1 ಲಕ್ಷ ಶೇರು ಹೂಡಿಕೆ 30 ವರ್ಷದಲ್ಲಿ 53 ಪಟ್ಟು ಬೆಳೆಯುತ್ತದೆ ಗೊತ್ತಾ
Team Udayavani, May 21, 2018, 12:02 PM IST
ಆಯ್ದ ಮುಂಚೂಣಿ ಶೇರುಗಳಲ್ಲಿ ಇಂದು ನಾವು ಹೂಡುವ ಒಂದು ಲಕ್ಷ ರೂ. ಹಣ ಮುಂದಿನ 30 ವರ್ಷಗಳಲ್ಲಿ 53 ಪಟ್ಟು ಬೆಳೆಯುತ್ತದೆ ಎಂಬ ಸತ್ಯವನ್ನು ನಾವು ಅರಿಯಬೇಕಾದರೆ ದೀರ್ಘ ಕಾಲ ಹೂಡಿಕೆಯ ತಪಸ್ಸನು ಕೈಗೊಳ್ಳಬೇಕು ಎಂಬುದರಲ್ಲಿ ಎರಡು ಮಾತಿಲ್ಲ.
ಹಣ ಹೂಡುವ ಆಕರ್ಷಕ ಮತ್ತು ಅತ್ಯಧಿಕ ಇಳುವರಿ ನೀಡುವ ಮಾಧ್ಯಮವಾಗಿ ಈಕ್ವಿಟಿ ಶೇರುಗಳು ಹೂಡಿಕೆ ವಿಶ್ಲೇಷಕರ ಪ್ರಕಾರ ಅಗ್ರ ಸ್ಥಾನದಲ್ಲಿರುವುದು ಹಲವರಿಗೆ ಅಚ್ಚರಿ ವಿಷಯವೇ ಸರಿ. ಏಕೆಂದರೆ ಜನ ಸಾಮಾನ್ಯರಲ್ಲಿ ಶೇರು ಹೂಡಿಕೆ ಎನ್ನುವುದು ಸಟ್ಟಾ ವ್ಯವಹಾರ ಎಂಬ ತಪ್ಪು ಅಭಿಪ್ರಾಯ ಹಲವರಲ್ಲಿದೆ. ಶೇರುಗಳಲ್ಲಿ ಹೂಡುವ ಹಣ ಕನ್ನಡಿಯೊಳಗಿನ ಗಂಟು ಎಂದು ಭಾವಿಸುವವರೂ ಅಧಿಕ. ಶೇರು ಹೂಡಿಕೆ ಎಂದರೆ ಬೆಂಕಿಯೊಡನೆ ಆಟ ಎಂದು ಭಾವಿಸುವವರೂ ಹಲವರು. ಶೇರಿಗೆ ಹಾಕಿದ ಹಣ ಮತ್ತೆ ನಮ್ಮ ಕೈವಶವಾಗುವುದಿಲ್ಲ ಎಂದು ತಿಳಿದಿರುವವರೇ ಹೆಚ್ಚು.
ಶೇರು ಮಾರುಕಟ್ಟೆಯಲ್ಲಿ ಸಟ್ಟಾ ವ್ಯವಹಾರವೇ ಪ್ರಧಾನವಾಗಿ ಕಾಣುವುದು ಇದಕ್ಕೆ ಕಾರಣ. ಇದನ್ನೇ ಡೇ ಟ್ರೇಡಿಂಗ್ ಎನ್ನುವುದು. ಡೇ ಟ್ರೇಡಿಂಗ್ ಎಂದರೆ ಆಯಾ ದಿನ ಖರೀದಿಸಿದ ಅಥವಾ ಮಾರಿದ ಶೇರಿನ ವಹಿವಾಟನ್ನು ಆಯಾ ದಿನವೇ ಚುಕ್ತಾ ಮಾಡುವುದು ಎಂದರ್ಥ.
ಈ ರೀತಿಯ ವ್ಯವಹಾರವನ್ನು ಸ್ಪೆಕ್ಯುಲೇಟೀವ್ ಟ್ರೇಡಿಂಗ್ ಎಂದೂ ಕರೆಯುತ್ತಾರೆ. ಇದನ್ನೇ ನಾವು ಸಟಾ ವ್ಯವಹಾರ ಎನ್ನಬಹುದು; ಒಂದರ್ಥದಲ್ಲಿ ಇದು ಬಾಜಿ ವ್ಯವಹಾರವೇ ಸರಿ. ನಿರ್ದಿಷ್ಟ ಕಂಪೆನಿಯ ಶೇರುಗಳ ಧಾರಣೆ ಇಂದು ನಿಶ್ಚಿತವಾಗಿ ಮೇಲೆ ಹೋಗುತ್ತದೆ; ಅಥವಾ ಕೆಳಗಿಳಿಯುತ್ತದೆ ಎಂಬ ಊಹನಾತ್ಮಕ ತರ್ಕದಲ್ಲಿ ಶೇರು ಖರೀದಿ ಅಥವಾ ಮಾರಾಟ ಮಾಡಿ ದಿನಾಂತ್ಯದೊಳಗೆ ಅದನ್ನು ಚುಕ್ತಾ ಮಾಡುವುದು ಲಾಭ/ನಷ್ಟವನ್ನು ಸ್ವೀಕರಿಸುವ, ತಾಳಿಕೊಳ್ಳುವ, ಎಂಟೆದೆ ಇರುವವರಿಗೆ ಮಾತ್ರ ಸೂಕ್ತ. ಅಂಥವರನ್ನು ಶೇರು ಭಾಷೆಯಲ್ಲಿ ರಿಸ್ಕ್ ಅಪಿಟೌಟ್ ಇರುವವರು (ಅಪಾಯದ ಹಸಿವು ಇರುವವರು) ಎಂದು ಕರೆಯುತ್ತಾರೆ.
ಆದುದರಿಂದ ಈ ರೀತಿಯಲ್ಲಿ ವಹಿವಾಟಿನಲ್ಲಿ ಆಸಕ್ತಿ ಇರುವವರು ಇವತ್ತಿನ ಲಾಭವನ್ನು ನಾಳೆ ಕಳೆದುಕೊಳ್ಳುತ್ತಾರೆ; ಇವತ್ತಿನ ನಷ್ಟವನ್ನು ನಾಳೆಗೆ ಕಟ್ಟಿಕೊಳ್ಳುತ್ತಾರೆ; ಈ ಹಾವು ಏಣಿಯಾಟ ಹೀಗೆಯೇ ಮುಂದುವರಿಯುತ್ತದೆ. ಹೀಗೆ ಈ ಸಟ್ಟಾ ವ್ಯವಹಾರದಲ್ಲಿ ಅಂದರೆ ಸ್ಪೆಕ್ಯುಲೇಟೀವ್ ಟ್ರೇಡಿಂಗ್ ಅಥವಾ ಡೇ ಟ್ರೇಡಿಂಗ್ ಮಾಡುವವರು ಅತ್ಯಧಿಕ ತೆರಿಗೆಯನ್ನು ಕೂಡ ಹೊರಬೇಕಾಗುತ್ತದೆ ! ಈ ಕಾರಣಕ್ಕಾಗಿ ಶೇರು ಹೂಡಿಕೆ ಕೈಸುಟ್ಟು ಕೊಳ್ಳುವ ವಹಿವಾಟು ಎಂಬ ಅಭಿಪ್ರಾಯ ಜನ ಸಾಮಾನ್ಯರಲ್ಲಿರುವುದು ಸಹಜವೇ ಆಗಿದೆ.
ಆದರೆ ಈ ಬಗೆಯ ಸಾರಾಸಗಟು ಅಭಿಪ್ರಾಯಗಳೆಲ್ಲವೂ ಮೇಲ್ನೋಟದ್ದು. ಈ ಸ್ಥಿತಿಯಲ್ಲಿ ನಾವು ಎಲ್ಲಕ್ಕಿಂತ ಮುಖ್ಯವಾಗಿ ಅರಿತುಕೊಳ್ಳಬೇಕಾದುದೆಂದರೆ : ಶೇರುಗಳಿರುವುದು ಆಡುವುದಕ್ಕಲ್ಲ; ಹೂಡಿಕೆ ಮಾಡಲು ಮತ್ತು ಹಾಗೆ ಮಾಡಿದರೆ ಮಾತ್ರವೇ ಶೇರು ಹೂಡಿಕೆಯಿಂದ ಅತ್ಯಧಿಕ ಲಾಭವಿದೆ ಎಂಬುದನ್ನು ಅನುಭವದಿಂದ ತಿಳಿಯಲು ಸಾಧ್ಯ. ಶೇರು ಹೂಡಿಕೆಯಿಂದ ನಿಜಕ್ಕೂ ಲಾಭ ಮಾಡಬೇಕೆಂದರೆ ಅದರಲ್ಲಿ ಹೂಡಿಕೆ ಮಾಡುವವರಿಗೆ ಅಪರಿಮಿತ ಸಹನೆ, ತಾಳ್ಮೆ ಇರುವುದು ಅಗತ್ಯ. ಅಂದರೆ ನಾವು ಇನ್‌ವೆಸ್ಟರ್ ಆಗಬೇಕೇ ಹೊರತು ಡೇ ಟ್ರೇಡರ್ ಅಲ ಎಂಬ ಸಂದೇಶ ಸ್ಪಷ್ಟವಿದೆ.
ಶೇರು ಮಾರುಕಟ್ಟೆಯಲ್ಲಿ ಗೂಳಿ ಪ್ರತಾಪ ಇರುತ್ತದೆ; ಕರಡಿ ಪ್ರತಾಪವೂ ಇರುತ್ತದೆ. ಆದುದರಿಂದ ಹೂಡಿಕೆದಾರರು ಕೆಲವು ಸಂದರ್ಭಗಳಲ್ಲಿ ಗೂಳಿಗಳಾಗಬೇಕಾಗುತ್ತದೆ; ಕೆಲವು ಸಂದರ್ಭಗಳಲ್ಲಿ ಕರಡಿಗಳಾಗಬೇಕಾಗುತ್ತದೆ. ಇವೆರಡೂ ಆಗದವರು ಶೇರುಗಳಲ್ಲಿ ಹಣ ಕಳೆದುಕೊಳ್ಳುತ್ತಾರೆ. ಇದನ್ನೇ ಇಂಗ್ಲಿಷಿನಲ್ಲಿ ಹೀಗೆ ಹೇಳುತ್ತಾರೆ: ಇನ್ ಶೇರ್ ಮಾರ್ಕೆಟ್ ಬುಲ್ಸ್ ಮೇಕ್ ಮನಿ, ಬೇರ್ ಆಲ್ಸೊ ಮೇಕ್ ಮನಿ; ಬಟ್ ಪಿಗ್ಸ್ ಲೂಸ್ ಮನಿ !
ಒಟ್ಟಿನಲ್ಲಿ ಶೇರು ಹೂಡಿಕೆದಾರರಾಗ ಬಯಸುವವರು ನಿಧಾನವೇ ಪ್ರಧಾನ ಎಂಬ ನೆಲೆಯಲ್ಲಿ ಯಾವುದೇ ಆತುರ, ಆತಂಕಗಳಿಗೆ ಗುರಿಯಾಗದೆ ಸಮಾಧಾನದಿಂದ ವರ್ತಿಸುವುದು ಬಹಳ ಮುಖ್ಯ ಎನ್ನದೇ ವಿಧಿಯಿಲ್ಲ.
ಶೇರುಗಳಲ್ಲಿ ಹಣ ಹೂಡಿ ಕಳೆದುಕೊಳ್ಳುವುದಕ್ಕಿಂತ ಬ್ಯಾಂಕುಗಳ ನಿರಖು ಠೇವಣಿಗಳಲ್ಲೇ (FD) ಹಣ ಇಡುವುದು ಅನುಕೂಲಕರ, ಭದ್ರ ಎಂಬ ಅಭಿಪ್ರಾಯ ಹಲವರಲ್ಲಿ ಇರುವುದು ಸಹಜವೇ. ಆದರೆ ಮಾರುಕಟ್ಟೆ ವಿಶ್ಲೇಷಕರು ಜನಸಾಮಾನ್ಯರ ಈ ನಂಬಿಕೆಯನ್ನು ಅಂಕಿ ಅಂಶಗಳೊಂದಿಗೆ ಬುಡಮೇಲು ಮಾಡುತ್ತಾರೆ. ಅವರು ಕೊಡುವ ಸಣ್ಣದೊಂದು ಉದಾಹರಣೆ ಹೀಗಿದೆ :
30 ವರ್ಷಗಳ ಹಿಂದೆ ನೀವು ಒಂದು ಲಕ್ಷ ರೂಪಾಯಿಯನ್ನು ಬ್ಯಾಂಕ್‌ನಲ್ಲಿ FD ಇರಿಸಿದ್ದೀರಿ ಎಂದಿಟ್ಟುಕೊಳ್ಳಿ. ಈ ಅವಧಿಯಲ್ಲಿ ನೀವು ಅಸಲಿನೊಂದಿಗೆ ಬಡ್ಡಿಯನ್ನು ಸೇರಿಸಿ ನವೀಕರಿಸುತ್ತಾ ಬಂದಿರುವಿರಿ. ಹಾಗೆ ಮಾಡಿದ ಫಲವಾಗಿ ನಿಮ್ಮ ಒಂದು ಲಕ್ಷ ರೂ. ಠೇವಣಿ 30 ವರ್ಷಗಳ ಅವಧಿಯಲ್ಲಿ 13 ಪಟ್ಟು ಬೆಳೆದಿರುತ್ತದೆ. ಆದರೆ ಅದೇ ಒಂದು ಲಕ್ಷ ರೂಪಾಯಿಯನ್ನು ನೀವು 30 ವರ್ಷಗಳ ಹಿಂದೆ ಮುಂಚೂಣಿ ಕಂಪೆನಿಯ ಶೇರಿನಲ್ಲಿ ತೊಡಗಿಸಿದ್ದೀರಿ ಎಂದಿಟ್ಟುಕೊಳ್ಳೋಣ. ವರ್ಷಂಪ್ರತಿ ಸಿಗುವ dividend, (ಲಾಭಾಂಶ), bonus shares ಮುಂತಾದವುಗಳನ್ನು ಆನಂದಿಸುತ್ತಾ 30 ವರ್ಷಗಳ ಕಾಲ ನೀವು ಆ ಶೇರನ್ನು ಮಾರದೇ ನಿಮ್ಮಲ್ಲೇ ಉಳಿಸಿಕೊಂಡಿದ್ದ ಪಕ್ಷದಲ್ಲಿ ಆ ಒಂದು ಲಕ್ಷ ರೂ. ಹೂಡಿಕೆಯು 53 ಪಟ್ಟು ಬೆಳೆದಿರುತ್ತದೆ !
ಮೇಲಿನ ಉದಾಹರಣೆಯನ್ನು ಕೇಳುವಾಗ ಕಿವಿಗೆ ಬಹಳ ಇಂಪೆನಿಸುತ್ತದೆ. ಆದರೆ ಶೇರು ಹೂಡಿಕೆ ಅಷ್ಟು ಸುಲಭವಲ್ಲ. ಬ್ಯಾಂಕಿನಲ್ಲಿ ನಿಮಗೆ ಬೇಕೆಂದಾಗ ಹೋಗಿ ಠೇವಣಿ ಇಟ್ಟ ಹಾಗಲ್ಲ. ಶೇರುಗಳಲ್ಲಿ ನಾವೇ ಖುದ್ದಾಗಿ ಹಣ ಹೂಡುವಾಗ ಅನೇಕ ವಿಷಯಗಳನ್ನು ಅಧ್ಯಯನ ಮಾಡಬೇಕಾಗುತ್ತದೆ.
ಯಾವ ಕಂಪೆನಿಯ ಶೇರನ್ನು ಖರೀದಿಸಬೇಕು? ಯಾವಾಗ ಖರೀದಿಸಬೇಕು ? ಎಷ್ಟು ಖರೀದಿಸಬೇಕು ? ಎಷ್ಟು ಕಾಲ ಅದನ್ನು ಇಟ್ಟು ಕೊಳ್ಳಬೇಕು ? ಖರೀದಿ ಮಾಡಿದ ಕಂಪೆನಿಯ ಹಣಕಾಸು ವಹಿವಾಟು ನಿರಂತರ ಬೆಳವಣಿಗೆಯ ಪಥದಲ್ಲಿ ಇದೆಯಾ ? ಕಂಪೆನಿಗೆ ಉತ್ತಮ ಭವಿಷ್ಯ ಇದೆಯಾ ? ಕಂಪೆನಿಯ ಆಡಳಿತೆ ಸುಲಲಿತವಾಗಿ ಇದೆಯಾ ? ಡಿವಿಡೆಂಡ್, ಬೋನಸ್, ಹಕ್ಕಿನ, ಆದ್ಯತೆಯ ಶೇರುಗಳನ್ನು ಕೊಟ್ಟ ಕಂಪೆನಿಯ ಇತಿಹಾಸ ಚೆನ್ನಾಗಿದೆಯಾ ?
ಹೀಗೆ ನಾವು ಶೇರು ಖರೀದಿಸುವ ಕಂಪೆನಿಯ ಜಾತಕವನ್ನು ನಾವು ಚೆನ್ನಾಗಿ ತಿಳಿದಿರುವುದು ಅಗತ್ಯವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.