ಮತ್ತೆ ಡೆಂಗ್ಯೂ ಡಂಗೂರ: ಸುಳ್ಯ ಜನತೆ ತತ್ತರ
Team Udayavani, May 27, 2018, 12:48 PM IST
ಸುಳ್ಯ : ಡೆಂಗ್ಯೂ ಜ್ವರ ಸುಳ್ಯ ತಾಲೂಕಿನಲ್ಲಿ ಮತ್ತೆ ಕಾಣಿಸಿಕೊಂಡಿದ್ದು, ರೋಗ ಭೀತಿಯಿಂದ ಕಂಗೆಟ್ಟ ಜನ ಆಸ್ಪತ್ರೆಗಳಿಗೆ ಧಾವಿಸುತ್ತಿದ್ದಾರೆ. ಸುಳ್ಯ ಸಮುದಾಯ ಕೇಂದ್ರದ ವಾರ್ಡ್‌ಗಳು ದಿನಗಳು ಉರುಳಿದಂತೆ ಜ್ವರಪೀಡಿತರಿಂದ ತುಂಬುತ್ತಿವೆ. ಪ್ರತಿದಿನ 300ಕ್ಕೂ ಹೆಚ್ಚು ಜ್ವರಪೀಡಿತರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸುತ್ತಿದ್ದು, ಹಲವರಲ್ಲಿ ಶಂಕಿತ ಡೆಂಗ್ಯೂ ಲಕ್ಷಣಗಳು ಕಾಣಿಸಿವೆ. ತಾಲೂಕಿನಲ್ಲಿ 6 ಡೆಂಗ್ಯೂ ಜ್ವರ ಪ್ರಕರಣಗಳು ಖಚಿತಗೊಂಡಿದ್ದು, ಹಲವು ರೋಗಿಗಳ ರಕ್ತದ ಮಾದರಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.
ಈ ವರ್ಷ ಮಳೆಗಾಲಕ್ಕೂ ಮೊದಲೇ ಡೆಂಗ್ಯೂ ಜ್ವರ ತಾಲೂಕಿನಲ್ಲಿ ರೌದ್ರಾವತಾರ ತೋರಲು ಆರಂಭಿಸಿದ್ದು, ಮಳೆ – ಬಿಸಿಲಿನ ಆಟ ರೋಗ ಹರಡುವ ಭೀತಿ ಮೂಡಿಸಿದೆ. ಸುಳ್ಯದ ತಾಲೂಕು ಆಸ್ವತ್ರೆ ಮತ್ತು ಆರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜ್ವರ ಪೀಡಿತರೇ ತುಂಬಿ ತುಳುಕುತ್ತಿದ್ದಾರೆ. ಸುಳ್ಯ ತಾಲೂಕು ಆಸ್ಪತ್ರೆಯ ಹೊರರೋಗಿ ಚಿಕಿತ್ಸಾ ವಿಭಾಗದಲ್ಲಿ ಪ್ರತಿದಿನ 350ಕ್ಕೂ ಹೆಚ್ಚು ರೋಗಿಗಳು ಬರುತ್ತಿದ್ದು, ಈ ಪೈಕಿ ಅರ್ಧಕ್ಕೂ ಹೆಚ್ಚು ಜನರಲ್ಲಿ ಜ್ವರ ಇರುತ್ತಿದೆ. ಆಸ್ಪತ್ರೆಯಲ್ಲಿ 30ಕ್ಕೂ ಹೆಚ್ಚು ಮಂದಿ ಜ್ವರದಿಂದ ಬಳಲಿ ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜ್ವರಕ್ಕೆ ಚಿಕಿತ್ಸೆ ಪಡೆದು ಗುಣಮುಖರಾಗಿ ಹೋಗುತ್ತಿದ್ದಂತೆ ಅಷ್ಟೆ ಸಂಖ್ಯೆಯಲ್ಲಿ ಹೊಸದಾಗಿ ಒಳರೋಗಿಗಳು ಆಸ್ಪತ್ರೆ ಸೇರುತ್ತಿದ್ದಾರೆ. ಜ್ವರ ವ್ಯಾಪಿಸುತ್ತಿರುವುದಕ್ಕೆ ಇದೇ ನಿದರ್ಶನ. ಚಿಕಿತ್ಸೆಗೆ ಬಂದವರಲ್ಲಿ ಡೆಂಗ್ಯೂ ಶಂಕೆ ವ್ಯಕ್ತವಾದಲ್ಲಿ ಅಂಥವರ ರಕ್ತದ ಮಾದರಿ ಸಂಗ್ರಹಿಸಿ, ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ನಿಗಾ
ಶಂಕಿತ ಪ್ರಕರಣಗಳ ಕುರಿತು ಆರೋಗ್ಯಇಲಾಖೆ ನಿಗಾ ಇರಿಸಿದೆ. ಈ ನಡುವೆ ಡೆಂಗ್ಯೂ ತನ್ನ ಪ್ರಾಬಲ್ಯ ಹೆಚ್ಚಿಸುತ್ತಲೇ ಇದೆ. ನಾಗರಿಕರು ಖಾಸಗಿ ಕೇಂದ್ರಗಳ ಲ್ಯಾಬ್‌ನಲ್ಲಿ ಎನ್‌ಎಸ್1-ಐಎಎ ರಕ್ತಪರೀಕ್ಷೆ ಮಾಡಿಸಿಕೊಂಡು ರೋಗದ ಗುಣಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂಥವುಗಳನ್ನು ಇಲಾಖೆ ಶಂಕಿತ ಪ್ರಕರಣವೆಂದು ಪರಿಗಣಿಸುತ್ತಿದೆ. ಅಧಿಕೃತವೆನಿಸಲು ಜಿಲ್ಲಾ ಆರೋಗ್ಯ ಇಲಾಖೆಯ ಲ್ಯಾಬ್‌ನಲ್ಲಿ ಎಲಿಸಾ ಪರೀಕ್ಷೆ ನಡೆಸಬೇಕಾಗಿದ್ದು, ಅಲ್ಲಿ ಪಾಸಿಟಿವ್ ಎಂದು ಕಂಡುಬಂದಲ್ಲಿ ಇಲಾಖೆ ಅಧಿಕೃತ ಡೆಂಗ್ಯೂ ಪ್ರಕರಣವೆಂಬುದಾಗಿ ಪರಿಗಣಿಸುತ್ತದೆ.
ರೋಗದ ಲಕ್ಷಣ
ಜ್ವರ, ಗಂಟು ನೋವು, ವಿಪರೀತ ಸುಸ್ತು ಕಾಣಿಸಿಕೊಳ್ಳುವುದು ಈ ರೀತಿಯ ಲಕ್ಷಣ ಕಂಡುಬಂದಲ್ಲಿ ಕೂಡಲೇ ವೈದ್ಯರ ಸಲಹೆ ಪಡೆದು ಔಷಧಿ ತೆಗೆದುಕೊಳ್ಳುವುದು ಅವಶ್ಯ. ಇದಕ್ಕೆ ಪ್ರತ್ಯೇಕ ಔಷಧಿ ಇಲ್ಲವಾಗಿದ್ದು, ರೋಗ ಲಕ್ಷಣಗಳಿಗೆ ಅನುಸಾರವಾಗಿ ಔಷಧ ಸೇವಿಸಿ, ವಿಶ್ರಾಂತಿ ತೆಗೆದುಕೊಳ್ಳುವುದು ಮುಖ್ಯ.
ಮಂಜಾಗ್ರತಾ ಕ್ರಮ
ನೀರು ಶೇಖರಣೆಗೊಂಡು ಅದರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇದನ್ನು ತಡೆಗಟ್ಟುವುದು. ಅಡಿಕೆ ತೋಟದಲ್ಲಿ ಹಾಳೆ, ಎಳನೀರಿನ ಸಿಪ್ಪೆ, ಗೆರೆಟೆ, ಕೊಕ್ಕೊ ಸಿಪ್ಪೆಯಲ್ಲಿ ನೀರು ನಿಂತು ಸೊಳ್ಳೆ ಉತ್ಪತಿಯಾಗದಂತೆ ಎಚ್ಚರ ವಹಿಸಬೇಕು. ಸೊಳ್ಳೆ ಕಚ್ಚುವುದರಿಂದ ರೋಗ ಹರಡುತ್ತದೆ. ಹೀಗಾಗಿ ಎಲ್ಲಿಯೂ ನೀರು ನಿಲ್ಲಲು ಅವಕಾಶ ಕೊಡದೆ ಸೊಳ್ಳೆ ಬೆಳೆಯದಂತೆ ನೋಡಿಕೊಳ್ಳಬೇಕು. ಸಂಜೆ ಹೊತ್ತಲ್ಲಿ ಮನೆಯಲ್ಲಿ ಕಿಟಕಿ, ಬಾಗಿಲುಗಳನ್ನು ಮುಚ್ಚಿ ಮಲಗುವ ವೇಳೆ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು.
ತೋಟಕ್ಕೆ ತೆರಳುವಾಗ ಬಟ್ಟೆಗಳಿಂದ ದೇಹವನ್ನು ಪೂರ್ತಿ ಮುಚ್ಚಬೇಕು. ಆರೋಗ್ಯ ಇಲಾಖೆಯ ಆರೋಗ್ಯ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಹೆಚ್ಚಿನ ಪರೀಕ್ಷೆಗೆ ರವಾನೆ
ಆರು ಡೆಂಗ್ಯೂ ಜ್ವರ ಪ್ರಕರಣಗಳು ತಾಲೂಕಿನಲ್ಲಿ ಈಗಾಗಲೇ ದೃಢಪಟ್ಟಿವೆ. ಡೆಂಗ್ಯೂ ಜ್ವರದ ಶಂಕೆ ಕಂಡುಬಂದರೆ ಅಂತಹ ರೋಗಿಗಳ ರಕ್ತದ ಸ್ಯಾಂಪಲ್ ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗಾಗಿ ಜಿಲ್ಲಾ ಕೇಂದ್ರಕ್ಕೆ ಕಳುಹಿಸಲಾಗುತ್ತಿದೆ. ವೈರಲ್ ಜ್ವರದ ಜತೆಗೆ ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ಡೆಂಗ್ಯೂ ಜ್ವರವೂ ಕಾಣಿಸಿಕೊಳ್ಳುತ್ತಿರುವುದರಿಂದ ಮುಂಜಾಗ್ರತೆ ವಹಿಸಬೇಕು.
- ಡಾ| ಸುಬ್ರಹ್ಮಣ್ಯ, ತಾಲೂಕು ಆರೋಗ್ಯಾಧಿಕಾರಿ
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.