“ಕಾಲಾ’ ಚಿತ್ರ ಪ್ರದರ್ಶನಕ್ಕೆ ಸೂಕ್ತ ಭದ್ರತೆ ನೀಡಿ
Team Udayavani, Jun 6, 2018, 6:00 AM IST
ಬೆಂಗಳೂರು: ರಜನಿಕಾಂತ್ ಅಭಿನಯದ “ಕಾಲಾ’ ಚಲನಚಿತ್ರ ಪ್ರದರ್ಶನದ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಭದ್ರತೆ
ನೀಡುವಂತೆ ಹೈಕೋರ್ಟ್ ಪೊಲೀಸ್ ಇಲಾಖೆಗೆ ಮಧ್ಯಂತರ ಆದೇಶ ನೀಡಿದೆ. ಜೂ.7ರಂದು ಚಿತ್ರ ಬಿಡುಗಡೆಯಾಗುವ ಸ್ಥಳಗಳು, ಎಲ್ಲೆಲ್ಲಿ ಭದ್ರತೆಯ ಅವಶ್ಯವಿದೆ, ಯಾವ ನಿರ್ದಿಷ್ಟ ಸಂಘಟನೆ ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸಬಹುದು ಎಂಬುದರ ಕುರಿತು ವಿವರಗಳನ್ನೊಳಗೊಂಡ ಮನವಿಯನ್ನು ವಿತರಕರು ಡಿಜಿಪಿಗೆ ಸಲ್ಲಿಸಬೇಕು. ಮನವಿ ಪರಿಗಣಿಸಿ ಡಿಜಿಪಿ, ನಗರ ಪೊಲೀಸ್ ಆಯುಕ್ತರು ಸೂಕ್ತ ಭದ್ರತೆ ಕಲ್ಪಿಸಿ ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಹೈಕೋರ್ಟ್ ತಿಳಿಸಿದೆ.
ಚಿತ್ರ ಬಿಡುಗಡೆಗೆ ಕನ್ನಡಪರ ಸಂಘಟನೆಗಳು ಅಡ್ಡಿಪಡಿಸುವ ಬೆದರಿಕೆಯಿದ್ದು ಸೂಕ್ತ ರಕ್ಷಣೆ ನೀಡಲು ನಿರ್ದೇಶಿಸುವಂತೆ ಕೋರಿ, ಚಿತ್ರ ನಿರ್ಮಾಣ ಸಂಸ್ಥೆ ವಂಡರ್‌ಬಾರ್ ಫಿಲ್ಮ್ ಪ್ರೈ.ಲಿ., ರಜನಿಕಾಂತ್ ಅಳಿಯ ಹಾಗೂ ಚಿತ್ರದ ನಿರ್ಮಾಪಕ ಧನುಷ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾ.ಜಿ. ನರೇಂದರ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ತಮಿಳುನಾಡಿಗೆ ನೀರು ಬಿಡುವ ಸುಪ್ರೀಂ ಆದೇಶದ ವಿಚಾರವಾಗಿ ರಜನಿಕಾಂತ್ ಹೇಳಿಕೆಯನ್ನು ವಿರೋಧಿಸಿ ಚಲನಚಿತ್ರ ವಾಣಿಜ್ಯ
ಮಂಡಳಿ ಹಾಗೂ ಕೆಲ ಕನ್ನಡಪರ ಸಂಘಟನೆಗಳು “ಕಾಲಾ’ ಚಿತ್ರ ಬಿಡುಗಡೆ ಮಾಡ ದಂತೆ ಸಿಎಂಗೆ ಮನವಿ ಸಲ್ಲಿಸಿವೆ. ಇದರಿಂದ ಸಂವಿಧಾನಾತ್ಮಕ
ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಲಿದೆ ಎಂದರು. ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೋಕೆಟ್ ಜನರಲ್ ಎ.ಜಿ ಶಿವಣ್ಣ, ಭದ್ರತೆ
ಅಗತ್ಯವಿರುವ ಚಿತ್ರ ವಿತರಕರು, ಚಿತ್ರ ಪ್ರದರ್ಶನ ಕಾಣುವ ನಿರ್ದಿಷ್ಟ ಸ್ಥಳಗಳ ಬಗ್ಗೆ ವಿವರವಾದ ಮನವಿ ಸಲ್ಲಿಸಲಿ. ಅದರಂತೆ ಸೂಕ್ತ ರಕ್ಷಣೆ
ನೀಡಲಿದ್ದೇವೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಚಿತ್ರಪ್ರದರ್ಶನಕ್ಕೆ ಯಾವುದೇ ಅಡ್ಡಿಯಾಗದಂತೆ ಭದ್ರತೆ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಆದೇಶಿಸಿ, ಇತರೆ ಪ್ರತಿವಾದಿಗಳಾದ ಸಿಬಿಎಫ್ಸಿ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಚಿತ್ರ ಬಿಡುಗಡೆ ಬೇಡ: ಮುಖ್ಯಮಂತ್ರಿ ಎಚ್‌ಡಿಕೆ
ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡಪರ ಸಂಘಟನೆಗಳ ವಿರೋಧದ ನಡುವೆ ರಜನಿಕಾಂತ್ ಅಭಿನಯದ ಕಾಲಾ ಚಿತ್ರ ಬಿಡುಗಡೆ ಮಾಡುವುದು ಬೇಡ ಎಂಬುದು ಕನ್ನಡಿಗನಾಗಿ ನನ್ನ ಅಭಿಪ್ರಾಯ. ಅದನ್ನು ಮೀರಿ ವಿತರಕರು ಚಿತ್ರ ಪ್ರದರ್ಶನಕ್ಕೆ ಮುಂದಾದರೆ ಎದುರಾಗಬಹುದಾದ ಅಪಾಯಗಳಿಗೆ ಅವರೇ ಜವಾಬ್ದಾರರಾಗಿರುತ್ತಾರೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಭೇಟಿಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ನೇತೃತ್ವದ ನಿಯೋಗ, ಕಾಲಾ ಚಿತ್ರ ಬಿಡುಗಡೆಗೆ ಅವಕಾಶ ನೀಡದಂತೆ ಮನವಿ ಸಲ್ಲಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಒಬ್ಬ ಮುಖ್ಯಮಂತ್ರಿಯಾಗಿ ಚಿತ್ರ ಬಿಡುಗಡೆ
ಮಾಡದಂತೆ ಸೂಚಿಸಲು ಸಾಧ್ಯವಿಲ್ಲ ಎಂದು ಹೇಳಿದರು. ವಿರೋಧದ ನಡುವೆಯೂ ನಿರ್ಮಾಣ ಸಂಸ್ಥೆಯವರೇ ಚಿತ್ರ ಬಿಡುಗಡೆ ಮಾಡಿ ಸಮಸ್ಯೆ ಎದುರಾದರೆ ಅದಕ್ಕೆ ಅವರೇ ಜವಾಬ್ದಾರರಾಗಬೇಕಾಗುತ್ತದೆ ಎಂದರು.
ಕೋರ್ಟ್ ಆದೇಶ ಪಾಲಿಸುತ್ತೆವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೂಲಕ “ಕಾಲಾ’ ಚಿತ್ರದ ಬಗ್ಗೆ ಯಾವ ಪ್ರತಿಕ್ರಿಯೆ ನೀಡುವಂತಿಲ್ಲ. ಆದರೆ, ನಾನೊಬ್ಬ ಕನ್ನಡಿಗ ನಾಗಿ “ಕಾಲಾ’ ಚಿತ್ರ ಬಿಡುಗಡೆ ಹಾಗೂ ಪ್ರದರ್ಶ ವನ್ನು ವಿರೋಧಿಸುತ್ತೇನೆ.
ಸಾ.ರಾ.ಗೋವಿಂದು, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.