ಅಂತಾರಾಷ್ಟ್ರೀಯ ಕ್ರಿಕೆಟಿಗೆ ಎಬಿಡಿ ಗಡಿಬಿಡಿ ವಿದಾಯ
Team Udayavani, May 24, 2018, 6:00 AM IST
ಪ್ರಿಟೋರಿಯ: ಜಾಗತಿಕ ಕ್ರಿಕೆಟಿನ ವಿಸ್ಫೋಟಕ ಬ್ಯಾಟ್ಸ್‌ಮನ್, ವಿಶ್ವದ ಕ್ರಿಕೆಟ್ ಪ್ರೇಮಿಗಳ ಕಣ್ಮಣಿ, ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ
ಎಬಿ ಡಿ ವಿಲಿಯರ್ ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟಿಗೆ ದಿಢೀರನೇ ನಿವೃತ್ತಿ ಘೋಷಿಸಿದ್ದಾರೆ. ವೀಡಿಯೋ ಸಂದೇಶದ ಮೂಲಕ ಅವರು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ವಿಪರೀತ ದಣಿದಿರುವುದು ಹಾಗೂ ಸಾಮರ್ಥ್ಯ ಮುಗಿದುದೇ ಇದಕ್ಕೆ ಕಾರಣ ಎಂದಿದ್ದಾರೆ.
“ತತ್‌ಕ್ಷಣಕ್ಕೆ ಅನ್ವಯವಾಗುವಂತೆ ನಾನು ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದಲೂ ನಿವೃತ್ತನಾಗುತ್ತಿದ್ದೇನೆ. 114 ಟೆಸ್ಟ್, 228 ಏಕದಿನ ಹಾಗೂ 78 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಬಳಿಕ ಬೇರೊಬ್ಬರಿಗೆ ಜಾಗ ಬಿಟ್ಟುಕೊಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದೇನೆ. ನಿಜ ಹೇಳಬೇಕೆಂದರೆ, ನಾನು ತುಂಬ ದಣಿದಿದ್ದೇನೆ, ಇಂಧನ ಖಾಲಿ ಯಾಗಿದೆ…’ ಎಂದು ಡಿ ವಿಲಿಯರ್ ಹೇಳಿದ್ದಾರೆ.
“ಇದೊಂದು ಅತ್ಯಂತ ಕಠಿನ ನಿರ್ಧಾರ. ನನ್ನನ್ನೇ ನಾನು ಕೇಳಿಕೊಂಡು ತೆಗೆದುಕೊಂಡ ನಿರ್ಧಾರ. ಇನ್ನೂ ಕ್ರಿಕೆಟ್ ಆಡುವುದರಲ್ಲಿ ಅರ್ಥವಿದೆಯೇ ಎಂದು ಅನಿಸಿತು. ಭಾರತ ಹಾಗೂ ಆಸ್ಟ್ರೇಲಿಯ ವಿರುದ್ಧ ಅಮೋಘ ಸರಣಿ ಗೆಲುವು ಪಡೆದ ಖುಷಿಯ ಬೆನ್ನಲ್ಲೇ ನಿವೃತ್ತಿಗೆ ಇದು ಸೂಕ್ತ ಸಮಯ ಎಂಬ ನಿರ್ಧಾರಕ್ಕೆ ಬಂದಿದ್ದೆ. ಈಗ ಅಧಿಕೃತ ಘೋಷಣೆ ಮಾಡುತ್ತಿದ್ದೇನೆ…’ ಎಂದು ಡಿ ವಿಲಿಯರ್ ತಿಳಿಸಿದರು.
“ದಕ್ಷಿಣ ಆಫ್ರಿಕಾ ಪರ ಇನ್ನೂ ಎಲ್ಲಿ, ಹೇಗೆ, ಯಾವ ಮಾದರಿಯಲ್ಲಿ ಆಡಬೇಕೆಂಬುದನ್ನು ನಾನೇ ಆಯ್ಕೆ ಮಾಡಿಕೊಳ್ಳುವುದು ಸರಿಯಲ್ಲ. ಆಟಗಾರನಾಗಿ ನಾನು ಪರಿಪೂರ್ಣ ಪ್ರದರ್ಶನ ನೀಡಬೇಕು, ಇಲ್ಲವೇ ಹೊರ ನಡೆಯಬೇಕು. ಈ ಸಂದರ್ಭದಲ್ಲಿ ನನಗೆ ಬೆಂಗಾವಲಾಗಿ ನಿಂತ ಕ್ರಿಕೆಟ್ ಸೌತ್ ಆಫ್ರಿಕಾದ ತರಬೇತುದಾರರಿಗೆ, ನನ್ನೊಡನೆ ಆಡಿದ ಎಲ್ಲ ಜತೆಗಾರರಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ’ ಎಂದು ಎಬಿಡಿ ಹೇಳಿದರು.
ಕೀಪರ್ ಆಗಿಯೂ ಜನಪ್ರಿಯತೆ
2004ರಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಪೋರ್ಟ್ ಎಲಿಜಬೆತ್‌ನಲ್ಲಿ ಟೆಸ್ಟ್ ಪಾದಾರ್ಪಣೆ. ನಾಯಕ ಗ್ರೇಮ್ ಸ್ಮಿತ್ ಜತೆ ಇನ್ನಿಂಗ್ಸ್ ಆರಂಭಿಸಿದ ಹೆಗ್ಗಳಿಕೆ (28 ಹಾಗೂ 14 ರನ್). ಮುಂದಿನ ವರ್ಷ ಇಂಗ್ಲೆಂಡ್ ವಿರುದ್ಧವೇ ಬ್ಲೋಮ್‌ಫೌಂಟೇನ್‌ನಲ್ಲಿ ಏಕದಿನಕ್ಕೆ ಪ್ರವೇಶ. ಇದೇ ವರ್ಷ ಈ ಎರಡೂ ಮಾದರಿಯ ಕ್ರಿಕೆಟ್‌ನಲ್ಲಿ ಕೊನೆಯ ಸಲ ಆಡಿದ ಎಬಿಡಿ, ಕಳೆದ ವರ್ಷ ಅಂತಿಮ ಟಿ20 ಕ್ರಿಕೆಟ್ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು. ಸ್ಫೋಟಕ ಬ್ಯಾಟಿಂಗ್ ಜತೆಗೆ ವಿಕೆಟ್ ಕೀಪರ್ ಆಗಿಯೂ ಜನಪ್ರಿಯತೆ ಗಳಿಸಿದ್ದರು.
ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ಕಾಡುತ್ತಿದ್ದ ಫಿಟ್‌ನೆಸ್ ಸಮಸ್ಯೆ ಎಬಿಡಿ ಅವರ ಕ್ರಿಕೆಟಿಗೆ ದೊಡ್ಡ ತೊಡಕಾಗಿ ಪರಿಣಮಿಸಿತ್ತು. ಸರಣಿಯಿಂದ ದೂರ ಉಳಿಯುವುದು, ಅಥವಾ ಸರಣಿಯ ಕೆಲವೇ ಪಂದ್ಯಗಳನ್ನಾಡಿ ವಿಶ್ರಾಂತಿ ತೆಗೆದುಕೊಳ್ಳುವುದು ಅವರಿಗೆ ಅನಿವಾರ್ಯವಾಗಿತ್ತು.
ಐಪಿಎಲ್‌ಗೂ ಎಬಿಡಿ ಗುಡ್‌ಬೈ ?
ಹೇಳಲಿದ್ದಾರೆಯೇ, ಅವರಿನ್ನು ಆರ್‌ಸಿಬಿ ಪರ ಆಡುವುದಿಲ್ಲವೇ… ಎಂಬಂಥ ಪ್ರಶ್ನೆಗಳು ಈ ಸಂದರ್ಭದಲ್ಲಿ ಮೂಡಿವೆ. ಕಾರಣ, ತಾನಿನ್ನು ವಿದೇಶಗಳಲ್ಲಿ ಆಡುವುದಿಲ್ಲ ಎಂಬ ಅವರ ಹೇಳಿಕೆ. “ವಿದೇಶದಲ್ಲಿ ಆಡುವ ಯಾವುದೇ ಯೋಜನೆ ನನ್ನ ಮುಂದಿಲ್ಲ. ಆದರೆ ದೇಶಿ ಕ್ರಿಕೆಟ್‌ನಲ್ಲಿ ಟೈಟಾನ್ಸ್ ಪರ ಆಡುವುದನ್ನು ಮುಂದುವರಿಸುತ್ತೇನೆ. ನಾನು ಫಾ ಡು ಪ್ಲೆಸಿಸ್ ಹಾಗೂ ದಕ್ಷಿಣ ಆಫ್ರಿಕಾದ ಬಹು ದೊಡ್ಡ ಬೆಂಬಲಿಗ’ ಎಂದು ಎಬಿಡಿ ಹೇಳಿದ್ದಾರೆ. ಹೀಗಾಗಿ ಆರ್‌ಸಿಬಿ ಅಭಿಮಾನಿಗಳು ಇನ್ನು ಎಬಿಡಿ ಆಟವನ್ನು ಕಣ್ತುಂಬಿಸಿಕೊಳ್ಳುವ ಸಾಧ್ಯತೆ ಇಲ್ಲವೆಂದೇ ಹೇಳಬೇಕು.
ಎಬಿಡಿ ಎಂಬ ಬಹುಮುಖ ಪ್ರತಿಭೆ
ಎಬಿಡಿ ವಿಲಿಯರ್ ಕ್ರಿಕೆಟಿಗ ಎನ್ನುವುದು ವಿಶ್ವಕ್ಕೇ ಗೊತ್ತಿರುವ ಸಂಗತಿ. ಆದರೆ ಎಬಿಡಿಯೊಳಗೆ ಒಬ್ಬ ಹಾಕಿ ಆಟಗಾರನಿದ್ದಾನೆ. ಸಂಗೀತಗಾರ, ಫುಟ್ಬಾಲಿಗ, ಈಜು ಪಟು… ಹೀಗೆ ಎಬಿಡಿ ಎಂದರೆ ಬಹುಮುಖ ಪ್ರತಿಭೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಎಬಿಡಿ ಹೋಗದ ದಾರಿಯೇ ಇಲ್ಲ.
ಹೌದು, ಎಬಿಡಿ ದಕ್ಷಿಣ ಆಫ್ರಿಕಾದ ಕಿರಿಯರ ಹಾಕಿ ತಂಡದ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಅಷ್ಟೇ ಅಲ್ಲ, ಕಿರಿಯರ ರಾಷ್ಟ್ರೀಯ ಫುಟ್‌ಬಾಲ್ ತಂಡಕ್ಕೂ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ದಕ್ಷಿಣ ಆಫ್ರಿಕಾ ಕಿರಿಯರ ರಗಿº ತಂಡದ ನಾಯಕನಾಗಿ, ಶಾಲಾ ಈಜುಕೂಟದಲ್ಲಿ 6 ಕೂಟ ದಾಖಲೆ ಹೊಂದಿದ್ದಾರೆ. ಅಷ್ಟೇ ಅಲ್ಲ ಆ್ಯತ್ಲೆಟಿಕ್ಸ್‌ನಲ್ಲೂ ಸೈ ಎನಿಸಿಕೊಂಡಿರುವ ಎಬಿಡಿ 100 ಮೀ. ಓಟದಲ್ಲಿ ವೇಗದ ಓಟಗಾರ ಎನಿಸಿಕೊಂಡಿದ್ದಾರೆ. ಉಳಿದಂತೆ ಕಿರಿಯರ ಡೇವಿಸ್ ಕಪ್ ಟೆನಿಸ್ ಕೂಟದಲ್ಲೂ ಎಬಿಡಿ ಆಡಿದ್ದಾರೆ. ಅಂಡರ್-19 ಬ್ಯಾಡ್ಮಿಂಟನ್ ರಾಷ್ಟ್ರೀಯ ತಂಡದ ಚಾಂಪಿಯನ್ ಆಟಗಾರ, ಗಾಲ್ಫ್ನಲ್ಲೂ ಪರಿಣತಿ ಹೊಂದಿದ್ದರು. ವಿಜ್ಞಾನ ಪ್ರೊಜೆಕ್ಟ್ ಒಂದಕ್ಕೆ ಇವರಿಗೆ ಪ್ರತಿಷ್ಠಿತ ನೆಲ್ಸನ್ ಮಂಡೇಲಾ ಪ್ರಶಸ್ತಿ ಒಲಿದಿತ್ತು. ಜತೆಗೆ ಸಂಗೀತದಲ್ಲೂ ಎಬಿಡಿ ವಿಶೇಷ ಆಸಕ್ತಿ ಹೊಂದಿದ್ದಾರೆ.
1 ದಿನ, 1 ಪಂದ್ಯ, 3 ವಿಶ್ವದಾಖಲೆ!
ವೇಗದ ಅರ್ಧ ಶತಕ: 2015ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ವಿಶ್ವಕಪ್ ಏಕದಿನ ಪಂದ್ಯದಲ್ಲಿ ಎಬಿಡಿ ವಿಲಿಯರ್ 16 ಎಸೆತದಲ್ಲಿ ಅರ್ಧ ಶತಕ ಸಿಡಿಸಿದ್ದರು. ಇದು ಇಂದಿಗೂ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯಾಗಿ ಉಳಿದಿದೆ.
ವೇಗದ ಶತಕ: ಇದೇ ಪಂದ್ಯದಲ್ಲಿ ಮುಂದುವರಿದು ಸಿಡಿದಿದ್ದ ಎಬಿಡಿ ಕೇವಲ 31 ಎಸೆತದಲ್ಲಿ ಶತಕ ಸಿಡಿಸಿದ್ದರು. 36 ಎಸೆತದಲ್ಲಿ ಕೋರಿ ಆ್ಯಂಡರ್ಸನ್ ಬಾರಿಸಿದ ಶತಕ ದಾಖಲೆಯನ್ನು ಅವರು ಅಳಿಸಿ ಹಾಕಿದ್ದರು. ಇದು ಕೂಡ ಇಂದಿಗೂ ಅಚ್ಚಳಿಯದೇ ಉಳಿದಿದೆ.
ವೇಗದ ನೂರೈವತ್ತು: ಎಬಿಡಿ ಮತ್ತೆ ಮುಂದುವರಿದು ಅಬ್ಬರಿಸಿ ಬ್ಯಾಟಿಂಗ್ ಮಾಡಿದ್ದರು. ನೋಡು ನೋಡುತ್ತಿದ್ದಂತೆ 64 ಎಸೆತದಲ್ಲಿ 150 ರನ್ ಗಡಿ ದಾಟಿ ಮತ್ತೂಂದು ವಿಶ್ವದಾಖಲೆ ನಿರ್ಮಾಣ ಮಾಡಿದ್ದರು. ಈ ಮೂರು ದಾಖಲೆಗಳು ಅಜೇಯವಾಗಿವೆ.
ಎಲ್ಲದಕ್ಕೂ ಒಂದು ಮುಕ್ತಾಯ ಎಂಬುದಿದೆ. ನಾನು ಬಹಳಷ್ಟು ದಣಿದಿದ್ದೇನೆ. ದೂರ ಸರಿಯಲು ಇದೇ ಸೂಕ್ತ ಸಮಯ. ದಕ್ಷಿಣ ಆಫ್ರಿಕಾ ಹಾಗೂ ವಿಶ್ವದಾದ್ಯಂತ ಇರುವ ಎಲ್ಲ ಅಭಿಮಾನಿಗಳಿಗೆ ನಾನು ಥ್ಯಾಂಕ್ಸ್ ಹೇಳಬಯಸುತ್ತೇನೆ. ಇವರೆಲ್ಲರ ಪ್ರೀತಿಗೆ ಕೃತಜ್ಞ…
ಎಬಿ ಡಿ ವಿಲಿಯರ್
14 ವರ್ಷಗಳ ಕ್ರಿಕೆಟ್ ಪಯಣ
ಅಬ್ರಹಾಂ ಬೆಂಜಮಿನ್ ಡಿ ವಿಲಿಯರ್ ಎಂಬ ಅಷ್ಟುದ್ದದ ಹೆಸರನ್ನು ಅಭಿಮಾನಿಗಳಿಂದ “ಎಬಿಡಿ’ ಎಂದು ಚುಟುಕಾಗಿ, ಅಷ್ಟೇ ಪ್ರೀತಿಯಿಂದ ಕರೆಯಲ್ಪಡುವ ಡಿ ವಿಲಿಯರ್ ಅವರದು 14 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ಬಾಳ್ವೆ.
ಟ್ವೀಟ್ಸ್
ನಿಮಗೆ ಕ್ರಿಕೆಟ್ ಅಂಗಳದಲ್ಲಿ ಲಭಿಸಿದ 360 ಡಿಗ್ರಿ ಯಶಸ್ಸು ಇನ್ನು ಮುಂದೆ ಕ್ರಿಕೆಟಿನ ಅಂಗಳದಾಚೆಯೂ ಲಭಿಸಲಿ. ನಿಮ್ಮ ಅನುಪಸ್ಥಿತಿ ಕಾಡಲಿದೆ. ನಿಮಗೆ ನನ್ನ ಶುಭ ಹಾರೈಕೆಗಳು.
-ಸಚಿನ್ ತೆಂಡುಲ್ಕರ್
ನಿಮ್ಮ ಕ್ರಿಕೆಟಿನ ಮೊದಲ ದಿನದಿಂದಲೂ ಬಲ್ಲೆ. ನೀವು ಸ್ಫೂರ್ತಿದಾಯಕ ವ್ಯಕ್ತಿಯಾಗಿ, ಆಟಗಾರನಾಗಿ ಬೆಳೆದ ರೀತಿಯೇ ಅದ್ಭುತ. ನಿಮ್ಮ ದೇಶ, ತಂಡ ಹಾಗೂ ಅಭಿಮಾನಿಗಳಿಗಾಗಿ ಕ್ರಿಕೆಟಿಗೂ ಮಿಗಿಲಾದುದನ್ನು ನೀಡಿದ್ದೀರಿ. ಎಲ್ಲರ ಪರವಾಗಿ ನಿಮಗೊಂದು ಥ್ಯಾಂಕ್ಸ್.
-ಮಾರ್ಕ್ ಬೌಷರ್
ಇದು ಕೇವಲ ಗಾಳಿಸುದ್ದಿಯಾಗಿರಲಿ…
-ಸ್ನೇಹಲ್ ಪ್ರಧಾನ್
ಇದೊಂದು ಆಘಾತಕಾರಿ ಸುದ್ದಿ. ಕೈ ಎಟುಕಿನಲ್ಲಿರುವ ವಿಶ್ವಕಪ್ ಬಳಿಕ ಅವರು ನಿವೃತ್ತರಾಗಬಹುದು ಎಂದೆಣಿಸಿದ್ದೆ. ಹಿಂದೊಮ್ಮೆ ಎಬಿಡಿ ಅವರನ್ನು ಲಾರಾ ಅವರ ನಿಜವಾದ ಹಾಗೂ ಸಹಜ ಉತ್ತರಾಧಿಕಾರಿ ಎಂದು ಬ್ಲಾಗ್‌ನಲ್ಲಿ ಬರೆದಿದ್ದೆ. “ನಾನು ಮನೋರಂಜನೆ ಒದಗಿಸುತ್ತಿದ್ದೇನೆಯೇ?’ ಎಂದು ಎಬಿಡಿ ಕೇಳಬಹುದು. ನನ್ನ ಉತ್ತರ ಒಂದೇ-ಯಸ್, ಯಸ್, ಯಸ್…
-ಹರ್ಷ ಭೋಗ್ಲೆ
ತನ್ನ ಕಾಲದ, ಕ್ರಿಕೆಟಿನ ಎಲ್ಲ ಮಾದರಿಗಳ ಸರ್ವಶ್ರೇಷ್ಠ ಆಟಗಾರ. 2019ರ ವಿಶ್ವಕಪ್ ಮುಂದಿರುವಾಗಲೇ ವಿದಾಯ ಹೇಳಿ ರುವುದು ದೊಡ್ಡ ಹೊಡೆತ.
-ಟಿಮ್ ಮೇ
“ರನ್ ಔಟ್ ಆಫ್ ಗ್ಯಾಸ್’ (ಇಂಧನ ಮುಗಿದುದರಿಂದ) ಎಂಬುದಾಗಿ ಎಬಿಡಿ ನಿವೃತ್ತಿಗೆ ಕಾರಣ ಹೇಳಿದ್ದಾರೆ. ಆದರೆ ಅಭಿಮಾನಿಗಳು ಅಯೋಮಯಗೊಂಡು ಏದುಸಿರು ಬಿಡುವಂತಾಗಿದೆ…
-ಕ್ರಿಕೆಟ್‌ವಾಲಾ
ಎಬಿಡಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಘೋಷಿಸಿದ್ದಾರೆ ಎಂದು ಹೇಳಬೇಡಿ. ಅವರು 360 ಡಿಗ್ರಿಯಲ್ಲಿ ವಾಪಸ್ ಬಂದಿದ್ದಾರೆ.
-ಟ್ರೆಂಡುಲ್ಕರ್
ಎಬಿಡಿಗಿಂತ ಉತ್ತಮ ದಾಖಲೆ ನಿರ್ಮಿಸಿದ ಕೆಲವೇ ಕ್ರಿಕೆಟಿಗರಿರಬಹುದು. ಆದರೆ ಎಬಿಡಿಗೆ ಎಬಿಡಿಯೇ ಸಾಟಿ. ಸೀಮ್, ಸ್ವಿಂಗ್, ಸ್ಪಿನ್‌ಗಳಿಗೆಲ್ಲ ಏಕಪ್ರಕಾರವಾಗಿ ಆಡುವ ಆಟಗಾರ. ದೈತ್ಯ ಕ್ರಿಕೆಟಿಗ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.