ಮಕ್ಕಳಲ್ಲಿ ರಕ್ತಹೀನತೆ ಮತ್ತು ಪೌಷ್ಟಿಕತೆ
Team Udayavani, May 20, 2018, 6:00 AM IST
ರಕ್ತಹೀನತೆಯು ಒಂದು ಜಾಗತಿಕ ಆರೋಗ್ಯ ಸಮಸ್ಯೆಯಾಗಿದ್ದು, ಅಭಿವೃದ್ಧಿಹೊಂದಿರುವ ಮತ್ತು ಅಭಿವೃದ್ಧಿಶೀಲ ದೇಶಗಳೆರಡನ್ನೂ ಬಾಧಿಸುತ್ತಿದೆ. ಕಬ್ಬಿಣಾಂಶ, ವಿಟಮಿನ್ ಬಿ12 ಅಥವಾ ಫೋಲಿಕ್ ಆ್ಯಸಿಡ್‌ನಂತಹ ಪೌಷ್ಟಿಕಾಂಶಗಳ ಕೊರತೆಯಿಂದಲೇ ರಕ್ತಹೀನತೆಯ ಪ್ರಕರಣಗಳ ಪೈಕಿ ಶೇ.50ರಷ್ಟು ಉಂಟಾಗುತ್ತವೆ ಎಂಬುದಾಗಿ ಅಂದಾಜಿಸಲಾಗಿದೆ. ರಕ್ತಹೀನತೆ (ಕಬ್ಬಿಣಾಂಶ ಕೊರತೆಯಿಂದ ಉಂಟಾಗುವ ರಕ್ತಹೀನತೆಯ ಸಹಿತ)ಯು ಹುಡುಗರಿಗಿಂತ ಹುಡುಗಿಯರಲ್ಲೇ ಕಾಣಿಸಿಕೊಳ್ಳುವುದು ಹೆಚ್ಚು.
ದೇಹದಲ್ಲಿ ನಡೆಯುವ ಅನೇಕ ಪ್ರಕ್ರಿಯೆಗಳಿಗೆ ಕಬ್ಬಿಣಾಂಶ ಬಹಳ ಅಗತ್ಯವಾಗಿ ಬೇಕು. ನಮ್ಮ ದೇಹದ ರಕ್ತದಲ್ಲಿ ಇರುವ ಆಮ್ಲಜನಕ ಸರಬರಾಜುಗಾರ ಪ್ರೊಟೀನ್ ಆಗಿರುವ ಹಿಮೊಗ್ಲೊಬಿನ್ ಉತ್ಪಾದನೆಯಾಗಲು ಕಬ್ಬಿಣಾಂಶ ಅತ್ಯಗತ್ಯ. ಸಾಕಷ್ಟು ಕಬ್ಬಿಣಾಂಶ ಇಲ್ಲದೆ ಇದ್ದರೆ ದೇಹಕ್ಕೆ ಅಗತ್ಯವಿದ್ದಷ್ಟು ಹಿಮೊಗ್ಲೊಬಿನ್ ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಆಗ ಕೆಂಪು ರಕ್ತಕಣಗಳು ಅಸಹಜವಾಗಿ ಕಿರಿದು ಗಾತ್ರಕ್ಕೆ ಇಳಿಯುವುದರಿಂದ ನಮ್ಮ ಅಂಗಾಂಗಗಳು ಮತ್ತು ಜೀವಕೋಶಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಸರಬರಾಜು ಮಾಡಲು ಸಾಧ್ಯವಾಗುವುದಿಲ್ಲ. ಇದು ರಕ್ತಹೀನತೆಯ ಲಕ್ಷಣಗಳಿಗೆ ಕಾರಣವಾಗುತ್ತದೆ. ಪುಟ್ಟ ಮಕ್ಕಳು, ಹದಿಹರಯದವರು ಮತ್ತು ಅಧಿಕ ಋತುಸ್ರಾವ ಹೊಂದಿರುವ ಮಹಿಳೆಯರು ಕಬ್ಬಿಣಾಂಶ ಕೊರತೆಯ ರಕ್ತಹೀನತೆಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು.
ಬಾಲಕಿಯರು ವಯಸ್ಸಿಗೆ ಬಂದು ಋತುಚಕ್ರ ಆರಂಭವಾಗುವ ಹಂತದಲ್ಲಿ ಅವರ ಕಬ್ಬಿಣಾಂಶ ಅಗತ್ಯ ಹೆಚ್ಚುತ್ತದೆ; ಯಾಕೆಂದರೆ, ಋತುಸ್ರಾವದಿಂದಾಗಿ ಕಬ್ಬಿಣಾಂಶ ನಷ್ಟವಾಗುವುದು ಹೆಚ್ಚು. ಇದು ಹದಿಹರಯದ ಬಾಲಕಿಯರಲ್ಲಿ ಕಡಿಮೆ ಕಬ್ಬಿಣಾಂಶ ಹೊಂದಿರುವ ಸ್ಥಿತಿಯನ್ನು ಉಂಟು ಮಾಡುತ್ತದೆ. ಆಹಾರ ಮತ್ತು ಪಾನೀಯಗಳಲ್ಲಿ ಇರುವ ಕಬ್ಬಿಣಾಂಶವು ಜೀರ್ಣಾಂಗ ವ್ಯೂಹದ ಮೂಲಕ ದೇಹಕ್ಕೆ ಹೀರಿಕೆಯಾಗುತ್ತದೆ. ಆ ಬಳಿಕ ಅದು ಅಸ್ಥಿಮಜ್ಜೆಗೆ ರವಾನೆಯಾಗಿ ಅಲ್ಲಿ ರಕ್ತಕಣಗಳು ಉತ್ಪಾದನೆಯಾಗುತ್ತವೆ. ಇಲ್ಲಿ ಕಬ್ಬಿಣಾಂಶವು ಪ್ರೊಟೀನ್ ಜತೆಗೆ ಸಂಯೋಜಿಸಲ್ಪಟ್ಟು ಹಿಮೊಗ್ಲೊಬಿನ್ ಉತ್ಪಾದನೆಯಾಗುತ್ತದೆ. ಬಳಕೆಯಾಗದ ಕಬ್ಬಿಣಾಂಶವು ಅಸ್ಥಿಮಜ್ಜೆ ಮತ್ತು ಪಿತ್ತಜನಕಾಂಗದಂತಹ ಅಂಗಗಳಲ್ಲಿ ಶೇಖರವಾಗುತ್ತದೆ. ದೇಹಕ್ಕೆ ಅಧಿಕ ಕಬ್ಬಿಣಾಂಶ ಅಗತ್ಯವಾದ ಸ್ಥಿತಿ ಉಂಟಾದಾಗ ವ್ಯಕ್ತಿಯು ಕಬ್ಬಿಣಾಂಶ ಕೊರತೆಯ ರಕ್ತಹೀನತೆಗೆ ತುತ್ತಾಗಬಹುದಾಗಿದೆ. ಉದಾಹರಣೆಗೆ ಇದು ಬೆಳವಣಿಗೆಯ ವೇಗವರ್ಧನೆಯ ಸಂದರ್ಭದಲ್ಲಿ (ಹದಿಹರಯದಲ್ಲಿ ಇದು ಸಾಮಾನ್ಯ), ನಮ್ಮ ದೇಹವು ಬೆಳೆಯುತ್ತಿರುವ ಎಲುಬುಗಳು, ಜೀವಕೋಶಗಳು ಮತ್ತು ಸ್ನಾಯುಗಳಿಗೆ ನೆರವಾಗುವಾಗ ಉಂಟಾಗಬಹುದು.
ಪೌಷ್ಟಿಕಾಂಶ ಕೊರತೆಯ ರಕ್ತಹೀನತೆಗೆ ಎದೆಹಾಲು ಬಿಡಿಸುವಲ್ಲಿ ವಿಳಂಬವಾಗಿರುವುದು, ರಕ್ತ ನಷ್ಟ, ಕಳಪೆ ಗುಣಮಟ್ಟದ ಆಹಾರ ಸೇವನೆ, ಅಧಿಕ ಪ್ರಮಾಣದಲ್ಲಿ ಹಸುವಿನ ಹಾಲು ಸೇವನೆ, ಆಹಾರ ದೇಹಕ್ಕೆ ಹೀರಿಕೆಯಾಗುವಲ್ಲಿ ಕೊರತೆ, ಕಬ್ಬಿಣಾಂಶದ ಅಗತ್ಯ ದೇಹಕ್ಕೆ ಅತಿ ಹೆಚ್ಚು ಇರುವ ಅವಧಿ (ದೇಹ ತೀವ್ರ ಬೆಳವಣಿಗೆ ಕಾಣುವ ಸಮಯ), ಋತುಚಕ್ರ ಸಮಯದಲ್ಲಿ ಅಧಿಕ ರಕ್ತಸ್ರಾವ, ಸೋಂಕುಗಳು ಮತ್ತು ಹೊಟ್ಟೆ ಹುಳಗಳ ಕಾಟ ಇತ್ಯಾದಿ ಆಗಿರಬಹುದಾಗಿದೆ. ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವ ಮತ್ತು ಸಸ್ಯಾಹಾರಿ ಯುವತಿಯರಲ್ಲಿ ರಕ್ತಹೀನತೆ ಸಾಮಾನ್ಯವಾಗಿರುತ್ತದೆ.
ಮಗು ಬೇಗನೆ ದಣಿವು ಹೊಂದುತ್ತಿದ್ದರೆ, ಪೇಲವವಾಗಿ ಕಾಣಿಸುತ್ತಿದ್ದರೆ, ಆಗಾಗ ಉಸಿರುಕಟ್ಟುವಿಕೆ ಅನುಭವಿಸುತ್ತಿದ್ದರೆ, ಹೃದಯ ತೀವ್ರವಾಗಿ ಬಡಿದುಕೊಳ್ಳುತ್ತಿದ್ದರೆ, ಮಣ್ಣು, ಐಸ್ ಅಥವಾ ಪೈಂಟ್ ತಿನ್ನಲು ಬಯಸುತ್ತಿದ್ದರೆ, ಉಗುರುಗಳು ಬಿರುಕು ಬಿಟ್ಟಿದ್ದರೆ ಅಥವಾ ಆಗಾಗ ಕಿರಿಕಿರಿ ಮಾಡುತ್ತಿದ್ದರೆ ವೈದ್ಯರ ಜತೆಗೆ ಸಮಾಲೋಚಿಸಿ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ರಕ್ತಹೀನತೆಗೆ ಚಿಕಿತ್ಸೆ ಒದಗಿಸದೆ ಹಾಗೆಯೇ ಬಿಟ್ಟರೆ ಅದು ಶ್ವಾಸಕೋಶ ಮತ್ತು ಹೃದಯ ಸಮಸ್ಯೆಗಳಿಗೆ ಕಾರಣವಾಗಬಲ್ಲದು. ರಕ್ತ ಪರೀಕ್ಷೆಯಲ್ಲಿ ಹಿಮೊಗ್ಲೊಬಿನ್ ಮಟ್ಟ ಕಡಿಮೆ ಇದ್ದು, ಕೆಂಪು ರಕ್ತ ಕಣಗಳು ಕಿರಿದು ಗಾತ್ರದ್ದಾಗಿ ಪೇಲವವಾಗಿ ಕಂಡು ಬಂದರೆ ಕಬ್ಬಿಣಾಂಶ ಕೊರತೆಯ ರಕ್ತ ಹೀನತೆ ಇರಬಹುದು. ರಕ್ತದಲ್ಲಿ ಫೆರೆಟಿನ್ ಅಂಶ ಕಡಿಮೆ ಇದ್ದರೂ ಇದನ್ನು ಖಚಿತಪಡಿಸಿಕೊಳ್ಳಬಹುದು.
ದೇಹಕ್ಕೆ ಕಬ್ಬಿಣಾಂಶವನ್ನು ಪೂರೈಸುವುದು ಮತ್ತು ಕಬ್ಬಿಣಾಂಶ ಕೊರತೆಗೆ ಕಾರಣವಾಗುವ ನಿರ್ದಿಷ್ಟ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಒದಗಿಸುವುದು ರಕ್ತ ಹೀನತೆಯ ಚಿಕಿತ್ಸೆಯಲ್ಲಿ ಒಳಗೊಂಡಿರುತ್ತದೆ. ಕಬ್ಬಿಣಾಂಶ ಕೊರತೆಯನ್ನು ಸರಿದೂಗಿಸಲು ಎಳೆಯ ಮಕ್ಕಳಿಗೆ ಕಬ್ಬಿಣಾಂಶವುಳ್ಳ ಸಿರಪ್ ನೀಡುವುದು, ಹದಿಹರಯದವರಿಗೆ ಕಬ್ಬಿಣಾಂಶದ ಮಾತ್ರೆಗಳನ್ನು ನೀಡುವುದು ಒಂದು ಉತ್ತಮ ವಿಧಾನ. ಕಬ್ಬಿಣಾಂಶ ಮಾತ್ರೆಗಳು ಅನಾರೋಗ್ಯದ ಅನುಭವ, ಎದೆಯುರಿ, ಮಲಬದ್ಧತೆ ಮತ್ತು ಭೇದಿಯಂತಹ ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು. ಊಟವಾದ ಬಳಿಕ ಮಾತ್ರೆಗಳನ್ನು ತೆಗೆದುಕೊಳ್ಳುವುದು ಮತ್ತು ಸಾಕಷ್ಟು ದ್ರವಾಹಾರ ಸೇವನೆಯಿಂದ ಈ ಅಡ್ಡ ಪರಿಣಾಮಗಳನ್ನು ನಿವಾರಿಸಿಕೊಳ್ಳಬಹುದು. ರೋಗಿಗೆ ಕಬ್ಬಿಣಾಂಶ ಮಾತ್ರೆಗಳನ್ನು ಸೇವಿಸುವುದು ಸಾಧ್ಯವಿಲ್ಲದಿದ್ದರೆ ಅಥವಾ ಮಾತ್ರೆಗಳು ಸರಿಯಾದ ಪರಿಣಾಮ ಬೀರದಿದ್ದಲ್ಲಿ ಡ್ರಿಪ್ ಮೂಲಕವೂ ರಕ್ತನಾಳಗಳಿಗೆ ಕಬ್ಬಿಣಾಂಶ ಸೇರಿಸಬಹುದು. ಕಬ್ಬಿಣಾಂಶ ಪೂರಣವೂ ತಲೆನೋವು, ಸಂದು ನೋವು ಮತ್ತು ಅಪರೂಪಕ್ಕೆ ಅಲರ್ಜಿಯಂತಹ ಅಡ್ಡಪರಿಣಾಮಗಳನ್ನು ಉಂಟು ಮಾಡಬಹುದಾಗಿದೆ. ರಕ್ತಹೀನತೆಯು ತೀವ್ರ ಸ್ವರೂಪದಲ್ಲಿದ್ದು, ಹೃದಯ ವೈಫಲ್ಯಕ್ಕೆ ಕಾರಣವಾಗುವಂತಿದ್ದರೆ ಮಗುವಿಗೆ ರಕ್ತ ಮರುಪೂರಣ ಚಿಕಿತ್ಸೆಯನ್ನೂ ನಡೆಸಬಹುದು.
ಶಿಶುಗಳಲ್ಲಿ ಸರಿಯಾದ ಸಮಯಕ್ಕೆ ಎದೆಹಾಲು ಬಿಡಿಸುವುದು, ಕಬ್ಬಿಣಾಂಶ ಸಮೃದ್ಧ ಆಹಾರವಸ್ತುಗಳು (ಕೆಂಪು ಮಾಂಸ, ಹಸಿರು ತರಕಾರಿಗಳು, ಒಣ ಹಣ್ಣುಗಳು, ಬೇಳೆಕಾಳುಗಳು, ಉಪಾಹಾರ ಸೀರಿಯಲ್‌ಗಳಂತಹ ಪೂರಕ ಆಹಾರಗಳು ಇತ್ಯಾದಿ) ಸಾಕಷ್ಟು ಪ್ರಮಾಣದಲ್ಲಿರುವ ಆರೋಗ್ಯಪೂರ್ಣವಾದ ಸಮತೋಲಿತ ಆಹಾರವನ್ನು ಸೇವಿಸುವ ಮೂಲಕ ಕಬ್ಬಿಣಾಂಶ ಕೊರತೆಯ ರಕ್ತಹೀನತೆ ಉಂಟಾಗುವ ಅಪಾಯವನ್ನು ದೂರ ಮಾಡಬಹುದು. ಬಹುತೇಕ ಮಕ್ಕಳಿಗೆ ಇದು ಅಗತ್ಯ ಪ್ರಮಾಣದ ಕಬ್ಬಿಣಾಂಶವನ್ನು ಒದಗಿಸುಬಹುದಾಗಿದ್ದು, ಮಾತ್ರೆ, ಸಿರಪ್‌ಗ್ಳಂತಹ ಇತರ ಪೂರಕಗಳನ್ನು ಸೇವಿಸುವ ಅಗತ್ಯ ಉಂಟಾಗದು.
– ಡಾ| ಹರ್ಷ ಪ್ರಸಾದ ಎಲ್.,
ಕನ್ಸಲ್ಟೆಂಟ್ ಪೀಡಿಯಾಟ್ರಿಕ್ ಹೆಮಟಾಲಜಿಸ್ಟ್ ಮತ್ತು ಓಂಕಾಲಜಿಸ್ಟ್ ಕೆಎಂಸಿ ಆಸ್ಪತ್ರೆ,
ಮಂಗಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.