ಬಯಲು ರೂಪವಾಗಿ ರೂಪ ಬಯಲಾಗಿ !


Team Udayavani, May 27, 2018, 7:00 AM IST

6.jpg

ಬಯಲು’ ಎನ್ನುವ ಪದ ವಚನಯುಗದಲ್ಲಿ ಕನ್ನಡ ಸಂವೇದನೆಯ ಭಾಗವಾಗಿಬಿಟ್ಟಿತು. “ಬಯಲು’ ಎಂದಾಗ ಬಿಡುಗಡೆಯ ಸ್ಥಿತಿ. “ಬಯಲು’ ಎಂದಾಗ ದೊಡ್ಡದೊಂದು ನಿರಾಳ; ದುಃಖನಿವೃತ್ತಿ; ಕೇವಲ ಜ್ಞಾನದ ಸ್ಥಿತಿ ಇತ್ಯಾದಿ ದಾರ್ಶನಿಕ ಅರ್ಥಗಳು. ಮನುಷ್ಯ ಜೀವ ಪಡೆಯಬಹುದಾದ ಆತ್ಯಂತಿಕ ಅವಸ್ಥೆ ಎಂಬ ಅರ್ಥ- ಇವೆಲ್ಲ ಇವೆ. ಇವೆಲ್ಲದರ ಜೊತೆಗೆ ಪ್ರಾಯಃ ವಚನಗಳಿಗೇ ವಿಶಿಷ್ಟವಾದ ಒಂದು ಅರ್ಥವಿದೆ. ಅದೆಂದರೆ “ಬಯಲು’ ಎಂದಾಗ ಸೃಷ್ಟಿಗೆ; ಸೃಜನಶಕ್ತಿಗೆ ಆಸ್ಪದವಿರುವ, ಆಸ್ಪದವೀಯುವ “ಎಡೆ’ ಎಂಬ ಅರ್ಥ; ಸೃಜನಶಕ್ತಿಯು ಅನಿರ್ಬಂಧಿತವಾಗಿ ಸುಳಿದಾಡುವ “ಎಡೆ’ ಎಂಬ ಅರ್ಥ. ಬಸವಣ್ಣ ತಮ್ಮೊಂದು ವಚನದಲ್ಲಿ “”ಬಯಲ ರೂಪ ಮಾಡಬಲ್ಲಾತನೇ ಶರಣ, ಆ ರೂಪ ಬಯಲ ಮಾಡಬಲ್ಲಾತನೇ ಲಿಂಗಾನುಭವಿ” ಎಂದಿದ್ದಾರೆ.

ಬಯಲ ರೂಪ ಮಾಡಬಲ್ಲಾತನೆಂದರೇನು? ಒಂದು ರೂಪದಿಂದ ಇನ್ನೊಂದು ರೂಪವು ಸಾಧಿತವಾಗುವುದು ನಾವು ಕಂಡ ನೋಟ. ಲೋಕರೂಢಿಯ ನೋಟ. ಮಾದರಿಯೊಂದು ಸಿದ್ಧವಾದ ಮೇಲೆ ಅದೇ ಅಚ್ಚಿನಲ್ಲಿ ಕೃತಿಗಳನ್ನು ಎರಕ ಹೊಯ್ಯುತ್ತ ಸೃಷ್ಟಿಸುವುದು- ನಮಗಿದು ಪರಿಚಿತವಾಗಿರುವಂಥದು. ಬಸವಣ್ಣ ಇದಕ್ಕಿಂತ ಬೇರೆಯಾದ ವಿಶೇಷವೊಂದನ್ನು ಹೇಳುತ್ತಿದ್ದಾರೆ. ರೂಪದಿಂದ ರೂಪವಲ್ಲ. ಅದು ವಿಶೇಷವಲ್ಲ. ಅದು ಸಾಮಾನ್ಯ. ಆದರೆ ಬಯಲಿನಿಂದ ರೂಪ ಮಾಡುವುದೆಂಬುವುದಿದು- ವಿಶೇಷ. ಮೌನದಿಂದ ಹುಟ್ಟಿಕೊಂಡ ಮಾತಿನಂತೆ. ಮಾತಿನಿಂದ ಮಾತು ಹುಟ್ಟಿಕೊಳ್ಳುವುದು ಸಾಮಾನ್ಯ. ಅದು ಮಾತಿಗೆ ಮಾತು ಎಂದಂತೆ. ಆದರೆ ಮೌನದಿಂದ ಹುಟ್ಟಿಕೊಂಡ ಮಾತು, ಆದುದರಿಂದಲೇ ಮೌನವನ್ನೇ ಉದ್ದೇಶಿಸಿ ಆಡಿದಂತಿರುವ ಮಾತು, ಇಂಥ ಮಾತುಗಳ ಭಾವಶಕ್ತಿ ಅಸಾಮಾನ್ಯವಾದ್ದು. ತನಗೆ ತನ್ನಂತೆಯೇ ಸ್ವಕೇಂದ್ರಿತವಾಗಿ ಪ್ರತಿಕ್ರಿಯಿಸುವುದರೊಡನಲ್ಲ, ಆದರೆ ತನ್ನನ್ನು ತನ್ನೊಳಗು ಮಾಡಿಕೊಳ್ಳುವುದರೊಡನೆ ನಡೆಸುವ ವ್ಯವಹಾರದ ರೀತಿಯೇ ಬೇರೆ! ಸಾಮಾನ್ಯ ಜ್ಞಾನಕ್ಕಿಂತ ಕಲೆಯ ಮನೋಧರ್ಮಕ್ಕೆ ಹೆಚ್ಚು ವೇದ್ಯವಾಗುವ ಸಂಗತಿ ಇದು. ಅಡಿಗರ ಭಾವತರಂಗಕ್ಕೆ ಬರೆದ ಮುನ್ನುಡಿಯಲ್ಲಿ ಬೇಂದ್ರೆಯವರು ಸಿದ್ಧ ಮಾದರಿಗಳು ಇಲ್ಲದೇ ಇದ್ದಾಗ, ಪ್ರತಿಭೆಯು ತಾನೇ ಒಂದು ಮಾದರಿಯನ್ನು ರೂಪಿಸಿಕೊಳ್ಳಬೇಕಾದ ಪರಿಸ್ಥಿತಿಯನ್ನು ನಾವೀನ್ಯದ ಅನುಕೂಲ- ಎಂದು ಕರೆದರಲ್ಲ, ಅಂಥ ನಾವೀನ್ಯದ ಮನೋಧರ್ಮವಿದು. ಬಯಲು ಎಂದಾಗ ನಿರಾಕಾರ. ನಿರಾಕಾರದಿಂದ ಆಕಾರವನ್ನು ಸಾಧಿಸುವ, ನಿರಾಕಾರಕ್ಕೆ ಆಕಾರವನ್ನು ಕೊಡುವ ಮನೋಧರ್ಮವಿದು. ಅಂದಮೇಲೆ ನಿರಾಕಾರವು ಆಕಾರಕ್ಕೆ ವಿರೋಧಿಯಲ್ಲ ಎಂದಾಯಿತು. ನಿರಾಕಾರದ ಪರಿಕಲ್ಪನೆಯೇ ಬದಲಾಯಿತು. ನಿರಾಕಾರವೆಂದರೆ ಯಾವ ಆಕಾರವನ್ನೂ ತಾಳಬಲ್ಲ, ಆದುದರಿಂದಲೇ ಎಲ್ಲ ಬಗೆಯ ಸೃಷ್ಟಿಕ್ರಿಯೆಗಳಿಗೂ ಒದಗಬಲ್ಲ “ತಾವು’ ಎಂದಾಯಿತು. ತಾನು ಬರಿದಾಗಿ ತನ್ನೊಳಗೆ ಎಲ್ಲವನ್ನೂ ಪೂರಯಿಸಿಕೊಳ್ಳಬಲ್ಲ ಬಯಲು ಎಂದಾಯಿತು. ಕನ್ನಡದ ಈ “ಬರಿ-ಬರಿದು’ ಎಂಬ ಪದವೊಂದು ಎಷ್ಟು ಸೊಗಸು! “ಬರಿ’ ಎನ್ನುವಾಗ ಅದು ಮಾತ್ರ ಎಂದರ್ಥ. ಬರೀ ಅವರೊಬ್ಬರೇ ಇದ್ದರು ಎಂಬ ವಾಕ್ಯ ನೋಡಿ. ಒಬ್ಬರೇ ಇರುವುದು ಬರಿದೂ ಹೌದು. ಎಲ್ಲ ತುಂಬಿಕೊಂಡಿರುವುದೂ ಹೌದು. ವಚನಕಾರರ “ಬಯಲು’ ಹೀಗಿದೆ.

ಎಲ್ಲ ಸೃಷ್ಟಿಶೀಲ ಮನಸ್ಸುಗಳನ್ನು ಈ “ಬಯಲು-ರೂಪ’ ಸಂಬಂಧ ಅಥವಾ ಕನಕದಾಸರ ಮಾತುಗಳ ಬಯಲು-ಆಲಯ ಸಂಬಂಧ ಕಾಡಿದೆ. ಕಾಡುತ್ತಿದೆ. ಮಧುರ ಚೆನ್ನರ ನನ್ನ ನಲ್ಲ ಎಂಬ ದೀರ್ಘ‌ ಕವಿತೆಯಲ್ಲಿ ನಿಃಶಬ್ದ ನಿಃಶಬ್ದ ಶಬ್ದದಾಚೆಯ ಶಬ್ದ, ನಿಃಶಬ್ದವಿದ್ದರೂ ಮೌನವಲ್ಲ. ನಿಃಸೀಮ ಸಿಃಸೀಮ ಸೀಮದಲೆ ನಿಃಸೀಮ, ನಿಃಸೀಮವೆಂದರೂ ಶೂನ್ಯವಲ್ಲ ಎಂಬ ಸಾಲುಗಳು ಪಲ್ಲವಿಯಂತೆ ಬರುತ್ತವೆ. ಮೌನದ ಕಡಲಿನಲ್ಲೇ ಮಾತಿನ ಮುತ್ತು ಹೆಕ್ಕುವ ಹಟ ಮಧುರ ಚೆನ್ನರದು.

ನಿಃಸೀಮವಾದ ಬಯಲು ಶೂನ್ಯವಲ್ಲ- ಅದು ರೂಪವನ್ನು ಸಾಧಿಸಬಲ್ಲ ತಾವು ಎಂದುತೋರಿಸುವ ಹಂಬಲ ಮಧುರ ಚೆನ್ನರದು. ಬೇಂದ್ರೆಯವರಲ್ಲಿ ಬಯಲು-ರೂಪಗಳ ಸಂಬಂಧ ತುಸು ಬೇರೆಯಾಗಿದೆ. ಬೇಂದ್ರೆಯವರ ಪ್ರಸಿದ್ಧವಾದ ನಾನು ಕವಿತೆಯನ್ನು ಗಮನಿಸಿ; ಈ ಸಾಲುಗಳು- ವಿಶ್ವಮಾತೆಯ ಗರ್ಭಕಮಲ ಜಾತ-ಪರಾಗ ಪರಮಾಣು ಕೀರ್ತಿ ನಾನು 
ಭೂಮಿತಾಯಿಯ ಮೈಯ ಹಿಡಿಮಣ್ಣ ಗುಡಿಗಟ್ಟಿ ನಿಂತಂಥ ಮೂರ್ತಿ ನಾನು
ಭರತ ಮಾತೆಯ ಕೋಟಿ ಕಾರ್ತಿಕೋತ್ಸವದಲ್ಲಿ
ಮಿನುಗುತಿಹ ಜ್ಯೋತಿ ನಾನು
ಕನ್ನಡದ ತಾಯಿ ತಾವರೆಯ ಪರಿಮಳವುಂಡು
ಬೀರುತಿಹ ಗಾಳಿ ನಾನು
ನನ್ನ ತಾಯಿಯ ಹಾಲು ನೆತ್ತರವ ಕುಡಿದಂಥ
ಜೀವಂತ ಮಮತೆ ನಾನು

ಇಲ್ಲಿ ವೃತ್ತವೊಂದರ ಕೇಂದ್ರವು ತನ್ನ ನೆಲೆಯಿಂದಲೇ ಎಲ್ಲವನ್ನೂ ನೋಡುತ್ತಿದೆ. ಬಯಲಿನಿಂದ ಆದ ರೂಪವೊಂದು ತನ್ನ ಸುತ್ತಲಿನ ಬಯಲನ್ನು ಗಮನಿಸುತ್ತಿದೆ. ಗಮನಿಸಿದರೆ ಇಲ್ಲಿ ಐದು ವೃತ್ತಗಳಿವೆ. ವರ್ತುಲಗಳಿವೆ. ಐದು ಬಯಲುಗಳು! ಹೆತ್ತತಾಯಿ, ಕನ್ನಡತಾಯಿ, ಭರತಮಾತೆ, ಭೂಮಿತಾಯಿ ಮತ್ತು ವಿಶ್ವಮಾತೆಯರು! ಎಲ್ಲವೂ ಒಂದೊಂದು ವರ್ತುಲ. ಎಲ್ಲವೂ ತನ್ನಲ್ಲೇ ಪರಿಪೂರ್ಣವಾಗಿರುವಂಥವು. ಎಲ್ಲ ವೃತ್ತಗಳೂ ಪೂರ್ಣವೃತ್ತಗಳೇ ಅಲ್ಲವೆ? ಆದರೆ ಒಂದರೊಳಗೊಂದು ಇರುವ ವೃತ್ತಗಳು. ಪೂರ್ಣಗೊಂಡ ವೃತ್ತದೊಳಗಿರುವ ಕೇಂದ್ರ ಪರಮಾಣುವಾದ “ನಾನು’ ಎಚ್ಚರಗೊಂಡು ಗಮನಿಸಿದಾಗ ಅದಕ್ಕೆ ತಾನು ವೃತ್ತದೊಳಗಿರುವ ಅನುಭವ. ಈ ಅನುಭವವನ್ನೇ ದಿಟ್ಟಿಸಿ ನೋಡಿದರೆ ತಾನಿರುವ ವೃತ್ತವೇ ಇನ್ನೊಂದು ವೃತ್ತದೊಳಗಿದೆ ಎನ್ನುವ ಅನುಭವ. ತಾನು ಬೆಳೆಯುತ್ತ ಹೋದಂತೆ ವೃತ್ತವೂ ಬೆಳೆಯುತ್ತ ಹೋಗುವ ಅನುಭವ.

ವೃತ್ತವೊಂದು ಬೆಳೆಯುತ್ತ ಹೋಗುವುದೆಂದರೇನು? ತನ್ನೊಳಗೆ ಇನ್ನೊಂದು ವೃತ್ತವು ರೂಪಿಸಲ್ಪಡುವುದಕ್ಕೆ ಅನುವು ಮಾಡಿಕೊಡುವುದು. ಅನುವು ಮಾಡಿಕೊಡುವಂತೆ ಬೆಳೆಯುವುದು! ತನ್ನೊಳಗಿನ ಪ್ರತಿಯೊಂದು ವೃತ್ತವೂ ಪೂರ್ಣವೇ. ಆ ಪೂರ್ಣತೆಯನ್ನು ಇನಿತೂ ಕೆಡಿಸದೆ ಆದರೆ ಅದನ್ನು ತನ್ನೊಳಗು ಮಾಡುತ್ತ ಆವರಿಸುತ್ತ-ಬೆಳೆಯುವುದು. ಬಯಲೊಳಗಿನ “ರೂಪ’ ಬಯಲಿನಿಂದ ಬೇರೆಯಲ್ಲ. ಮೌನದಿಂದ ಬಂದ ಮಾತು ಮೌನದಿಂದ ಬೇರೆಯಲ್ಲ. ನಿಃಸೀಮ ನಿಃಸೀಮ ಸೀಮದಲೆ ನಿಃಸೀಮ ನಿಃಸೀಮವೆಂದರೂ ಶೂನ್ಯವಲ್ಲ ಎಂಬ ಮಧುರ ಚೆನ್ನರ ಮಾತಿಗೆ ವ್ಯಾಖ್ಯಾನದಂತಿದೆ ಬೇಂದ್ರೆಯವರ ಕವಿತೆ. ಪೂರ್ಣತೆಯ ಅನುಭವದಲ್ಲಿಯೂ ತಾನು ಇನ್ನೊಂದರ ಮಡಿಲಲ್ಲಿ ಇರುವ ಅನುಭವ ಅಥವಾ ಇನ್ನೊಂದರ ಮಡಿಲಲ್ಲಿ ಇರುವ ಅನುಭವದಲ್ಲಿಯೂ ಅದು ತನ್ನ ಪೂರ್ಣತೆಯ ಅನುಭವಕ್ಕೆ ವಿರೋಧಿಯಲ್ಲ ಎಂಬ ವಿಸ್ಮಯ.

ಗೋಪಾಲಕೃಷ್ಣ ಅಡಿಗರ ಕವಿತೆಯೊಂದನ್ನು ಈ ಹಿನ್ನೆಲೆಯಲ್ಲಿ ನೋಡಬಹುದೆನಿಸುತ್ತದೆ. ಮಧುರ ಚೆನ್ನರಂತೆ, ಬೇಂದ್ರೆಯವರಂತೆ ಅಡಿಗರದೂ ಅನುಭಾವದತ್ತ ಒಲವಿರುವ ಕವಿಯಲ್ಲ. ಆದರೆ, ಕವಿ ರೂಪನಿಷ್ಠನಾಗಿರುವುದು ಅನಿವಾರ್ಯ ಮತ್ತು ರೂಪನಿಷ್ಠ ಕವಿಗೆ “ಬಯಲಿನೊಡನೆ ವ್ಯವಹಾರ’ ಎಂದೂ ತಪ್ಪಿದ್ದಲ್ಲ. ಒಂದು ರೀತಿಯಲ್ಲಿ ಬಸವಣ್ಣನವರ ವಚನವನ್ನು ತುಸು ಬದಲಿಸಿ ಬಯಲ ರೂಪಮಾಡಬಲ್ಲಾತನೇ ಕವಿ ಎಂದರೂ ಆ ಮಾತು ಸರಿಯಾಗಿಯೇ ಇದೆ. ಅಡಿಗರ ಕವಿತೆ ನೀ ಬಳಿಯೊಳಿರುವಾಗ್ಗೆ ಹೀಗೆ ಮೊದಲಾಗುತ್ತದೆ :

ನೀ ಬಳಿಯೊಳಿರುವಾಗ್ಗೆ ಹೃದಯಕಮಲದ ಹಾಗೆ,
ಪುಪ್ಪುಸದ ಹಾಗೆ, ನರನಾಡಿಯಲ್ಲಿ ನಿಃಶಬ್ದ ಹರಿಯುವ ರಕ್ತ
ಪರಿಸರಣದ ಪ್ರಜ್ಞ ಬಗೆ. ಹೊತ್ತು ಹೊತ್ತಿಗೆ ಕಾಫಿ
ತಿಂಡಿ ಊಟದ ನಡುವೆ ಹೊತ್ತಿಕೊಳ್ಳುವ ಧಗೆಗೆ
ಆಳುದ್ದ ತೆರೆಯೆದ್ದು ಅಲ್ಲೋಲ ಕಲ್ಲೋಲ;
ರಕ್ತದೊತ್ತಡ ಹೆಚ್ಚಿ ಎದೆಬಡಿತ ಚಡಪಡಿಸಿ
ಜ್ವರವೇರಿ ಹೆಂಚೆಲ್ಲ ಕಾದು ಕೆಂಪಾದಾಗೆ
ಅರಳು ಹುರಿಯುವ ಮಾತಿಗಷ್ಟೇ ನಿನ್ನರಿವು, ನೀನೇ ಗುರಿ

“ನೀನು’- ಅದು ಯಾರೇ ಆಗಿರಬಹುದು, ಯಾವುದೂ ಆಗಿರಬಹುದು, “ನೀನು’ ಎನ್ನುವುದಕ್ಕಿಂತ ಬೇರೆ ಪದ ಬೇಕಿಲ್ಲ. ನೀನು ಬಳಿಯಲ್ಲಿಯೇ ಇರುವೆ; ನನ್ನೊಳಗೇ ಇರುವೆ, ಎನ್ನುವುದು ನನಗೆ ಖಾತ್ರಿ ಇದ್ದರೂ ನೀನು ಅಗೋಚರವಾಗಿರುವೆ. “ರಕ್ತ ಪರಿಸರಣದ ಪ್ರಜ್ಞ ಬಗೆಯಂತೆ’. ಪ್ರಾಯಃ ಹಾಗೇ ಇರಬೇಕೇನೋ ಎಂದುಕೊಂಡರೂ ಹೊತ್ತು ಹೊತ್ತಿಗೆ ಕಾಫಿ-ಊಟ-ತಿಂಡಿಗಳಿಂದ ಬದುಕು ಚೆನ್ನಾಗಿಯೇ ನಡೆಯುತ್ತಿದೆ ಎಂದುಕೊಂಡರೂ ಇದೇನು ಅಲ್ಲೋಲ ಕಲ್ಲೋಲ? ಊಟ-ತಿಂಡಿಗಳು ಅತ್ಯಗತ್ಯ ಅನಿವಾರ್ಯವಾಗಿದ್ದರೂ ಅವುಗಳೊಳಗಿಂದಲೇ ಬದುಕೆಂದರೆ ಇಷ್ಟೇನೆ? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದಲ್ಲ- ಆಗ ರಕ್ತದೊತ್ತಡ ಹೆಚ್ಚಿ, ರಕ್ತ ಪರಿಸರಣದ ಪ್ರಜ್ಞ ಬಗೆ, ಅರಿವಿಗೆ ಬರುವಂತೆ, ಎದೆಬಡಿತ ಚಡಪಡಿಸುವಾಗ ಹೃದಯ-ಪುಪ್ಪುಸಗಳ ಅರಿವಾಗುವಂತೆ- ಜ್ವರವೇರಿದಾಗಿನ ಮಾತಿನ ಅರ್ಥದಂತೆ-ನಿನ್ನ ನೆನಪು. ನಿನ್ನ ಗುರಿಯತ್ತ ಆಗ ಮನ ಹೊರಳುವುದೇನೋ ನಿಜ. ಮುಂದೆ? 

ಜ್ವರವಿಳಿದು ಸರೋವರದ ಮೇಲೆ ಯಥಾಪ್ರಕಾರ
ಸಣ್ಣಲೆಗಳುರುಳ ತೊಡಗಿದ ಮೇಲೆ ಈ ಎರಡು
ಅಕ್ಕಪಕ್ಕದ ಹಾಯಿದೋಣಿಗಳು ತಮ್ಮಷ್ಟಕ್ಕೆ
ಅತ್ತಿತ್ತ ಸರಿದು ಬಳಿ ಬಳಿಯೆ ಬಿಳಿ ಬಿಳಿ ಹಾಯಿ
ಕಾಯುವವು ಬಿಸಿಲಲ್ಲಿ ಸಂಜೆಗೆಂಪಲ್ಲಿ ಇರುಳಿನ ಇರಸು ಮರಸಲ್ಲಿ
ಇದೇನು ಮರೆವು? ಜ್ವರವಿಳಿದ ಸ್ಥಿತಿ;

ಆರೋಗ್ಯದ ಸ್ಥಿತಿಯಾಗುವುದರ ಬದಲು ಯಥಾಪ್ರಕಾರದ ಜಡಸ್ಥಿತಿ ಆಗಿರುವುದೇಕೆ? ನಾವಿಬ್ಬರೂ ಒಂದೇ ಸ್ಥಿತಿಯಲ್ಲಿದ್ದೇವೆಯೆ? ಒಂದೇ ಸ್ಥಿತಿಯಲ್ಲಿರುವುದೆಂದರೆ, ನಾನು ಮರೆತರೆ ಅದು ನೀನೂ ಮರೆತಂತೆಯೇ ಆಗುವುದೆ? ಆದುದರಿಂದಲೇ, ತನ್ನಷ್ಟಕ್ಕೆ ಎನ್ನದೆ ತಮ್ಮಷ್ಟಕ್ಕೆ ಎಂದು ಎರಡನ್ನೂ – ನನ್ನನ್ನೂ ನಿನ್ನನ್ನೂ ಸೇರಿಸಿಯೇ ಹೇಳಬೇಕೆ? ಅಥವಾ ಕವಿತೆ ಮುಂದಿನ ಹಂತಕ್ಕೆ ಹೊರಳುತ್ತಿದ್ದಂತೆ ಕವಿ ಕೇಳುತ್ತಾರೆ- ನಾವು ಸಂಧಿಸಿದಲ್ಲಿ, ಪರಸ್ಪರ ಮಾತು ತೊಡಗಿದಲ್ಲಿ ಆ ಮಾತುಗಳು ನಮಗೇ ತಿಳಿಯಲಾರದೋ ಏನೋ. ಏಕೆಂದರೆ, ನಮ್ಮಿಬ್ಬರ ನಡುವೆ- ಇತಿಹಾಸ ಪೂರ್ವಕಾಲದ ಹೇಳಹೆಸರಿಲ್ಲದಲೆವ ಬೃಹದಾಕೃತಿಯ ಮುಸ್ಸಂಜೆ ನೆಳಲುಗಳಿವೆ; ನಿದ್ದೆ ಮಖಮಲ್ಲುಗಳ ಹರಿದು ಮುಖರವಾಗುವ ವ್ಯಾಘ್ರನಖದ ಹೊಸ ಗೀರುಗಳಿವೆ.
ಹೌದು. ಬಯಲನ್ನು ರೂಪಮಾಡುವುದೇನು ಸರಳ ಸಂಗತಿಯೆ? ಮೌನದ ಕಡಲಲ್ಲಿ ಮಾತನ್ನು ಹೆಕ್ಕುವುದು? ಏಕೆಂದರೆ ಬಯಲಲ್ಲಿ ತಮೋಲೋಕವೇ ಇದೆ. ಅಡಗಿದೆ. ಮೌನದ ಆಗಸದಲ್ಲಿ ಆಡಬಾರದ, ಕೇಳಬಾರದ ಮಾತುಗಳೂ ಅಡಗಿಲ್ಲವೆ? ಮಡಕೆಯನ್ನು ಮಾಡಬೇಕೆಂದು ಬಯಲಿನ ಮಣ್ಣಿಗೆ ಕೈಹಾಕಿದರೆ ಅದು ಯಾರದೋ ದೇಹ ಮಣ್ಣಾಗಿ ಬಿದ್ದ ರಾಶಿಯಾಗಿರಬಹುದು! ಕವಿ, ಈ ಆತಂಕವನ್ನು ಮರೆಮಾಚುವಂತಿಲ್ಲ- ಅಲ್ಲವೆ?
ಮರೆಮಾಚುವಂತಿಲ್ಲ ನಿಜ. ಆದರೆ ಇವನ್ನೆಲ್ಲ ಸಹಿಸದೆಯೂ ಇರುವಂತಿಲ್ಲ. ಇತಿಹಾಸದ ಅನುಭವವನ್ನು ಧಾರಣಮಾಡದೆಯೂ ಇರುವಂತಿಲ್ಲ. ಏಕೆಂದರೆ ಈ ಇತಿಹಾಸ ಬೇರಾರದೋ ಅಲ್ಲ. ಅದು “ನಾನು-ನೀನು’ಗಳದೇ ಇತಿಹಾಸ. “ಬಯಲು-ರೂಪ’ಗಳದೇ ಇತಿಹಾಸ. ಆದುದರಿಂದ ಕವಿ, ಕವಿತೆಯ ಕೊನೆಯ ಭಾಗದಲ್ಲಿ ಹೇಳುತ್ತಾರೆ:

ಆದರೀ ಎಲ್ಲವೂ ಸಹ್ಯ; ಅಥವಾ ನೈಮಿತ್ತಿಕದ ಕುದಿಮಡಕೆ ತಳದಲ್ಲಿ
ನಿತ್ಯದ ನಿರಾತಂಕ ಗಟ್ಟಿಯೋಡು. ತಾಳತಪ್ಪಿ ಅಥವಾ
ತಾಳದಿಂದ ತಾಳಕ್ಕೆ ಜಿಗಿಯುವ ಬಗೆಗೆ ಸದಾ ಶ್ರುತಿ ಹಿಡಿದು
ಮೂಲ ತಾಳದ ಲಯವ ಹೊತ್ತುನಿಲ್ಲುವ ಪುಂಗಿ
ಕವಿಗೆ ಈಗ ತಿಳಿಯುತ್ತಿದೆ. ನನ್ನ ಅನುಭವವನ್ನು ನಾನೇ ಧಾರಣಮಾಡಲಾರೆ ಎನ್ನುವಂತಿಲ್ಲ. ಅದು ಎಷ್ಟು ದಾರುಣವೆನ್ನಿಸಿದರೂ ಹಾಗೆ ಧಾರಣ ಮಾಡುವುದಕ್ಕಾಗಿ ನನ್ನೊಳಗೆ ಇರುವುದು ನೀನು. ನೀನು-ನಿತ್ಯದ ನಿರಾತಂಕ ಗಟ್ಟಿಯೋಡು. ನೀನು ಶ್ರುತಿ-ಲಯ ತಪ್ಪದಂತೆ ನೋಡಿಕೊಳ್ಳುವ ಪುಂಗಿ. ಇಷ್ಟೇ ಅಲ್ಲ- ಕವಿತೆಯ ಕೊನೆಯ ಅಪೂರ್ವ ಸಾಲು ಇದು:
ಹೃದಯ ಮಧ್ಯವೆ ರೂಪು ತಳೆವ ತ್ರಿಜ್ಯಗಳ ಸಂಖ್ಯಕ್ಕೆ
ಗುರಿ-ಮುರಿ-ತಣಿವು ತರುವ
ಪರಿಧಿಯೆ ಸಾಮತೇಜಸ್ಸೇ, ನಮಸ್ಕಾರ.

ಅಡಿಗರು ಈ ಇಡೀ ಅನುಭವವನ್ನು ಒಂದು ವೃತ್ತದ ಕಲ್ಪನೆಯ ಮೂಲಕ ಸೂಚಿಸುತ್ತಾರೆ. ವೃತ್ತದ ಮಧ್ಯದಲ್ಲಿರುವ ಕೇಂದ್ರದಿಂದ ಅಸಂಖ್ಯ ತ್ರಿಜ್ಯಗಳು ಹೊರಟಿವೆ. ಅವು ಹೊರಟಿವೆ ಎಂದಮೇಲೆ ಅವುಗಳಿಗೊಂದು ಗುರಿ-ತಿಳಿದೋ ತಿಳಿಯದೆಯೋ- ಇರಬೇಕು. ಮತ್ತು ತ್ರಿಜ್ಯದ ಗುರಿಯನ್ನೇ “ಪರಿಧಿ’ ಎನ್ನುವುದು! ಪರಿಧಿಯು ಆವರಣವಾಗಿ, ತಾನು ಬಾಗಿ ತ್ರಿಜ್ಯಗಳನ್ನೂ ಬಾಗಿಸುವುದರಿಂದ ಗುರಿಮುಟ್ಟುವುದೆಂದರೆ ಅದೊಂದು ಮುರಿತವೂ ಹೌದು! ತಣಿಯುವಿಕೆಯೂ ಹೌದು. ಈ ಸಾಲಿನ ಸೌಂದರ್ಯ ಅನ್ಯಾದೃಶವಾದದ್ದು. “ಬಯಲು’ ಇಲ್ಲಿ “ಪರಿಧಿ’ಯಾಗಿದೆ! ಅನಂತಮೂರ್ತಿಯವರು ತಮಗೆ ಬಹುಪ್ರಿಯವಾದ ಈ ಸಾಲಿನ ಬಗ್ಗೆ ತಾಂತ್ರಿಕವಾಗಿ ಹೇಳಿದ್ದು ಹೀಗೆ- “”ಮೊದಲು ದೀರ್ಘ‌ಗೊಳ್ಳಬಲ್ಲ ಸಂಯುಕ್ತ ಶಬ್ದಗಳು, ಅನಂತರ ಮನಸ್ಸನ್ನು ನಿಲ್ಲಿಸಿ, ನಿಲ್ಲಿಸಿ ಓದಿಸುವ ಕನ್ನಡದ ಪುಟ್ಟ ಶಬ್ದಗಳು, ಕೊನೆಯಲ್ಲಿ ಅಮೂರ್ತವೆನ್ನಿಸುವ ಭಾವಸ್ಥಿತಿಯನ್ನು ಸೂಚಿಸುವ ಅಪರೂಪದ “ಸಾಮತೇಜಸ್ಸೇ’ ಎನ್ನುವ ಸಂಸ್ಕೃತ ಶಬ್ದ- ಇದು ಓದುಗನಲ್ಲಿ ಆಳವಾದ ಶ್ರವಣ-ಹರ್ಷವನ್ನು ಅರ್ಥದ ಜತೆ ಉಕ್ಕಿಸಬಲ್ಲ ಕ್ರಮ”. ಬಯಲನ್ನು ರೂಪ ಮಾಡುವುದು ಹೇಗೆ ಎಂಬುದಕ್ಕೆ ಒಂದು ಸೂಚನೆ ಇಲ್ಲಿದೆ !

ಲಕ್ಷ್ಮೀಶ ತೋಳ್ಪಾಡಿ

ಟಾಪ್ ನ್ಯೂಸ್

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ

police crime

Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Shabarimala

Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು

1-eng

Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ

police crime

Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.