ರಾಘವೇಂದ್ರ ಸ್ಟೋರ್ನ ತಾಜಾ ಬ್ರೇಕ್ ಫಾಸ್ಟ್
Team Udayavani, May 26, 2018, 2:25 PM IST
ಮಲ್ಲೇಶ್ವರ ಅಂದ್ರೆ ಅನೇಕರಿಗೆ ಏನೋ ಒಂದು ಕ್ರಷ್. ತಂಪನೆಯ ಮರಗಳು, ಮಿನಿ ತೀರ್ಥಯಾತ್ರೆಗೆ ಹುರುದುಂಬಿಸುವ ಹಳೇ ದೇಗುಲಗಳಷ್ಟೇ ಇಲ್ಲಿ ಪ್ರೀತಿ ಹುಟ್ಟಿಸಬಲ್ಲ ಸಂಗತಿಗಳಲ್ಲ. ಪುಟ್ಟ ಜಾಗದಲ್ಲಿ ದಿನವಿಡೀ ಕೈ- ಮನಸ್ಸುಗಳು ದಣಿಯದಂತೆ ತಾಜಾ ತಿನಿಸುಗಳನ್ನು ಬಡಿಸುತ್ತಾ, ಸಾವಿರಾರು ಜನರನ್ನು ನಿತ್ಯವೂ ಸೆಳೆದುಕೊಳ್ಳುವ ಟಿಫಿನ್ ಸೆಂಟರ್‌ಗಳೂ ಮಲ್ಲೇಶ್ವರದ ಬಹುದೊಡ್ಡ ವೈಶಿಷ್ಟ. ರಾಘವೇಂದ್ರ ಸ್ಟೋರ್ನ ತಾಜಾ ತಿನಿಸುಗಳಿಗೂ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಫ್ಯಾನ್ಸ್ ಇದ್ದಾರೆ.
ಮಲ್ಲೇಶ್ವರ ರೈಲ್ವೇ ನಿಲ್ದಾಣಕ್ಕೆ ಅಂಟಿಕೊಂಡಂತೆ ಇದೆ ಈ ಪುಟ್ಟ ಸ್ಟೋರ್. ನಿಲ್ದಾಣದೊಳಗೆ ಟಿಕೆಟ್ ಮಾಡಿಸಲು ನಿಂತ ಕ್ಯೂನಂತೆಯೇ ಇಲ್ಲೂ ದೊಡ್ಡ ಕ್ಯೂ ಕಾಣಬಹುದು. ಬಿಸಿಬಿಸಿ ಇಡ್ಲಿ, ಖಾರಾಖಾರ ಫ್ರೆಶ್ ಚಟ್ನಿ ಇನ್ನೂ ಬೇಕೆನ್ನುವ ಅವರ ಹಸಿವಿನಲ್ಲಿ ಆ ಸ್ಟೋರ್ ಬಗ್ಗೆ ಬಹುಕಾಲದ ಪ್ರೀತಿಯೂ ಅಡಗಿರುತ್ತದೆ. ಬೆಳಗ್ಗೆ ಹೊತ್ತಿನಲ್ಲಿ, ಮುಸ್ಸಂಜೆ ವೇಳೆ ಜನವೋ ಜನ. ಪುಟ್ಟ ಜಾಗದಲ್ಲಿ ನಿಂತು ಸರ್ವ್ ಮಾಡುವ ನಾಲ್ಕಾರು ಮಂದಿಗೆ ಇರುವುದು ಎರಡೇ ಕೈಗಳಾ ಎಂದು ಅನುಮಾನ ಹುಟ್ಟಿಸುವಷ್ಟು ಬ್ಯುಸಿ ಇರುವ ಸ್ಟೋರ್ ಇದು.
ಏನೇನು ಸ್ಪೆಷೆಲ್?: ಬಿಸಿ ಬಿಸಿ ಇಡ್ಲಿ- ವಡೆ, ಚಟ್ನಿ, ಖಾರಾಬಾತ್ ಇಲ್ಲಿನ ಹೈಲೈಟ್. ಇದಲ್ಲದೇ, ಕೇಸರಿಬಾತ್, ಖಾರಬಾತ್, ಖಾರ ಪೊಂಗಲ್, ಬಿಸಿಬೇಳೆ ಬಾತ್, ಶಾವಿಗೆ ಬಾತ್‌ಗಳ ರುಚಿಯನ್ನು ಇಲ್ಲೊಮ್ಮೆ ಸವಿಯಲೇಬೇಕು. ಕೇವಲ ಸುತ್ತಮುತ್ತಲಿನ ಜನರಲ್ಲ, ದೂರದ ಬಡವಾಣೆಗಳಿಂದಲೂ ಗ್ರಾಹಕರು ಬ್ರೇಕ್‌ಫಾಸ್ಟ್‌ಗಾಗಿ ಬರುವುದುಂಟು. ಸ್ಟೋರ್ ಬಹಳ ಪುಟ್ಟದಾದರೂ, ಅತ್ಯಂತ ಶುಚಿಯಾಗಿ, ಒಳ್ಳೆಯ ರುಚಿಯಲ್ಲಿ ತಿನಿಸುಗಳನ್ನು ಸಿದ್ಧಪಡಿಸುತ್ತಾರೆ.
ಎಲ್ಲಿಂದ ಆರಂಭವೋ?: ರಾಘವೇಂದ್ರ ಸ್ಟೋರ್ ಆರಂಭಗೊಂಡು ನಲ್ವತ್ತು ವರುಷಗಳೇ ಆದವು. ಮೂಲತಃ ಹೆಬ್ರಿಯವರಾದ ಕೆ. ರಾಮನಾಥ್ ಅವರು ಈ ಸ್ಟೋರ್ ಅನ್ನು ಆರಂಭಿಸಿದರು. ಈಗ ಇದನ್ನು ಜ್ಯೋತಿ ನಾರಾಯಣ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅಂದಿನಿಂದ ಇಂದಿನವರೆಗೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಗುಣಮಟ್ಟದ ಆಹಾರವನ್ನು ನೀಡಿದ ಕೀರ್ತಿ ಈ ಸ್ಟೋರ್ನದ್ದು.
ಯಾವಾಗ ತೆರೆದಿರುತ್ತೆ?
– ಬೆಳಗ್ಗೆ 6 ರಿಂದ ಮಧ್ಯಾಹ್ನ 1.
– ಸಂಜೆ 4ರಿಂದ ರಾತ್ರಿ 9.
– ಮಂಗಳವಾರ ರಜಾ ದಿನ
ಎಲ್ಲಿದೆ?: ಮಲ್ಲೇಶ್ವರ ರೈಲ್ವೆ ನಿಲ್ದಾಣದ ಮುಂಭಾಗ
ಸಂಪರ್ಕ: 080- 23348477
ನಮಗೆ ಗ್ರಾಹಕರ ಸಂತೃಪ್ತಿ ಮುಖ್ಯ. ಬಹಳಷ್ಟು ವರ್ಷಗಳಿಂದ ಇಲ್ಲಿಗೆ ಬರುವ ಗ್ರಾಹಕರು ನಮ್ಮಲ್ಲಿರುವ ಶುಚಿ ಮತ್ತು ರುಚಿಯ ಜೊತೆಗೆ ಗುಣಮಟ್ಟದಆಹಾರವನ್ನು ಇಷ್ಟಪಡುತ್ತಾರೆ. ಎಷ್ಟೋ ಜನರ ಪ್ರೀತಿ- ವಿಶ್ವಾಸಕ್ಕೆ ಪಾತ್ರರಾಗಿರುವುದಕ್ಕೆ ಹೆಮ್ಮೆಯೆನಿಸುತ್ತದೆ.
-ಜ್ಯೋತಿ ನಾರಾಯಣ, ರಾಘವೇಂದ್ರ ಸ್ಟೋರ್
* ಬಳಕೂರು ವಿ.ಎಸ್. ನಾಯಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.