ಬಂದೋಬಸ್ತ್ ನಡುವೆ ಬಹುಮತ ಸಾಬೀತು
Team Udayavani, May 19, 2018, 11:49 AM IST
ಬೆಂಗಳೂರು: ಬಹುಮತ ಸಾಬೀತು ಪಡಿಸಲು ಆಗಮಿಸುವ ಶಾಸಕರಿಗೆ ಸೂಕ್ತ ಭದ್ರತೆ ನೀಡುವಂತೆ ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ವಿಧಾನಸೌಧಕ್ಕೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಶಾಸಕರ ಭದ್ರತೆ ವಿಚಾರ ಕುರಿತು ಶುಕ್ರವಾರ ಕಾನೂನು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್, ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್ ರಾವ್, ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಹಾಗೂ ಇತರೆ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿದ್ದು, ಯಾವುದೇ ಸಂದರ್ಭದಲ್ಲಿಯೂ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
ಈ ಸಂಬಂಧ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಇಬ್ಬರು ಹೆಚ್ಚುವರಿ ಆಯುಕ್ತರು ಹಾಗೂ ಎಲ್ಲ ವಲಯ ಡಿಸಿಪಿಗಳ ಜತೆ ಸಭೆ ನಡೆಸಿದ್ದು, ಆಡಳಿತ ಮತ್ತು ವಿಪಕ್ಷ ಶಾಸಕರು ತಂಗಿರುವ ಸ್ಥಳಗಳ ಹಾಗೂ ಬೆಂಗಳೂರಿನಲ್ಲಿ ನೆಲೆಸಿರುವ ಅವರ ಕುಟುಂಬ ಸದಸ್ಯರ ಮನೆಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್ ಹಾಗೂ ಹೈದರಾಬಾದ್‌ನಿಂದ ಬೆಂಗಳೂರಿಗೆ ಆಗಮಿಸುವ ಎಲ್ಲ ಶಾಸಕರಿಗೆ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಭದ್ರತೆ ನಿಯೋಜಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಐವರು ಡಿಸಿಪಿ, 25 ಮಂದಿ ಎಸಿಪಿ, 50 ಮಂದಿ ಇನ್‌ಸ್ಪೆಕ್ಟರ್, 75 ಮಂದಿ ಪಿಎಸ್‌ಐಗಳು ಸೇರಿದಂತೆ ಒಟ್ಟು ಮೂರು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ವಿಧಾನಸೌಧದ ಒಳ ಮತ್ತು ಹೊರ ಭಾಗದಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ. ಇದರೊಂದಿಗೆ ಕೆಎಸ್‌ಆರ್‌ಪಿ ಹಾಗೂ ನಗರ ಸಶಸ್ತ್ರ ಮೀಸಲು ಪಡೆಗಳನ್ನು ಬಳಸಿಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್‌ಗೆ ಹೈದರಾಬಾದ್‌ನಿಂದ ಆಗಮಿಸುವ ವಿಪಕ್ಷಗಳ ಶಾಸಕರಿಗೆ ವಿಧಾನಸೌಧಕ್ಕೆ ಬರುವವರೆಗೆ ಸೂಕ್ತ ಭದ್ರತೆಯ ಹೊಣೆ ನೀಡಲಾಗಿದೆ. ಹೈದಾರಾಬಾದ್‌ನಿಂದ ಶಾಸಕರು ನಗರ ಪ್ರವೇಶಿಸುತ್ತಿದ್ದಂತೆ ಭಾರಿ ಭದ್ರತೆಯಲ್ಲಿ ವಿಧಾನಸೌಧಕ್ಕೆ ಕರೆತರಲಾಗುವುದು.
ಈ ಹಿನ್ನೆಲೆಯಲ್ಲಿ ಬಿ.ಕೆ.ಸಿಂಗ್, ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತಾ ಜತೆ ವಿಧಾನಸೌಧ ಪರಿಶೀಲಿಸಿದ್ದು, ಎಲ್ಲೆಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಸೂಚಿಸಿದ್ದಾರೆ. ಜತೆಗೆ ಶನಿವಾರ ವಿಧಾನಸೌಧಕ್ಕೆ ಮಾಧ್ಯಮ ಪ್ರತಿನಿಧಿಗಳು ಹಾಗೂ ಶಾಸಕರ ಆಪ್ತ ಸಹಾಯಕರನ್ನು ಹೊರತು ಪಡಿಸಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಕ್ಕೆ ಸೂಚಿಸಿದ್ದಾರೆ.
ಬೆಳಗ್ಗೆ 6 ಗಂಟೆಗೇ ನಿಷೇಧಾಜ್ಞೆ ಜಾರಿ: ಶನಿವಾರ ಸಂಜೆಯೊಳಗೆ ಬಿಜೆಪಿ ಪಕ್ಷಕ್ಕೆ ಬಹುಮತ ಸಾಬೀತು ಪಡಿಸಲು ಸುಪ್ರೀಂ ಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಮೇ 19ರಂದು ಬೆಳಗ್ಗೆ 6 ಗಂಟೆಯಿಂದ ತಡರಾತ್ರಿ 12 ಗಂಟೆವರೆಗೆ ವಿಧಾನಸೌಧ ಸುತ್ತಮುತ್ತ 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಆದೇಶಿಸಿದ್ದಾರೆ. ಆದೇಶದಂತೆ ಗುಂಪು ಗುಂಪಾಗಿ ನಿಲ್ಲುವುದು, ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವುದು, ಸ್ಫೋಟಕ ವಸ್ತುಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.