ಝಗಮಗಿಸುವ ನಗರಗಳು ಕೊಂಚ ಮೆಲ್ಲಗೆ ನಡೆಯಲಿ
Team Udayavani, May 19, 2018, 6:00 AM IST
ನಾವು ಝಗಮಗಿಸುವ ನಗರಗಳನ್ನು ಕಂಡು ಖುಷಿಪಡುವ ಕಾಲ ಮುಗಿಯುತ್ತಿದೆ. ಹಸಿರು ಅನಿಲವನ್ನು ತಗ್ಗಿಸುವತ್ತ ನಮ್ಮ ನಗರಗಳು ಗಮನಹರಿಸದಿದ್ದರೆ ನಮ್ಮ ಬದುಕಿನ ಅರ್ಥವೇ ಅಪಮೌಲ್ಯಗೊಳ್ಳಬಹುದು.
ಝಗಮಗಿಸುವ ನಗರಗಳನ್ನು ನೋಡಿದಾಗಲೆಲ್ಲಾ ಎಷ್ಟೊಂದು ಸಂಭ್ರಮ ನಮ್ಮೊಳಗೆ ತುಂಬಿಕೊಳ್ಳುತ್ತದೆ. ನಮ್ಮ ಹಳ್ಳಿಗಳಲ್ಲಿ ಐದಾರು ಅಡಿಗೆ ಒಂದರಂತೆ ಇರುವ ದಾರಿದೀಪದ ಮಸುಕು ಬೆಳಕಿನಲ್ಲಿ ನಡೆದು ಹೋಗುವಾಗ, ಇಷ್ಟೊಂದು ಕತ್ತಲೆ ಇದ್ದರೆ ಬದುಕುವುದು ಹೇಗೆ ಎಂದುಕೊಳ್ಳುವುದುಂಟು. ಅಷ್ಟೇ ಅಲ್ಲ, ನಮ್ಮೂರಿನಲ್ಲಿ ಅಭಿವೃದ್ಧಿ ಎಂಬುದು ಹಾಗೇ ಇಲ್ಲ ಎಂದುಕೊಳ್ಳುವುದಿದೆ. ನಮ್ಮ ವ್ಯಥೆ ಇಲ್ಲಿಗೇ ಮುಗಿಯುವುದಿಲ್ಲ. ನಾವು ಕಂಡ ನಗರಗಳ ಪ್ರತಿ ತುಣುಕುಗಳೊಂದಿಗೆ ನಮ್ಮ ಹಳ್ಳಿಯನ್ನು ಹೋಲಿಸಿಕೊಳ್ಳುತ್ತೇವೆ.
ನಗರಗಳಲ್ಲಿನ ಪ್ರತಿ ರಸ್ತೆಗಳ ದೀಪಾಲಂಕಾರಗಳು, ಪ್ರತಿ ರಸ್ತೆಯಲ್ಲೂ ಝಗಮಗಿಸುವ ವಿದ್ಯುತ್ ದೀಪಗಳು, ಬೆಳಕಿನಲ್ಲಿ ಇಡೀ ನಗರವೇ ಮಿಂದಿರುವುದು-ಎಲ್ಲವೂ ನಮ್ಮ ಕಣ್ಣ ಮುಂದೆ ಕುಣಿಯುತ್ತವೆ. ಅದೇ ನಿಜವಾದ ಅಭಿವೃದ್ಧಿ ಎನಿಸಿಬಿಡುತ್ತದೆ. ಆದ ಕಾರಣ, ಒಂದು ನಿರ್ಧಾರಕ್ಕೆ ಬಂದು ಬಿಡುತ್ತೇವೆ. 40ರ ಆಸುಪಾಸಿನಲ್ಲಿರುವವರು, ನಮ್ಮ ಮಕ್ಕಳು ಈ ಹಳ್ಳಿ ಕೊಂಪೆಯಲ್ಲಿರಬಾರದು ಎಂದುಕೊಳ್ಳುತ್ತಾರೆ. 30ರ ಆಸುಪಾಸಿನಲ್ಲಿರುವವರು ನಮ್ಮ ಬದುಕೇನಿದ್ದರೂ ಮಹಾನಗರಗಳಲ್ಲಿ, ಈ ಹಳ್ಳಿ ಬೇಡ ಎಂದುಕೊಳ್ಳುತ್ತಾರೆ.
ಕಳೆದ ಎರಡು ದಶಕಗಳಲ್ಲಿ ಕೇಳಿಬಂದ ಒಂದೇ ಅಭಿಪ್ರಾಯವೆಂದರೆ, ನಮ್ಮ ಮಕ್ಕಳು ಹಳ್ಳಿಗಳಲ್ಲಿ ಕೊಳೆಯಬಾರದೆಂಬುದು. ಹಳ್ಳಿಗಳ ಬಗೆಗಿನ ಇಂಥದೊಂದು ನಕಾರಾತ್ಮಕ ನಿಲುವು ನಿರ್ಮಾಣವಾಗಲು ವಿದ್ಯುತ್ ಕೊರತೆಯಿಂದ ಆರಂಭಿಸಿ ಮೂಲ ಸೌಕರ್ಯಗಳ ಕೊರತೆ ಎಲ್ಲವೂ ಕಾರಣವಾಗಿದೆ. ನಮ್ಮ ಆಡಳಿತಗಾರರು ತೋರಿರುವ ಹಳ್ಳಿ ಬಗೆಗಿನ ಕಾಳಜಿಯೂ ಕಾರಣ. ಅವೆಲ್ಲವೂ ನಮ್ಮ ಮುಂದಿನ ವಾಸ್ತವ ಸತ್ಯ. ಆದರೆ, ಇಂಥದೊಂದು ನಕಾರಾತ್ಮಕ ಭಾವನೆ ನಗರಗಳ ಅನಿರ್ದೇಶಿತ ಅಭಿವೃದ್ಧಿಗೆ ಕಾರಣವಾಯಿತು. ಕಾಂಕ್ರೀಟ್ ಕಟ್ಟಡಗಳ ಕಾಡಾಗಿ ನಗರಗಳು ಪರಿವರ್ತಿತವಾಗಲು ಮೂಲವಾಯಿತು. ಉತ್ಪಾದಿಸುವ ವಿದ್ಯುತ್/ಇಂಧನದ ಬಹುತೇಕ ಭಾಗ ನಗರಗಳ ವೈಭವೀಕರಣಕ್ಕೆ ಬಳಕೆಯಾಗಬೇಕಾದ ಅನಿವಾರ್ಯತೆಯನ್ನೂ ಸೃಷ್ಟಿಸಿತು. ಎಲ್ಲದರ ಪರಿಣಾಮ ಇವತ್ತು ಜಾಗತಿಕ ತಾಪಮಾನಕ್ಕೆ ನಮ್ಮ ಮಹಾನಗರಗಳು ಮಹತ್ವದ ಕೊಡುಗೆ ನೀಡುತ್ತಿವೆ ಎಂಬ ಅಭಿಪ್ರಾಯಕ್ಕೆ ಬರುವಂತಾಗಿದೆ.
ಗಂಟೆಗಟ್ಟಲೆ ಸಂಭ್ರಮದಿಂದ ಕೆಲಸ ಮಾಡಿ, ನಮ್ಮ ಬಣ್ಣದ ಕನಸುಗಳಿಗೆ ಬಣ್ಣ ತುಂಬುವ ಕಾರ್ಯಶಾಲೆಯ ಕಟ್ಟಡ, ನಮ್ಮ ವೈಭವೋಪೇತ ಮನೆ, ಶಾಲೆ ಎಲ್ಲವೂ ಇಂದು ಜಾಗತಿಕ ತಾಪಮಾನದ ದುಷ್ಪರಿಣಾಮಗಳ ತೀವ್ರತೆಯನ್ನು ಹೆಚ್ಚಿಸುತ್ತಿವೆ ಎಂಬುದು ವರ್ತಮಾನದ ಸತ್ಯ. ಇದನ್ನು ಒಪ್ಪಿಕೊಳ್ಳಲೇಬೇಕಾಗಿದೆ. ಅದಕ್ಕೇ ನಗರಗಳಲ್ಲಿ ಹೆಚ್ಚುತ್ತಿರುವ ವಲಸೆ ಕುರಿತು ಜಾಗತಿಕವಾಗಿ ಆತಂಕ ವ್ಯಕ್ತವಾಗುತ್ತಿರುವುದು.
ದಕ್ಷಿಣ ಆಫ್ರಿಕಾದಲ್ಲಿ ಹೊಸ ಉಪಕ್ರಮ
ಆಫ್ರಿಕಾ ಖಂಡದಲ್ಲಿನ ಕೆಲವು ಮಹಾನಗರಗಳು ದಿನೇ ದಿನೇ ಹೆಚ್ಚೆಚ್ಚು ಪರಿಸರ ಸ್ನೇಹಿಗಳಾಗುತ್ತಿವೆಯೇ ಎಂಬ ಪ್ರಶ್ನೆಯೊಂದು ಅಲ್ಲಿನ ಒಂದಿಷ್ಟು ಉಪಕ್ರಮಗಳನ್ನು ಗಮನಿಸಿದರೆ ಏಳುವುದು ಸಹಜ. ಯಾಕೆಂದರೆ ಹತ್ತು ಹಲವು ಹೊಸ ಉಪಕ್ರಮಗಳು ಜರುಗುತ್ತಿರುವುದು ಆಫ್ರಿಕಾ ಭಾಗದಲ್ಲೇ. ಬಹಳ ಪ್ರಮುಖವಾದ ಉದಾಹರಣೆಯಾಗಿ ಉಲ್ಲೇಖೀಸಬಹುದಾದರೆ, ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್, ಕೇಪ್‌ಟೌನ್, ಡರ್ಬಾನ್,ಶ್ವಾನೆಯಂಥ ಮಹಾನಗರಗಳು ತಮ್ಮ ರೂಪವನ್ನೇ ಭವಿಷ್ಯದ ಸವಾಲುಗಳ ಹಿನ್ನೆಲೆಯಲ್ಲಿ ಪುನರೂಪಿಸಿಕೊಳ್ಳಲು ತಯಾರಾಗಿವೆ. ಅದಕ್ಕಾಗಿ ಪರಿಸರ ಸ್ನೇಹಿ ಕ್ರಮಗಳತ್ತ ಮುಖ ಮಾಡಿವೆ.
ಈಗ ಅಲ್ಲಿ ನಡೆಯುತ್ತಿರುವ ಬದಲಾವಣೆ ಇಂಧನ ದಕ್ಷತೆಯನ್ನು ಸಾಧಿಸುವುದು. ಅದೇ ಈ ನಗರಗಳ ಮೂಲೋದ್ದೇಶ. ಇಂಧನ ದಕ್ಷತೆ ಮುಖೇನ ಕೇವಲ ವಿದ್ಯುತ್ ಉಳಿತಾಯವಾಗುವುದಿಲ್ಲ ; ಜತೆಗೆ ಹಸಿರು ಅನಿಲದ ಉಪದ್ರವವನ್ನು ಕಡಿಮೆ ಮಾಡಬಹುದು. ಇದರ ಮೂಲಕ ಜಾಗತಿಕ ತಾಪಮಾನದ ದುಷ್ಪರಿಣಾಮಗಳನ್ನೂ ತಡೆಯಲು ಸಾಧ್ಯ ಎಂಬುದು ಬರೀ ನಂಬಿಕೆಯಾಗಿಲ್ಲ, ಬದಲಾಗಿ ಅನುಷ್ಠಾನದ ನೆಲೆಯಲ್ಲಿ ಸಾಗುತ್ತಿದೆ. ಅದೇ ಕಾರಣಕ್ಕಾಗಿ ಈಗ ಗಮನಹರಿಸಿರುವುದು ಕಟ್ಟಡಗಳ ನಿರ್ಮಾಣದ ನೆಲೆಯಲ್ಲಿ. ದಕ್ಷಿಣ ಆಫ್ರಿಕಾದ ನಗರಗಳಲ್ಲಿ ಪರಿಸರ ಸ್ನೇಹಿ ಕ್ರಾಂತಿಯೊಂದು ಆರಂಭವಾಗಿದೆ. ಜಾಗತಿಕ ತಾಪಮಾನದ ವಿವಿಧ ಸಮಸ್ಯೆಗಳಿಗೆ ಮೊದಲು ಗುರಿಯಾಗುವುದೇ ನಗರಗಳು. ಅದರ ವಿವಿಧ ಪರಿಣಾಮಗಳು ಇಡೀ ವಾತಾವರಣದ ಮೇಲೆ ಆಗುವುದು ಸುಳ್ಳಲ್ಲ. ಆದರೆ, ನಗರಗಳು ಅದರಲ್ಲೂ ಮಹಾನಗರಗಳು ಜಾಗತಿಕ ತಾಪಮಾನದ ದುಷ್ಪರಿಣಾಮಗಳನ್ನು ತಡೆಯುವಲ್ಲಿ ಮಹತ್ತರ ಪಾತ್ರ ವಹಿಸಬಹುದಷ್ಟೇ ಅಲ್ಲ ; ವಹಿಸಲೇಬೇಕಾಗಿದೆ. ಈ ನಿಟ್ಟಿನಲ್ಲಿ ಆಫ್ರಿಕಾ ಖಂಡ ಒಂದಿಷ್ಟು ಮುಂದಿದೆ ಎನ್ನುವುದು ಸುಳ್ಳಲ್ಲ.
ಜಗತ್ತಿನಲ್ಲಿ ಇತರೆ ಅಭಿವೃದ್ಧಿಗೊಂಡ ರಾಷ್ಟ್ರಗಳು ಹತ್ತಾರು ಪರಿಸರಸ್ನೇಹಿ ಕ್ರಮಗಳನ್ನು ಕೈಗೊಂಡಿದೆ. ಅದೂ ಉಲ್ಲೇಖಾರ್ಹವೇ. ಆದರೆ, ಅಭಿವೃದ್ಧಿಶೀಲ ರಾಷ್ಟ್ರಗಳು ಈ ನೆಲೆಯಲ್ಲಿ ಕಾರ್ಯೋನ್ಮುಖವಾಗುವುದು ಬಹಳ ಪ್ರಶಂಸನೀಯವಾದುದು. ದೇಶದ ಅಭಿವೃದ್ಧಿಯ ಜತೆಜತೆಗೇ ಸುಸ್ಥಿರ ಅಭಿವೃದ್ಧಿಯ ಕನಸು ಕಾಣುವುದು ಹಾಗೂ ಅದನ್ನು ನನಸಾಗಿಸುವತ್ತ ಕಾರ್ಯಶೀಲವಾಗುವುದು ತುಸು ಕಷ್ಟದ ಕೆಲಸವೇ. ಇಲ್ಲಿ ಕೇವಲ ಉತ್ಸಾಹವಿದ್ದರೆ ಸಾಲದು, ಅದರೊಂದಿಗೆ ಸಾಕಷ್ಟು ಪ್ರಮಾಣದಲ್ಲಿ ಹಣವೂ ಇರಬೇಕು. ಈ ಕ್ಷಣದಲ್ಲಿ ಇದು ಅಪಾರವಾದ ವೆಚ್ಚವೆಂದು ತೋರಿದರೂ ಅರ್ಥದಲ್ಲಿ ಭವಿಷ್ಯದ ತಲೆಮಾರಿನ ಆರೋಗ್ಯಕ್ಕೆ ಹೂಡುವ ಹೂಡಿಕೆಯಿದು. ಅದೆಂದಿಗೂ ನಷ್ಟವಲ್ಲ. ದಕ್ಷಿಣ ಆಫ್ರಿಕಾದ ಮಹಾನಗರಗಳ ಸ್ಥಳೀಯಾಡಳಿತಗಳು ಈ ತುರ್ತಿನ ಅಗತ್ಯವನ್ನು ಅರ್ಥ ಮಾಡಿಕೊಂಡಿರುವುದೇ ಆರೋಗ್ಯಕರ ಬೆಳವಣಿಗೆ.
ಬದಲಾವಣೆ ಯಾವ ತೆರನಾದದ್ದು?
ದಕ್ಷಿಣ ಆಫ್ರಿಕಾದ ಮಹಾನಗರಗಳು ಕಟ್ಟಡ ನಿರ್ವಹಣೆಯಲ್ಲಿ ಬಳಸಲಾಗುವ ಇಂಧನದಿಂದಲೇ (ವಿದ್ಯುತ್ ಬಳಕೆ) ಶೇ. 25 ರಷ್ಟು ಹಸಿರು ಅನಿಲಕ್ಕೆ ಕೊಡುಗೆ ನೀಡುತ್ತಿವೆ. ಇದನ್ನು ಈಗಲೇ ನಿಯಂತ್ರಣಕ್ಕೆ ತಾರದಿದ್ದರೆ ಭವಿಷ್ಯದಲ್ಲಿ ಅಗಾಧ ಪ್ರಮಾಣದಲ್ಲಿ ಬೆಳೆಯುತ್ತಿರುವ ನಗರಗಳಲ್ಲಿ ನಿಯಂತ್ರಿಸಲು ಸಾಧ್ಯವೇ ಇಲ್ಲ. ಈ ವಿದ್ಯಮಾನ ಜಾಗತಿಕ ಮಟ್ಟದಲ್ಲಿ ಎಲ್ಲ ನಗರಗಳಲ್ಲೂ ನಡೆಯುತ್ತಿವೆ. ಒಂದು ಅಂದಾಜಿನ ಪ್ರಕಾರ ಇನ್ನು 2040ರ ಸುಮಾರಿಗೆ ಹಳ್ಳಿಗಳಲ್ಲಿಗಿಂತ ಹೆಚ್ಚು ಜನರು ನಗರಗಳಲ್ಲಿರುತ್ತಾರೆ. ಈ ಮಾತಿಗೆ ಮತ್ತೂಂದನ್ನು ಸೇರಿಸಬಹುದಾದರೆ ದಕ್ಷಿಣ ಆಫ್ರಿಕಾದ ಶೇ. 70ರಷ್ಟು ಮಂದಿ 2030ರ ವೇಳೆಗೆ ನಗರಗಳತ್ತ ವಲಸೆ ಹೋಗಲು ಮನಸ್ಸು ಮಾಡಿದ್ದಾರೆ. ಆಗ ಅವರಿಗೆ ವಸತಿ ಸೌಕರ್ಯದಿಂದ ಹಿಡಿದು ಎಲ್ಲ ಬಗೆಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಾಗುತ್ತದೆ. ಜನದಟ್ಟಣೆಯ ಒತ್ತಡ ಹಾಗೂ ಅದಕ್ಕೆ ಪೂರಕವಾಗಿ ವಿವಿಧ ಉದ್ದೇಶ (ವಸತಿ, ವ್ಯಾಪಾರ ಇತ್ಯಾದಿ)ಗಳಿಗೆ ನಿರ್ಮಿಸಲಾಗುವ ಕಾಂಕ್ರೀಟ್ ಕಟ್ಟಡಗಳ ಸಂಖ್ಯೆಯೇನೂ ಕಡಿಮೆ ಇರದು. ಇಷ್ಟೊಂದು ಪ್ರಮಾಣದ ಕಟ್ಟಡಗಳ ನಿರ್ವಹಣೆಗೆ ಬಳಕೆಯಾಗುವ ಇಂಧನವೂ ಲೆಕ್ಕಕ್ಕೆ ಸಿಗದು. ಇವೆಲ್ಲವೂ ಇಂಧನ ದಕ್ಷತೆಯನ್ನು ಸಾಧಿಸದಿದ್ದರೆ ಅವುಗಳ ನಿರ್ವಹಣೆಯೇ ದುಸ್ಸಾಹಸವೆನಿಸೀತು. ಈ ಹಿನ್ನೆಲೆಯಲ್ಲೇ ಹಸಿರು ಅನಿಲ ಉತ್ಪಾದನೆಯನ್ನು ಕಡಿಮೆ ಮಾಡುವುದೇ ಬಹಳ ವಿಶಿಷ್ಟವಾದ ಉಪಕ್ರಮ. ಅದಕ್ಕಾಗಿಯೇ ದಕ್ಷಿಣ ಆಫ್ರಿಕಾ ಕಟ್ಟಡಗಳತ್ತ ಗಮನಹರಿಸಿದೆ. ಪ್ಯಾರಿಸ್‌ನಲ್ಲಿ ಆಗಿರುವ ಜಾಗತಿಕ ತಾಪಮಾನ ಹಿನ್ನೆಲೆಯ ಒಪ್ಪಂದವೂ ಅಂಥದೊಂದು ಒತ್ತಡವನ್ನು ಹಾಕುತ್ತಿದೆ ಎನ್ನುವುದು ಸುಳ್ಳಲ್ಲ. ಈ ಟ್ರೆಂಡ್ ಕೇವಲ ದಕ್ಷಿಣ ಆಫ್ರಿಕಾದಲ್ಲಷ್ಟೇ ಅಲ್ಲ. ಇತರೆ ಹಲವು ಮಹಾ ನಗರಗಳಲ್ಲೂ ನಡೆಯುತ್ತಿವೆ. ಬಾಸ್ಟನ್, ಚಿಕಾಗೊ, ಕೋಪನ್ ಹೆಗನ್, ಲಾಸ್ ಏಂಜಲೀಸ್, ಮೆಕ್ಸಿಕೊದಂಥ ಕಡೆಯೂ ಉಪಕ್ರಮಗಳು ಚಾಲ್ತಿಯಲ್ಲಿವೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ತುಸು ಹೆಚ್ಚು.
ನಮ್ಮ ಮಹಾನಗರಗಳು ಹೇಗಿವೆ?
ನಾವೇ ನಮ್ಮ ಮಹಾನಗರಗಳನ್ನು ಒಮ್ಮೆ ನೋಡಿಕೊಳ್ಳೋಣ. ದಿನಕ್ಕೆ ಹತ್ತರಂತೆ ಬೃಹತ್ ಕಟ್ಟಡಗಳು ತಲೆ ಎತ್ತುತ್ತಿವೆ. ಇಂದು ನೋಡಿ ಬಂದ ಜಾಗದಲ್ಲಿ ಆರು ತಿಂಗಳಲ್ಲಿ ದೊಡ್ಡದೊಂದು ಕಟ್ಟಡ ವಿದ್ಯುತ್ ದೀಪಾಲಂಕಾರಗೊಂಡು ಕಂಗೊಳಿಸುತ್ತಿರುತ್ತದೆ. ಆ ಕ್ಷಣದಲ್ಲಿ ನಮಗೂ ಖುಷಿ ಎನಿಸುತ್ತದೆ. ಆದರೆ ಪರಿಣಾಮ ಆ ಸಂತಸವನ್ನು ಕೂಡಲೇ ಕೊಲ್ಲುತ್ತದೆ. ಇದನ್ನು ನಮ್ಮ ಮಹಾನಗರಗಳನ್ನು ನಿರ್ಮಿಸಲು ಹೊರಟಿರುವ ಆಡಳಿತಗಾರರು ಗಮನಿಸಬೇಕು. ಬರೀ ಗಮನಿಸಿದರೆ ಸಾಲದು, ಎಚ್ಚರವನ್ನೂ ವಹಿಸಬೇಕು. ಕೊಂಚ ಸಮಾಧಾನದ ಸಂಗತಿಯೆಂದರೆ, ಭಾರತವೂ ಜಾಗತಿಕ ತಾಪಮಾನ ತಗ್ಗಿಸುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ನೀತಿಯನ್ನು ಪ್ರಕಟಿಸಿದೆ. ಸುಮಾರು 20 ಪ್ರಮುಖ ಅಂಶಗಳನ್ನು ಸಿದ್ಧಪಡಿಸಿಕೊಂಡು ಅನುಷ್ಠಾನಕ್ಕೆ ಇಳಿದಿದೆ. ಅದು ಸದ್ಯದ ಸಮಾಧಾನ. ಆದರೆ, ಆಕ್ಟೋಪಸ್‌ನಂತೆ ವ್ಯಾಪಿಸಿ ಕೊಳ್ಳುತ್ತಿರುವ ಜಾಗತಿಕ ತಾಪಮಾನಕ್ಕೆ ಇಷ್ಟೇ ಸಾಕೇ ಎಂಬುದು ಬೇರೆ ತೆರನಾದ ಚರ್ಚೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.