ಆರ್.ಆರ್. ನಗರ ಚುನಾವಣೆಗೆ ಸಜ್ಜು
Team Udayavani, May 23, 2018, 12:08 PM IST
ಬೆಂಗಳೂರು: ಮತದಾರರ ಗುರುತಿನ ಚೀಟಿಗಳ ಅಕ್ರಮ ಸಂಗ್ರಹ ಪತ್ತೆ ಹಿನ್ನೆಲೆಯಲ್ಲಿ ಮೇ 28ಕ್ಕೆ ಮುಂದೂಡಲಾಗಿರುವ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆಗೆ ಸಕಲ ಸಿದ್ಧತೆಗಳು ನಡೆದಿದ್ದು, ಕ್ಷೇತ್ರದಲ್ಲಿನ ಅರ್ಧಕ್ಕರ್ಧ ಮತಗಟ್ಟೆಗಳನ್ನು ಸೂಕ್ಷ್ಮಮತ್ತು ಅತಿಸೂಕ್ಷ್ಮ ಎಂದು ಘೋಷಿಸಲಾಗಿದೆ.
ಸುಮಾರು 4.71 ಲಕ್ಷ ಮತದಾರರಿರುವ ಈ ಕ್ಷೇತ್ರದಲ್ಲಿ ಒಟ್ಟಾರೆ 421 ಮತಗಟ್ಟೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಆ ಪೈಕಿ 47 ಅತಿಸೂಕ್ಷ್ಮ ಹಾಗೂ 186 ಸೂಕ್ಷ್ಮ ಎಂದು ಗುರುತಿಸಲಾಗಿದೆ. 184 ಸಾಮಾನ್ಯ ಮತಗಟ್ಟೆಗಳಾಗಿದ್ದು, ನಾಲ್ಕು ಪಿಂಕ್ ಮತಗಟ್ಟೆಗಳೂ ಇವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ. ಮಹೇಶ್ವರರಾವ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಹಿಂದೆ ನಡೆದ ಗಲಾಟೆ, ಗೊಂದಲಗಳು, ಇವಿಎಂ ಯಂತ್ರಗಳು ಕೈಕೊಟ್ಟಿರುವುದು, ಎಫ್ಐಆರ್ ಪ್ರಕರಣಗಳು ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳನ್ನು ಘೋಷಿಸಲಾಗುತ್ತದೆ. ಅಂತಹ ಕಡೆಗಳಲ್ಲಿ ಸೂಕ್ಷ್ಮ ನಿರೀಕ್ಷಿಕರು, ವೆಬ್‌ಕಾಸ್ಟಿಂಗ್, ವೀಡಿಯೊ ಚಿತ್ರೀಕರಣ, ಹೆಚ್ಚುವರಿ ಸಿಬ್ಬಂದಿ ಸೇರಿದಂತೆ ತೀವ್ರ ನಿಗಾ ವಹಿಸಲಾಗುತ್ತದೆ.
ಉಲ್ಲಂಘನೆ ಆಗದಂತೆ ತೀವ್ರ ನಿಗಾ: ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು 9 ಎಂಸಿಸಿ ಮತ್ತು ಫ್ಲೈಯಿಂಗ್ ಸ್ಕ್ವಾಡ್ ತಂಡ, 14 ಎಸ್‌ಎಸ್‌ಟಿ ತಂಡ, 45 ಸೆಕ್ಟರ್ ಮ್ಯಾಜಿಸ್ಟ್ರೇಟ್ ಅಧಿಕಾರಿಗಳ ತಂಡ, 2 ವಿಎಸ್‌ಟಿ, 1 ವಿವಿಐಟಿ ತಂಡ ರಚಿಸಲಾಗಿದೆ. 100 ಜನ ಮತಗಟ್ಟೆ ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗಿದೆ ಎಂದು ವಿವರಿಸಿದರು.
ಆದಾಗ್ಯೂ ಆಮಿಷವೊಡ್ಡುತ್ತಿರುವುದು ಕೇಳಿಬರುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಹೇಶ್ವರರಾವ್, ಇದೇ ಕಾರಣಕ್ಕೆ ಮೊಬೈಲ್ ಸ್ಕ್ವಾಡ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಇಷ್ಟರ ನಡುವೆಯೂ ಆಮಿಷವೊಡ್ಡುತ್ತಿರುವ ಬಗ್ಗೆ ದೂರುಗಳು ಬಂದರೆ, ತಕ್ಷಣ ಪರಿಶೀಲಿಸಲಾಗುವುದು ಎಂದರು.
ಏಳು ಪ್ರಕರಣ ದಾಖಲು: ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಮಾತನಾಡಿ, ಮತದಾರರ ಗುರುತಿನ ಚೀಟಿಗಳ ಅಕ್ರಮ ಸಂಗ್ರಹ ಸೇರಿದಂತೆ ಏಳು ಪ್ರಕರಣಗಳು ದಾಖಲಾಗಿವೆ. ಉಳಿದ ಕ್ಷೇತ್ರಗಳಿಗೆ ನಡೆದ ಚುನಾವಣಾ ಫಲಿತಾಂಶದ ದಿನ ಕಲಾಸಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ 7,818 ಸೀರೆಗಳು, ರಾಗಿ, ಗೋಧಿ, ಸಕ್ಕರೆ, ತೊಗರಿಬೇಳೆ ಸೇರಿದಂತೆ ಆಹಾರಧಾನ್ಯಗಳ ಚೀಲಗಳನ್ನು ಗೋದಾಮುವೊಂದರಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಹೇಳಿಕೆ ವೀಡಿಯೊಗ್ರಾಫಿ?: ಪತ್ತೆಯಾದ ಗುರುತಿನ ಚೀಟಿಗಳನ್ನು ಆಯಾ ಮತದಾರರಿಗೆ ಹಿಂತಿರುಗಿಸಲಾಗುತ್ತಿದೆ. ನಾಪತ್ತೆಯಾಗಿದ್ದು ಹೇಗೆ ಎಂಬುದರ ಬಗ್ಗೆ ಯಾವುದೇ ಕಾರಣಕ್ಕೂ ಪೊಲೀಸರು ಹೇಳಿಕೆಯನ್ನು ದಾಖಲಿಸುವಂತಿಲ್ಲ. ಸ್ವತಃ ಮತದಾರರು ಅಥವಾ ಅವರ ಸಂಬಂಧಿಕರಿಂದ ಹೇಳಿಕೆ ಬರೆದು, ಕೆಳಗೆ ಸಹಿ ಮಾಡಬೇಕು. ಅಗತ್ಯಬಿದ್ದರೆ ಈ ದಾಖಲೆಯನ್ನು ವೀಡಿಯೊಗ್ರಾಫಿ ಕೂಡ ಮಾಡಲಾಗುವುದು ಎಂದು ಸುನೀಲ್ ಕುಮಾರ್ ಸ್ಪಷ್ಟಪಡಿಸಿದರು.
ಮತದಾರರ ಗುರುತಿನಚೀಟಿ ಅಕ್ರಮ ಸಂಗ್ರಹ ಪತ್ತೆಗೆ ಸಂಬಂಧಿಸಿದಂತೆ 8 ಜನರನ್ನು ದಸ್ತಗಿರಿ ಮಾಡಲಾಗಿದೆ. 16 ಜನ ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿದ್ದು, ಜಾಮೀನು ಪಡೆದುಕೊಂಡಿದ್ದಾರೆ.
-ಸುನೀಲ್ ಕುಮಾರ್, ಪೊಲೀಸ್ ಆಯುಕ್ತ, ಬೆಂಗಳೂರು ಮಹಾನಗರ
ಆರ್.ಆರ್. ನಗರದ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳು
* ಏ. 1- ನಾಯಂಡಹಳ್ಳಿ ಠಾಣಾ ವ್ಯಾಪ್ತಿಯಲ್ಲಿ 96 ಕುಕ್ಕರ್ ಬಾಕ್ಸ್‌ಗಳು ಮತ್ತು 350 ತವಾ ಬಾಕ್ಸ್‌ಗಳ ಜಪ್ತಿ.
* ಏ. 21- ಮಹಾಲಕ್ಷ್ಮೀಪುರ ಠಾಣಾ ವ್ಯಾಪ್ತಿಯಲ್ಲಿ ಎಪಿಕ್ ಕಾರ್ಡ್ ಜೆರಾಕ್ಸ್ ಮತ್ತು ಮತದಾರರ ಮೊಬೈಲ್ ಸಂಖ್ಯೆ ಅಕ್ರಮ ಸಂಗ್ರಹ ಹಾಗೂ ಚುನಾವಣೆ ನಂತರ ಆ ಮತದಾರರಿಗೆ ಹಣದ ಆಮಿಷ. ಈ ಸಂಬಂಧ ಎಸ್‌ಜೆಪಿ ಪಕ್ಷದ ವಿರುದ್ಧ ಪ್ರಕರಣ ದಾಖಲು.
* ಏ. 27- ಕಾಂಗ್ರೆಸ್ ಅಭ್ಯರ್ಥಿಗಳ ಫೋಟೋ ಇರುವ 128 ನೋಟ್‌ಬುಕ್‌ಗಳು ವಶಕ್ಕೆ.
* ಮೇ 7- 5 ಸಾವಿರಕ್ಕೂ ಅಧಿಕ ಟಿ-ಶರ್ಟ್‌ಗಳು ಸೇರಿದಂತೆ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಉಪಕರಣಗಳ ಅಕ್ರಮ ಸಾಗಣೆ ಮಾಡುತ್ತಿದ್ದ ಲಾರಿ ಜಪ್ತಿ.
* ಮೇ 9- ಜಾಲಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 6,342 ಮತದಾರರ ಚೀಟಿ ಮತ್ತು 9,564 ಮತದಾರರ ಗುರುತಿನ ಚೀಟಿಗಳು ಪತ್ತೆ.
* ಮೇ 14- ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 6 ಸಾವಿರ ಕರಪತ್ರಗಳು, 9 ಸಾವಿರ ಪೇಪರ್ ಬ್ಯಾಡ್ಜ್ಗಳು, 1,200 ಸ್ಟೀಲ್ ಬ್ಯಾಡ್ಜ್ಗಳು, 1,200 ಟೋಪಿಗಳು, 52 ಟಿ-ಶರ್ಟ್‌ಗಳು ವಶಕ್ಕೆ.
* ಮೇ 15- ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಗೋದಾಮುವೊಂದರಲ್ಲಿ ಸಂಗ್ರಹಿಸಿಟ್ಟಿದ್ದ 7,818 ಸೀರೆಗಳು ವಶಕ್ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.