ಬದುಕಲ್ಲಿ ಇನ್ನೇನು ಬೇಕು ನನಗೆ?
Team Udayavani, Jun 2, 2018, 12:30 AM IST
“ಅಲ್ಲಿ ನೋಡಿ. ಆ 75 ಕೆಜಿ ಗೋಧಿಯನ್ನು ಯಾರೋ ಅಭಿಮಾನಿಗಳು ಅಥಣಿಯಿಂದ ಕಳಿಸಿದ್ದಾರೆ. ಇನ್ಯಾರೋ ತರಕಾರಿ ಕಳಿಸುತ್ತಾರೆ. ಏನಂತ ಹೇಳ್ಳೋದು ಇವರ ಪ್ರೀತಿಗೆ’ ಅನ್ನುತ್ತಲೇ ಮಾತಿಗೆ ಕೂತರು ರಮೇಶ್ ಭಟ್. ಸಹಜ ಅಭಿನಯದಿಂದಲೇ ಹೆಸರು ಮಾಡಿದ, ಪೋಷಕ ಪಾತ್ರದ ಮೂಲಕವೇ ಮನಸ್ಸು ಗೆದ್ದ ರಮೇಶ್ ಭಟ್ ತಮ್ಮ ಬದುಕಿನ ಅನುಭವವನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.
“ಐನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೀರಿ. ಹೇಗನ್ನಿಸ್ತಾ ಇದೆ?’ ಅಂತ ಜನ ಕೇಳ್ತಾರೆ. ಏನಂತ ಹೇಳ್ಳೋದು? ನಾನು ತುಂಬಾ ಅದೃಷ್ಟವಂತ. ರಾಜ್‌ಕುಮಾರ್, ಕಲ್ಯಾಣ್‌ಕುಮಾರ್, ಶಂಕರ್‌ನಾಗ್, ಅನಂತ್‌ನಾಗ್, ವಿಷ್ಣುವರ್ಧನ್, ಅಂಬರೀಶ್ ಮುಂತಾದ ದೊಡ್ಡವರಿಂದ ಹಿಡಿದು, ಹೊಸ ಹುಡುಗರ ಜೊತೆಗೂ ನಟಿಸೋಕೆ ಅವಕಾಶ ಸಿಕ್ಕಿತು. ಇಲ್ಲದಿದ್ದರೆ, ಸಾಮಾನ್ಯರಲ್ಲಿ ಸಾಮಾನ್ಯನಾದ ನನ್ನನ್ನು ಜನ ಇಷ್ಟೊಂದು ಪ್ರೀತಿಸೋಕೆ ಹೇಗೆ ಸಾಧ್ಯ ಆಗ್ತಾ ಇತ್ತು ಹೇಳಿ?
ಮನೆ, ಶಾಲೆ, ಅಂಗಡಿ
ನಮ್ಮದು ಕಡು ಬಡತನದ ಕುಟುಂಬ. ಮೂರು ಗಂಡು, ಆರು ಹೆಣ್ಣುಮಕ್ಕಳಲ್ಲಿ ನಾನೇ ಹಿರಿಯವ. ನಮ್ಮ ತಂದೆಗೆ ಚಾಮ ರಾಜಪೇಟೆಯಲ್ಲಿ ಒಂದು ಅಂಗಡಿಯಿತ್ತು. “ರಾಯರ ಅಂಗಡಿ’ ಅಂದರೆ ತುಂಬಾ ಫೇಮಸ್ಸು. ಅಲ್ಲಿ “ಪಿನ್ ಟು ಎಲಿಫೆಂಟ್’ ಎಲ್ಲಾ ಸಿಗುತ್ತೆ ಅಂತ ಪ್ರತೀತಿ. ಹಾರ್ಡ್‌ವೇರ್ ಅಂಗಡಿಯಲ್ಲದಿದ್ದರೂ ಸೂð, ಮೊಳೆ..ಹೀಗೆ ಎಲ್ಲವನ್ನೂ ಇಟ್ಟಿದ್ದರು. ಯಾರಾದರೂ ಮನೆಯಲ್ಲಿ ಹೆಚ್ಚಾಗಿ ಉಳಿದಿದ್ದ ಕೊಬ್ಬರಿ ತಂದುಕೊಟ್ಟರೆ ಅದರ ಬದಲಿಗೆ ಬೇಳೆ ಕೊಡುವ ಬಾರ್ಟರ್ ಸಿಸ್ಟಮ್ ಸಹ ಅಲ್ಲಿತ್ತು. ನಮ್ಮ ತಂದೆ ಶ್ರಮಜೀವಿ. ದೇಹ ದಂಡಿಸಿಯೇ ಊಟ ಮಾಡಬೇಕು ಅನ್ನೋದನ್ನು ಕಲಿಸಿದವರು. ಶಾಲೆ ಮುಗಿದ ನಂತರ ಸೀದಾ ಅಂಗಡಿಗೆ ಬರೋದು, ರಾತ್ರಿ 11ರವರೆಗೆ ಅಪ್ಪನಿಗೆ ಸಹಾಯ ಮಾಡೋದು..ಹೀಗಿತ್ತು ನನ್ನ ಬಾಲ್ಯ.
ಬಣ್ಣದ ಗೀಳಿಗೆ ಸಿಲುಕಿದ್ದು
ನಮ್ಮ ಕುಟುಂಬದಲ್ಲಿ ಯಾರಿಗೂ ಬಣ್ಣದ ಜೊತೆಗೆ ನಂಟು ಇರಲಿಲ್ಲ. ಆದರೆ, ನಾನು ಶಾಲಾ ದಿನಗಳಲ್ಲಿ ನನಗೇ ಗೊತ್ತಿಲ್ಲದೆ ಬಣ್ಣದ ಸಂಗಕ್ಕೆ ಬಿದ್ದುಬಿಟ್ಟೆ. ಗುರುಗಳಾದ ಬಸಪ್ಪ ಮೇಷ್ಟ್ರು, ಬಿ.ಎನ್.ನಂಜುಂಡಯ್ಯ, ನಾಗೇಶ್ ರಾವ್, ಜಿಕೆವಿ, ಸುಶೀಲಾ ಟೀಚರ್.. ಹೀಗೆ ಮೇಷ್ಟ್ರುಗಳು ಶಾಲೆಯ ನಾಟಕಗಳಲ್ಲಿ ನನ್ನಿಂದ ಪಾತ್ರ ಮಾಡಿಸಿದರು. ಒಂದೆರಡು ನಾಟಕ ಮಾಡಿದ ಮೇಲೆ “ಚೆನ್ನಾಗಿ ಮಾಡ್ತೀಯ’ ಅಂತ ಬೆನ್ನುತಟ್ಟಿದರು. ಆ ಐಡೆಂಟಿಟಿ ನಂಗೆ ಖುಷಿ ಕೊಡ್ತಾ ಇತ್ತು. ಅಭಿನಯದಲ್ಲಿ ನಶೆ ಇದೆ ಅಂತ ಗೊತ್ತಾಯ್ತು.
ಅವಮಾನ, ಅನುಮಾನ, ಸನ್ಮಾನ
ನನ್ನ ನಟನೆಯನ್ನು ಮೊದಲು ಗುರುತಿಸಿದ್ದು ಬಿ.ಎನ್. ನಾಣಿ ಅವರು. ಹೈಸ್ಕೂಲ್‌ನಲ್ಲಿದ್ದಾಗ ನಮ್ಮ “ದೇವರಿಗೆ ದಿಕ್ಕು’ ನಾಟಕಕ್ಕೆ ಬಹುಮಾನ ಬಂದಿತ್ತು. ಅದನ್ನು ನೋಡಿ ನಾಣಿ ಅವರು ನನ್ನನ್ನು ಕರೆದು ತಮ್ಮ ನಾಟಕದಲ್ಲಿ ಭಾಗವಹಿಸಲು ಹೇಳಿದರು. “ಸಾರ್, ಮನೆಯಲ್ಲಿ ಬೈತಾರೆ. ಸ್ಕೂಲು ಮುಗಿಸಿ ಅಂಗಡಿಗೆ ಹೋಗಬೇಕು. ರಿಹರ್ಸಲ್ ಅಂದ್ರೆ ಪೆಟ್ಟು ಬೀಳುತ್ತೆ’ ಅಂದೆ. ಆಗ ಅವರು, ಮೊದಲು ಮನೆಯಲ್ಲಿ ಬೈದು, ಹೊಡೆದು ಅವಮಾನ ಮಾಡ್ತಾರೆ. ಅಯ್ಯೋ, ಮಗ ಹಾಳಾದ್ನಲ್ಲಾ ಅಂತ ನಿನ್ನ ಮೇಲೆ ಅನುಮಾನ ಪಡ್ತಾರೆ. ಅಷ್ಟಾದರೂ ಹೆದರದಿದ್ದರೆ ಮಾತ್ರ ಸನ್ಮಾನ ಹುಡುಕಿಕೊಂಡು ಬರುತ್ತೆ ಅಂದಿದ್ರು. ಅವರು ಹೇಳಿದ ಹಾಗೇ ಆಯ್ತು. ಮನೆಯಿಂದ ಹೊರಗೆ ಹಾಕಿದ್ದು, ರಾತ್ರಿ ಊಟ ಹಾಕದೇ ಇದ್ದದ್ದು ಎಲ್ಲಾ ನಡೆಯಿತು. “ಆ ಮಾಣಿ ನಾಟ್ಕ ಗೀಟ್ಕ ಮಾಡ್ಕಂಡ್ ಎಲ್ಲೋ ಹೋತ್ತ’ ಎಂದು ನೆಂಟರು ಅಣಕಿಸಿದರು. ಆದರೂ ನಾನು ಬಣ್ಣ ಹಚ್ಚೋದನ್ನ ಬಿಡಲಿಲ್ಲ. ಜ್ಯೋತಿಷಿಗಳಲ್ಲಿ ಕೇಳಿದರು. ಆಗ ಅವರು- “ಇವನಿಗೆ ಅದರಲ್ಲೆಲ್ಲ ಊಟ ಇಲ್ಲ. ಸರಿ ಹೋಗ್ತಾನೆ ಅಂದಿದ್ರು’. ಆದ್ರೆ, ಮಾಣಿ ಇವತ್ತಿಗೂ ಸರಿಯಾಗಲೇ ಇಲ್ಲ. ಮನುಷ್ಯನಿಗೆ ಯಾವುದಾದ್ರೂ ಒಂದು ಗೀಳು ಇರಬೇಕು. ಆಗ ಗೋಳು ಕಡಿಮೆ ಆಗುತ್ತೆ ಅಂತ ನಾಣಿ ಅವರು ಹೇಳಿದ್ದನ್ನೇ ಮುಂದುವರಿಸಿಕೊಂಡು ಬಂದೆ.
ಮೊದಲ ಸಂಬಳದಲ್ಲಿ ಸೈಕಲ್
ನಾಟಕ ಮಾಡ್ತಾ ಮಾಡ್ತಾನೇ ಮೆಕಾನಿಕಲ್ ಡಿಪ್ಲೊಮಾ ಮುಗಿಸಿ ಯಶವಂತಪುರದಲ್ಲಿದ್ದ “ಕಿರ್ಲೋಸ್ಕರ್’ನಲ್ಲಿ ಫಿಟ್ಟರ್ ಟ್ರೇನಿಂಗ್‌ಗೆ ಹೋದೆ. ತಿಂಗಳಿಗೆ 220 ರೂ. ಸ್ಟೈಪಂಡ್‌ನ ಕೆಲಸ. ಅದರಲ್ಲಿ 12 ರೂ ಟೀ, 12 ರೂ ಸೈಕಲ್ ಸ್ಟಾಂಡ್‌ಗೆ ಹೋಗ್ತಾ ಇತ್ತು. ಮೊದಲನೇ ಸಂಬಳದಲ್ಲಿ 140 ರೂ.ಗೆ ಒಂದು ಸೆಕೆಂಡ್ ಹ್ಯಾಂಡ್ ಸೈಕಲ್ ತಗೊಂಡಿದ್ದೆ. ಅದ್ಯಾಕೋ 6 ತಿಂಗಳಿಗೆಲ್ಲಾ ಆ ಕೆಲಸ ಬೇಜಾರಾಯ್ತು. ಆದದ್ದಾಗಲಿ ಕೆಲಸ ಬಿಟ್ಟು ಸ್ವಂತ ಅಂಗಡಿ ಮಾಡ್ತೀನಿ ಅಂತ ನಿರ್ಧರಿಸಿದೆ. ಹಾಗೆ ನ್ಯಾಷನಲ್ ಕಾಲೇಜಿನ ಬಳಿ “ಜ್ಯೋತಿ ಪ್ರಕಾಶ್ ಸ್ಟೋರ್’ ತೆರೆದೆ. ಜ್ಯೂಸು, ಬಿಸಿ ಬಾದಾಮಿ ಹಾಲು, ಬನ್ ಜ್ಯಾಮ್ ಸಿಗುವ ಅಂಗಡಿಯದು.
ಅದು ಬರೀ ಅಂಗಡಿಯಷ್ಟೇ ಅಲ್ಲ…
“ಜ್ಯೋತಿ ಪ್ರಕಾಶ್ ಸ್ಟೋರ್’ ನನ್ನ ಪಾಲಿಗೆ ಕೇವಲ ಅಂಗಡಿ ಯಷ್ಟೇ ಆಗಿರಲಿಲ್ಲ. ಅದೊಂಥರ ಸಾಂಸ್ಕೃತಿಕ ಕೇಂದ್ರವೇ ಆಗಿತ್ತು. ಚಿಂತಾಮಣಿ, ಕಪ್ಪಣ್ಣ, ದಾಶರಥಿ ದೀಕ್ಷಿತ್, ಲಂಕೇಶ್, ವೈಎನೆR, ಮಾಸ್ತಿ, ಲೋಕನಾಥ್, ನಿಸಾರ್ ಅಹಮದ್… ಹೀಗೆ ದೊಡ್ಡವರೆಲ್ಲ ನನ್ನ ಅಂಗಡಿಗೆ ಬರ್ತಾ ಇದ್ದರು. ವ್ಯಾಪಾರ ಮಾತ್ರ ಅಲ್ಲ, ಯಾವ ನಾಟಕ ಎಲ್ಲಿ ನಡೆಯುತ್ತೆ, ಟಿಕೆಟ್ ಎಷ್ಟು, ರಿಹರ್ಸಲ್ ಯಾವಾಗ, ನಟಿಸೋಕೆ ಇಷ್ಟ ಇರುವವರು ಇದ್ದಾರ…ಹೀಗೆ ಬಹುತೇಕ ಚರ್ಚೆಗಳು ಅಲ್ಲಿಯೇ ನಡೆಯುತ್ತಿದ್ದವು. ಸುತ್ತಮುತ್ತ ಸಾಕಷ್ಟು ಶಾಲೆ, ಕಾಲೇಜು, ಹಾಸ್ಟೆಲ್‌ಗಳಿದ್ದವು. ಅಲ್ಲಿನ ವಿದ್ಯಾರ್ಥಿಗಳೆಲ್ಲ ಬರುತ್ತಿದ್ದುದರಿಂದ ವ್ಯಾಪಾರವೂ ಚೆನ್ನಾಗಿಯೇ ಇತ್ತು. ಕಾಲೇಜು ಹುಡುಗ-ಹುಡುಗಿಯರ ಪ್ರೇಮಸಂದೇಶಗಳಿಗೆ ನಾನೇ ಪೋಸ್ಟ್‌ಮ್ಯಾನ್. ನನ್ನ ಹೆಂಡತಿಯೂ ಅಲ್ಲೇ ನನಗೆ ಸಿಕ್ಕಿದ್ದು!
ಕಾರಂತರು ಬಂದರು
ರಂಗಭೂಮಿಯಲ್ಲಿ ಕ್ರಾಂತಿ ಮಾಡೋಕೆ ಬಂದ ಹಾಗೆ ಬಿ.ವಿ. ಕಾರಂತರು ಬೆಂಗಳೂರಿಗೆ ಬಂದರು. ಅವರಿಂದಾಗಿ ರಂಗ ಭೂಮಿಯಲ್ಲಿ ಒಂದು ನೆಲೆ ಗಿಟ್ಟಿಸಿಕೊಂಡೆ. ಆಮೇಲೆ ಕಾರಂತರು “ಚೋಮನದುಡಿ’ “ಕಾಡು’ ಮೂಲಕ ಸಿನಿಮಾಕ್ಕೆ ಬಂದರು. ಆದರೆ ನನಗೆ ಅವರು ಅವಕಾಶವನ್ನೇ ಕೊಡಲಿಲ್ಲ. ತುಂಬಾ ಜನ ಕೇಳಿದರು, “ಏನಯ್ನಾ, ನಿನ್ನ ಗುರುಗಳು ನಿನಗೇ ಸಿನಿಮಾದಲ್ಲಿ ಅವಕಾಶ ಕೊಟ್ಟಿಲ್ಲ’ ಅಂತ. ಅದೇ ಪ್ರಶ್ನೆಯನ್ನು ನಾನು ಕಾರಂತರಿಗೇ ಕೇಳಿದೆ, ಆಗ ಅವರು “ನಿನ್ನದು ಸಿಟಿ ಫೇಸ್, ನಾನು ಮಾಡ್ತಿರೋದು ಹಳ್ಳಿ ಪಾತ್ರಗಳನ್ನು’ ಎಂದರು.
ಸಿನಿಮಾಕ್ಕೆ ಬಂದೆ…
ಅಷ್ಟೊತ್ತಿಗೆ ನಾಣಿ ಅವರು “ಅಬಚೂರಿನ ಪೋಸ್ಟಾಫೀಸು’ ಅಂತ ಸಿನಿಮಾದಲ್ಲಿ ಅವಕಾಶ ಸಿಕು¤. ಹೀಗೆ 1974ರಿಂದ ಸಿನಿಮಾ ಪಯಣ ಶುರುವಾಯ್ತು. ನಂತರ ನಾಗಾಭರಣ, ಟಿ.ಎಸ್. ರಂಗಾ ಮುಂತಾದವರ ಜೊತೆ ಕೆಲಸ ಮಾಡಿದೆ. ಆದರೆ, ನನ್ನ ಆದ್ಯತೆ ಮಾತ್ರ ಅಂಗಡಿಯೇ ಆಗಿತ್ತು. ಎಲ್ಲಿಯವರೆಗೆ ಅಂದರೆ ಶಂಕರ್ ನಾಗ್ ಬಂದು ಕರೆಯುವವರೆಗೆ…
ಶಂಕರ್ ಬೆಂಗಳೂರಿಗೆ ಬಂದಾಗ, ರಂಗಾಸಕ್ತರನ್ನು ಹುಡುಕುತ್ತಿದ್ದರು. ಆಗ ಯಾರೋ, ನನ್ನ ಹೆಸರನ್ನು ಹೇಳಿದ್ದಾರೆ. ವೈಎನೆ ಮನೇಲಿ ಇರುತ್ತಾನೆ, ಭೇಟಿ ಮಾಡಿ ಅಂತ. ಅಲ್ಲಿಯೇ ನಾವಿಬ್ಬರೂ ಮೊದಲ ಬಾರಿಗೆ ಭೇಟಿಯಾದೆವು. “ರಂಗಭೂಮಿಯಲ್ಲಿ ಕೆಲಸ ಮಾಡ್ತಾ ಇದೀನಿ. ನೀವು ನನ್ನ ಜೊತೆಗಿರುತ್ತೀರಾ?’ ಅಂತ ಕೇಳಿದರು ಶಂಕರ್ ನಾಗ್. ಆಗ ನಾನು, ಜೊತೆಗೆಲ್ಲ ಇರೋಷ್ಟು ಸಮಯ ಇಲ್ಲ. ಬೇಕಾದಾಗ ರಿಹರ್ಸ್‌ಲ್‌ಗೆ ಬರುತ್ತೇನೆ ಎಂದೆ. ಯಾಕೆ ಅಂತ ಕೇಳಿದರು. ನಂಗೆ ಮದುವೆಯಾಗಿದೆ, ಮಗುವೂ ಇದೆ. ಜೊತೆಗೆ ಅಂಗಡಿಯೂ ಚೆನ್ನಾಗಿಯೇ ನಡೆಯುತ್ತಿದೆ ಎಂದೆ. ಆದರೆ ಅವರು ಕೇಳಲೇ ಇಲ್ಲ. ಒಮ್ಮೆ ನನ್ನ ಅಂಗಡಿಗೆ ಬಂದು, “ಅಕಲ್ ಹೇ ಕ್ಯಾ? ಈ ಅಂಗಡೀಲಿ ಏನ್ ಮಾಡ್ತಾ ಇದಿಯಾ? ನಂಜೊತೆ ಬಾ. ನಾನೆಲ್ಲಾ ನೋಡಿಕೊಳ್ತೀನಿ’ ಅಂದರು. ಅಂಗಡಿಯನ್ನು ಅಷ್ಟು ಸುಲಭಕ್ಕೆ ಬಿಡೋ ಹಾಗಿರಲಿಲ್ಲ. ಆ ಅಂಗಡಿಯಿಂದ ಮನೆ ನಡೆಯುತ್ತಿತ್ತು. ಅದರ ಹಣದಿಂದಲೇ ತಂಗಿಯರ ಮದುವೆ ಮಾಡಿದ್ದೆ. ಅದನ್ನು ಮಾರುವುದಕ್ಕೂ ಇಷ್ಟವಿರಲಿಲ್ಲ. ಕೊನೆಗೆ ಧೈರ್ಯ ಮಾಡಿ ಅಂಗಡಿಯನ್ನು ತಮ್ಮನಿಗೆ ಬಿಟ್ಟುಕೊಟ್ಟೆ. ಒಂದು ವೇಳೆ ಲಾಸ್ ಆಗಿ ಬಂದರೆ ನನ್ನನ್ನು, ಹೆಂಡತಿ, ಮಕ್ಕಳನ್ನು ಸಾಕಿ ಅಂತಲೂ ಹೇಳಿದ್ದೆ..
ಫ್ರೆಂಡ್‌ಗೆ ಆ್ಯಕ್ಸಿಡೆಂಟ್ ಆಗಿದೆ…
ಶಂಕರ್ ನಾಗ್ ಬಗ್ಗೆ ಏನು ಹೇಳಲಿ? 13 ವರ್ಷ ನಾವಿಬ್ಬರೂ ಒಟ್ಟಿಗೆ ಇದ್ದೆವು. ದಿನಕ್ಕೆ 14-15 ಗಂಟೆ ಒಟ್ಟಿಗೆ ಕೆಲಸ ಮಾಡಿದೆವು. ಒಂದು ರಾತ್ರಿ 11.15ಕ್ಕೆ ಕರೆ ಮಾಡಿ, ನಾಳೆ ನೀನೂ ಜೊತೆ ಬಾ ಅಂದರು. ಬೇರೊಂದು ಶೂಟಿಂಗ್‌ನಲ್ಲಿ ಬ್ಯುಸಿ ಇದ್ದ ನನಗೆ ಅವರ ಜೊತೆ ಹೋಗಲಾಗಲಿಲ್ಲ. ಬೆಳಗ್ಗೆ 5.15ರ ಹೊತ್ತಿಗೆ ಪೊಲೀಸ್ ಸ್ಟೇಷನ್‌ನಿಂದ ಕರೆ ಬಂತು, ನಿಮ್ಮ ಫ್ರೆಂಡ್‌ಗೆ ಆ್ಯಕ್ಸಿಡೆಂಟ್ ಆಗಿದೆ. ಅವರ ಹೆಂಡತಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಅಂತ. ಶಂಕರ್ ಹೀರೋ ಅಲ್ವಾ? ಅವರೇ ಹೆಂಡತಿಯನ್ನು ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದಾರೆ ಅಂತ ನನ್ನ ತಲೆಯಲ್ಲಿ. ಆಮೇಲೇ ಸತ್ಯ ಗೊತ್ತಾಗಿದ್ದು. ಶಂಕರ್ ಬಗ್ಗೆ ಏನು ಹೇಳಿದರೂ, ಏನು ಬರೆದರೂ ಕಡಿಮೆಯೇ! ಒಂದು ದಿನಾನೂ ಒಬ್ಬರ ಬಗ್ಗೆ ಕೆಟ್ಟದಾಗಿ ಮಾತಾ ಡಿಲ್ಲ, ಅಸೂಯೆಪಟ್ಟಿಲ್ಲ. ಏನಾದ್ರೂ ಹೊಸತನ್ನು ಕಲಿಯು ವುದ ರಲ್ಲೇ ಸಮಯ ಕಳೀತಿದ್ದ ಮನುಷ್ಯ. ಜೀವಮಾನದಲ್ಲಿ ಅಂಥ ಇನ್ನೊಬ್ಬ ಮನುಷ್ಯನನ್ನು ನಾನು ನೋಡಿಲ್ಲ, ಅಷ್ಟೇ. ಈವರೆಗೆ ನಟಿಸಿದ ಚಿತ್ರಗಳ ಸಂಖ್ಯೆ 500 ದಾಟಿದೆ ನಿಜ. ಆದರೆ ನನ್ನೊಳಗಿನ ನಟನಿಗೆ ಇನ್ನೂ ತೃಪ್ತಿ ಸಿಕ್ಕಿಲ್ಲ. ಕೆಲವೊಮ್ಮೆ ಬೇರೆ ಯಾರೋ ಮಾಡ ಬೇಕಾದ ಪಾತ್ರವನ್ನು ಅವರು ಸಿಗಲಿಲ್ಲ ಅಂತ ನನಗೆ ಕೊಟ್ಟಿದ್ದಿದೆ. “ಕ್ರೇಜಿ ಕರ್ನಲ್’ ಕೂಡ ಸಿ.ಆರ್. ಸಿಂಹ ಅಥವಾ ಲೋಕೇಶ್ ಮಾಡಬೇಕಾಗಿದ್ದ ಪಾತ್ರ. ಆದರೆ, ಜನ ನನ್ನನ್ನು ಈಗಲೂ ಕರ್ನಲ್ ಅಂತ ಗುರುತಿಸುತ್ತಾರೆ. ಬಣ್ಣದ ಬದುಕಿನ ಬಗ್ಗೆ ಚೂರೂ ಬೇಸರ ವಿಲ್ಲ. ಈ ಒಂದು ಗೀಳೇ ನನ್ನ ಗೋಳನ್ನು ನಿವಾರಿಸಿರುವುದು.
ಇನ್ನೇನು ಬೇಕು…
ಮೂಲೆಯಂಗಡಿಯ ಈ ಹುಡುಗ ಅಂಗಡಿಯಲ್ಲೇ ಉಳಿದು ಬಿಟ್ಟಿದ್ದರೆ, ಒಂದಷ್ಟು ದುಡ್ಡು ಮಾಡಿ, ಇನ್ನೊಂದೆರಡು ಅಂಗಡಿ ಗಳನ್ನು ತೆರೆಯಬಹುದಿತ್ತೇನೋ. ಆದರೆ,ಈಗ ನಾನು ದುಡ್ಡು ಸಂಪಾದಿಸಿಲ್ಲವಾದರೂ ಜನರ ಪ್ರೀತಿ ಗೆದ್ದಿದ್ದೇನೆ. ನನ್ನನ್ನು ನೋಡಿ ಅವರ ಮುಖದಲ್ಲೊಂದು ಪರಿಚಿತ ನಗುವರಳುತ್ತೆ. ನಿನ್ನೆಯಷ್ಟೇ ಯಾರೋ ಅಥಣಿಯಿಂದ 75 ಕೆಜಿ ಗೋಧಿ ಕಳಿಸಿದ್ದಾರೆ. ಇನ್ಯಾರೋ ಹೊನ್ನಾವರದಿಂದ ತರಕಾರಿ ಕಳಿಸುತ್ತಾರೆ. ಶೂಟಿಂಗ್‌ಗೆ ಹೋದಾಗ ಬಂದು ಕಾಲಿಗೆರಗುತ್ತಾರೆ. ಇಂಥ ಚಿಕ್ಕಪುಟ್ಟ ಪಾರ್ಟ್ ಮಾಡಬೇಡ್ರೀ, ನಿಮ್ಗೆ ದವಸ ಧಾನ್ಯ ಬೇಕಾದ್ರೆ ನಾವು ಕಳಿಸ್ತೀವ್ರಿ ಅಂತ ಪ್ರೀತಿಯಿಂದ ಗದರುವವರಿದ್ದಾರೆ. ಪ್ರತಿ ಭಾನುವಾರ 20-30 ಜನ ಎಲ್ಲೆಲ್ಲಿಂದಲೋ ಮನೆಗೆ ಬರ್ತಾರೆ. ಇದಕ್ಕಿಂತ ಇನ್ನೇನು ಬೇಕು ನನಗೆ?
ನಿರೂಪಣೆ: ಪ್ರಿಯಾಂಕ ನಟಶೇಖರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.