ಅನಕ್ಷರಸ್ಥ, ಕೂಲಿ ಕಾರ್ಮಿಕ ಬಡ ಕುಟುಂಬಕ್ಕೆ ಮನೆ – ಶೌಚಾಲಯವಿಲ್ಲ
Team Udayavani, Jun 8, 2018, 2:30 AM IST
ವಿಟ್ಲ: ಸರಕಾರ ಬಡವರಿಗೆ ಎಲ್ಲ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತದೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತದೆ. ಗುಡಿಸಲು ಮುಕ್ತ ಎಂದು ಘೋಷಿಸುತ್ತದೆ, ಸ್ವಚ್ಛತೆಗೆ ಆದ್ಯತೆ ಕೊಡುತ್ತದೆ. ಆದರೆ ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಈ ಕುಟುಂಬ ಮಾತ್ರ ಯಾವುದೇ ಸೌಲಭ್ಯ ತಲುಪದೇ ಶೋಚನೀಯ ಸ್ಥಿತಿಯಲ್ಲೇ ಇರುವುದು ವಾಸ್ತವ. ಸರಕಾರದ ಸೌಲಭ್ಯಗಳು ಇನ್ನೂ ಅರ್ಹ ಫಲಾನುಭವಿಗಳನ್ನು ತಲುಪಿಲ್ಲ ಎಂಬುದಕ್ಕೆ ಇದು ಸಾಕ್ಷಿ. ಮಾಣಿಲ ಗ್ರಾಮದ ನೆಕ್ಕರೆ ನಿವಾಸಿ ನಾರಾಯಣ ನಾಯ್ಕ ಮತ್ತು ಲಲಿತಾ ದಂಪತಿಯ ಈ ಗುಡಿಸಲನ್ನು ಗಮನಿಸಿದಲ್ಲಿ ಇನ್ನೂ ಅಧಿಕಾರಿಗಳು, ಜನ ಪ್ರತಿನಿಧಿಗಳು ನಿದ್ದೆಯಲ್ಲಿರುವುದು ಸ್ಪಷ್ಟವಾಗುತ್ತದೆ. ಮಣ್ಣಿನ ಗೋಡೆ. ಮಾಡಿಗೆ ಪ್ಲಾಸ್ಟಿಕ್ ಟರ್ಪಾಲಿನ ಹೊದಿಕೆ. ಸ್ನಾನದ ಕೋಣೆಗೆ ಅದಾವುದೂ ಇಲ್ಲ. ಶೌಚಾಲಯವಿಲ್ಲ. 2005ರಲ್ಲಿ ಅಕ್ರಮ – ಸಕ್ರಮದಲ್ಲಿ 20 ಸೆಂಟ್ಸ್ ಭೂಮಿ ಮಂಜೂರಾಗಿದೆ. ಅದಕ್ಕೆ ಗಡಿ ಗುರುತುಗಳಿಲ್ಲ.
ಪರಿಶಿಷ್ಟ ಪಂಗಡದ ಈ ಕುಟುಂಬಕ್ಕೆ ಸರಕಾರದ ಅದೆಷ್ಟೋ ಸೌಲಭ್ಯಗಳಿವೆ. ಆದರೆ ಆ ಬಗ್ಗೆ ನಾರಾಯಣ ನಾಯ್ಕ ಅವರಿಗೆ ಮಾಹಿತಿಯಿಲ್ಲ. ಅವರು ಅನಕ್ಷರಸ್ಥರಾಗಿರುವುದೇ ಅದಕ್ಕೆ ಕಾರಣವಾಗಿರಬಹುದು. ಇವರಲ್ಲಿ ಗುರುತಿನ ಚೀಟಿಯೊಂದಿದೆ. ಆಧಾರ್ ಕಾರ್ಡ್ ಇಲ್ಲ. ಜಾತಿ ಪ್ರಮಾಣ ಪತ್ರವಿಲ್ಲ. ಇವರ ಪತ್ನಿಗೆ ಯಾವುದೇ ಕಾರ್ಡ್ ಇಲ್ಲ. ಈ ಕುಟುಂಬಕ್ಕೆ 2008ರ ವರೆಗೆ ಪಡಿತರ ಚೀಟಿ ಇತ್ತು. ನವೀಕರಿಸದೇ ಇದ್ದುದರಿಂದ ಅದೂ ನಿಷ್ಕ್ರಿಯವಾಗಿದೆ. ಪಡಿತರ ಚೀಟಿ ಮೂಲಕ ಬರುವ ಯಾವ ಆಹಾರವೂ ಇವರ ಮನೆಗೆ ಸಿಗುವುದಿಲ್ಲ. ಸೀಮೆ ಎಣ್ಣೆ ಇಲ್ಲ. ಇವರಿಗೆ ಕುಡಿಯುವ ನೀರಿಗೆ ಕೆರೆ, ಬಾವಿಗಳಿಲ್ಲ. ಕುಡಿಯುವುದಕ್ಕೆ ಪಕ್ಕದ ಮನೆಯವರ ಬಾವಿಯೇ ಆಶ್ರಯ. ಮನೆಗೆ ರಸ್ತೆ ಇಲ್ಲ. ಮನೆಯಿಂದ 150 ಮೀಟರ್ ದೂರದಲ್ಲಿ ಮುಖ್ಯ ರಸ್ತೆ ಹಾದುಹೋಗುತ್ತದೆ. ಅಲ್ಲಿ ಬೀದಿ ದೀಪ ಉರಿಯುತ್ತದೆ. ಅದೇ ಬೆಳಕು ಇವರ ಮನೆಯಲ್ಲಿ ಗೋಚರಿಸುತ್ತದೆ. ವಿದ್ಯುತ್ ಕಣ್ಣಾಮುಚ್ಚಾಲೆಯಾಡಿದರೆ ಆ ಬೆಳಕೂ ಇಲ್ಲ. ಟರ್ಪಾಲು ಹೊದಿಕೆಯ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದೂ ಕಷ್ಟ. ಮನೆಯಲ್ಲಿ ದೀಪ ಹಚ್ಚುವುದಕ್ಕೂ ಆಗದೇ ಕಾಡಿ ಬೇಡಿ ಸೀಮೆ ಎಣ್ಣೆ ತಂದರೂ ಮೇಣದ ಬತ್ತಿ ಖರೀದಿಸಿದರೂ ಬೆಳಕು ಪಸರಿಸದ ಈ ಮನೆಗೆ ಬೆಳಕು ನೀಡುವುದಕ್ಕೆ ಎಲ್ಲ ಮನಸ್ಸುಗಳೂ ಒಂದಾಗಬೇಕಾಗಿದೆ.
ನಾರಾಯಣ ನಾಯ್ಕ ಅವರಿಗೆ ವಯಸ್ಸು 45. ಇವರು ಕೂಲಿ ಕಾರ್ಮಿಕ. ಈ ದಂಪತಿಗೆ ಮಕ್ಕಳಿಲ್ಲ. ಇಬ್ಬರೇ ಈ ಮುರುಕಲು ಮನೆಯಲ್ಲಿ ಜೀವನ ಸವೆಸುತ್ತಿದ್ದಾರೆ. ಈ ಜೀವನದ ಪಾಡು ಯಾರಿಗೂ ಬರಬಾರದು. ಕಂದಾಯ ಇಲಾಖೆ ಮತ್ತು ಸರಕಾರದ ಎಲ್ಲ ಇಲಾಖೆಗಳೂ ಈ ಮಣ್ಣಿನ ಬಡವರ ಮನೆ ಬಾಗಿಲಿಗೆ ಸೌಲಭ್ಯವನ್ನು ಒದಗಿಸಬೇಕು. ಕೆಲವೊಂದು ಇಲಾಖೆಗಳು, ರಾಜಕಾರಣಿಗಳು ಇದನ್ನು ಆಗಾಗ ಭಾಷಣದಲ್ಲಿ ಹೇಳುತ್ತಿರುತ್ತಾರೆ. ಆದರೆ ಅದು ತಲುಪಲೇ ಇಲ್ಲ ಎನ್ನುವುದಕ್ಕೆ ಇದು ಸಾಕ್ಷಿ.
ಕಾನೂನು ತೊಡಕು
ವಸತಿ ನಿಗಮ ಮನೆ ಯಜಮಾನನಿಗೆ ಮನೆ ನೀಡಬಹುದು ಎನ್ನುತ್ತದೆ. ಆದರೆ ಪಂಚಾಯತ್ ರಾಜ್ ನಿಯಮದ ಪ್ರಕಾರ ಮಹಿಳೆಯರಿಗೆ ಮನೆ ನೀಡಬೇಕೆನ್ನುತ್ತದೆ. ನಿಯಮ ಮೀರಿ ಪುರುಷರ ಹೆಸರಲ್ಲಿ ಮನೆ ಒದಗಿಸಿದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೇಲೆ ಕಾನೂನು ಕ್ರಮ ಕೈಗೊಳ್ಳಬಹುದೆಂಬ ನಿಯಮವೂ ಇದೆ. ಇನ್ನೊಂದು ಅವಕಾಶವೂ ಇದ್ದು, ಗಂಡನ ಹೆಸರಲ್ಲಿ ಭೂಮಿಯಿದ್ದಲ್ಲಿ ಆತ ತನ್ನ ಪತ್ನಿಗೆ ದಾನಪತ್ರ ನೀಡಿದಲ್ಲಿ ಆಗ ಮನೆ ಮಂಜೂರು ಮಾಡಬಹುದು. ಆದರೆ ಇಲ್ಲಿ ನಾರಾಯಣ ನಾಯ್ಕ ಅವರ ಹೆಸರಲ್ಲಿ ಇರುವ 20 ಸೆಂಟ್ಸ್ ಜಾಗ ಅಕ್ರಮ-ಸಕ್ರಮದಲ್ಲಿ ಮಂಜೂರಾಗಿದೆ. ಅದನ್ನು ಆತ ಇತರರಿಗೆ ಪರಭಾರೆ ಮಾಡುವ ಹಾಗಿಲ್ಲ.
ಶೋಚನೀಯ ಸ್ಥಿತಿ
ನಾರಾಯಣ ನಾಯ್ಕ ಕುಟುಂಬದ ಸ್ಥಿತಿ ಶೋಚನೀಯವಾಗಿದೆ. ಅವರನ್ನು ಇಲಾಖೆಗಳಿಗೆ ಅಲೆದಾಡಿಸದೇ ಅವರು ಇರುವಲ್ಲಿಗೇ ತೆರಳಿ ಈ ಬಡ ಕುಟುಂಬಕ್ಕೆ ಸರಕಾರ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕು. ಎಲ್ಲ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುವ ಈ ಕುಟುಂಬಕ್ಕೆ ನ್ಯಾಯ ಸಿಗಬೇಕು.
– ವಿಷ್ಣು ಕನ್ನಡಗುಳಿ, ಸ್ಥಳೀಯ
ಪ್ರಯತ್ನ ಆಗಿದೆ
ಪಂಚಾಯತ್ ರಾಜ್ ನಿಯಮಾನುಸಾರ ಮಹಿಳೆಯರ ಹೆಸರಲ್ಲಿ ಮನೆ ಒದಗಿಸಬೇಕು. ನಾರಾಯಣ ನಾಯ್ಕ ಅವರ ಪತ್ನಿ ಹೆಸರಲ್ಲಿ ಹಕ್ಕುಪತ್ರವಿರಬೇಕು, ಜಾತಿ ಪ್ರಮಾಣಪತ್ರ ಬೇಕು. ಅದಾವುದೂ ಇವರಿಗೆ ಇಲ್ಲ. ಗಂಡನ ಹೆಸರಲ್ಲಿ ಹಕ್ಕುಪತ್ರವಿದ್ದರೂ ಹಿರಿಯ ನಾಗರಿಕ, ಅಂಗವಿಕಲ, ವಿದುರನಾಗಿದ್ದಲ್ಲಿ ಮಾತ್ರ ಮನೆ ನೀಡುವ ಅವಕಾಶವಿದೆ. ಆದರೂ ಅವರಿಗೆ ಕೆಲವು ಸೌಲಭ್ಯ ನೀಡುವ ಪ್ರಯತ್ನವಾಗಿದೆ. ಮಳೆಹಾನಿ ಪರಿಹಾರಕ್ಕೆ ಅರ್ಜಿ ಹಾಕಿಸಿದ್ದೇನೆ. 14ನೇ ಹಣಕಾಸು ಪ.ಜಾ./ಪ.ಪಂ. ಯೋಜನೆಯಡಿಯಲ್ಲಿ ಮನೆ ದುರಸ್ತಿಗೆ ಅನುದಾನ ಇಡಲಾಗಿದೆ. ಆದರೆ ಅವರ ಮನೆ ನಿರ್ಮಿಸಲು ಸಾಕಾಗದು.
– ರಾಜೇಶ್ ಕುಮಾರ್ ಅಧ್ಯಕ್ಷರು, ಮಾಣಿಲ ಗ್ರಾ.ಪಂ.
— ಉದಯಶಂಕರ್ ನೀರ್ಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.