ಮೆಟ್ರೋ ಮುಷ್ಕರ ಇಂದು ನಿರ್ಧಾರ?
Team Udayavani, Jun 4, 2018, 12:10 PM IST
ಬೆಂಗಳೂರು: ವೇತನ ಪರಿಷ್ಕರಣೆ, ಬಡ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ವಿಚಾರದಲ್ಲಿ ಮೆಟ್ರೋ ನೌಕರರು ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ)ದ ಆಡಳಿತ ಮಂಡಳಿ ನಡುವೆ ಕೊನೆಗೂ ಒಮ್ಮತ ಮೂಡಿಲ್ಲ. ಇಬ್ಬರೂ ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಯುವ ಸಾಧ್ಯತೆಗಳು ಹೆಚ್ಚಿವೆ.
ಆದರೆ, ಸೋಮವಾರ ಈ ವಿಚಾರವು ಹೈಕೋರ್ಟ್ ಮುಂದೆ ವಿಚಾರಣೆಗೆ ಬರಲಿದ್ದು, ಅಲ್ಲಿ ಹೊರಬರುವ ಆದೇಶವನ್ನು ಆಧರಿಸಿ “ಮೆಟ್ರೋ ಮುಷ್ಕರ’ ನಿರ್ಧಾರ ಆಗಲಿದೆ. ಬೇಡಿಕೆಗಳಿಗೆ ಪೂರಕವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ 15 ದಿನಗಳ ಹಿಂದೆಯೇ ಬೆಂಗಳೂರು ಮೆಟ್ರೋ ರೈಲ್ವೆ ಎಂಪ್ಲಾಯೀಸ್ ಯೂನಿಯನ್ ಜೂ.4ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿ, ಈ ಸಂಬಂಧ ನಿಗಮಕ್ಕೆ ನೋಟಿಸ್ ಕೂಡ ಕೊಟ್ಟಿದೆ.
ಇದಕ್ಕೆ ಪ್ರತಿಯಾಗಿ ಸೋಮವಾರ ಎಲ್ಲರೂ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಆಡಳಿತ ಮಂಡಳಿ ನೌಕರರಿಗೆ ನೋಟಿಸ್ ಜಾರಿಮಾಡಿದೆ. ಪಟ್ಟುಹಿಡಿದಿರುವ ನೌಕರರು, ನೋಟಿಸ್ ಧಿಕ್ಕರಿಸಿ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಮತ್ತೂಂದೆಡೆ ಮುಷ್ಕರಕ್ಕೆ ಮುಂದಾದರೂ ಚಿಂತೆ ಇಲ್ಲ. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಎಂದಿನಂತೆ ಮೆಟ್ರೋ ಸೇವೆ ಕಲ್ಪಿಸಲಾಗುವುದು ಎಂಬ ವಿಶ್ವಾಸದಲ್ಲಿ ನಿಗಮದ ಆಡಳಿತ ಮಂಡಳಿ ಇದೆ.
ಆದರೆ, ಇದೆಲ್ಲವೂ ಸೋಮವಾರ ಹೊರಬೀಳುವ ಹೈಕೋರ್ಟ್ ಆದೇಶವನ್ನು ಅವಲಂಬಿಸಿದೆ. ಅಕಸ್ಮಾತ್ ಮುಷ್ಕರಕ್ಕೆ ಕರೆನೀಡಿದರೂ ಅದರ ಬಿಸಿ ಮೊದಲ ದಿನ ಅದರ ಬಿಸಿ ಅಷ್ಟಾಗಿ ತಟ್ಟುವುದಿಲ್ಲ. ಯಾಕೆಂದರೆ ಕೋರ್ಟ್‌ನಲ್ಲಿ ವಿಚಾರಣೆ ಬಂದು, ಆದೇಶ ಹೊರಬೀಳಲು ಮಧ್ಯಾಹ್ನದವರೆಗೂ ಸಮಯ ಹಿಡಿಯುತ್ತದೆ.
ಮುಷ್ಕರ ಅನಿವಾರ್ಯ: ವೇತನ ಪರಿಷ್ಕರಣೆ ಬಡ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈಗಾಗಲೇ ಹಲವು ಬಾರಿ ಮನವಿ ನಿಗಮಕ್ಕೆ ಮನವಿ ಸಲ್ಲಿಸಲಾಗಿದೆ. ಹೈಕೋರ್ಟ್ ಕೂಡ ಪರಸ್ಪರ ಚರ್ಚಿಸಿ ಬಗೆಹರಿಸಿಕೊಳ್ಳುವಂತೆ 30 ದಿನಗಳ ಗಡುವು ವಿಧಿಸಿತ್ತು. ಈಗ ಎರಡೂವರೆ ತಿಂಗಳಾದರೂ ಬಗೆಹರಿಸಲು ಆಡಳಿತ ಮಂಡಳಿ ಮನಸ್ಸು ಮಾಡುತ್ತಿಲ್ಲ.
ಬದಲಿಗೆ ಬೇಡಿಕೆಗಳ ಈಡೇರಿಕೆ ಸಾಧ್ಯವಿಲ್ಲ ಎಂದು ಖಂಡತುಂಡಾಗಿ ಹೇಳಿದೆ. ಆದ್ದರಿಂದ ಸಮಸ್ಯೆಗಳ ಪರಿಹಾರಕ್ಕೆ ನಮಗೆ ಈಗಿರುವ ಏಕೈಕ ಮಾರ್ಗ ಮುಷ್ಕರ ಎಂದು ಬೆಂಗಳೂರು ಮೆಟ್ರೋ ರೈಲ್ವೆ ಎಂಪ್ಲಾಯೀಸ್ ಯೂನಿಯನ್ ಉಪಾಧ್ಯಕ್ಷ ಸೂರ್ಯನಾರಾಯಣಮೂರ್ತಿ ಸ್ಪಷ್ಟಪಡಿಸಿದರು. ಹೈಕೋರ್ಟ್ ಕೂಡ ಈಗಾಗಲೇ ಸಾಕಷ್ಟು ಸಮಯಾವಕಾಶ ನೀಡಿತ್ತು.
ಈ ಅವಧಿಯಲ್ಲಿ ಸಮರ್ಪಕ ಚರ್ಚೆ ನಡೆಸಿಲ್ಲ. ಸಮಸ್ಯೆಯನ್ನೂ ಬಗೆಹರಿಸಿಲ್ಲ. ಈ ಮೂಲಕ ನ್ಯಾಯಾಂಗದ ಆದೇಶ ಕೂಡ ಉಲ್ಲಂ ಸಲಾಗಿದೆ ಎಂದು ಆರೋಪಿಸಿದ ಸೂರ್ಯನಾರಾಯಣಮೂರ್ತಿ, ಈ ಮಧ್ಯೆ ಏಪ್ರಿಲ್ 30ರಂದು ನಡೆದ ಸಂಧಾನ ಸಭೆ ವಿಫಲವಾಗಿದ್ದು, ಕಾರ್ಮಿಕ ಆಯುಕ್ತರು ಈ ಬಗ್ಗೆ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಅದು ಸೋಮವಾರ ವಿಚಾರಣೆಗೆ ಬರಲಿದೆ ಎಂದು ಮಾಹಿತಿ ನೀಡಿದರು.
ಮುಷ್ಕರಕ್ಕೆ ಪರ್ಯಾಯ ಪಡೆ: ಈ ಮುಷ್ಕರಕ್ಕೆ ಸೆಡ್ಡು ಹೊಡೆದಿರುವ ಬಿಎಂಆರ್‌ಸಿ ಆಡಳಿತ ಮಂಡಳಿ, ರೈಲು ಓಡಿಸಲು ಸುಮಾರು 100-120 ಜನರ ಪರ್ಯಾಯ ಪಡೆಯನ್ನು ಸಜ್ಜುಗೊಳಿಸಿದೆ. ಅವರೆಲ್ಲಾ ಯೋಜನಾ ವಿಭಾಗ, ಎಲೆಕ್ಟ್ರಿಕ್ ವಿಭಾಗ ಸೇರಿದಂತೆ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವವರಾಗಿದ್ದಾರೆ. ಅವರಿಗೆ ಸಮರ್ಪಕ ತರಬೇತಿ ನೀಡಲಾಗಿದೆ.
ಒಂದು ವೇಳೆ ಮುಷ್ಕರ ನಡೆದರೆ, ಈ ಪಡೆ ಮೆಟ್ರೋ ಸೇವೆ ಮುಂದುವರಿಸಲಿದೆ ಎಂದು ಹೆಸರು ಹೇಳಲಿಚ್ಛಿಸದ ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು. ಇನ್ನು “ನಮ್ಮ ಮೆಟ್ರೋ’ ಬಹುತೇಕ ಅಟೋಮೆಟಿಕ್ ಸೇವೆಯನ್ನು ಹೊಂದಿರುವುದರಿಂದ ನಿರ್ವಹಣಾ ವಿಭಾಗದ ಸಿಬ್ಬಂದಿ ಕೊರತೆಯಿಂದ ಸಮಸ್ಯೆ ಆಗುವುದಿಲ್ಲ. ಒಂದು ವೇಳೆ ಮುಷ್ಕರಕ್ಕೆ ಕರೆ ನೀಡಿದರೆ, ಪ್ರಾಜೆಕ್ಟ್ ವಿಭಾಗದ ಎಂಜಿನಿಯರ್‌ಗಳನ್ನು ಡಿಪೋ ಮತ್ತು ನಿಲ್ದಾಣಗಳಲ್ಲಿ ನಿಯೋಜಿಸಲು ಚಿಂತನೆ ಇದೆ ಎಂದೂ ಅಧಿಕಾರಿಯೊಬ್ಬರು ಹೇಳಿದರು.
-40 ನಿತ್ಯ ಸಂಚರಿಸುವ ರೈಲುಗಳು
-200 ಪೈಲಟ್‌ಗಳು
-400 ದಿನವೊಂದರ ಟ್ರಿಪ್‌ಗಳು
-16,000 ಕಿ.ಮೀ ನಿತ್ಯದ ಅಂದಾಜು ಕಾರ್ಯಾಚರಣೆ
-120 ಎಮರ್ಜನ್ಸಿ ರಿಕ್ವೈರ್ಡ್ ಟೀಮ್ ಸದಸ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.