ವಿಪಕ್ಷಗಳ ಒಗ್ಗಟ್ಟಿಗೆ ಸಿಕ್ಕ ಬಲ : ಬಿಜೆಪಿ ಕೈತಪ್ಪಿದ ಕೈರಾನಾ
Team Udayavani, Jun 1, 2018, 5:15 AM IST
ಲಕ್ನೋ/ಹೊಸದಿಲ್ಲಿ: ಲೋಕಸಭೆ ಮಹಾಸಮರಕ್ಕೆ ಪೂರ್ವಸಿದ್ಧತಾ ಪರೀಕ್ಷೆ ಎಂದೇ ಬಿಂಬಿತವಾಗಿದ್ದ ದೇಶದ 14 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿದ್ದು, ವಿಪಕ್ಷಗಳ ಒಕ್ಕೂಟಕ್ಕೆ ಭರ್ಜರಿ ಮುನ್ನಡೆ ಸಿಕ್ಕಿದೆ. ಅದರಲ್ಲೂ ಹೈವೋಲ್ಟೆàಜ್ ಸಮರಕ್ಕೆ ಕಾರಣವಾಗಿದ್ದ ಉತ್ತರ ಪ್ರದೇಶದ ಕೈರಾನಾ ಲೋಕಸಭೆ ಕ್ಷೇತ್ರ ಬಿಜೆಪಿ ಕೈಬಿಟ್ಟು ಹೋಗಿದ್ದು, ಇಲ್ಲಿ ವಿಪಕ್ಷಗಳ ಸರ್ವಸಮ್ಮತ ಅಭ್ಯರ್ಥಿ ಗೆದ್ದಿದ್ದಾರೆ. ನಾಲ್ಕು ಲೋಕಸಭೆ ಸ್ಥಾನ ಮತ್ತು 10 ವಿಧಾನಸಭೆ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ನೇತೃತ್ವದ NDA ಕೇವಲ ಮೂರರಲ್ಲಿ ಮಾತ್ರ ಗೆದ್ದಿದೆ. ಉಳಿದ 11 ಕ್ಷೇತ್ರಗಳು ವಿಪಕ್ಷಗಳ ಪಾಲಾಗಿವೆ. 2019ರ ಲೋಕಸಭೆ ಚುನಾವಣೆ ಬೆನ್ನಲ್ಲೇ ನಡೆದ ಈ ಚುನಾವಣೆ ವಿಪಕ್ಷಗಳ ಒಗ್ಗಟ್ಟಿಗೆ ಭಾರೀ ಬಲ ತಂದುಕೊಟ್ಟಿದ್ದರೆ, ಬಿಜೆಪಿಗೆ ಕೊಂಚ ನಿರಾಸೆಯುಂಟು ಮಾಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಫಲಿತಾಂಶ ಹೊರಬೀಳುತ್ತಿದ್ದಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಇದು ನಾಲ್ಕು ವರ್ಷಗಳ NDA ಆಡಳಿತಕ್ಕೆ ಜನ ನೀಡಿದ ತೀರ್ಮಾನ ಎಂದು ಅಣಕಿಸಿದೆ. ಅಲ್ಲದೆ, ಬಿಜೆಪಿಯ ಸಾಮ್ರಾಜ್ಯ ಇಲ್ಲಿಂದಲೇ ಕುಸಿಯಲು ಆರಂಭಿಸಿದೆ ಎಂದು ಹೇಳಿದೆ. ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖೀಲೇಶ್ ಯಾದವ್, ಬಿಜೆಪಿಗೆ ಸರಿಯಾದ ಪಾಠ ಕಲಿಸಿದ್ದೇವೆ ಎಂದಿದ್ದಾರೆ. ಕೈರಾನಾದಲ್ಲಿ ಗೆದ್ದ RLD, ಪಶ್ಚಿಮ ಬಂಗಾಲದಲ್ಲಿ ಗೆದ್ದ ಟಿಎಂಸಿ, ಬಿಹಾರದಲ್ಲಿನ RJD ನಾಯಕರು ಈ ಗೆಲುವಿನ ಬಗ್ಗೆ ಭಾರೀ ಸಂತಸ ವ್ಯಕ್ತಪಡಿಸಿದ್ದು, 2019ರಲ್ಲೂ ಇದೇ ಫಲಿತಾಂಶ ಮರುಕಳಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ಮಾನ ಉಳಿಸಿದ ಫಡ್ನವೀಸ್: ಉಪಚುನಾವಣೆ ನಡೆದ ಅಷ್ಟೂ ರಾಜ್ಯಗಳಲ್ಲಿ ಬಿಜೆಪಿಗೆ ಮರ್ಯಾದೆ ಉಳಿಸಿದ್ದು ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ಮಾತ್ರ. ಇಲ್ಲಿನ ಪಾಲ್ಗರ್ ಕ್ಷೇತ್ರದಲ್ಲಿ ಅಂಗಪಕ್ಷ ಶಿವಸೇನೆಯಿಂದಲೇ ಭಾರೀ ಸ್ಪರ್ಧೆ ಎದುರಾಗಿತ್ತು. ಕಡೆಗೂ ಬಿಜೆಪಿ ಅಭ್ಯರ್ಥಿಯೇ ಗೆದ್ದು ಬೀಗಿದರು. ಇಲ್ಲಿ ಕಾಂಗ್ರೆಸ್ ಸಂಪೂರ್ಣ ಠೇವಣಿ ಕಳೆದುಕೊಂಡಿದೆ. ಇನ್ನು ಮತ್ತೂಂದು ಬಿಜೆಪಿ ಕ್ಷೇತ್ರ ಭಂಡಾರ – ಗೋಂಡಿಯಾದಲ್ಲಿ ಎನ್‌ಸಿಪಿ ಗೆಲುವು ಸಾಧಿಸಿದೆ. ಈ ಕ್ಷೇತ್ರ NCP ನಾಯಕ ಪ್ರಫುಲ್ ಪಟೇಲ್ ಅವರ ಭದ್ರಕೋಟೆಯಾಗಿದ್ದು, 2014ರಲ್ಲಿ ಮೋದಿ ಅಲೆಯಿಂದಾಗಿ NCP ಕೈತಪ್ಪಿತ್ತು. ಮತ್ತೀಗ ಉಪಚುನಾವಣೆಯಲ್ಲಿ ಈ ಕ್ಷೇತ್ರವನ್ನು ವಾಪಸ್ ಪಡೆಯುವಲ್ಲಿ ಅದು ಯಶಸ್ವಿಯಾಗಿದೆ. ಉಳಿದಂತೆ ನಾಗಾಲ್ಯಾಂಡ್ ನಲ್ಲಿ NDA ಮಿತ್ರಪಕ್ಷ NDPP ಜಯ ಗಳಿಸಿದೆ. ವಿಧಾನಸಭೆಗೆ ಬಂದರೆ ಉತ್ತರಾಖಂಡದಲ್ಲಿ ಬಿಜೆಪಿ ತನ್ನ ಕ್ಷೇತ್ರವನ್ನು ಉಳಿಸಿಕೊಂಡಿದೆ.
ಉತ್ತರ ಪ್ರದೇಶದಲ್ಲಿ ಮೈತ್ರಿಕೂಟಕ್ಕೆ ಸಿಕ್ಕ ಗೆಲುವು: ಈ ಹಿಂದೆ ಗೋರಖ್ ಪುರ ಮತ್ತು ಫುಲ್ಪುರದಲ್ಲಿ ಬಿಜೆಪಿಗೆ ಸೋಲುಣಿಸಿದ್ದ SP- BSP -RLD ಮೈತ್ರಿಕೂಟ ಕೈರಾನಾದಲ್ಲೂ ಗೆಲುವು ಸಾಧಿಸಿದೆ. ಇಲ್ಲಿ RLD ಅಭ್ಯರ್ಥಿಗೆ ಎಲ್ಲರೂ ಬೆಂಬಲ ನೀಡಿದ್ದರು. ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಗೆ ಇದು ಸತತ 3ನೇ ಸೋಲಾಗಿದ್ದು ತೀವ್ರ ಮುಖಭಂಗಕ್ಕೊಳಗಾಗಿದೆ.
ಇನ್ನು ಬಿಹಾರದಲ್ಲಿ ಜೆಡಿಯು JD(U) ಸೋತಿದ್ದರೆ, ಲಾಲು ಪುತ್ರ ತೇಜಸ್ವಿ ಯಾದವ್ ನೇತೃತ್ವದ RJD ಗೆದ್ದಿದೆ. ಝಾರ್ಖಂಡ್‌ನಲ್ಲಿ ಎರಡೂ ಕ್ಷೇತ್ರಗಳನ್ನು ಜೆಎಂಎಂ ಉಳಿಸಿಕೊಂಡಿದೆ. ಪಶ್ಚಿಮ ಬಂಗಾಲದಲ್ಲಿ ಟಿಎಂಸಿ ಗೆದ್ದು ಕ್ಷೇತ್ರ ಉಳಿಸಿಕೊಂಡಿದ್ದರೆ, ಬಿಜೆಪಿ ಎರಡನೇ ಸ್ಥಾನಕ್ಕೆ ಬಂದಿದೆ. ಸಿಪಿಎಂ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಉತ್ತರಾಖಂಡದಲ್ಲಿ ಆಡಳಿತಾರೂಢ ಬಿಜೆಪಿ ತನ್ನ ಸ್ಥಾನ ಉಳಿಸಿಕೊಂಡಿದೆ.
ಚುನಾವಣೆ ಬಹಿಷ್ಕರಿಸಿ: ಉದ್ಧವ್
ವಿದ್ಯುನ್ಮಾನ ಮತಯಂತ್ರಗಳ ಬಗೆಗಿನ ವಿವಾದ ಪರಿಹಾರವಾಗದೇ ಇದ್ದಲ್ಲಿ, ವಿಪಕ್ಷಗಳೆಲ್ಲವೂ ಚುನಾವಣೆಯನ್ನೇ ಬಹಿಷ್ಕರಿಸಬೇಕು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ. ಪಾಲ್ಗರ್ ಕ್ಷೇತ್ರದ ಫಲಿತಾಂಶ ಪ್ರಕಟಿಸಬಾರದು ಮತ್ತು ಹೊಸದಾಗಿ ಎಣಿಕೆ ಮಾಡಬೇಕು. ಇಲ್ಲದಿದ್ದರೆ ಕೋರ್ಟ್‌ಗೆ ಹೋಗುವುದಾಗಿ ಠಾಕ್ರೆ ಎಚ್ಚರಿಸಿದ್ದಾರೆ. ಆದರೆ ಚುನಾವಣಾ ಆಯೋಗ ಶಿವಸೇನೆ ಮನವಿಯನ್ನು ತಿರಸ್ಕರಿಸಿದೆ.
ಯುಪಿಯ ಮೊದಲ ಮುಸ್ಲಿಂ ಸಂಸದೆ
ಕೈರಾನಾದಲ್ಲಿ ಅಭೂತಪೂರ್ವ ಜಯ ಗಳಿಸಿರುವ ಆರ್‌ಎಲ್‌ಡಿ ಅಭ್ಯರ್ಥಿ ತಬಸ್ಸುಂ ಹಸನ್ (48) ಉತ್ತರ ಪ್ರದೇಶದಿಂದ 16ನೇ ಲೋಕಸಭೆಗೆ ಪ್ರವೇಶಿಸಿರುವ ಮೊದಲ ಮುಸ್ಲಿಂ ಸಂಸದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಬಸ್ಸುಂ ಬಿಜೆಪಿ ಅಭ್ಯರ್ಥಿ ಮೃಗಾಂಕಾರನ್ನು 44,600 ಮತಗಳ ಅಂತರದಿಂದ ಸೋಲಿಸಿದ್ದಾರೆ. ತಬಸ್ಸುಂಗೆ SP, BSP ಮತ್ತು ಕಾಂಗ್ರೆಸ್ ಬೆಂಬಲ ಘೋಷಿಸಿತ್ತು.
ಇವಿಎಂ ಬಗ್ಗೆ ತನಿಖೆಯಾಗಲಿ
ಇವಿಎಂನಲ್ಲಿನ ಲೋಪದ ಬಗ್ಗೆ ಸಿಎಂ ಫಡ್ನವೀಸ್ ಕೂಡ ಮಾತನಾಡಿದ್ದು, ಅದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಇವಿಎಂನಲ್ಲಿನ ಸಮಸ್ಯೆ ಕಾಣಿಸಿಕೊಂಡ ಬಳಿಕ ಮತದಾರರು ಪುನಃ ಬರಲೇ ಇಲ್ಲ ಎಂದೂ ಅವರು ಹೇಳಿದ್ದಾರೆ. ಇದೇ ವೇಳೆ, ಬಿಜೆಪಿ-ಶಿವಸೇನೆ ನಡುವಿನ ಮೈತ್ರಿ ಮುಂದುವರಿಯ ಬೇಕೆಂಬುದೇ ನಮ್ಮ ಆಸೆ. ಅದಕ್ಕೆ ವಿರೋಧವೇ ಇಲ್ಲ. ಮೈತ್ರಿ ಮಾತುಕತೆಗೆ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಯಾರ ಮೇಲೆ ಯಾವ ಪರಿಣಾಮ?
ದೇಶದ ವಿವಿಧೆಡೆ ನಡೆದ ಉಪಚುನಾವಣೆಗಳು ಹಲವು ನಾಯಕರು ಹಾಗೂ ಪಕ್ಷಗಳ ಮೇಲೆ ವಿಭಿನ್ನ ಪ್ರಭಾವವನ್ನು ಮೂಡಿಸಲಿವೆ. ಇದರಿಂದ ಸದ್ಯದ ಅಧಿಕಾರದಲ್ಲಿ ಯಾವ ಬದಲಾವಣೆಯಾ ಗದಿದ್ದರೂ ಮುಂಬರುವ ರಾಜ್ಯಗಳ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಮತದಾರರು ಹಾಗೂ ಪಕ್ಷಗಳ ಕಾರ್ಯಕರ್ತರ ಮೇಲೆ ಮಹತ್ವದ ಪರಿಣಾಮ ಬೀರಲಿದೆ.
ಮೋದಿ ಮತ್ತು ಅಮಿತ್ ಶಾ
ಇಬ್ಬರಿಗೂ ಇದು ರಾಜಕೀಯ ಹಿನ್ನಡೆ. ವಿಪಕ್ಷಗಳು ಒಟ್ಟಾದರೆ 2019ರ ಚುನಾವಣೆಯ ಹಾದಿ ಸುಗಮವಿಲ್ಲ ಎಂಬುದನ್ನು ಇದು ಇನ್ನೊಮ್ಮೆ ಸೂಚಿಸುತ್ತದೆ. ಕರ್ನಾಟಕ ಚುನಾವಣೆಯ ಸೋಲಿನ ಅನಂತರದಲ್ಲಿ ಇದು ಪಕ್ಷದ ಕಾರ್ಯಕರ್ತರ ಆತ್ಮವಿಶ್ವಾಸವನ್ನು ಕುಗ್ಗಿಸಬಹುದು.
ರಾಹುಲ್ ಗಾಂಧಿ
ಬಿಜೆಪಿ ಸೋಲು ರಾಹುಲ್ ಗೆ ಬಲ. ಆದರೆ ಪಕ್ಷದ ಬೇರುಗಳು ಮಿತ್ರ ಪಕ್ಷಗಳಲ್ಲೇ ಇರುವುದರಿಂದ, ಈ ಗೆಲುವಿನಿಂದ ತನ್ನ ಸ್ಥಾನ ಬಲವಾಗುತ್ತದೆ ಎಂದು ನಿರೀಕ್ಷಿಸುವಂತಿಲ್ಲ.
ಜಯಂತ್ ಚೌಧರಿ
ರಾಷ್ಟ್ರೀಯ ಲೋಕದಳಕ್ಕೆ ಇದು ಮಹತ್ವದ ಸನ್ನಿವೇಶ. ಚೌಧರಿ ತನ್ನ ಹೆಗಲಿನ ಮೇಲೆ ಹೊತ್ತಿರುವ ಪಕ್ಷ ಈಗಾಗಲೇ, ಜಾಠರನ್ನು ಮತ್ತೆ ಬಡಿದೆಬ್ಬಿಸಿದೆ. ಜಾs… ಮತ್ತು ಮುಸ್ಲಿಮರ ರಾಜಕೀಯ ಸಂಬಂಧ ಈ ಮೂಲಕ ಮತ್ತೆ ಮುನ್ನೆಲೆಗೆ ಬಂದಿದೆ. ಇದನ್ನು ಮುಂದಿನ ಚುನಾವಣೆಯಲ್ಲಿ ಕಾಯ್ದುಕೊಳ್ಳುವ ಹೊಣೆ ಅವರ ಮೇಲಿದೆ.
ತೇಜಸ್ವಿ ಯಾದವ್
ತಂದೆ ಲಾಲು ಪ್ರಸಾದ್ ಜೈಲಿನಲ್ಲಿದ್ದಾಗಲೂ ಪಕ್ಷವನ್ನು ಯಶಸ್ಸಿನತ್ತ ಕೊಂಡೊಯ್ದಿದ್ದು ತೇಜಸ್ವಿ. ಅರಾರಿಯಾ ಉಪಚುನಾವಣೆಯ ಅನಂತರ ಇದೀಗ, ಜೋಕಿಹಾತ್ ವಿಧಾನಸಭೆ ಚುನಾವಣೆಯಲ್ಲಿನ ಯಶಸ್ಸು ಬಿಹಾರ ಸಿಎಂ ನಿತೀಶ್ ಕುಮಾರ್ ಗೆ ತಲೆನೋವು ತಂದಿದೆ.
ಅಖೀಲೇಶ್ ಮತ್ತು ಮಾಯಾವತಿ
ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷಗಳು ಕೈರಾನಾದಲ್ಲಿ RLDಯನ್ನು ಬಹಿರಂಗವಾಗಿಯೇ ಬೆಂಬಲಿಸಿದ್ದವು. ಇದೇ ರೀತಿಯ ಸಹಭಾಗಿತ್ವ ಗೋರಖ್ ಪುರ ಮತ್ತು ಫೂಲ್‌ಪುರದಲ್ಲೂ ಬಿಜೆಪಿಯನ್ನು ಸೋಲಿಸಿತ್ತು. 2019ರ ಹೊತ್ತಿಗೆ ಎರಡೂ ಪಕ್ಷಗಳು ಇನ್ನಷ್ಟು ಆತ್ಮವಿಶ್ವಾಸದಿಂದ ಒಗ್ಗಟ್ಟಾಗಬಹುದು.
ಉದ್ಧವ್ ಠಾಕ್ರೆ
ಬಿಜೆಪಿ ಸರಕಾರಕ್ಕೆ ಬೆಂಬಲ ನೀಡಿ ಬಿಜೆಪಿ ವಿರುದ್ಧವೇ ಶಿವಸೇನೆ ಸ್ಪರ್ಧಿಸಿತ್ತಾದರೂ ಈ ಸೋಲು ಠಾಕ್ರೆ ಬಳಗ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಿರುವ ಸಂಕೇತವಾಗಿದೆ. ಅಲ್ಲದೆ ಸಿಎಂ ದೇವೇಂದ್ರ ಫಡ್ನವೀಸ್ ಇನ್ನಷ್ಟು ಪ್ರಭಾವಶಾಲಿಯಾಗಿ ಹೊರಹೊಮ್ಮಿದ್ದಾರೆ.
ಬಿಜೆಪಿಯು NDA ಮಿತ್ರಪಕ್ಷಗಳನ್ನು ಇನ್ನಷ್ಟು ಸಂಘಟಿತಗೊಳಿಸಬೇಕು. ತೈಲ ಬೆಲೆ ಏರಿಕೆಯಂಥ ಸಮಸ್ಯೆ ಬಗೆಹರಿಸಬೇಕು. ಉ.ಪ್ರದೇಶದಲ್ಲಿ SP-BSP ಒಂದಾಗಿರುವುದು ಬಿಜೆಪಿಗೆ ಅತಿದೊಡ್ಡ ಸವಾಲಾಗಿದೆ.
– ಕೆ.ಸಿ.ತ್ಯಾಗಿ, ಜೆಡಿಯು ವಕ್ತಾರ
ಯಶಸ್ಸಿನ ಕಡೆಗೆ ದಾಪುಗಾಲು ಹಾಕಬೇಕೆಂದರೆ ಮೊದಲು 2 ಹೆಜ್ಜೆ ಹಿಂದಿಡಬೇಕು. ಉಪಚುನಾವಣೆ ಫಲಿತಾಂಶ ಅದನ್ನೇ ತೋರುತ್ತಿದೆ. ನಾವು 2019ರ ಸಾರ್ವತಿಕ ಚುನಾವಣೆಯಲ್ಲಿ ಭಾರೀ ಯಶಸ್ಸು ಗಳಿಸುವುದು ಖಚಿತ.
– ರಾಜನಾಥ್ ಸಿಂಗ್, ಕೇಂದ್ರ ಸಚಿವ
ಉಪಚುನಾವಣೆಯ ಫಲಿತಾಂಶವು 4 ವರ್ಷಗಳ ಮೋದಿ ನೇತೃತ್ವದ ಸರಕಾರದ ವಿರುದ್ಧದ ಜನಾಭಿಪ್ರಾಯವಾಗಿದೆ. ಬಿಜೆಪಿ ಸಾಮ್ರಾಜ್ಯದ ಪತನ ಶುರುವಾಗಿದ್ದು, ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ಯಶಸ್ಸು ಖಚಿತವಾಗಿದೆ.
– ಪ್ರಮೋದ್ ತಿವಾರಿ, ಕಾಂಗ್ರೆಸ್ ನಾಯಕ
ಕಾಂಗ್ರೆಸ್ ತಾನು ಗೆಲ್ಲದಿದ್ದರೂ ಬಿಜೆಪಿ ಸೋತಿತೆಂದು ಸಂಭ್ರಮಾಚರಿಸುತ್ತಿದೆ. ನಾವು ನಿಮ್ಮಿಂದ 14 ರಾಜ್ಯಗಳನ್ನು ಕಸಿದುಕೊಂಡಿದ್ದೇವೆ. ಅದು ದೊಡ್ಡದೋ ಅಥವಾ ಉಪಚುನಾವಣೆಯಲ್ಲಿ 9 ಸ್ಥಾನ ಕಳೆದುಕೊಂಡಿದ್ದು ದೊಡ್ಡದೋ?
– ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಬಿಜೆಪಿಯ ಅಂತ್ಯ ಶುರುವಾಗಿದೆ. ನಾವು ಆರಂಭಿಸಿರುವ ತೃತೀಯ ರಂಗವು ಯಶಸ್ಸಿನತ್ತ ಸಾಗುತ್ತಿದೆ. ಅಖೀಲೇಶ್, ಮಾಯಾ, ಅಜಿತ್ ಸಿಂಗ್ ಒಂದಾದರೆ 2014ರ ಫಲಿತಾಂಶವನ್ನು ಉಲ್ಟಾ ಮಾಡುವುದು ಖಚಿತ.
– ಮಮತಾ ಬ್ಯಾನರ್ಜಿ, ಟಿಎಂಸಿ ನಾಯಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್: ಏನಿದರ ಅಸಲೀಯತ್ತು?
Sabarimala: ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
Indian Navy; ಪಾಕ್,ಚೀನಾದ ಮೂಲೆ ಮೂಲೆಗೂ ತಲುಪುವ ಕ್ಷಿಪಣಿ ಪರೀಕ್ಷೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Dandeli: ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದೊಳಗೆ ಹಾವು ಪ್ರತ್ಯಕ್ಷ
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.