ರಾಹುಲ್ ಗಾಂಧಿ ಪ್ರತ್ಯೇಕ ಸಭೆ
Team Udayavani, Jun 6, 2018, 6:00 AM IST
ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ಮಂಗಳವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜತೆ ಸರಣಿ ಸಭೆಗಳನ್ನು ನಡೆಸಿದ್ದು, ಅಂತಿಮ ಪಟ್ಟಿ ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಮ್ಮಿಶ್ರ ಸಚಿವ ಸಂಪುಟದಲ್ಲಿ ಯಾರು ಸಚಿವರಾಗಬೇಕು ಎನ್ನುವ ಕುರಿತು ರಾಹುಲ್ ಅವರು ಮಂಗಳವಾರ ಇಡೀ ದಿನ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ, ಡಿ.ಕೆ. ಶಿವಕುಮಾರ್, ದಿನೇಶ್ ಗುಂಡೂರಾವ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕಾರ್ಯದರ್ಶಿಗಳನ್ನು ಪ್ರತ್ಯೇಕವಾಗಿ ಕರೆದು ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ಸಂಜೆ ಉಪ ಮುಖ್ಯಮಂತ್ರಿ ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಸುದೀರ್ಘ ಮಾತುಕತೆ ನಡೆಸಿದರು. ಸರ್ಕಾರದಲ್ಲಿ ಹಿರಿಯ ಶಾಸಕರಿಗೆ ಅವಕಾಶ ನೀಡಬೇಕೆ, ಬೇಡವೇ ಎನ್ನುವ ಕುರಿತಂತೆಯೇ ಸಾಕಷ್ಟು ಚರ್ಚೆ ನಡೆದಿದೆ. ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಹಿರಿಯರು ಮತ್ತು ಕಿರಿಯರು ಇಬ್ಬರಿಗೂ ಆದ್ಯತೆ ನೀಡುವ ನಿಟ್ಟಿನಲ್ಲಿ ರಾಜ್ಯ ನಾಯಕರು ರಾಹುಲ್ ಗಾಂಧಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದಾರೆ. ಒಂದೇ ಹಂತದಲ್ಲಿ ಎಲ್ಲ ಸ್ಥಾನಗಳನ್ನು ಭರ್ತಿ ಮಾಡಿದರೆ, ಬಂಡಾಯ ಹೆಚ್ಚಾಗುವ ಸಾಧ್ಯತೆಯಿದೆ.
ಮೊದಲ ಹಂತದಲ್ಲಿ ಹತ್ತರಿಂದ ಹನ್ನೆರಡು ಸ್ಥಾನಗಳನ್ನು ಮಾತ್ರ ಭರ್ತಿ ಮಾಡಿ ಉಳಿದ ಸ್ಥಾನಗಳನ್ನು ಸ್ಪಲ್ಪ ಸಮಯದ ನಂತರ ತುಂಬಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಸಂಪುಟದಲ್ಲಿ ಹೇಗಾದರೂ ಮಾಡಿ ಸ್ಥಾನ ಪಡೆಯಬೇಕೆಂದು ಸಚಿವಾಕಾಂಕ್ಷಿಗಳು ಸೋಮವಾರ ರಾತ್ರಿಯೇ ದೆಹಲಿಗೆ ತೆರಳಿ ಠಿಕಾಣಿ ಹೂಡಿದ್ದರು. ಕೆಲವು ಶಾಸಕರು ರಾಜ್ಯ ನಾಯಕರ ಭರವಸೆಯ ಮೇರೆಗೆ ರಾಹುಲ್ ಗಾಂಧಿಯೊಂದಿಗಿನ ಸಭೆ ಮುಕ್ತಾಯವಾಗುವ ಮೊದಲೇ ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಉನ್ನತ ಮೂಲಗಳ ಪ್ರಕಾರ ಮೊದಲ ಹಂತದಲ್ಲಿ ಲಿಂಗಾಯತ ಕೋಟಾದಡಿ ಬಸವರಾಜ್ ಪಾಟೀಲ್ ಹುಮ್ನಾಬಾದ್, ಎಂ.ಬಿ. ಪಾಟೀಲ್ ಅವರಿಗೆ ಅವಕಾಶ ನೀಡಲು ಹೈಕಮಾಂಡ್ ಒಲವು ವ್ಯಕ್ತಪಡಿಸಿದೆ.
ಮುಸ್ಲಿಂ ಕೋಟಾದಡಿ ರೋಷನ್‌ಬೇಗ್ ಅಥವಾ ಖಾದರ್ ಅವರಲ್ಲಿ ಒಬ್ಬರಿಗೆ ಅವಕಾಶ ಕಲ್ಪಿಸಲು ರಾಹುಲ್ ಸೂಚಿಸಿದ್ದಾರೆ ಎನ್ನಲಾಗಿದೆ.
ಒಕ್ಕಲಿಗರ ಕೋಟಾ: ಡಿಕೆಶಿಗೆ ಅವಕಾಶ
ಒಕ್ಕಲಿಗರ ಕೋಟಾದಡಿ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ದಲಿತರ ಕೋಟಾದಡಿ ಪ್ರಿಯಾಂಕ್ ಖರ್ಗೆ, ಎಸ್ಟಿ ಕೋಟಾದಡಿ ಸತೀಶ್ ಜಾರಕಿಹೊಳಿ ಸಂಪುಟ ಸೇರುವ ಸಾಧ್ಯತೆ ಇದೆ. ಕುರುಬ ಸಮುದಾಯದಡಿ ಎಚ್. ಎಂ.ರೇವಣ್ಣ ಹೆಸರು ತೀವ್ರ ಚರ್ಚೆಗೆ ಬಂದಿದೆ. ಕೊನೇ
ಕ್ಷಣದಲ್ಲಿ ದಲಿತ ಎಡಗೈ ಸಮುದಾಯಕ್ಕೆ ಸೇರಿರುವ ರೂಪಾ ಶಶಿಧರ್‌ಗೆ ಮಣೆ ಹಾಕಲು ಕೈ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಲಿಂಗಾಯತ ಕೋಟಾದಡಿ ಬಸವರಾಜ್ ಪಾಟೀಲ್ ಹುಮ್ನಾಬಾದ್, ಎಂ.ಬಿ. ಪಾಟೀಲ್ ಅವರಿಗೆ ಅವಕಾಶ ನೀಡಲು ಒಲವು
ಮುಸ್ಲಿಂ ಕೋಟಾದಡಿ ರೋಷನ್‌ಬೇಗ್ ಅಥವಾ ಯು.ಟಿ.ಖಾದರ್ ಅವರಲ್ಲಿ ಒಬ್ಬರಿಗೆ ಅವಕಾಶ
ಸಂಪುಟದಲ್ಲಿ ಹಿರಿಯರು ಮತ್ತು ಕಿರಿಯರು ಇಬ್ಬರಿಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗಿದೆ. ಸಂಪುಟ ಸೇರುವ 21 ಶಾಸಕರ
ಬಗ್ಗೆಯೂ ಚರ್ಚಿಸಲಾಗಿದ್ದು, ಅಂತಿಮ ಪಟ್ಟಿಯನ್ನು ರಾಹುಲ್ ಬುಧವಾರ ಬೆಳಗ್ಗೆ ಕಳುಹಿಸಲಿದ್ದಾರೆ.
● ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.