ಟಿಬೆಟಿನ ಕತೆ: ಮೊಲದ ಉಪಾಯ
Team Udayavani, Jun 10, 2018, 6:00 AM IST
ಪೊದೆಯಲ್ಲಿ ಮುದ್ದು ಮೊಲ ತನ್ನ ತಾಯಿಯ ಜೊತೆಗೆ ವಾಸವಾಗಿತ್ತು. ಮರಿ ಮೊಲದ ಮೇಲೆ ತಾಯಿಗೆ ತುಂಬ ಅಕ್ಕರೆ. ಕಾಡಿನಲ್ಲಿಡೀ ಹುಡುಕಿ ಬಗೆಬಗೆಯ ಚಿಗುರೆಲೆಗಳನ್ನು, ಕಂದಮೂಲಗಳನ್ನು ಅದಕ್ಕಾಗಿ ಹುಡುಕಿ ತರುತ್ತಿತ್ತು. ಹೀಗೆ ಒಂದು ದಿನ ಆಹಾರ ತರಲು ಹೋದ ತಾಯಿಮೊಲ ಎಷ್ಟು ಕತ್ತಲಾದರೂ ಮರಳಿ ತನ್ನ ಮರಿಯಿರುವ ಜಾಗಕ್ಕೆ ಬರಲಿಲ್ಲ. ಹಸಿದ ಮರಿ ತಾಯಿಯ ದಾರಿ ಕಾದು ಬೆಳಗಾಗುವವರೆಗೂ ನಿದ್ರೆ ಮಾಡದೆ ಕುಳಿತಿತು. ಬೆಳಗಾದ ಕೂಡಲೇ ತಾಯಿ ಎಲ್ಲಿದ್ದಾಳೆಂದು ಹುಡುಕಿಕೊಂಡು ಹೊರಟಿತು. ಒಂದು ಕಡೆ ತಾಯಿಮೊಲ ಕಣ್ಣುಗಳನ್ನು ಕಳೆದುಕೊಂಡು ದಿಕ್ಕುಗಾಣದೆ ರೋದಿಸುತ್ತ ಕುಳಿತಿರುವುದು ಕಾಣಿಸಿತು. ಮರಿ ತಾಯಿಯ ಬಳಿಗೆ ಹೋಗಿ ದುಃಖ ದಿಂದ, “”ಏನಾಯಿತಮ್ಮ, ನಿನ್ನ ಕಣ್ಣುಗಳನ್ನು ಹೇಗೆ ಕಳೆದುಕೊಂಡೆ?” ಎಂದು ಕೇಳಿತು.
“ನಾನು ನಿನಗಾಗಿ ಗೆಣಸಿನ ಬೇರು ಅಗೆಯುತ್ತ ಇದ್ದೆ ಮಗೂ. ಆಗ ಕರಡಿರಾಯ ಬಂದು ನನ್ನ ಮೇಲೆ ಹಲ್ಲೆ ಮಾಡಿತು. ಇದು ನನಗೆ ಸೇರಿದ ಜಾಗ. ಇಲ್ಲಿ ಏನನ್ನೂ ಮುಟ್ಟುವ ಹಕ್ಕು ನಿನಗಿಲ್ಲ. ಈ ತಪ್ಪಿಗಾಗಿ ನಿನ್ನ ಕಣ್ಣುಗಳನ್ನು ಕಿತ್ತು ಹಾಕುತ್ತೇನೆ ಎಂದು ಹೇಳಿ ಉಗುರುಗಳಿಂದ ಪರಚಿ ಕುರುಡಳನ್ನಾಗಿ ಮಾಡಿತು. ಬಿಲಕ್ಕೆ ಹಿಂತಿರುಗಲು ದಾರಿಗಾಣದೆ ಹೀಗೆ ಕುಳಿತಿದ್ದೇನೆ” ಎಂದು ತಾಯಿಮೊಲ ನಡೆದ ಕಥೆ ಹೇಳಿತು.
ಮರಿಮೊಲ ಸಾಂತ್ವನದ ಮಾತುಗಳನ್ನಾಡಿತು. “”ಕಳೆದುಕೊಂಡ ಕಣ್ಣುಗಳನ್ನು ಮರಳಿ ತರುತ್ತೇನೆ. ಕರಡಿರಾಯನಿಗೆ ತಕ್ಕ ಪಾಠ ಕಲಿಸುತ್ತೇನೆ” ಎಂದು ಧೈರ್ಯ ತುಂಬಿತು. “”ಬೇಡ ಮಗೂ. ದೊಡ್ಡವರನ್ನು ಎದುರು ಹಾಕಿಕೊಳ್ಳಬಾರದು” ಎಂದು ತಾಯಿ ಬುದ್ಧಿಮಾತು ಹೇಳಿದರೂ ಮರಿ ಕಿವಿಗೊಡಲಿಲ್ಲ. ತಾಯಿಯನ್ನು ಕೈಹಿಡಿದು ನಡೆಸುತ್ತ ಪೊದೆಗೆ ಕರೆತಂದಿತು. ಮನೆಯಿಂದ ಹೊರಟು ಕರಡಿಯಿರುವ ಗುಹೆಯನ್ನು ತಲುಪಿತು. “”ಹೊರಗೆ ಬಾರೋ ಕಂಬಳಿ ಮೈಯವನೇ. ನಿನ್ನ ಕಣ್ಣುಗಳನ್ನು ಕಿತ್ತು ಹಾಕುತ್ತೇನೆ” ಎಂದು ಗರ್ಜಿಸಿತು. ತನಗೆ ಸವಾಲು ಹಾಕುವವರು ಯಾರು ಎಂದು ತಿಳಿಯದೆ ಕರಡಿ ಆಶ್ಚರ್ಯದಿಂದ ಹೊರಗೆ ಬಂದಿತು. ಗುಹೆಯ ಬಾಗಿಲಲ್ಲಿ ನಿಂತು ಬೆದರಿಕೆ ಹಾಕುತ್ತಿರುವ ಚೋಟು ಮೊಲವನ್ನು ನೋಡಿ ಅದಕ್ಕೆ ಬಂದ ಕೋಪ ಸಣ್ಣದಲ್ಲ. “”ನಿನ್ನ ಕಣ್ಣುಗಳನ್ನೇ ಕಳಚುತ್ತೇನೆ ನೋಡು” ಎಂದು ಹಿಡಿಯಲು ಬಂತು.
ಮೊಲ ಕರಡಿಯ ಕೈಗೆ ಸಿಗದೆ ಓಡುತ್ತ ಹುಲಿಯ ಗವಿಯನ್ನು ಹೊಕ್ಕಿತು. ಮಲಗಿದ ಹುಲಿ ಎದ್ದು ಕುಳಿತಿತು. ತಾನಾಗಿ ಬಂದ ಆಹಾರವನ್ನು ಕಂಡು ನಾಲಿಗೆ ಚಪ್ಪರಿಸಿತು. “”ಹಾ, ಅವಸರಿಸಬೇಡ. ಮೊದಲು ಇದನ್ನು ತಿನ್ನು” ಎಂದು ಮೊಲ ಅದಕ್ಕೆ ತಾನು ತಂದಿದ್ದ ತುಪ್ಪದಲ್ಲಿ ಕರಿದ ಗೆಣಸಿನ ತುಂಡನ್ನು ತಿನ್ನಲು ಕೊಟ್ಟಿತು. ಅದನ್ನು ತಿಂದು ಹುಲಿಗೆ ಆದ ಸಂತೋಷ ಅಷ್ಟಿಷ್ಟಲ್ಲ. “”ಎಷ್ಟು ರುಚಿಯಾಗಿದೆ ಈ ತಿಂಡಿ! ಇದನ್ನು ಯಾವುದರಿಂದ ಮಾಡಿದ್ದೀ?” ಎಂದು ಕೇಳಿತು. “”ಹುಲಿ ಮಾವಾ, ನಿನಗೆ ಅಷ್ಟೂ ತಿಳಿಯದೆ? ಅದು ಕರಡಿಯ ಕಣ್ಣುಗಳು. ಇದರಷ್ಟು ರುಚಿಯಾದ ಖಾದ್ಯ ಬೇರೊಂದಿಲ್ಲ. ಕಾಡಿನಲ್ಲಿ ವಾಸವಾಗಿರುವ ನಿನಗೆ ಇಷ್ಟು ಗೊತ್ತಿಲ್ಲವೆ?” ಎಂದು ಕೇಳಿತು. “”ಹೌದೆ? ನನಗೆ ಇದನ್ನು ಇನ್ನೂ ತಿನ್ನಬೇಕೆನಿಸುತ್ತದೆ” ಎಂದು ಹುಲಿ ಹೇಳುವಾಗ ಮೊಲವನ್ನು ಹುಡುಕುತ್ತ ಕರಡಿ ಒಳಗೆ ಬಂದುಬಿಟ್ಟಿತು. “”ಪೊಗರಿನ ಮೊಲವೊಂದು ಇಲ್ಲಿಗೆ ಬಂತೇ?” ಎಂದು ಕೇಳಿತು.
ಮರೆಯಲ್ಲಿ ಕುಳಿತಿದ್ದ ಮೊಲ, “”ಹುಲಿ ಮಾವಾ, ಸುಮ್ಮನೆ ಯಾಕೆ ಕುಳಿತಿರುವೆ? ಕರಡಿಯ ಕಣ್ಣುಗಳನ್ನು ಕೀಳು” ಎಂದು ಪಿಸುಗುಟ್ಟಿತು. ಮರುಕ್ಷಣವೇ ಹುಲಿ ಕರಡಿಯ ಮೇಲೆ ಹಾರಿ ಉಗುರುಗಳಿಂದ ಅದರ ಕಣ್ಣುಗಳೆರಡನ್ನೂ ಕಿತ್ತು ಹಾಕಿತು. ಅದೇ ಸಮಯ ನೋಡಿ ಮೊಲ ಹೊರಗೆ ಬಂದು ಪೊದೆಯೊಂದರಲ್ಲಿ ಅಡಗಿ ಕುಳಿತಿತು. ಕರಡಿ ನೋವಿನಿಂದ ಕೂಗುತ್ತ ಹೇಗೋ ಹುಲಿಯ ಗವಿಯಿಂದ ಹೊರಗೆ ಬಂದಿತು. ಕಾಡುಬಳ್ಳಿಗಳಿಂದ ಕರಡಿಯ ಕೊರಳಿಗೆ ಸುಲಭವಾಗಿ ಉರುಳು ಹಾಕಿ ಒಂದು ಮರಕ್ಕೆ ಕಟ್ಟಿಹಾಕಿತು. ಬಳಿಕ ಪ್ರಾಣಿಗಳ ವೈದ್ಯನಾದ ತೋಳದ ಬಳಿಗೆ ಹೋಯಿತು. ತೋಳ ಆಸೆಯಿಂದ ಅದರತ್ತ ನೋಡಿ, “”ಓಹೋ, ಒಳ್ಳೆಯ ಆಹಾರ ನನ್ನನ್ನೇ ಹುಡುಕಿಕೊಂಡ ಬಂದ ಹಾಗಿದೆ!” ಎಂದಿತು.
” “ನನ್ನನ್ನು ತಿನ್ನುವುದಕ್ಕೆ ಅವಸರಿಸಬೇಡ. ನಾನೇನೂ ಚಿಲ್ಲರೆ ಜನವಲ್ಲ. ಈಗ ತಾನೇ ಹುಲಿಗೆ ಹೇಳಿ ಕರಡಿಯೊಂದರ ಎರಡೂ ಕಣ್ಣುಗಳನ್ನು ಕೀಳಿಸಿ ಬಂದಿದ್ದೇನೆ. ನನಗೀಗ ನಿನ್ನಿಂದ ಒಂದು ಕೆಲಸವಾಗಬೇಕಾಗಿದೆ” ಎಂದಿತು ಮೊಲ. ಅದರ ಮಾತು ಕೇಳಿ ತೋಳ ಭಯಗೊಂಡಿತು. “”ನೀನು ಅಂತಹ ಶಕ್ತಿವಂತನೆಂಬುದು ತಿಳಿದಿರಲಿಲ್ಲ. ಈಗ ನಿನಗೆ ಏನು ಸಹಾಯ ಮಾಡಬೇಕೆಂಬುದನ್ನು ಹೇಳು” ಎಂದು ವಿನಯದಿಂದ ಕೇಳಿತು. “”ಕೋಪದ ಭರದಲ್ಲಿ ಕರಡಿಯ ಕಣ್ಣುಗಳನ್ನು ಕೀಳಿಸಿದೆ ನಿಜ. ಆದರೆ ಈಗ ಅದು ತಪ್ಪು$ಎಂದು ನನಗನಿಸುತ್ತಿದೆ. ಹೋದ ಕಣ್ಣು ಮರಳಿ ಬರಲು ಏನಾದರೂ ಚಿಕಿತ್ಸೆ ಇದ್ದರೆ ಮಾಡು ಅಂತ ಕೇಳಲು ಬಂದಿದ್ದೇನೆ. ನೀನು ಆಗುವುದಿಲ್ಲವೆಂದಾದರೆ ಹುಲಿ ಕರಡಿಯ ಕಣ್ಣುಗಳನ್ನು ಕೀಳುವಂತೆ ಮಾಡಿದ ನನಗೆ ನೀನೊಂದು ಲೆಕ್ಕವಲ್ಲ” ಎಂದಿತು ಮೊಲ.
“”ಓಹೋ, ನೀನು ದಯಾವಂತನೂ ಹೌದು. ಕರಡಿಗೆ ಮರಳಿ ಕಣ್ಣು ಬರಬೇಕಿದ್ದರೆ ನನಗೆ ಔಷಧ ತಿಳಿದಿತ್ತು ನಿಜ. ಆದರೆ ಅದನ್ನು ವಾಂಗುcಕ್ ಎಂಬ ಮನುಷ್ಯ ನನಗೆ ಮಾಡಿದ ಸಹಾಯಕ್ಕಾಗಿ ಕೊಟ್ಟುಬಿಟ್ಟೆ. ಇಲ್ಲಿ ಸಮೀಪದಲ್ಲಿ ಅವನು ನಾರುಬೇರುಗಳನ್ನು ಸಂಗ್ರಹಿಸುತ್ತ ಇದ್ದಾನೆ. ತೀರ ಕೆಟ್ಟ ಮನುಷ್ಯ. ಉಚಿತವಾಗಿ ಔಷಧ ಕೊಡಲಾರ. ಏನಾದರೂ ಲಾಭ ಸಿಕ್ಕಿದರೆ ಮಾತ್ರ ಅವನಿಂದ ಉಪಕಾರವಾದೀತು. ಹೋಗುವಾಗ ಚಿನ್ನದ ನಾಣ್ಯಗಳ ಬಿಂದಿಗೆ ಇದ್ದರೆ ಕೈಯಲ್ಲಿ ಹಿಡಿದುಕೋ” ಎಂದು ಹೇಳಿತು ತೋಳ.
ಮೊಲ ವಾಂಗುcಕ್ ಬಳಿಗೆ ಬಂದು ಔಷಧ ಕೇಳಿತು. ಆದರೆ ಅವನು ತೋಳ ಹೇಳಿದ ಹಾಗೆಯೇ ಸುಲಭವಾಗಿ ಔಷಧ ಕೊಡಲು ಒಪ್ಪಲಿಲ್ಲ. “”ಒಂದು ಬಿಂದಿಗೆ ತುಂಬ ಚಿನ್ನದ ನಾಣ್ಯಗಳನ್ನು ತಂದುಕೊಟ್ಟರೆ ಮಾತ್ರ ಔಷಧ ಕೊಡಬಹುದು. ಇಲ್ಲವಾದರೆ ಮರಳಿ ಹೋಗು” ಎಂದು ನಿರ್ದಯವಾಗಿ ಹೇಳಿದ. ಮೊಲವು, “”ಒಂದು ಬಿಂದಿಗೆ ನಾಣ್ಯ ತಾನೆ? ಅದನ್ನು ಕೊಡುವ ವ್ಯಕ್ತಿಯನ್ನು ಕೊರಳಿಗೆ ಹಗ್ಗ ಬಿಗಿದು ತಂದಿದ್ದೇನೆ. ಅವನೇ ಕೊಡುತ್ತಾನೆ ನಿನ್ನ ಹಣ. ಇದೋ ಈಗ ತಂದುಬಿಟ್ಟೆ” ಎಂದು ಹೇಳಿ ಕಟ್ಟಿ ಹಾಕಿದ್ದ ಕರಡಿಯ ಹಗ್ಗ ಹಿಡಿದು ಅವನ ಬಳಿಗೆ ಕರೆತಂದಿತು. ಕರಡಿಯನ್ನು ನೋಡಿ ವಾಂಗುcಕ್ ದಿಕ್ಕೆಟ್ಟುಹೋದ.
ವಾಂಗುcಕ್ ಮೊಲಕ್ಕೆ ಕೈಜೋಡಿಸಿದ. “”ನೀನು ಇಷ್ಟು ದೊಡ್ಡ ಸಾಮರ್ಥ್ಯವಂತನೆಂಬುದು ತಿಳಿಯದೆ ಹಣಕ್ಕಾಗಿ ಕೈಯೊಡ್ಡಿದೆ. ನನ್ನನ್ನು ಕ್ಷಮಿಸು” ಎಂದು ಹೇಳಿ ಹೋದ ಕಣ್ಣು ಮರಳಿ ಬರುವಂತಹ ಔಷಧವನ್ನು ಅದರ ಕೈಗೆ ನೀಡಿದ. ಮೊಲ ಕಾಡಿನ ನಡುವೆ ಕರಡಿಯನ್ನು ಕರೆತಂದು ಹಗ್ಗ ಕಳಚಿ ಬಿಟ್ಟಿತು. “”ಸಾಧುವಾದ ಮೊಲವೊಂದರ ಕಣ್ಣು ಕಿತ್ತ ಪಾಪಕ್ಕೆ ನೀನು ಜೀವನವಿಡೀ ಕುರುಡನಾಗಿಯೇ ಕಷ್ಟಪಡಬೇಕು” ಎಂದು ಹೇಳಿ ತನ್ನ ತಾಯಿಯ ಬಳಿಗೆ ಬಂದಿತು. ವಾಂಗುcಕ್ ಕೊಟ್ಟ ಎಲ್ಲ ಔಷಧವನ್ನು ತಾಯಿಯ ಕಣ್ಣುಗಳಿರುವ ಜಾಗಕ್ಕೆ ಸವರಿತು. ಮರುಕ್ಷಣವೇ ತಾಯಿ ಮೊಲ ಕಳೆದುಕೊಂಡ ಕಣ್ಣುಗಳನ್ನು ಪಡೆಯಿತು. ಆದರೆ ವೈದ್ಯನು ಕರಡಿಗೆ ಬೇಕಾಗುವಷ್ಟು ಔಷಧವನ್ನು ಕೊಟ್ಟಿದ್ದ. ಔಷಧದ ಪ್ರಮಾಣ ಹೆಚ್ಚಾಗಿದ್ದ ಕಾರಣ ಮುಂದೆ ಮೊಲಗಳಿಗೆ ದೊಡ್ಡ ಗಾತ್ರದ ಕಣ್ಣುಗಳು ಬಂದುಬಿಟ್ಟವು.
ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.