ಮಹಾಮಳೆಗೆ ನಲುಗಿದ ಕರಾವಳಿ: ನಾಲ್ವರ ಸಾವು
Team Udayavani, May 30, 2018, 9:48 AM IST
ಮಂಗಳೂರು/ಉಡುಪಿ: ಕರಾವಳಿಗೆ ಮುಂಗಾರು ನಿರೀಕ್ಷೆಯಲ್ಲಿರುವಂತೆಯೇ, ಮುಂಗಾರು ಪೂರ್ವ ಭಾರೀ ಮಳೆಗೆ ಅವಿಭಜಿತ ದ.ಕ. ಜಿಲ್ಲೆಯಲ್ಲಿ ನಾಲ್ವರ ಜೀವ ಹಾನಿಯಾಗಿದೆ.
ಸೋಮವಾರ ರಾತ್ರಿಯಿಂದ ಮಂಗಳವಾರ ಸಂಜೆ ವರೆಗೆ ಎಡೆಬಿಡದೆ ಸುರಿದ ಮಳೆ-ಗಾಳಿ-ಸಿಡಿಲಿಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಲಕ್ಷಾಂತರ ರೂ. ಆಸ್ತಿಪಾಸ್ತಿ ಹಾನಿಯಾಗಿದೆೆ. ಹಲವು ಮನೆಗಳು, ರಸ್ತೆಗಳು ಕೃತಕ ನೆರೆಯಿಂದಾವೃತವಾಗಿ ಜನಜೀವನ ದುಸ್ತರಗೊಂಡಿದೆ.
ಮಂಗಳೂರಿನ ಕೆಪಿಟಿ ಸಮೀಪದ ಉದಯನಗರದಲ್ಲಿ ಮನೆ ಹಿಂಭಾಗದ ಧರೆ ಕುಸಿದು ಮೋಹಿನಿ (60) ಎಂಬ ಮಹಿಳೆ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾಳೆ. ಕೊಡಿಯಾಲ್‌ಬೈಲ್‌ನ ಮುಕ್ತ ಬಾೖ (80) ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಮಂಗಳವಾರ ಮುಂಜಾನೆ 3 ಗಂಟೆ ವೇಳೆಗೆ ಬೈಲೂರು ಸಮೀಪದ ಬಸಿª ಶಾಲೆ ಎಂಬಲ್ಲಿ ಸಿಡಿಲು ಬಡಿದು ಕಾರ್ಕಳ ಗ್ರಾ.ಪಂ.ಸದಸ್ಯೆ ಶೀಲಾ (35) ಅವರು ಮೃತಪಟ್ಟಿದ್ದಾರೆ. ಪಕ್ಕದಲ್ಲೇ ಮಲಗಿದ್ದ ಅವರ ಪತಿ ಭಾಸ್ಕರ ಗಾಯಗೊಂಡಿದ್ದಾರೆ. ಪಡುಬಿದ್ರಿ ಸಮೀಪದ ಪಾದೆಬೆಟ್ಟು ಪಟ್ಲದಲ್ಲಿ ಸಹೋದರಿಯೊಂದಿಗೆ ಶಾಲೆಗೆ ಹೋಗಿದ್ದ ಪಡುಬಿದ್ರಿಯ ಎಸ್‌ಬಿವಿಪಿ ಹಿ.ಪ್ರಾ.ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ನಿಧಿ (9) ನೆರೆಯ ನೀರಿನಲ್ಲಿ ಕೊಚ್ಚಿಹೋಗಿದ್ದಾಳೆ.
ಮಂಗಳೂರಿನಲ್ಲಿ ಮಳೆಯಿಂದಾಗಿ ನೆರೆ ಪರಿಸ್ಥಿತಿ ಉದ್ಭವವಾಗಿದೆ. ಉಡುಪಿಯ ಉದ್ಯಾವರ, ಕಾಪು, ಕಟಪಾಡಿಗಳಲ್ಲಿ ನೂರಾರು ಮರಗಳು ಧರೆಗುರುಳಿದ್ದು ವ್ಯಾಪಕ ಹಾನಿ ಉಂಟುಮಾಡಿದೆ. ಇವುಗಳ ಪರಿಣಾಮ ವಿದ್ಯುತ್, ಸಾರಿಗೆ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಮುಂದಿನ 48 ತಾಸುಗಳಲ್ಲಿ ಮತ್ತಷ್ಟು ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಎರಡೂ ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಇದೇ ವೇಳೆ ರಕ್ಷಣಾ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ.
ಮಹಿಳೆ ಸಾವು
ನಗರದ ಕೆಪಿಟಿ ಸಮೀಪದ ಉದಯನಗರದಲ್ಲಿ ಮನೆ ಹಿಂಭಾಗದ ದರೆ ಕುಸಿದು ಮೋಹಿನಿ (60) ಎಂಬ ಮಹಿಳೆ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಮಧ್ಯಾಹ್ನ ವೇಳೆಗೆ ಧರೆ ಕುಸಿತ ಸಂಭವಿಸಿದ್ದು, ಮಣ್ಣನ್ನು ಎತ್ತಲು ಸತತ ಕಾರ್ಯಾಚರಣೆ ನಡೆಸಿ ಸಂಜೆ 7.30 ಗಂಟೆ ವೇಳೆಗೆ ಮೋಹಿನಿ ಅವರ ದೇಹ ಪತ್ತೆ ಮಾಡಲಾಯಿತು.
ಮಂಗಳೂರು ಜನರ ಪರದಾಟ: ದಿನವಿಡೀ ಮಳೆ ಸುರಿದಿದ್ದರಿಂದ ಎಲ್ಲೆಡೆ ಜಲಾವೃತವಾಗಿದ್ದು ಜನರು ಹೊರಬರಲಾಗದೆ ತೊಂದರೆಗೊಳಗಾದರು. ಹಲವಾರು ಕಡೆ ಭೂಕುಸಿತ, ಮನೆ ಗೋಡೆ ಕುಸಿತ, ಮರಗಳು ರಸ್ತೆಗೆ ಬಿದ್ದು ಅಡಚಣೆ ಉಂಟಾಯಿತು. ಕೆಲವೆಡೆ ಬಹು ಮಹಡಿ ಕಟ್ಟಡ ಮತ್ತು ಮನೆಗಳ ಸುತ್ತ ನೀರು ನಿಂತು ಜನರು ತಮ್ಮ ರಕ್ಷಣೆಗಾಗಿ ಅಂಗಲಾಚುತ್ತಿದ್ದರು.
ನಗರದ ಹೆಬ್ಟಾಗಿಲು ಬಂದ್: ಇದೇ ಪ್ರಥಮ ಬಾರಿ ಎಂಬಂತೆ ರಾಷ್ಟ್ರೀಯ ಹೆದ್ದಾರಿಗಳಿಂದ ಮಂಗಳೂರು ನಗರ ಸಂಪರ್ಕ ಕಡಿದು ಹೆಬ್ಟಾಗಿಲುಗಳು ಬಂದ್ ಆದವು. ರಾ.ಹೆ. 66ರ ಪಂಪ್‌ವೆಲ್ ಜಂಕ್ಷನ್ ಮತ್ತು ರಾ.ಹೆ. 75 ರ ಪಡೀಲ್ ರೈಲ್ವೇ ಅಂಡರ್ ಪಾಸ್‌ನಲ್ಲಿ ವಾಹನಗಳು ಸಂಚರಿಸಲಾಗದೇ ಸಂಪರ್ಕ ಕಡಿತವಾಯಿತು. ಸುಮಾರು ಐದಾರು ಗಂಟೆ ಕಾಲ ಇದೇ ಪರಿಸ್ಥಿತಿ ಇತ್ತು.
ರೈಲು, ವಿಮಾನ ಸಂಚಾರ ವ್ಯತ್ಯಯ
ಪಡೀಲ್- ಜೋಕಟ್ಟೆ ನಡುವಣ ರೈಲು ಹಳಿಯಲ್ಲಿ ಎರಡು ಕಡೆ ಭೂಕುಸಿತ ಸಂಭವಿಸಿದ ಕಾರಣ ಕೊಂಕಣ ರೈಲ್ವೇಯ ಐದು ರೈಲುಗಳ ಓಡಾಟದಲ್ಲಿ ಹಾಗೂ ನೇತ್ರಾವತಿ ಉಳ್ಳಾಲ ಭಾಗದಲ್ಲಿ ಭೂಕುಸಿತ ಸಂಭವಿಸಿ ಎರಡು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿತ್ತು.
ಮಧ್ಯಾಹ್ನ 12ಕ್ಕೆ ಮುಂಬಯಿಯಿಂದ ಬರಬೇಕಿದ್ದ ಏರ್ ಇಂಡಿಯಾ ವಿಮಾನ ತಿರುವನಂತಪುರಕ್ಕೆ ತೆರಳಿದ್ದು, ಅಲ್ಲಿಂದ ವಾಪಸ್ ಮುಂಬಯಿಗೆ ಪ್ರಯಾಣಿಸಿದೆ.
ಶಿಕ್ಷಕಿಯರಿಗೆ ಗಾಯ
ಸುರತ್ಕಲ್‌ನ ಕೃಷ್ಣಾಪುರದ ಖಾಸಗಿ ಶಾಲೆಯೊಂದರ ಗೋಡೆ ಮತ್ತು ಛಾವಣಿ ಕುಸಿದು ಮೂವರು ಶಿಕ್ಷಕಿಯರು ಗಾಯಗೊಂಡಿದ್ದಾರೆ. ಮಕ್ಕಳು ತಡವಾಗಿ ಆಗಮಿಸಿದ್ದರಿಂದ ಅಪಾಯದಿಂದ ಪಾರಾದರು.
ಪರಿಸ್ಥಿತಿ ಹತೋಟಿಗೆ ಯತ್ನ
ಪೊಲೀಸರು, ಅಗ್ನಿ ಶಾಮಕ ದಳದ ಸಿಬಂದಿ, ಗೃಹ ರಕ್ಷಕ ದಳದವರು, ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಸಿಬಂದಿ ಸಹಿತ ಸಂಪೂರ್ಣ ಜಿಲ್ಲಾಡಳಿತ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಿ ಕಾರ್ಯ ಕ್ಷೇತ್ರಕ್ಕೆ ಇಳಿದರೂ ಮಳೆ ನಿರಂತರವಾಗಿ ಸುರಿಯುತ್ತಿದ್ದ ಕಾರಣ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಹತೋಟಿಗೆ ತರಲು ಸಾಧ್ಯವಾಗಿಲ್ಲ.
ಶಾಲಾ-ಕಾಲೇಜಿಗೆ ರಜೆ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲ ಶಾಲಾ- ಕಾಲೇಜುಗಳಿಗೆ ಬುಧವಾರವೂ ರಜೆ ಘೋಷಿಸಲಾಗಿದೆ .
ನದಿ, ಸಮುದ್ರ ಬದಿಗೆ ಹೋಗದಿರಿ
ರಾಜ್ಯದ ಕರಾವಳಿಯಾದ್ಯಂತ ಮೇ 30 ಮತ್ತು 31ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಆದ್ದರಿಂದ ಮುಂದಿನ 48 ಗಂಟೆಗಳ ಅವಧಿಯಲ್ಲಿ ನದಿ ಮತ್ತು ಸಮುದ್ರ ತೀರಕ್ಕೆ ಯಾರೂ ತೆರಳಬಾರದೆಂದು ದ .ಕ. ಜಿಲ್ಲಾಡಳಿತವು ಸಾರ್ವಜನಿಕರಿಗೆ ಸೂಚನೆ ನೀಡಿದೆ.
ಮಾಹಿತಿ ಪಡೆದ ಸಿಎಂ
ಬೆಂಗಳೂರು : ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ಬಗ್ಗೆ ಸಿಎಂ ಎಚ್.ಡಿ. ಕುಮಾರಸ್ವಾಮಿ ದ.ಕ. ಮತ್ತು ಉಡುಪಿ ಜಿಲ್ಲಾಧಿಕಾರಿ ಗಳಿಂದ ಮಾಹಿತಿ ಪಡೆದರು.
ಕೈಕಟ್ಟಿ ಕುಳಿತ ಆಡಳಿತ
ಮಂಗಳೂರು: ಮಂಗಳವಾರ ಇಡೀ ಮಂಗಳೂರು ಮಹಾಮಳೆಗೆ ತತ್ತರಿಸಿದ್ದರೆ, ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಏನು ಮಾಡುತ್ತಿದ್ದವು?
ನಗರದ ನಾಗರಿಕರು ಕೇಳುತ್ತಿರುವ ಪ್ರಶ್ನೆ ಇದು. ನಗರದ ಇತಿಹಾಸದಲ್ಲೇ ಇಷ್ಟೊಂದು ಮಳೆ ಬಿದ್ದಿಲ್ಲವೆಂದು ಹೇಳಲಾಗುತ್ತಿದೆಯಾದರೂ, ಮುಂಗಾರು ಪ್ರವೇಶದ ಹಿನ್ನೆಲೆಯಲ್ಲಿ ಆಗಬಹುದಾದ ಅನಾಹುತಗಳಿಗೆ ಆಡಳಿತ ವ್ಯವಸ್ಥೆ ಸನ್ನದ್ಧವಾಗಿರಬೇಕಿತ್ತು. ಆದರೆ ಮಂಗಳವಾರ ಬೆಳಗ್ಗೆಯಿಂದಲೇ ಮಳೆ ಸುರಿಯತೊಡಗಿದಾಗ ನಾಗರಿಕರು ಸಹಾಯ ಯಾಚಿಸಲು ಪ್ರಯತ್ನಿಸಿದರೆ ಆಡಳಿತ ವ್ಯವಸ್ಥೆ ಸಂಪರ್ಕಕ್ಕೆ ಸಿಗಲೇ ಇಲ್ಲ.
ಒಂದೆಡೆ ಮಣ್ಣು ಕುಸಿದು ಅನಾಹುತ ಸೃಷ್ಟಿಯಾಗಿದ್ದರೆ, ಮತ್ತೂಂದೆಡೆ ಕ್ಷಣಕ್ಷಣಕ್ಕೂ ಏರುತ್ತಿರುವ ಕೃತಕ ನೆರೆಯಲ್ಲಿ ಸಿಕ್ಕ ವಿದ್ಯಾರ್ಥಿಗಳು ಆತಂಕಕ್ಕೆ ಸಿಲುಕಿದ್ದರು. ಆಸ್ಪತ್ರೆಗೆ ಹೋಗಿದ್ದ ರೋಗಿಗಳು ಅಲ್ಲಿಯೇ ಬಾಕಿಯಾಗಿ ಹೋದರು. ಅಂಗಡಿ-ಮುಂಗಟ್ಟು ತೆರೆದು ಗ್ರಾಹಕರನ್ನು ಎದುರು ನೋಡುತ್ತಿದ್ದ ಅಂಗಡಿ ಮಾಲಕರಿಗೆ ಎಲ್ಲಿಂದ ನೀರು ನುಗ್ಗುತ್ತಿದೆ ಎಂದು ನೋಡುವಷ್ಟರಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ನೀರಲ್ಲಿ ತೇಲಾಡುತ್ತಿದ್ದವು. ಇನ್ನು ಕೆಲಸಕ್ಕೆ ಕಚೇರಿಗೆ ಬಂದವರು, ಅಂಗಡಿಗಳಿಗೆ ಸಾಮಾನು ಖರೀದಿ, ಮಾರ್ಕೆಟ್ ಹೀಗೆ ಎಲ್ಲೆಲ್ಲೂ ನೀರು ಆವರಿಸಿಕೊಳ್ಳತೊಡಗಿತು.ಅಲ್ಲಲ್ಲೇ ರಸ್ತೆ, ವಾಹನಗಳ ಸಂಪರ್ಕ ಕಡಿದು ಜನಜೀವನ ಅಸ್ತವ್ಯಸ್ತಗೊಂಡಿತು. ಕೆಲವು ಕಡೆ ಮಳೆ ನೀರು ನಡುವೆ ಸಿಲುಕಿದ್ದ ಜನರನ್ನು ದೋಣಿಯಲ್ಲಿ ಕೊಂಡೊಯ್ದು ರಕ್ಷಿಸುವ ಸ್ಥಿತಿ ಉದ್ಭವಿಸಿತು. ಹಲವು ಬಡಾವಣೆಗಳಲ್ಲಿ ಚರಂಡಿ ನೀರು ಮನೆಗೆ ನುಗ್ಗಿ ಅನಾಹುತ ಸೃಷ್ಟಿಸಿತ್ತು. ಈ ಸಂದರ್ಭದಲ್ಲಿ ಸಹಾಯ ಕೋರಿ ಜನರು ಜಿಲ್ಲಾಡಳಿತದ ಕಂಟ್ರೋಲ್ ರೂಂ ಗೆ ಫೋನ್ ಮಾಡಿದರೆ ಸ್ಪಂದನೆಯೇ ವ್ಯಕ್ತವಾಗಲಿಲ್ಲ. ಬಳಿಕ ಸ್ಥಳೀಯ ಕಾರ್ಪೋರೇಟರ್ ಗಳಿಗೆ ಫೋನ್ ಮಾಡಿದರೂ ಉತ್ತರವಿಲ್ಲ. ಕೊನೆಯ ಪ್ರಯತ್ನವಾಗಿ ಮಹಾನಗರ ಪಾಲಿಕೆ ಕಂಟ್ರೋಲ್ ರೂಂಗೆ ಫೋನ್ ಮಾಡಿದರೂ ಪ್ರಯೋಜನವಾಗಲಿಲ್ಲ. ತಮ್ಮ ರಕ್ಷಣೆಗೆ ಬರಬೇಕಾದವರೇ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದ ಮೇಲೆ ಆ ಮಳೆಯಲ್ಲಿ ಸಿಲುಕಿ ಮನೆಯೊಳಗೆ ಸೊಂಟದವರೆಗೆ ನೀರು ಬಂದು, ಮನೆ ಸಾಮಾನುಗಳೆಲ್ಲ ನೀರಲ್ಲಿ ತೇಲಾಡುತ್ತ ಅವುಗಳ ಮಧ್ಯೆ ಅಸಹಾಯಕರಾಗಿ ನಿಲ್ಲುವ ಸ್ಥಿತಿ ಜನರದ್ದಾಗಿತ್ತು. ಇದರಿಂದ ರೋಸಿಹೋದ ಜನತೆ ಆಡಳಿತ ವ್ಯವಸ್ಥೆಗೆ ಹಿಡಿ ಶಾಪ ಹಾಕಿದೆ.
ಒಂದು ದಿನ ಸುರಿದ ಭಾರೀ ಮಳೆ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಹಾಗೂ ಅಪಾಯದಲ್ಲಿ ಸಿಲುಕುವ ಜನರ ರಕ್ಷಣೆಗೆ ಧಾವಿಸಲು ಸ್ಮಾರ್ಟ್ ಸಿಟಿ ಎಂಬ ಹೆಗ್ಗಳಿಕೆ ಪಡೆದ ಮಂಗಳೂರು ನಗರದ ಮಹಾನಗರ ಪಾಲಿಕೆ ಅಥವಾ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಸಂಬಂಧಪಟ್ಟ ಇಲಾಖೆಗಳ ಮಾನ ಒಂದೇ ಮಳೆಗೆ ಹರಾಜಾದಂತಾಗಿದೆ. ಮಂಗಳೂರು ನಗರ ಮಳೆಗಾಲದಲ್ಲಿ ಕಳೆದ ಕೆಲವು ವರ್ಷಗಳಿಂದ ಕೃತಕ ನೆರೆ ಪರಿಸ್ಥಿತಿಯನ್ನು ಎದುರಿಸುತ್ತಾ ಬಂದಿದೆ. ಈ ಬಾರಿ ಇದು ಇನ್ನಷ್ಟು ತೀವ್ರತೆಯನ್ನು ಪಡೆದಿದೆ. ಕಳೆದ ವರ್ಷವೂ ಕೆಲವು ಪ್ರದೇಶಗಳಲ್ಲಿ ಕೃತಕ ನೆರೆ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡು ಗಣನೀಯ ಪ್ರಮಾಣದಲ್ಲಿ ಹಾನಿ ಸಂಭವಿಸಿತ್ತು. ವರ್ಷಂಪ್ರತಿ ಇಲ್ಲಿ ಕೃತಕ ನೆರೆ ಸಮಸ್ಯೆ ತಲೆದೋರಿದಾಗ ಪಾಲಿಕೆ ಅಧಿಕಾರಿಗಳು, ಜಿಲ್ಲಾಡಳಿತದ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಕಾರ್ಯಾಚರಣೆ ನಡೆಸುವ ಮೂಲಕ ಊರು ಕೊಳ್ಳೆಹೋದ ಮೇಲೆ ಕೋಟೆ ಬಾಗಿಲು ಹಾಕಿದರು ಎನ್ನುವಂತಾಗಿದೆ. ಈ ಬಾರಿಯೂ ಇದೇ ಧೋರಣೆ ಮರುಕಳಿಸಿದೆ.
ಆಡಳಿತ ಸೋತಿದ್ದೆಲ್ಲಿ?
ಮಳೆಯ ಅವಾಂತರ ಎದುರಿಸುವಲ್ಲಿ ಮಹಾನಗರ ಪಾಲಿಕೆ, ಜಿಲ್ಲಾಡಳಿತ ಸೇರಿದಂತೆ ಆಡಳಿತ ವ್ಯವಸ್ಥೆಯ ವೈಫಲ್ಯ ಬಯಲಾಗಿದೆ. ಮಳೆಗಾಲ ಎದುರಿಸಲು ಸನ್ನದ್ದರಾಗಿದ್ದೇವೆ ಎಂದು ಆಡಳಿತ ವ್ಯವಸ್ಥೆ ಹೇಳಿತ್ತು. ಮೇ 21 ರಂದು ಮುಂಗಾರು ಮಳೆ ಮತ್ತು ಪ್ರಾಕೃತಿಕ ವಿಕೋಪ ಹಾಗೂ ನೆರೆಹಾವಳಿ ಬಗ್ಗೆ ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿತ್ತು. ಆದರೆ ಇದೀಗ ಅಧಿಕಾರಿಗಳು ನೀಡಿರುವ ವಿವರಣೆಗೂ ಪ್ರಸ್ತುತ ಕಂಡಬಂದಿರುವ ವಸ್ತುಸ್ಥಿತಿಗೂ ಅಜಗಜಾಂತರವಿದೆ ಎಂಬುದು ಸಾಬೀತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.