ಆರಂಭದಿಂದ 18ನೇ ಸುತ್ತಿನವರೆಗೂ ಕುಣಿದು ಕುಪ್ಪಳಿಸಿದ ಬೆಂಬಲಿಗರು
Team Udayavani, Jun 1, 2018, 11:55 AM IST
ಬೆಂಗಳೂರು: ಗುರುವಾರ ಮತ ಎಣಿಕೆಗೆ ಚಾಲನೆ ದೊರೆತ ಕೆಲ ಹೊತ್ತಿನಲ್ಲೇ ಆರಂಭವಾದ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಗೆಲುವಿನ ಅಧಿಕೃತ ಘೋಷಣೆವರೆಗೂ ಮುಂದುವರಿದಿತ್ತು.
ಸಾಮಾನ್ಯವಾಗಿ ಮತ ಎಣಿಕೆ ವೇಳೆ ಹಲವು ಸುತ್ತಿನ ಮತ ಎಣಿಕೆ ಮುಗಿದು, ಎಣಿಕೆಗೆ ಬಾಕಿಯಿರುವ ಮತಗಳಿಗಿಂತ ಹೆಚ್ಚಿನ ಮುನ್ನಡೆ ಕಾಯ್ದುಕೊಂಡಿರುವುದು ಖಾತರಿಯಾದಾಗ ಕಾರ್ಯಕರ್ತರು ಸಂಭ್ರಮಾಚರಣೆಗೆ ಮುಂದಾಗುತ್ತಾರೆ. ಆದರೆ ರಾಜರಾಜೇಶ್ವರಿನಗರ ಕ್ಷೇತ್ರದ ಮತ ಎಣಿಕೆ ಮೊದಲ ಸುತ್ತಿನಿಂದಲೇ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮದಲ್ಲಿ ತೊಡಗಿದ್ದು ವಿಶೇಷವಾಗಿತ್ತು.
ಹಲಗೇ ವಡೇರಹಳ್ಳಿಯ ಜ್ಞಾನಶಕ್ತಿ ವಿದ್ಯಾನಿಕೇತನ ಶಾಲೆಯಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಕೇಂದ್ರದ ಬಳಿ ಕಾರ್ಯಕರ್ತರು ಜಮಾಯಿಸಲಾರಂಭಿಸಿದರು. ಬೆಳಗ್ಗೆ 8.30ರ ಹೊತ್ತಿಗೆ ಗುಂಪುಗೂಡಿದ ಕಾಂಗ್ರೆಸ್ ಕಾರ್ಯಕರ್ತರ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.
ಮತ ಎಣಿಕೆ ಕೇಂದ್ರ ಮುಂಭಾಗದ ರಸ್ತೆಯಲ್ಲಿ 200 ಮೀಟರ್‌ವರೆಗೆ ಪ್ರವೇಶ ನಿರ್ಬಂಧಿಸಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಬೈಕ್, ಕಾರುಗಳನ್ನು ಪರಿಶೀಲಿಸಿ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿತ್ತು. ಆದರೆ ಬಸ್ ಹಾಗೂ ಇತರ ಭಾರಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿತ್ತು.
ಮತ ಎಣಿಕೆ ಕೇಂದ್ರದಲ್ಲಿದ್ದವರೊಂದಿಗೆ ನಿರಂತರವಾಗಿ ದೂರವಾಣಿ ಸಂಪರ್ಕದಲ್ಲಿದ್ದ ಕಾರ್ಯಕರ್ತರು, ಮುನ್ನಡೆ ಸಾಧಿಸಿದ ಮಾಹಿತಿ ಸಿಕ್ಕಾಗಲೆಲ್ಲಾ ಹಷೋìದ್ಘಾರ ವ್ಯಕ್ತಪಡಿಸುತ್ತಿದ್ದರು. ಗದ್ದಲ ಮಾಡದಂತೆ ಪೊಲೀಸರು ಸೂಚಿಸಿದರೂ ಕಾರ್ಯಕರ್ತರು ಘೋಷಣೆ ಕೂಗುವುದನ್ನು ಮುಂದುವರಿಸಿದ್ದರು.
ಬೆಳಗ್ಗೆ 8.45ರ ಸುಮಾರಿನಲ್ಲಿ ಎರಡು ಸುತ್ತಿನ ಎಣಿಕೆ ಮುಗಿದು ಮುನಿರತ್ನ ಅವರು ಮುನ್ನಡೆಯಲ್ಲಿರುವ ಮಾಹಿತಿ ಸಿಗುತ್ತಿದ್ದಂತೆ ಬ್ಯಾರಿಕೇಡ್ ದಾಟಿ ಕೇಂದ್ರದ ಪ್ರವೇಶ ದ್ವಾರದ ಬಳಿ ಜಮಾಯಿಸಿದ ಬೆಂಬಲಿಗರು, ಮುನಿರತ್ನ ಪರ ಘೋಷಣೆ ಕೂಗಲಾರಂಭಿಸಿದರು. ಸೂಚನೆ ನೀಡಿದರೂ ಗದ್ದಲ ಕಡಿಮೆಯಾಗದ ಕಾರಣ ಪೊಲೀಸರು ಎಲ್ಲ ಕಾರ್ಯಕರ್ತರನ್ನು ಬ್ಯಾರಿಕೇಡ್‌ನ ಹೊರಗೆ ಕಳುಹಿಸಿದರು.
ಬೆಳಗ್ಗೆ 11 ಗಂಟೆ ಹೊತ್ತಿಗೆ ಮುನಿರತ್ನ ಭರ್ಜರಿ ಮುನ್ನಡೆ ಸಾಧಿಸಿರುವ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತು. ಮತ ಎಣಿಕೆ ಮುಗಿದು ಅಂತಿಮವಾಗಿ ಮುನಿರತ್ನ ಅವರು ಜಯ ಗಳಿಸಿರುವುದು ಖಾತರಿಯಾಗುತ್ತಿದ್ದಂತೆ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಘೋಷಣೆ ಕೂಗಲಾರಂಭಿಸಿದರು.
ಬಿಜೆಪಿ, ಜೆಡಿಎಸ್‌ನವರು ಕಾಣಲೇ ಇಲ್ಲ: ಮೊದಲ ಸುತ್ತಿನಿಂದಲೂ ಕಾಂಗ್ರೆಸ್‌ನ ಮುನಿರತ್ನ ಅವರು ಮುನ್ನಡೆ ಕಾಯ್ದುಕೊಂಡಿದ್ದರಿಂದ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಎಣಿಕೆ ಕೇಂದ್ರದ ಮುಂಭಾಗದ ಕಡೆಗೆ ಬರಲೇ ಇಲ್ಲ. ಬಿಜೆಪಿ, ಜೆಡಿಎಸ್‌ನ ಏಜೆಂಟರು ಕೇಂದ್ರದ ಒಳಗಿದ್ದರೂ ಹೊರಗೆ ಕಾರ್ಯಕರ್ತರ ಗುಂಪು ಕಾಣಲಿಲ್ಲ. ಆದರೆ ಕಾಂಗ್ರೆಸ್ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಕೇಂದ್ರಕ್ಕೆ ಬಾರದ ಮುನಿರತ್ನ, ರಾಮಚಂದ್ರ: ಬಿಜೆಪಿಯ ಮುನಿರಾಜುಗೌಡ ಅವರನ್ನು ಹೊರತುಪಡಿಸಿದರೆ ಕಾಂಗ್ರೆಸ್‌ನ ಮುನಿರತ್ನ ಹಾಗೂ ಜೆಡಿಎಸ್‌ನ ಜಿ.ಎಚ್.ರಾಮಚಂದ್ರ ಅವರು ಮತ ಎಣಿಕೆ ಕೇಂದ್ರದಲ್ಲಿ ಕಾಣಿಸಿಕೊಳ್ಳಲಿಲ್ಲ. ಮತ ಎಣಿಕೆ ಕೇಂದ್ರದಲ್ಲಿದ್ದ ಮುನಿರಾಜು ಗೌಡ, ಏಳನೇ ಸುತ್ತಿನಲ್ಲಿ ಭಾರಿ ಹಿನ್ನಡೆ ಅನುಭವಿಸಿದ ಹಿನ್ನೆಲೆಯಲ್ಲಿ ಹೊರ ನಡೆದರು. ಇದೇ ವೇಳೆ ಜೆಡಿಎಸ್‌ನ ರಾಮಚಂದ್ರ ಕುಟುಂಬ ಸಮೇತರಾಗಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಆದರೆ ಮತ ಎಣಿಕೆ ಕೇಂದ್ರಕ್ಕೆ ಬರಲಿಲ್ಲ.
ಹುಚ್ಚ ವೆಂಕಟ್ ಎಂದು ಉಲ್ಲೇಖ: ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹುಚ್ಚ ವೆಂಕಟ್ ನಾಮಪತ್ರದಲ್ಲಿ ತಮ್ಮ ಹೆಸರನ್ನು ಎಲ್.ವೆಂಕಟರಾಮ್ ಎಂದು ನಮೂದಿಸಿದ್ದರು. ಆದರೆ ಮತ ಎಣಿಕೆ ಕೇಂದ್ರದಲ್ಲಿ ಮತ ವಿವರ ಪ್ರಕಟಿಸುವಾಗ ಚುನಾವಣಾ ಸಿಬ್ಬಂದಿ ವೆಂಕಟರಾಮ್ ಎನ್ನುವ ಬದಲಿಗೆ “ಹುಚ್ಚ ವೆಂಕಟ್’ ಎಂದೇ ಉಲ್ಲೇಖೀಸಿದ್ದು ಕಂಡುಬಂತು.
ಗಣ್ಯರ ಅಭಿನಂದನೆ: ಸಾಕಷ್ಟು ವಿವಾದ, ಗೊಂದಲ, ಜಿದ್ದಾಜಿದ್ದಿನ ಹೋರಾಟ ನಡೆದಿದ್ದ ಚುನಾವಣೆಯಲ್ಲಿ ಗೆದ್ದ ಮುನಿರತ್ನ ಅವರನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅಭಿನಂದಿಸಿದ್ದಾರೆ. ಗೆಲುವು ಸಾಧಿಸಿದ ಬಳಿಕ ಮುನಿರತ್ನ ಅವರು ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಅವರನ್ನು ಭೇಟಿ ಮಾಡಿ ಸಿಹಿ ತಿನಿಸಿ ಕೃತಜ್ಞತೆ ಸಲ್ಲಿಸಿದರು.
ಮುನಿರತ್ನ ಗೆಲುವಿನಿಂದ ಮೈತ್ರಿ ಸರ್ಕಾರಕ್ಕೆ ಇನ್ನಷ್ಟು ಬಲ ಬಂದಿದೆ. ಕರ್ನಾಟಕದ ಜನ ಅಭಿವೃದ್ಧಿ ಪರ ಇದ್ದಾರೆ ಎಂಬುದನ್ನು ಈ ವಿಜಯ ಮತ್ತೆ ಸಾಬೀತುಪಡಿಸಿದೆ. ಬಹುತ್ವ ಚಳವಳಿ ಕಂಡ ಕರ್ನಾಟಕ ಎಂದಿಗೂ ಕೋಮು ಸಾಮರಸ್ಯದ ಪರವಾಗಿಯೇ ಇರಲಿದೆ ಎಂಬುದನ್ನು ಫಲಿತಾಂಶ ತೋರಿಸಿದೆ. ಮುನಿರತ್ನ ಅವರು ಕ್ಷೇತ್ರದ ಅಭಿವೃದ್ಧಿಗೆ ಮಾದರಿಯಾಗಲಿ.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಮುನಿರತ್ನ ಗೆಲುವು ನಿರೀಕ್ಷಿತ. ಸಾರ್ವತ್ರಿಕ ಚುನಾವಣೆ ವೇಳೆಯೇ ಈ ಕ್ಷೇತ್ರಕ್ಕೂ ಮತದಾನ ನಡೆದಿದ್ದರೂ ಅವರೇ ಗೆಲ್ಲುತ್ತಿದ್ದರು. ಪಕ್ಷಕ್ಕೆ ಮತ ನೀಡಿದ ಎಲ್ಲ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ದೇಶದ ವಿವಿಧೆಡೆ ನಡೆದ ಲೋಕಸಭೆ ಉಪ ಚುನಾವಣೆಗಳಲ್ಲೂ ಬಿಜೆಪಿ ಸೋತಿದೆ. 2019ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಸೋಲಾಗುವುದರ ಮುನ್ಸೂಚನೆ ಈಗಲೇ ಸಿಕ್ಕಿದೆ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಕಾಂಗ್ರೆಸ್, ಜೆಡಿಎಸ್ ಮೊದಲೇ ಒಳ ಒಪ್ಪಂದ ಮಾಡಿಕೊಂಡಿದ್ದವು. ಆದರೂ ಜನಾದೇಶಕ್ಕೆ ತಲೆ ಬಾಗುತ್ತೇನೆ.
-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಮೈತ್ರಿ ಸರ್ಕಾರ ರಚನೆ ಬಳಿಕ ಇಡೀ ದೇಶವೇ ರಾಜರಾಜೇಶ್ವರಿನಗರ ಕ್ಷೇತ್ರದ ಕಡೆ ನೋಡುತ್ತಿತ್ತು. ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸಾಕಷ್ಟು ಆರೋಪ ಹೊರಿಸಿ ಕೆಟ್ಟ ಹೆಸರು ತರಲು ಕೆಲವರು ಪ್ರಯತ್ನಿಸಿದರು. ಆದರೆ ಕ್ಷೇತ್ರದ ಜನ ಐತಿಹಾಸಿಕ ತೀರ್ಪು ನೀಡಿದ್ದಾರೆ. ನಮ್ಮ ಸಂಸದರು, ಶಾಸಕರು ಜೋಡಿ ಎತ್ತಿನಂತೆ ದುಡಿದಿದ್ದಕ್ಕೆ ಜನ ಮನ್ನಣೆ ನೀಡಿದ್ದಾರೆ.
-ಡಿ.ಕೆ.ಶಿವಕುಮಾರ್, ಮಾಜಿ ಸಚಿವ
ಕ್ಷೇತ್ರದಲ್ಲಿ ಅಭಿವೃದ್ಧಿ ಗೆಲ್ಲುವುದೇ, ಸುಳ್ಳು ಆರೋಪ ಗೆಲ್ಲುವುದೇ ಎಂಬ ಕುತೂಹಲವಿತ್ತು. ಕೊನೆಗೆ ಮತದಾರರು ಅಭಿವೃದ್ಧಿಯ ಕೈ ಹಿಡಿದಿದ್ದಾರೆ. ಮುನಿರತ್ನ ಅವರನ್ನು ಕಣದಿಂದ ಹೊರಹಾಕಲು ಬಿಜೆಪಿ ಪ್ರಯತ್ನಿಸಿತ್ತು. ಒಂದು ಪಕ್ಷ ಜಾತಿ ಹೆಸರಿನಲ್ಲಿ ಮತ್ತೂಂದು ಪಕ್ಷ ಧರ್ಮದ ಹೆಸರಿನಲ್ಲಿ ಸಮಾಜ ಒಡೆಯಲು ಪ್ರಯತ್ನಿಸಿದರೂ ಕೊನೆಗೆ ಅಭಿವೃದ್ಧಿಗೆ ಜಯ ಸಿಕ್ಕಿದೆ.
-ಡಿ.ಕೆ.ಸುರೇಶ್, ಸಂಸದ
ಜಾತಿ, ಧರ್ಮ ನೋಡದೆ ಜನ ಮತ ನೀಡುತ್ತಾರೆ ಎಂಬುದಕ್ಕೆ ಕ್ಷೇತ್ರವೇ ಸಾಕ್ಷಿ. ಏನೆಲ್ಲಾ ಆರೋಪ ಕೇಳಿಬಂದಾಗಲೂ ಐದು ವರ್ಷ ಸತತವಾಗಿ ನನ್ನೊಂದಿಗಿದ್ದು, ನನ್ನ ಗೆಲುವಿಗೆ ಶ್ರಮಿಸಿದ್ದು ಸಂಸದ ಡಿ.ಕೆ.ಸುರೇಶ್. ಸುಳ್ಳು ಆರೋಪಗಳಿಂದ ಬೇಸತ್ತು ಚುನಾವಣೆಯಿಂದ ವಿಮುಖನಾಗಲು ಹೊರಟಾಗ ನನಗೆ ಧೈರ್ಯ ತುಂಬಿ ಕಾರ್ಯಕರ್ತರಂತೆ ದುಡಿದರು. ಈ ಗೆಲುವು ನನ್ನದಲ್ಲ, ಡಿ.ಕೆ.ಸುರೇಶ್ ಅವರದ್ದು.
-ಮುನಿರತ್ನ, ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Special Interview: ಪ್ರತ್ಯೇಕ ನಾಡಧ್ವಜಕ್ಕಾಗಿ ಕೇಂದ್ರಕ್ಕೆ ಮತ್ತೂಮ್ಮೆ ಪತ್ರ: ತಂಗಡಗಿ
Bengaluru: ಆಶಾ ಸಾಫ್ಟ್ ನಲ್ಲಿ ತಾಂತ್ರಿಕ ಸಮಸ್ಯೆ: ಕಾರ್ಯಕರ್ತೆಯರ ಕೈಸೇರದ ಪ್ರೋತ್ಸಾಹಧನ
Bengaluru: ಲಂಚ ಸ್ವೀಕಾರ; ಲೋಕಾಯುಕ್ತ ಬಲೆಗೆ ಬಿದ್ದ ಎಸ್‌ಐ ಗಂಗಾಧರ್
Bengaluru: ರೈಲಲ್ಲಿ ಬಿಟ್ಟು ಹೋಗಿದ್ದ 5 ಲಕ್ಷ ಚಿನ್ನ ಪ್ರಯಾಣಿಕನಿಗೆ ಹಸ್ತಾಂತರ
Bengaluru: ಬಸ್ ಕಂಡಕ್ಟರ್, ಡ್ರೈವರ್‌ಗೆ ತೀವ್ರ ಹಲ್ಲೆ: ಇಬ್ಬರು ಆರೋಪಿಗಳ ಬಂಧನ
MUST WATCH
ಹೊಸ ಸೇರ್ಪಡೆ
New Delhi: ಹಬ್ಬದ ಋತು; ದೇಶದಲ್ಲಿ 4.5 ಲಕ್ಷ ವಾಹನಗಳ ದಾಖಲೆ ಮಾರಾಟ!
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
Ranchi: ಹೇಮಂತ್ ಸೊರೇನ್ ವಯಸ್ಸು 5 ವರ್ಷದಲ್ಲಿ 7 ವರ್ಷ ಹೆಚ್ಚಳ!; ಬಿಜೆಪಿ
Dhananjay: ಮದುವೆಗೆ ಸಿದ್ದವಾದ್ರು ಡಾಲಿ; ದುರ್ಗದ ಹುಡುಗಿಯ ಕೈ ಹಿಡಿಯಲಿದ್ದಾರೆ ಧನಂಜಯ
Goddess Lakshmi: ಲಕ್ಷ್ಮೀ ಆರಾಧನೆಯ ಪರ್ವ ಸಮಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.