ಸರ್ಕಾರ ಸರ್ಕಸ್‌; ಬುಧವಾರ ಕುಮಾರಸ್ವಾಮಿ ಮಾತ್ರ ಪ್ರಮಾಣ ವಚನ


Team Udayavani, May 21, 2018, 6:00 AM IST

hdk-o.jpg

ಬೆಂಗಳೂರು: ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸಂಪುಟ ರಚನೆ ಇಕ್ಕಟ್ಟಿನ ಸ್ಥಿತಿ ಸೃಷ್ಟಿಸಿದೆ. ಬುಧವಾರ ಮುಖ್ಯಮಂತ್ರಿಯಾಗಿ ಎಚ್‌.ಡಿ. ಕುಮಾರಸ್ವಾಮಿ ಮಾತ್ರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಪ್ರಮಾಣ ವಚನದ ಬಳಿಕ ಕುಮಾರಸ್ವಾಮಿ ಅವರ ಸರ್ಕಾರ ಬಹುಮತ ಸಾಬೀತುಪಡಿಸಬೇಕಾಗುತ್ತದೆ. ಒಂದೊಮ್ಮೆ ಸಚಿವ ಸ್ಥಾನ ವಂಚಿತರು ಈ ವೇಳೆ ಕೈಕೊಡಬಹುದು ಎಂಬ ಆತಂಕ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಾಳಯದಲ್ಲಿದೆ. ಹಾಗಾಗಿ, ವಿಶ್ವಾಸಮತ ಸಾಬೀತುಪಡಿಸಿದ ಬಳಿಕ ಸಚಿವ ಸಂಪುಟ ವಿಸ್ತರಿಸಲು ಭಾನುವಾರ ಎರಡೂ ಪಕ್ಷಗಳ ನಾಯಕರ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಮೂಲಗಳ ಪ್ರಕಾರ ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಕುಮಾರಸ್ವಾಮಿ ಅವರು ಗುರುವಾರ (ಮೇ 24) ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲಿದ್ದಾರೆ. ಅದಕ್ಕೆ ಮುನ್ನ ವಿಧಾನಸಭೆ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಶುಕ್ರವಾರ (ಮೇ 25) ಸಚಿವ ಸಂಪುಟ ವಿಸ್ತರಣೆ ನಡೆಯಲಿದ್ದು, ನೂತನ ಸಚಿವರು ಪ್ರಮಾಣವಚನ ಸ್ವೀಕರಿಸುತ್ತಾರೆ. ಆದರೆ, ಸಚಿವ ಸಂಪುಟದಲ್ಲಿ ಯಾರೆಲ್ಲ ಇರಬೇಕೆನ್ನುವುದು ಇನ್ನಷ್ಟೇ ಅಂತಿಮಗೊಳ್ಳಬೇಕಿದೆ.

ಆಪರೇಷನ್‌ ಕಮಲ ಭೀತಿ:
ಬುಧವಾರ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟ ಸದಸ್ಯರು ಏಕಕಾಲದಲ್ಲಿ ಪ್ರಮಾಣವಚನ ಸ್ವೀಕರಿಸಬೇಕು ಎಂಬ ಬಗ್ಗೆ ಆರಂಭದಲ್ಲಿ ಚರ್ಚೆಯಾಗಿತ್ತು. ಆದರೆ, ಎರಡೂ ಪಕ್ಷಗಳಲ್ಲಿ ಸಚಿವಾಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, 60ಕ್ಕೂ ಹೆಚ್ಚು ಶಾಸಕರು ಸಚಿವ ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದಾರೆ. ಜತೆಗೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ದಲಿತ, ಲಿಂಗಾಯಿತ, ಮುಸ್ಲಿಂ ಸಮುದಾಯಗಳು ಬೇಡಿಕೆ ಇಟ್ಟಿವೆ. ಒಂದೊಮ್ಮೆ ಸಚಿವ ಸ್ಥಾನ ಸಿಗದೇ ಇರುವವರು ವಿಶ್ವಾಸಮತ ಯಾಚನೆ ವೇಳೆ ಕೈಕೊಟ್ಟಲ್ಲಿ ಸರ್ಕಾರ ಸಂಕಷ್ಟಕ್ಕೆ  ಸಿಲುಕಲಿದೆ. 

ಅಲ್ಲದೆ, ಬಹುಮತಕ್ಕಾಗಿ ಒದ್ದಾಡುತ್ತಿರುವ ಬಿಜೆಪಿ ಆಪರೇಷನ್‌ ಕಮಲದ ಮೂಲಕ ಸಚಿವ ಸ್ಥಾನ ವಂಚಿತ ಶಾಸಕರಿಗೆ ಗಾಳ ಹಾಕುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಹೀಗಾಗಿ ವಿಶ್ವಾಸಮತ ಯಾಚನೆ ಬಳಿಕವೇ ಸಂಪುಟ ವಿಸ್ತರಣೆಗೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂದುವರಿದ ಸಭೆ:
ಹೊಸ ಸರ್ಕಾರದಲ್ಲಿ ಸಚಿವರ ನೇಮಕ ಕುರಿತಂತೆ ಭಾನುವಾರ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತಿತರರು ಸುದೀರ್ಘ‌ ಸಮಾಲೋಚನೆ ನಡೆಸಿದರು. ಇದಕ್ಕೂ ಮುನ್ನ ಎರಡೂ ಪಕ್ಷಗಳ ನಾಯಕರು ತಮ್ಮ ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು.

ಕಾಂಗ್ರೆಸ್‌ ಸಭೆಯಲ್ಲಿ ಎರಡು ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ಚರ್ಚೆಯಾಗಿದ್ದು, ಒಂದು ಸ್ಥಾನವನ್ನು ದಲಿತರಿಗೆ ಬಿಟ್ಟುಕೊಡುವ ಬಗ್ಗೆ ನಿರ್ಧರಿಸಲಾಯಿತು. ಇನ್ನೊಂದು ಉಪಮುಖ್ಯಮಂತ್ರಿ ಸ್ಥಾನವನ್ನು ಯಾವ ಸಮುದಾಯಕ್ಕೆ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಯಿತಾದರೂ ಯಾವುದೇ ತೀರ್ಮಾನ ಆಗಿಲ್ಲ.

ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ದಲಿತರು ಮತ್ತು ಅಲ್ಪಸಂಖ್ಯಾತರನ್ನು ಉಪ ಮುಖ್ಯಮಂತ್ರಿ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಆದರೆ, ಕಾಂಗ್ರೆಸ್‌ನಲ್ಲಿ ಲಿಂಗಾಯತ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಒತ್ತಡ ಹೆಚ್ಚುತ್ತಿದೆ. ಹೀಗಾಗಿ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರೊಂದಿಗೆ ಚರ್ಚಿಸಿದ ಬಳಿಕ ಈ ಕುರಿತು ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು. ಅದೇರೀತಿ ಗುರವಾರ ಬಹುಮತ ಸಾಬೀತಿಗೆ ಮುನ್ನ ಯಾರನ್ನು ಸ್ಪೀಕರ್‌ ಮಾಡಬೇಕು ಎಂಬ ಬಗ್ಗೆಯೂ ಸೋನಿಯಾ ಮತ್ತು ರಾಹುಲ್‌ ಅವರೊಂದಿಗೆ ಚರ್ಚಿಸಿ ಹೆಸರು ಅಂತಿಮಗೊಳಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪ್ರಮಾಣ ವಚನ ಸ್ಥಳ ಬದಲು
ಎಚ್‌.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಸ್ಥಳ ಬದಲಾಗಿದ್ದು, ಕಂಠೀರವ ಕ್ರೀಡಾಂಗಣದ ಬದಲು ವಿಧಾನಸೌಧದ ಎದುರೇ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ಕೆ ಸುಮಾರು ಒಂದೂವರೆಯಿಂದ ಎರಡು ಲಕ್ಷ ಜನರನ್ನು ಸೇರಿಸಲು ನಿರ್ಧರಿಸಲಾಗಿದೆ. ಆದರೆ, ಕಂಠೀರವ ಕ್ರೀಡಾಂಗಣದಲ್ಲಿ 30 ಸಾವಿರ ಮಂದಿಗೆ ಮಾತ್ರ ಸ್ಥಳಾವಕಾಶವಿದೆ. ಅಲ್ಲದೆ, ಅಲ್ಲಿ ವಾಹನ ನಿಲುಗಡೆಗೂ ಹೆಚ್ಚಿನ ಸ್ಥಳಾವಕಾಶವಿಲ್ಲ. ಮೇಲಾಗಿ ಅದು ಕೆಲಸದ ದಿನವಾಗಿದ್ದು, ಸಮೀಪ ಆಸ್ಪತ್ರೆಗಳೂ ಇರುವುದರಿಂದ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಕಂಠೀರವ ಕ್ರೀಡಾಂಗಣದ ಬದಲು ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಚರ್ಚಿಸಲಾಗಿತ್ತು. ಆದರೆ, ಅದು ವಿಧಾನಸೌಧಕ್ಕೆ ದೂರ ಇರುವುದರಿಂದ ಮತ್ತು ಅಂದು ಕುಮಾರಸ್ವಾಮಿ ಮಾತ್ರ ಪ್ರಮಾಣವಚನ ಸ್ವೀಕರಿಸುತ್ತಿರುವುದರಿಂದ ಅಂತಿಮವಾಗಿ ವಿಧಾನಸೌಧದ ಮುಂದೆಯೇ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ.

ಲಿಂಗಾಯತ ಲಾಬಿ ಶುರು
ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೇ ವೀರಶೈವ ಲಿಂಗಾಯತರಿಗೆ ಸಚಿವ ಸ್ಥಾನಮಾನ ನೀಡುವ ಬಗ್ಗೆ ಬೇಡಿಕೆ ಹೆಚ್ಚಾಗಿದೆ. ಶಾಮನೂರು ಶಿವಶಂಕರಪ್ಪ ಅವರನ್ನು ಉಪ ಮುಖ್ಯಮಂತ್ರಿ ಮಾಡಬೇಕು ಎಂದು ಅಖೀಲ ಭಾರತ ವೀರಶೈವ ಮಹಾಸಭಾ ಹಕ್ಕೊತ್ತಾಯ ಮಂಡಿಸಿದೆ. ಇನ್ನೊಂದೆಡೆ ಶಾಮನೂರು ಶಿವಶಂಕರಪ್ಪ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದರ ಜತೆಗೆ ಐವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮಹಾಸಭಾದ ಬೆಂಗಳೂರು ನಗರ ಘಟಕ ಒತ್ತಾಯಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಮತ್ತು ಮನವಿ ನೀಡಿರುವ ಮಹಾಸಭಾ, ಕಾಂಗ್ರೆಸ್‌ ಪಕ್ಷವು 48 ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯತರಿಗೆ ಟಿಕೆಟ್‌ ನೀಡಿದ್ದು, 16 ಮಂದಿ ಗೆದ್ದು ಬಂದಿದ್ದಾರೆ. ಅಲ್ಲದೆ, ಜೆಡಿಎಸ್‌ನಿಂದಲೂ ನಾಲ್ವರು ಗೆದ್ದಿದ್ದಾರೆ. ಜತೆಗೆ ಸಮುದಾಯದ ಎಲ್ಲಾ ಶಾಸಕರು ಒಗ್ಗಟ್ಟು ಪ್ರದರ್ಶಿಸಿ ಸಮ್ಮಿಶ್ರ ಸರ್ಕಾರದ ವಿಚಾರದಲ್ಲಿ ಅಚಲವಾಗಿ ನಿಂತಿದ್ದಾರೆ. ಹೀಗಾಗಿ ಈ ಸಮುದಾಯಕ್ಕೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದೆ.

ಇಂದು ಸೋನಿಯಾ, ರಾಹುಲ್‌ ಭೇಟಿ ಮಾಡಲಿರುವ ಎಚ್‌ಡಿಕೆ
ರಾಜ್ಯದಲ್ಲಿ ಸರ್ಕಾರ ರಚನೆಗೆ ಬೆಂಬಲ ನೀಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸಲು ಮತ್ತು ಮೈತ್ರಿಯನ್ನು ಇನ್ನಷ್ಟು ಬಲಗೊಳಿಸುವ ಬಗ್ಗೆ ಚರ್ಚಿಸಲು ನಿಯೋಜಿತ ಸಿಎಂ ಕುಮಾರಸ್ವಾಮಿ ಸೋಮವಾರ ದೆಹಲಿಗೆ ತೆರಳಿ ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಎಐಎಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಮೈತ್ರಿಕೂಟ ಮುಂದುವರಿಕೆ, ಸಚಿವ ಸಂಪುಟ ರಚನೆ, ಸಮನ್ವಯ ಸಮಿತಿ ರಚನೆ ಮುಂತಾದ ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ. ಅಲ್ಲದೆ, ಬುಧವಾರದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಲಿದ್ದಾರೆ.

ರಾಜಕೀಯ ಬೆಳವಣಿಗೆಗಳ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸಚಿವ ಸಂಪುಟ ರಚನೆ ಬಗ್ಗೆ ನಮ್ಮ ಪಕ್ಷದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಕಾಂಗ್ರೆಸ್‌ನಲ್ಲಿ ಪಕ್ಷದ ಹೈಕಮಾಂಡ್‌ ಈ ಕುರಿತು ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಈ ವಿಚಾರದ ಬಗ್ಗೆ ಸೋಮವಾರ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡುವ ಸಂದರ್ಭದಲ್ಲಿ ಚರ್ಚಿಸಲಾಗುವುದು. ಪ್ರಸ್ತುತ ಸಚಿವ ಸಂಪುಟ ರಚನೆ ಕುರಿತಂತೆ ರಾಜ್ಯದ ಕಾಂಗ್ರೆಸ್‌ ನಾಯಕರೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ. ದೆಹಲಿಯಿಂದ ವಾಪಸಾದ ಬಳಿಕ ಸಮಾಲೋಚನೆ ನಡೆಸಲಾಗುವುದು. ಪ್ರಸ್ತುತ ನಾಯಕರ ಮಟ್ಟದಲ್ಲಿ ಮೈತ್ರಿ ಕುರಿತಂತೆ ಕೆಲವು ವಿಚಾರಗಳ ಬಗ್ಗೆ ಮಾತ್ರ ನಾವು ಮಾತುಕತೆ ನಡೆಸಿದ್ದೇವೆ ಎಂದು ಹೇಳಿದರು.

ಬುಧವಾರ ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಮಾತ್ರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಗುರುವಾರ ಸ್ಪೀಕರ್‌ ನೇಮಕದ ಬಳಿಕ ಅವರು ವಿಶ್ವಾಸಮತ ಯಾಚಿಸುತ್ತಾರೆ. ಶುಕ್ರವಾರ ಸಚಿವರು ಪ್ರಮಾಣವಚನ ಸ್ವೀಕರಿಸುತ್ತಾರೆ.
– ಕೆ.ಸಿ.ವೇಣುಗೋಪಾಲ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ

ರಾಜ್ಯಪಾಲರು ಬಹುಮತ ಸಾಬೀತುಪಡಿಸಲು ತಮಗೆ 15 ದಿನಗಳ ಕಾಲಾವಕಾಶ ನೀಡಿದ್ದಾರೆ. ಆದರೆ, ಪ್ರಮಾಣವಚನ ಸ್ವೀಕರಿಸಿದ 24 ಗಂಟೆಗಳಲ್ಲೇ ಬಹುಮತ ಸಾಬೀತುಪಡಿಸುತ್ತೇನೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಗಟ್ಟಿಯಾಗಿದ್ದು, ಬೇಕಾದ ಸದಸ್ಯಬಲ ನಮ್ಮಲ್ಲಿದೆ.
– ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

school

KPS ಹೆಚ್ಚುವರಿ ಎಲ್‌ಕೆಜಿ, 1ನೇ ತರಗತಿ ತೆರೆಯಲು ಅವಕಾಶ

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.