ರೆಸಾರ್ಟ್‌ನಿಂದ ಹೊರಬರದ ಶಾಸಕರು
Team Udayavani, May 25, 2018, 2:45 PM IST
ಮೈಸೂರು: ವಿಧಾನಸಭೆ ಚುನಾವಣೆ ಫಲಿತಾಂಶ ಬಂದು ಹತ್ತು ದಿನಗಳಾದರೂ ನೂತನ ಶಾಸಕರು ಇನ್ನೂ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ. ಹೀಗಾಗಿ ಚುನಾಯಿತ ಜನಪ್ರತಿನಿಧಿಗಳಿದ್ದೂ ಜನರ ಕಷ್ಟ ಕೇಳುವವರಿಲ್ಲದಂತಾಗಿದೆ. ಅತಂತ್ರ ವಿಧಾನಸಭೆ ರಚನೆಯಿಂದಾಗಿ ಮೇ 15ರಂದು ಫಲಿತಾಂಶ ಪ್ರಕಟವಾದ ಕೂಡಲೇ ಬೆಂಗಳೂರು ಸೇರಿಕೊಂಡ ನೂತನ ಶಾಸಕರು, ಬಹುಮತ ಸಾಬೀತುಪಡಿಸಿ ಮಂತ್ರಿಮಂಡಲ ರಚನೆಯಾಗುವವರೆಗೂ ಕ್ಷೇತ್ರಗಳಿಗೆ ಕಾಲಿಡುವ ಲಕ್ಷಣಗಳು ಕಾಣುತ್ತಿಲ್ಲ.
ರೆಸಾರ್ಟ್ ರಾಜಕಾರಣ: ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಮತ ಎಣಿಕೆ ಮುಗಿದು ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ನಾಯಕರ ಸೂಚನೆ ಮೇರೆಗೆ ಬೆಂಗಳೂರು ಸೇರಿಕೊಂಡ ಶಾಸಕರು, ರಾಜಧಾನಿಯಲ್ಲಿನ ರೆಸಾರ್ಟ್‌ಗಳನ್ನು ಬದಲಾಯಿಸುತ್ತಿದ್ದಾರೆಯೇ ಹೊರತು ಕ್ಷೇತ್ರಗಳಿಗೆ ತೆರಳಲು ಪಕ್ಷದ ನಾಯಕರು ಬಿಡುತ್ತಿಲ್ಲ. ಹೀಗಾಗಿ ನೂತನ ಶಾಸಕರಿಗೆ ಹತ್ತು ದಿನಗಳಿಂದ ರೆಸಾರ್ಟ್‌ನಲ್ಲಿರಿಸಲಾಗಿದೆ.
ಬಿಜೆಪಿ ಶಾಸಕರಿಂದ ಕೃತಜ್ಞತೆ: 104 ಸದಸ್ಯ ಬಲಹೊಂದಿರುವ ಬಿಜೆಪಿಯ ಯಡಿಯೂರಪ್ಪಮುಖ್ಯಮಂತ್ರಿಯಾಗಿ ಬಹುಮತಕ್ಕೆ ಅಗತ್ಯವಾದ ಶಾಸಕರನ್ನು ಹೊಂದಿಸಲಾಗದೆ ವಿಶ್ವಾಸ ಮತಯಾಚನೆ ಮಾಡದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಂತರ ಬಿಜೆಪಿ ಶಾಸಕರು ತಂತಮ್ಮ ಕ್ಷೇತ್ರಗಳತ್ತ ಮುಖ ಮಾಡಿ, ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ, ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರಿಗೆ ಈ ಭಾಗ್ಯ ದೊರೆತಿಲ್ಲ.
ಭೇಟಿಗೂ ಅವಕಾಶವಿಲ್ಲ: ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ರಾಜ್ಯಪಾಲರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟಕ್ಕೆ ಸರ್ಕಾರ ರಚಿಸಲು ಆಹ್ವಾನ ನೀಡಿ, ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ್ದು, ಇನ್ನೂ ಸದನದಲ್ಲಿ ವಿಶ್ವಾಸ ಮತ ಸಾಬೀತು ಪಡಿಸಬೇಕಿರುವುದರಿಂದ ಎರಡೂ ಪಕ್ಷಗಳ ನಾಯಕರು ತಂತಮ್ಮ ಪಕ್ಷಗಳ ಶಾಸಕರನ್ನು ರೆಸಾರ್ಟ್‌ಗಳಲ್ಲಿ ಹಿಡಿದಿಟ್ಟುಕೊಂಡಿದ್ದಾರೆ. ಆರಂಭದಲ್ಲಿ ಈ ಶಾಸಕರು ಯಾರನ್ನೂ ಭೇಟಿ ಮಾಡಲು ಅವಕಾಶ ಕೊಡುತ್ತಿರಲಿಲ್ಲ. ಈಗೀಗ ಕುಟುಂಬದವರಿಗೆ ಭೇಟಿ ಮಾಡಲು ಅವಕಾಶ ಕೊಡಲಾಗುತ್ತಿದೆ.
ಕಷ್ಟ ಕೇಳುವವರಿಲ್ಲ: ಈಗಾಗಲೇ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಉತ್ತಮವಾಗಿ ಆರಂಭವಾಗಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ. ರೈತರಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕವಾಗಿ ದೊರೆಯುತ್ತಿದೆಯೇ ಎಂದು ಕೇಳುವವರಿಲ್ಲ. ಜತೆಗೆ ಭಾರೀ ಮಳೆ-ಗಾಳಿಯಿಂದ ಕೆಲವೆಡೆ ಮರಬಿದ್ದು ಸಣ್ಣಪುಟ್ಟ ಅವಘಡಗಳು ಸಂಭವಿಸಿದ್ದರೂ ಜನರ ಕಷ್ಟ ಕೇಳಲು ಯಾರೂ ಇಲ್ಲದಂತಾಗಿದೆ. ನಾವು ಆರಿಸಿ ಕಳುಹಿಸಿದ ನಮ್ಮ ಪ್ರತಿನಿಧಿಗಳು ಯಾವತ್ತು ಬರುತ್ತಾರೆ ಎಂಬುದನ್ನು ಎದುರು ನೋಡುತ್ತಿದ್ದಾರೆ.
ಮಂತ್ರಿ ಪಟ್ಟಕ್ಕೆ ಮುಂದುವರಿದ ಪ್ರಯತ್ನ: ವಿಶ್ವಾಸ ಮತ ಯಾಚನೆ ಬಳಿಕವೂ ಮೈಸೂರು ಜಿಲ್ಲೆಯ ಬಹುತೇಕ ಶಾಸಕರು ತಕ್ಷಣಕ್ಕೆ ಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆ ಕಡಿಮೆ ಇದೆ. ಜೆಡಿಎಸ್‌ನ ಐವರು ಶಾಸಕರ ಪೈಕಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿರುವ ಜಿ.ಟಿ.ದೇವೇಗೌಡ, ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ರಾಜಕೀಯ ಮರುಜನ್ಮ ಪಡೆದಿರುವ ಎಚ್.ವಿಶ್ವನಾಥ್, ಕೆ.ಆರ್.ನಗರ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಸಾಧಿಸಿರುವ ಸಾ.ರಾ.ಮಹೇಶ್ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಇನ್ನು ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ತನ್ವೀರ್, ಅಲ್ಪಸಂಖ್ಯಾತರ ಕೋಟಾದಲ್ಲಿ ಮೈತ್ರಿ ಸರ್ಕಾರದಲ್ಲಿ ಮತ್ತೂಮ್ಮೆ ಮಂತ್ರಿ ಸ್ಥಾನಕ್ಕೆ ಪ್ರಯತ್ನ ಮಾಡುತ್ತಿದ್ದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸಲು ಅವರ ಪುತ್ರ ಡಾ.ಯತೀಂದ್ರ ಅವರಿಗೆ ಮಂತ್ರಿ ಸ್ಥಾನ ನೀಡುವಂತೆ ಒತ್ತಾಯ ಕೇಳಿ ಬಂದಿದೆ.
ಹೀಗಾಗಿ ಶುಕ್ರವಾರ ಕುಮಾರಸ್ವಾಮಿ ವಿಶ್ವಾಸ ಮತ ಸಾಬೀತುಪಡಿಸಿದ ಬಳಿಕವೂ ಮಂತ್ರಿ ಮಂಡಲ ರಚನೆಯಾಗುವವರೆಗೆ ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಗಳಾದ ಈ ಐವರು ಶಾಸಕರು ಕ್ಷೇತ್ರದತ್ತ ಮುಖ ಮಾಡುವ ಸಾಧ್ಯತೆ ಕಡಿಮೆ. ಇದೇ ಪ್ರಥಮ ಬಾರಿಗೆ ಗೆದ್ದಿರುವ ತಿ.ನರಸೀಪುರ ಕ್ಷೇತ್ರದ ಜೆಡಿಎಸ್ ಶಾಸಕ ಅಶ್ವಿನ್ ಕುಮಾರ್, ಪಿರಿಯಾಪಟ್ಟಣ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಮಹೇವ್, ಎಚ್.ಡಿ.ಕೋಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಶನಿವಾರ ಕ್ಷೇತ್ರಕ್ಕೆ ಬರಲಿದ್ದಾರೆ ಎಂದು ಸ್ಥಳೀಯ ಮುಖಂಡರು ಹೇಳುತ್ತಾರೆ.
* ಗಿರೀಶ್ ಹುಣಸೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.