುಬ್ಬಿ ನಾಲ್ಕು ಗಂಟೆ ಫ್ರೀಜರ್‌ನಲ್ಲಿಡಿ. ನಂತರ ತೆಗದು ಬೌಲ್‌ಗೆ ಹಾಕಿ ಸವಿಯಿರಿ.
ಮಿಕ್ಸೆಡ್ ಹಣ್ಣುಗಳ ಕಸ್ಟರ್ಡ್
ಬೇಕಾಗುವ ಸಾಮಗ್ರಿ: ಸಣ್ಣಗೆ ತುಂಡು ಮಾಡಿದ ಬಾಳೆಹಣ್ಣು, ಸೇಬು, ಕಿತ್ತಳೆ, ದಾಳಿಂಬೆ ಚೂರುಗಳು 1 ಕಪ್, 2 ಕಪ್ ಹಾಲು, 1 ಕಪ್ ಸಕ್ಕರೆ, 2 ಚಮಚ ಕಸ್ಟರ್ಡ್ ಪುಡಿ (ವೆನಿಲ್ಲಾ).
ತಯಾರಿಸುವ ವಿಧಾನ: ತಣ್ಣನೆಯ ಹಾಲಿನಲ್ಲಿ ಕಸ್ಟರ್ಡ್ ಪುಡಿ ಹಾಕಿ ಕರಗಿಸಿ. ನಂತರ ಒಲೆಯ ಮೇಲೆ ಬಾಣಲೆಯಿಟ್ಟು ಹಾಲು ಹಾಕಿ. ಬಿಸಿಯಾದಾಗ ಸಕ್ಕರೆ ಹಾಕಿ. ಸಕ್ಕರೆ ಕರಗಿದಾಗ ಕಲಸಿದ ಕಸ್ಟರ್ಡ್ ಪುಡಿಯ ಹಾಲಿನ ಮಿಶ್ರಣ ಹಾಕಿ ತೊಳಸಿ ಗಟ್ಟಿಯಾದಾಗ ಕೆಳಗಿಳಿಸಿ. ಒಂದು ಬೌಲ್‌ನಲ್ಲಿ ಸಣ್ಣಗೆ ತುಂಡು ಮಾಡಿದ ಬಾಳೆಹಣ್ಣು, ಸೇಬು, ಕಿತ್ತಳೆ, ದಾಳಿಂಬೆ ಬೀಜ ಹಾಕಿ. ನಂತ ತಣ್ಣಗಾದ ಹಾಲಿನ ಕಸ್ಟರ್ಡ್ ಮಿಶ್ರಣ ಹಾಕಿ ಸರಿಯಾಗಿ ಬೆರೆಸಿ. ಈಗ ರುಚಿಯಾದ ಹಣ್ಣುಗಳ ಕಸ್ಟರ್ಡ್ ಸವಿಯಲು ಬಲು ರುಚಿಯಾಗಿರುತ್ತದೆ..
ಮಿಕ್ಸೆಡ್ ಹಣ್ಣುಗಳ ಸಾಬಕ್ಕಿ ಮಿಕ್ಸ್
ಬೇಕಾಗುವ ಸಾಮಗ್ರಿ: 2 ಕಪ್ ಹಾಲು, 1 ಕಪ್ ಸಕ್ಕರೆ, ಬೇಯಿಸಿದ ಸಾಬಕ್ಕಿ 1/2 ಕಪ್, ಸಣ್ಣಗೆ ತುಂಡು ಮಾಡಿದ ಬಾಳೆಹಣ್ಣು, ಸೇಬು, ದ್ರಾಕ್ಷೆ , ದಾಳಿಂಬೆ ಬೀಜ- 1 ಕಪ್.
ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಹಾಲು ಹಾಕಿ. ಬಿಸಿಯಾದಾಗ ಸಕ್ಕರೆ ಹಾಕಿ. ಸಕ್ಕರೆ ಕರಗಿದಾಗ ಬೇಯಿಸಿದ ಸಾಬಕ್ಕಿ ಹಾಕಿ ಸ್ವಲ್ಪ ಹೊತ್ತು ತೊಳಸಿ ಕೆಳಗಿಳಿಸಿ. ನಂತರ ಒಂದು ಗ್ಲಾಸಿಗೆ ತಳಭಾಗದಲ್ಲಿ ಬಾಳೆಹಣ್ಣಿನ ತುಂಡು, ಸೇಬಿನ ತುಂಡು, ದ್ರಾಕ್ಷೆ, ದಾಳಿಂಬೆ ಬೀಜ ಹಾಕಿ. ನಂತರ ಬೇಯಿಸಿದ ಸಾಬಕ್ಕಿ, ಹಾಲಿನ ಮಿಶ್ರಣ ಹಾಕಿ. ಈ ಹಣ್ಣುಗಳ ಸಾಬಕ್ಕಿ ಮಿಕ್ಸ್ ಈ ಬೇಸಿಗೆಯಲ್ಲಿ ತಿಂದರೆ ದೇಹ, ಮನಸ್ಸು ತಂಪಾಗುತ್ತದೆ.
ಸರಸ್ವತಿ ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.