ನಿನ್ನ ಆಗಮನಕೆ ಮಳೆಬಿಲ್ಲೂ ಕಾಯುತ್ತಿದೆ!
Team Udayavani, May 29, 2018, 1:24 PM IST
ಇಂಟ್ರೋ:
ನಿನ್ನನ್ನು ಕಾಣುವ ಮುನ್ನ ಈ ಕಣ್ಣುಗಳು ಅದೆಷ್ಟು ಸುಂದರಿಯರನ್ನು ಕಂಡಿವೆಯೋ ಲೆಕ್ಕವಿಲ್ಲ. ಆ ಯಾರೊಬ್ಬರಲ್ಲೂ ನಿನ್ನಂತೆ ಆಕರ್ಷಣೆಯ ಸೆಳೆತ ಇರಲಿಲ್ಲವೆಂತಲ್ಲ, ಮನಸ್ಸು ಯಾಕೋ ಅತ್ತ ವಾಲಲೇ ಇಲ್ಲ.
ಜೀವದ ಗೆಳತಿ,
ನೆತ್ತಿ ಸುಡುವ ಸೂರ್ಯನ ಆರ್ಭಟವ ತಗ್ಗಿಸಲೆಂದೇ ಮಟಮಟ ಮಧ್ಯಾಹ್ನ ಸುರಿದ ಮಳೆ ಗಕ್ಕನೆ ನಿಂತಾಗ, ಆಗಸದಲ್ಲಿ ಕಾಮನಬಿಲ್ಲು ಅರಳಿ ನಿಂತಿತು. ಅದೇ ಕ್ಷಣ, ಕಾಗದವನ್ನೇ ದೋಣಿಯಾಗಿಸಿ ನಾನು ನೀನು ಕೈ ಕೈ ಹಿಡಿದು ತೇಲಿ ಬಿಟ್ಟ ಗಳಿಗೆ ಅದೆಷ್ಟು ಮಧುರ! ಅಲ್ಲವೇ ಗೆಳತಿ? ಅದನ್ನು ಮರೆಯಲಾದೀತೆ? ಹಾಲುಗಡಲು ಕಡೆಯುವಾಗ ಜನಿಸಿದ ಅಪ್ಸರೆಯಂತೆ ನಿನ್ನ ನೋಟ ಕಂಗೊಳಿಸುತ್ತಿರುವಾಗ ಗಗನದ ಮಳೆ ಬಿಲ್ಲು ನಸು ನಾಚಿ ಮರೆಯಾಯಿತು. ತಕ್ಷಣವೇ ಬಲು ಮೋಹಗೊಂಡು ನಿನ್ನ ಸುಕೋಮಲ ಬೆರಳಿಗೆ ಬೆರಳ ಬೆಸೆದೆ. ನಿನ್ನನ್ನು ಗೆಳತಿಯಾಗಿ ಪಡೆದು ಪರಿಪೂರ್ಣನಾದೆ ಎಂಬ ಭಾವದಲ್ಲಿ ಮಿಂದು ನನ್ನ ಹೃದಯ ಕುಣಿಯಿತು. “ನಾನೇ ಭಾಗ್ಯವಂತ, ನಾನೇ ಪುಣ್ಯವಂತ’ ನನಗರಿವಿಲ್ಲದೇ ಉಸಿರಿದೆ. ಅದಕ್ಕೆ ನೀನು “ಊಹೂnಂ ಇಲ್ಲ, ನಾನೇ ಭಾಗ್ಯವತಿ’ ಎಂದದ್ದು ಇಂದಿಗೂ ಕಿವಿಯಲ್ಲಿ ಅನುರುಣಿಸುತ್ತಿದೆ. ಅರೆಗಳಿಗೆಯೂ ನಿನ್ನಿಂದ ದೂರಾಗಿ ಇರಲಾರೆ ಎಂದೆನಿಸಿತು. ಆ ಸವಿಮಾತು ಕೇಳಿ, ತುಂಬಾ ಖುಷಿಯಾಗಿ, ಯಾರಿಗೂ ಕಾಣದಂತೆ ಹೃದಯದಲ್ಲಿ ನಿನ್ನನ್ನು ಮುಚ್ಚಿಟ್ಟುಕೊಂಡು ಬಂದು ನನ್ನ ಕೋಣೆ ಸೇರಿದೆ.
ನಾನೆಂದೂ ಕಾಣದ ಅನುಭವ ಮನದಲ್ಲಿ ಅಂದು. ರಾತ್ರಿಯೆಲ್ಲ ಕಣ್ಣಿಗೆ ಕಣ್ಣು ಅಂಟಿಸಲು ಸಾಧ್ಯವಾಗಲೇ ಇಲ್ಲ. ನಿನ್ನನ್ನು ಕಾಣುವ ಮುನ್ನ ಈ ಕಣ್ಣುಗಳು ಅದೆಷ್ಟು ಸುಂದರಿಯರನ್ನು ಕಂಡಿವೆಯೋ ಲೆಕ್ಕವಿಲ್ಲ. ಆ ಯಾರೊಬ್ಬರಲ್ಲೂ ನಿನ್ನಂತೆ ಆಕರ್ಷಣೆಯ ಸೆಳೆತ ಇರಲಿಲ್ಲವೆಂತಲ್ಲ, ಮನಸ್ಸು ಯಾಕೋ ಅತ್ತ ವಾಲಲೇ ಇಲ್ಲ.
ತೆರೆದ ಬಾಹುಗಳ ಚಾಚಿ ಬಿಗಿದಪ್ಪುವಂಥ ಕನಸು ಕಾಣಲೇ ಇಲ್ಲ. ಅದಾವ ಗಳಿಗೆಯಲ್ಲಿ ಮನಸ್ಸು ನಿನ್ನ ಕಂಡು ಬೆಸೆದುಕೊಂಡಿತೋ ತಿಳಿಯಲಿಲ್ಲ. ನಿನ್ನ ಹೆಜ್ಜೆಯೊಂದಿಗೆ ಹೆಜ್ಜೆ ಬೆಸೆಯುವ ಕೆಲಸಕ್ಕೆ ಮನಸ್ಸು ದಿನವೂ ಚಾತಕ ಪಕ್ಷಿಯಂತೆ ಕಾಯುತ್ತಿತ್ತು. ನನ್ನ ಪ್ರತಿ ನೋವನ್ನು ನಿನ್ನದೆಂದೇ ತಿಳಿದು, ಮುಂದೆ ಮುಂದೆ ನಡೆ ನಾನೂ ನಿನ್ನೊಂದಿಗಿದ್ದೇನೆ ಎಂದು ಧೈರ್ಯ ತುಂಬಿ, ಕಣ್ಣ ಕಂಬನಿ ಒರೆಸಿದ ಪರಿಯಲ್ಲಿ ಒಡಲ ಬಳ್ಳಿಯನ್ನು ಸಂತೈಸುವ ತಾಯಿ ಹೃದಯವನ್ನು ನಿನ್ನಲ್ಲಿ ಕಂಡು ಅಚ್ಚರಿಗೊಂಡೆ. ನಮ್ಮ ಸ್ನೇಹವೆಂದೆಂದೂ ಇರಲಿ ಹೀಗೆ ಶಾಶ್ವತ ಎಂದು ನೀ ತುಟಿಯಂಚಿನಲ್ಲಿ ನಗುತ್ತ ಹೇಳಿದಾಗ ಇದ್ದ ಕೊಂಚ ಸಂಕೋಚವೂ ದೂರ ಓಡಿತು.
ತುಂಟತನದ ಆಟಗಳಲ್ಲಿ ಮೈ ಮರೆತು ಪಟ್ಟ ಖುಷಿಗೆ ಲೆಕ್ಕವಿಲ್ಲ. ಪ್ರೀತಿಯೇ ಬದುಕು, ಅದಿಲ್ಲದೇ ಬದುಕಿಲ್ಲ ಎಂದು ತೋರಿದವಳು ನೀನಲ್ಲವೇ? ನಿನ್ನೊಂದಿಗಿರುವ ಬದುಕು ಅದೆಷ್ಟು ಚೆಂದ! ನಿನ್ನಂತೆ ಇನ್ನಾರೂ ಕಾಡಿಲ್ಲ ನನ್ನ, ನಿದ್ದೆಗೆಡಿಸಿಲ್ಲ ನನ್ನ. ಬಂದು ಬಿಡು ನನ್ನ ಬಳಿಗೆ ಈಗ. ಕೈಯಲ್ಲಿ ಕಾಗದದ ದೋಣಿ ಹಿಡಿದು ನಿಂತಿರುವೆ. ಮಳೆ ಬಿಲ್ಲೂ ನಿನ್ನ ಬರುವಿಗಾಗಿಯೇ ಕಾಯುತ್ತಿದೆ.
ನಿನ್ನ ಹೃದಯದ ರಾಜ
– ಜಯರಾಜ್ ಜೆ. ಬೆಳಗಾವಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.