ಮನೆಗೆಲಸದ ಮಾಯಿ
Team Udayavani, Jun 10, 2018, 6:00 AM IST
ಗಂಟೆ ಹನ್ನೊಂದೂ ಕಾಲು. ಇನ್ನೂ ನಮ್ಮ ಮಾಯಿಯ ಸುಳುವಿಲ್ಲ! ವೈಶಾಖದ ಧಗೆ ಬೇರೆ ಸುಡುತ್ತಿದೆ. ಬರುತ್ತಾಳಾ ಇಲ್ಲವಾ ವಿಚಾರಿಸೋಣವೆಂದರೆ ಅವಳು ಫೋನನ್ನು ಮನೆಯಲ್ಲೇ ಇಟ್ಟು ಬರುತ್ತಾಳೆ. ಯಾಕೆಂದು ಕೇಳಿದರೆ, “”ತಮ್ಮ ಮನೆಯಲ್ಲಿ ಇರೋದೆ ಒಂದು ಫೋನ್‌ರಿ. ಅದು ಎಲ್ಲರಿಗೂ ಮಾತಾಡಕ ಬೇಕಲ್ರಿ” ಅಂತ ಒಮ್ಮೆ ಹೇಳಿದರೆ, “”ತನ್ನ ಗಡಿಬಿಡಿಯಾಗ ಫೋನು ಎಲ್ಲಾದರೂ ಬಿದ್ದುಗಿದ್ದುಹೋದ್ರೆ? ಎಲ್ಲೊ ಇಟ್ಟು ಮರ್ತು ಕಳೆದುಹೋದ್ರೆ? ಯಾರ್ಯಾರೊ ಮಾತಾಡ್ತಾ ಕುಂತ್ರೆ? ಎಂದು ತರೋದಿಲ್ಲ” ಅಂತ ಇನ್ನೊಮ್ಮೆ ಅನ್ನುತ್ತಾಳೆ. ಸರಿ, ಅವಳ ಕಾರಣ ಅವಳಿಗೆ. ಅಲ್ಲವೇ ಮತ್ತೆ? ದಿನನಿತ್ಯ ಬರುವ ಸೂರ್ಯನಂತೆ ಮನೆ ಮನೆ ತಿರುಗಿ, ಆಯಾ ಮನೆಯನ್ನೂ, ಮನೆ ಮಂದಿ ಉಂಡು ಬಿಟ್ಟ ಪಾತ್ರೆಗಳನ್ನೂ, ಉಟ್ಟು ಬಿಸಾಕಿದ ಬಟ್ಟೆಗಳನ್ನೂ ತೊಳೆದು ಮಡಿ ಮಾಡುವ ಮನೆಗೆಲಸದವರಿಗೆ ನಾವೆಷ್ಟು ಕೃತಜ್ಞರಾದರೂ ಕಡಿಮೆಯೇ ಅಲ್ಲವೆ? ಆ ಕೃತಜ್ಞತೆ ಸಲ್ಲಿಸಲಿಕ್ಕಾಗಿಯೇ ನಾವು ಮನೆ ಮಾರಿಗೆ ಹೆಂಗಸರಿರೋದಲ್ವೆ? ಏನಂತೀರಿ? ದಿನನಿತ್ಯ ಅವರ ದಾರಿ ಕಾಯುತ್ತ, ಬಂದಷ್ಟು ಹೊತ್ತಿಗೆ ಅವರ ಪಡಿಚಾಕ್ರಿ ಮಾಡುತ್ತ, ಹೊಟ್ಟೆಯ ಸಿಟ್ಟನ್ನಷ್ಟೂ ಬಚ್ಚಲಲ್ಲಿ ಬಿಡುತ್ತ, ಮೇಲು ಮೇಲಿಂದ ಬಿಳಿನಗೆಯಾಡಲಿಕ್ಕೇ ಲಾಯಕ್ಕಲ್ಲವೇ ಈ ಯಜಮಾಂತಿಯರು?
ಅದೆಲ್ಲ ಸರಿ, ಆದರೆ ನಾನೀಗ ಒಂದು ಬುಟ್ಟಿ ಪಾತ್ರೆ ತೊಳೆದು, ಮನೆ ಒರೆಸಿ, ಮಿಂದು, ಕುಕ್ಕರು ಇಡುವಾಗ್ಲೆ ಒಂದೂವರೆ ಆಗಿರುತ್ತೆ. ನಂತ್ರ ಏನಾದ್ರೂ ಚೂರುಪಾರು ತರಕಾರಿ ಕೊಚ್ಚಿ, ಕಾಯಿ ಹೆರೆದು, ಮಿಕ್ಸರು ಗುರುಗುಟ್ಟಿಸುವ ಹೊತ್ತಿಗೆ ಜೀವ ಅತ್ತ ಹೋಗಿ ಇತ್ತ ಬರುತ್ತದೆ. ಮನೆ ಯಜಮಾನರು ಬೇರೆ “ಹುಶೊÏ ಹುಶೊÏ’ ಮಾಡುತ್ತಾರೆ. ಅಂತೂ ಇಂತೂ ಉಂಡು ಮುಗಿಸುವದೆಂದರೆ ಯೋಳು ಕೆರೆ ನೀರು ಕುಡಿದಷ್ಟು ತಂಪಾಗಿರುತ್ತದೆ. ಇದನ್ನೆಲ್ಲ ಯಾರಿಗೆ ಹೇಳ್ರಿ? ಹೇಳಿ ಕೇಳಿ ಇಬ್ಬರೂ ಎಪ್ಪತ್ತು ದಾಟಿದ ಯುವಕರು. ಕುಂತ್ರೆ ಏಳಿಕ್ಕಾಗ, ಎದ್ದರೆ ಕುಂಡ್ರಲಿಕ್ಕಾಗ. ಸೊಸೆಯಂದಿರು ಮಾಡೋದಿಲ್ವಾ? ಅಂದ್ರೆ ಇದೇನು ಹಳೆಕಾಲ ಕೆಟ್ಟು ಹೋಯಿತಾ, ಗಂಡುಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳೆಲ್ಲ ಮನೆಯಲ್ಲೇ ಉಳಿದು ಅಪ್ಪನೆಟ್ಟ ಅಡಿಕೆ ಮರಕ್ಕೇ ಜೋತುಬೀಳಲು? ಇಂದು ಇಡೀ ಜಗತ್ತೇ ಹರೆಯದ ಹುಡುಗ/ಹುಡುಗಿಯರನ್ನು ಉದ್ಯೋಗಕ್ಕಾಗಿ ಕರೆಯುತ್ತಿರುವಾಗ, ನಾವೇ ನಮ್ಮ ನಮ್ಮ ಮಕ್ಕಳಿಗೆ ಕಲಿಯುವಷ್ಟು ಕಲಿಸಿ ಹೆಮ್ಮೆಯಿಂದ ನೌಕರಿಗೆ ಕಳಿಸಿರುವಾಗ, ಅವರು “ಅಮಾ, ಹಶವು’ ಎಂದು ಕೊನೇವರೆಗೆ ಹೆತ್ತವರ ಕಾಲು ಬುಡಕ್ಕೇ ಇರಲು ಸಾಧ್ಯವಾ? ಅವರವರ ನಸೀಬು ಎಳೆದುಕೊಂಡು ಹೋದಲ್ಲಿ ಹೋಗಿ ತಮ್ಮ ತಮ್ಮ ಬದುಕು ಕಟ್ಟಿಕೊಳ್ಳುತ್ತಾರೆ, ಆಯಿತು. ಇಲ್ಲಿ ಮುದುಕ-ಮುದುಕಿ ಕಾಲೆಳೆಯುತ್ತ ಓಡಾಡಿಕೊಂಡಿದ್ದರಾಯಿತು. ಇದು ಒಬ್ಬಿಬ್ಬರ ಮಾತು ಮಾತ್ರವಲ್ಲದೆ, ಹಳ್ಳಿ ಪೇಟೆ ಹೇಳಿಲ್ಲದೆ ಎಲ್ಲರ ಮನೆಯ ಬಂಡಿಯೇ ತೂತಾದ ಕತೆ. ಅಂದಾಗ ನಮ್ಮದು ಮಾತ್ರ ಬೇರೆ ಹೇಗಾಗತ್ತೆ? ಸರಿ, ನಾನೇ ಮಾಯಿಯಾಗಿ ಬೇಯಿಸಿ ಹಾಕುವ ಆಯಿಯೂ ಆಗಿ ಹೇಗೊ ಉಂಡು ಮಲಗಿದ್ದಾಯ್ತು ಬಿಡಿ.
ಆದರೆ ಮಾಯಿ ಅನ್ನಿ, ಮರಾಠಿಗರಂತೆ ಬಾಯಿ ಅನ್ನಿ, ಅಥವಾ ಬಯಲು ಸೀಮೆಯ ಬೂಬು ಆಗಿರಲಿ, ಏನೇ ಇದ್ದರೂ ನಮ್ಮ ಜುಟ್ಟು ಮಾತ್ರ ಅವರ ಕೈಯಲ್ಲಿ ಅನ್ನುವದು ಸುಳ್ಳಲ್ಲ. ಯಾಕೆಂದ್ರೆ ಅವರವರ ಲಘು-ಬಿಗು ಇದ್ದಂತೆ ಅವರು ಬರುತ್ತಾರೆಯೇ ಹೊರತೂ ನಮ್ಮ ಅನುಕೂಲಕ್ಕಲ್ಲ. ಇವತ್ತು ಮನೆಗೆ ಯಾರೊ ನೆಂಟರು ಬರುವವರಿದ್ದಾರೆ. ಊಟಕ್ಕೆ ಅನ್ನ ಸಾರಿನ ಜೊತೆಗೆ ಎರಡು ಹುಟ್ಟು ಪಾಯಸವನ್ನಾದರೂ ಮಾಡಬೇಕು. ಅವರು ಬರುವದರೊಳಗೆ ದೊಡ್ಡ ಹೊಡ್ತ ಅಡಿಗೆ ಮುಗಿಸಿಬಿಡಬೇಕು ಎಂಬ ಉಮೇದಿಯಿಂದ ಹತ್ತೂವರೆಗೇ ಮಿಂದರೆ, ಹನ್ನೊಂದು- ಹನ್ನೊಂದೂವರೆ- ಹನ್ನೆರಡಾದರೂ ಮಾಯಿಯ ಪತ್ತೆಯೇ ಇಲ್ಲ. ಒಂದು ಗಂಟೆಯ ತನಕ ಕಾದು ಒರೆಸುವ ಕೋಲು ಕೈಯಲ್ಲಿ ಹಿಡಿಯಲಿಕ್ಕಿಲ್ಲ, ನೆಂಟರ ಆಗಮನವಾಗಿಯೇ ಬಿಡುತ್ತದೆ. ಸರಿ, ಅವರನ್ನು ಮಾತಾಡಿಸಿ, ಪಾನಕ ಮಾಡಿಕೊಟ್ಟು, ಹುಳಿ ಚಪ್ಪೆ$ನಗುತ್ತ ಮಾಯಿಗಿಷ್ಟು ಮಂತ್ರಾಕ್ಷತೆ ಹಾಕಿ, ಹಳೆಯ ಮುಸುರೆ ತೊಳೆದು ಮುಗಿಸಿ ಹೇಗೊ ಗಡಿಬಿಡಿಯಿಂದ ಊಟದ ಸಂಭ್ರಮವನ್ನು ಪೂರೈಸುತ್ತೇನೆ. ಮರುದಿನ ಬಂದವಳಿಗೆ ನಿನ್ನೆ ಗೈರಾಗಿದ್ಯಾಕೆಂದು ಕೇಳಿದರೆ ಅವಳ ಚಿಕ್ಕಮ್ಮ (ನಾಲ್ಕನೆಯ ಸಲ) ಸತ್ತು ಬಿದ್ದ ಪುರಾಣ ಹೇಳುತ್ತಾಳೆ. ನಾನು ನಂಬಲೇಬೇಕು, ಯಾಕೇಂದ್ರೆ ಅವಳು ನನಗೆ ಬೇಕು! ದಿನಕ್ಕೊಮ್ಮೆ ಮನೆತುಂಬ ಚಾಮರ ಬೀಸಲು, ನೆಲಕ್ಕೆ ನೀರು ಹಚ್ಚಲು, ಪಾತ್ರೆಗೆ ಸಿವುಡು ತೋರಿಸಲು, ನನ್ನಿಂದಾಗದ ಕಾಯಕವನ್ನೆಲ್ಲ ಮಾಡಲು ಅವಳು ಬೇಕೇ ಬೇಕು.
ಇದು ಕುಟುಂಬದ ಕುನ್ನಿಮರಿಯ ಕೊರಳಲ್ಲೂ ಫೋನು ನೇತಾಡುತ್ತಿರುವ ಈ ಕಾಲದ ಕತೆಯಾದರೆ ಹತ್ತಿಪ್ಪತ್ತು ವರ್ಷಗಳ ಹಿಂದೆ ಮನೆ ಮನೆಯಲ್ಲಿ ಫೋನಿಲ್ಲದ ಕಾಲದ ಸುದ್ದಿ ಯಾತಕ್ಕೂ ಬ್ಯಾಡ. ಆಗಿದ್ದವಳು ಒಬ್ಬ ಚೂಡಿದಾರದ ಹುಡುಗಿ. ಅವಳ ಮಾಮೂಲಿ ವೇಳೆ ಹತ್ತು ಗಂಟೆ. ಹನ್ನೊಂದಾದರೂ ಅವಳ ಸುಳಿವಿಲ್ಲದಿದ್ದಾಗ ನಾನೇ ಪಾತ್ರೆಗಳ ರಾಶಿ ಒಟ್ಟಿಕೊಂಡು ಆಗಷ್ಟೆ ಕೂತಿದ್ದರೆ ಇಲ್ಲ ಪಕ್ಕದ ಮನೆ ಸುಬ್ಬಕ್ಕ, ಇಲ್ಲ ತುದಿಮನೆ ಗಂಗಕ್ಕ, ಮತ್ಯಾರಲ್ಲವಾದರೆ ಥಂಡಿ ಅನ್ನದ ಹುಡುಗಿಯಾದರೂ “ಅಮಾ ವೋಮಾ’ ಎಂದು ಕೂಗು ಹಾಕಲೇಬೇಕು. ಒಮ್ಮೆಯಂತೂ ನಾನು ಮಾಯಿಯನ್ನು ಕಾದು ಕಾದು ಕೆಂಡವಾಗಿ ಆ ಕೆಂಡಗಳನ್ನು ನನ್ನ ಬಡಪಾಯಿ ಪಾತ್ರೆಗಳ ಮೇಲೆ ಚೆಲ್ಲುತ್ತ ಕೂತಿದ್ದೆನಷ್ಟೆ, ಯಾರೊ ಬೆಲ್ ಮಾಡಿದರು. ಹೋಗಿ ನೋಡಿದರೆ ನನ್ನ ಖಾಸಾ ಅಕ್ಕನ ಮಗ ನರೇಶ! ಒಳ ಬಂದವನೆ ತನ್ನಕ್ಕ ನಿರ್ಮಲೆಯನ್ನು ಆಸ್ಪತ್ರೆಗೆ ಸೇರಿಸಿದ್ದೇವೆಂದೂ, ಸಂಜೆಯೊಳಗೆ ಡೆಲಿವರಿ ಆಗಬಹುದೆಂದು ಡಾಕ್ಟರು ಹೇಳಿದ್ದಾರೆಂದೂ, ಆದಷ್ಟು ಬೇಗ ಅವಳಿಗೆ ತುತ್ತು ಊಟ ತರಬೇಕೆಂದು ಅಮ್ಮ ಹೇಳಿದ್ದಾಳೆಂದೂ ಒಂದೇ ಉಸುರಿನಲ್ಲಿ ಹೇಳಿ ಮರು ಮಾತಿಗವಕಾಶವೇ ಇಲ್ಲದೆ ಹೊಂಟು ಬಿಟ್ಟ. ಅಯ್ಯೊ ಶಿವನೆ! ಹಿಂಗಾಯ್ತ ಕತೆ? ನಾನಿನ್ನು ಪಾತ್ರೆ ತೊಳೆದು, ನೆಲ ಒರೆಸಿ, ಮಿಂದು ಅಡಿಗೆ ಮಾಡಿ ಅದೆಷ್ಟು ಬೇಗ ಊಟ ಒಯ್ಯಲಪ್ಪಾ ದೇವ್ರೆ? ಮಕ್ಕಳು ಅವರವರ ಕಾಲೇಜಿನಲ್ಲಿ, ಯಜಮಾನರು ಅವರ ಆಫೀಸಿನಲ್ಲಿ, ಇಲ್ಲಿ ಆಚೆಗಿದ್ದ ಕಡ್ಡಿ ಈಚೆಗಿಡಲಿಕ್ಕೂ ಇನ್ನೊಂದು ಕೈ ಇಲ್ಲ. ದಡಬಡ ಓಡಾಡಲು ಇನ್ನೊಂದು ಕಾಲೂ ಇಲ್ಲ. ಅಲ್ಲಿ ಆ ಹುಡುಗಿ ಅದೆಷ್ಟು ಒದರುತ್ತಿದ್ದಾಳೊ, ಹೊಯೊತಿದ್ದಾಳೊ, ಆಕ್ಕ ಬೇರೆ ಭಾವಾರ್ಥಿ. ಏನ್ಮಾಡ್ಲಿ-ಏನ್ಮಾಡ್ಲಿ ಅನ್ನುತ್ತಲೇ ಎಲ್ಲವನ್ನೂ ಮಾಡಿ ಮುಗಿಸಿ ಎರಡೂವರೆಗೆ ಊಟ ಒಯ್ದು ಕೊಟ್ಟೆ ಅನ್ನಿ, ಆದರೆ ಆ ಗಡಿಬಿಡಿಯಲ್ಲಿ ಸೌತೆಕಾಯಿಯೊಂದಿಗೆ ಬೆರಳೂ ಹೆಚ್ಚಿ, ಕಾಯಿಯೊಂದಿಗೆ ಅಂಗೈಯೂ ಹೆರೆದು, ಗೊಜ್ಜಿಗೆ ಉಪ್ಪು$ಹಾಕದೆ ಸಾರಿಗೆ ಎರಡೆರಡು ಸಲ ಹಾಕಿ, “ಥೊ ಥೊ ಥೊ! ಆ ಭಾನಗಡಿ ಕೇಳಬಾರದು. ಅಷ್ಟಕ್ಕೂ ಇದೆಲ್ಲಕ್ಕೂ ಕಾರಣ ಮಾಯಿಯಲ್ಲದೆ ಮತ್ಯಾರು?
ಇನ್ನೊಬ್ಬಳು ಮಾಜಿ ಮಾಯಿ ಮೊನ್ನೆ “”ಅಮಾ ನಿಮ್ಮನೆ ಕೆಲ್ಸದವಳು ಬಿಟ್ಟಿದ್ದಾಳಂತೆ. ನಾನಾದ್ರೂ ಮಾಡ್ವ ಹೇಳಿ ಬಂದೆ” ಅಂದಳು. “”ಹೌದಾ? ನನಗೀಗ ಬೇರೆಯವ್ಳು ಸಿಕ್ಕಿದ್ದಾಳೆ. ಅವ್ಳು ಬೇಗ ಬಂದು ಮಾಡಿಹೋಗ್ತಾಳೆ” ಅಂದೆ. “”ನಿಮಗೆ ನನ್ನ ನೆನಪಾಗ್ಲಿಲ್ವ ಅಮಾ” ಎಂದು ಆಕ್ಷೇಪಿಸಿದಳು. “”ಅಯ್ಯೊ, ನಿನ್ನ ಮರೀಲಿಕ್ಕೆ ಸಾಧ್ಯವೇನೆ ಮಾರಾಯ್ತಿ? ಪ್ರತಿನಿತ್ಯ ನಿನ್ನ ಕೈಲಿ ದುಡ್ಡು ಕೊಟ್ಟು ಬೈಸಿಕೊಂಡಿದ್ದು, ನಿನ್ನ ಕೈಗೆ ಸಿಕ್ಕ ಪಾತ್ರೆಗಳು ಇವತ್ತಿಗೂ ಗೋಳಾಡೋದು, ಇಷ್ಟೆಲ್ಲ ಭಾಂಡಿ ನಾ ಯಾರ ಮನ್ಯಲ್ಲೂ ತೊಳೆಯೋದಿಲ್ಲ ಅಂತ ನೀ ಕೂಗಾಡೋದು, ಹೇಳದೆ ಕೇಳೆª ಕೆಲಸ ತಪೊÕàದು, ಒಂದಾ ಎರಡಾ? ಎಲ್ಲಾ ನೆನಪಾಯ್ತು ನೋಡು. ಹಾಂಗಾಗಿ ದೂರದಿಂದೆÉà ಕೈ ಮುಗದು ಬಿಟ್ಟೆ.” ಅಂದಾಗ ಅವಳು ಕೊಂಚ ಮೆತ್ತಗಾದಳು. “”ಇಲ್ಲ ಅಮಾ, ಆವಾಗ ನಂಗೂ ಬಿ.ಪಿ. ಇತ್ತು. ಮಗ ಬ್ಯಾರೆ ದಾರಿಗೆ ಹತ್ತಿರಲಿಲ್ಲ. ಏನೇನೊ ಆಗಿ ಹೋಯ್ತು, ಇನ್ನು ಹಾಂಗಾಗೋದಿಲ್ಲ. ಇನ್ಯಾವಾಗಾದ್ರೂ ಬೇಕಾದ್ರೆ ನನ್ನ ಕರೀರಿ ಅಮಾ” ಅನ್ನುತ್ತ ಅಂಗಳವಿಳಿದಳು. ಹೌದ? ಇವಿÛಗೊಂದೆಯ ಬಿ.ಪಿ. ಇರೋದು? ನನಗಿಲ್ವ? ನಾನೂ ಕಂಡ ಕಂಡವ್ರ ಮೇಲೆ ಒದರ್ಯಾಡಲಾ? ದೊಡ್ಡ ಹುಣ್ಣಿಗೆ ದೊಡ್ಡ ಕ್ವಾಟ್ಲೆ, ಶಣ್ಣ ಹುಣ್ಣಿಗೆ ಶಣ್ಣ ಕ್ವಾಟ್ಲೆ. ನನಗೇನು ಸಂಸಾರ ತಾಪತ್ರಯ ಇಲ್ವ? ಊಹುಂ, ಅದಲ್ಲ. ತನ್ನ ಮು…ಯಲ್ಲೆ ಬೆಳಗಾಗು¤ ಅನ್ನೊ ಮಿಣುಕು ಹುಳದ ಕತೆ ಕೇಳಿದ್ದೀರಲ್ಲ, ಹಾಗೆ ತಾವಿಲೆªà ಈ ಅಮ್ಮಂದಿರ ಬೇಳೆ ಹ್ಯಾಂಗೂ ಬೇಯೋದಿಲ್ಲ, ತಾವೇನೇ ಮಾಡಿದ್ರೂ ಇವ್ರು ಬಾಯಿ ಮುಚ್ಚಿಕೊಂಡಿರೆಲà ಬೇಕು ಅಂತ ಇವರ ಲೆಕ್ಕಾಚಾರ.
ಅದೆಲ್ಲ ಅವ್ರ ಹತ್ರಾನೇ ಇರ್ಲಿ, ಓಹೊ, ನಾವೇನು ಇವ್ರನ್ನು ನಂಬಿಕೊಂಡೇ ಹುಟ್ಟಿದ್ದೇವಾ? ನಮಗೂ ಸ್ವಲ್ಪ$ ಕೆಲಸ ಹಗುರಾಯ್ತು, ಅವ್ರಿಗೂ ಎರಡು ಕಾಸಾಯ್ತು ಎಂದು ನೋಡಿದ್ರೆ ಇವ್ರ ಧಿಮಾಕು ಇವ್ರಿಗೇ ಹಿಡಿಯ! ಆದರೆ ನಮ್ಮ ನಮ್ಮ ಸ್ವಂತ ಮನೆಯನ್ನು ದಿನಕ್ಕೊಮ್ಮೆ ಗುಡಿಸಿ ಒರೆಸಲಿಕ್ಕೂ ಆಗದೆ ಇನ್ನೊಬ್ಬರ ಮುಖ ನೋಡುವವರಿಗೆ ಮನೆ ಮಾರೆಲ್ಲ ಎಂತಕ್ಕೆ? ಸುಮ್ನೆ ಯಾವೊª ಮರದಡಿಗೆ ಬಿದ್ದುಕೊಂಡ್ರೇನಾಗತ್ತೆ, ಅನ್ನುತ್ತೀರಾ? ಅಸಲಿಗೆ ಒಬ್ರು ಹೊಕ್ರೆ ಇಬ್ರು ಹೊರಬೀಳಬೇಕಾದ ಕಿಷ್ಕಿಂಧೆಯನ್ನು ಗುಡಿಸಲು ಮತ್ಯಾರೂ ಬೇಡ. ಸಿಕ್ಕಷ್ಟು ಜಾಗದಲ್ಲಿ ಯಜಮಾಂತಿಯೇ ತಾಟ ಹಿಡಿ ಮೋಟು ಹಿಡಿ, ತಲೆ ಹಿಡಿ ಬುಡ ಹಿಡಿ ಮಾಡಿದ್ರಾಯ್ತು. ಆದರೆ ಮನೆಮಂದಿಗಿಂತ ಹೆಚ್ಚಾಗಿ ಮನೆ ಸಾಮಾನುಗಳಿಗಾಗಿಯೇ ಬೃಹತ್ (ಭೂತ) ಬಂಗಲೆಗಳನ್ನು (ಟಿ. ವಿ.ರೂಮು, ಗೋಡೆಯುದ್ದಕ್ಕೆ ವಾರ್ಡರೋಬು, ಕಪಾಟಿನ ಮೂಲೆ, ವಾಶಿಂಗ ಮಶೀನ ಕಂಪಾರ್ಟಮೆಂಟ ಹೀಗೆ) ಕಟ್ಟಿಸಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಎರಡೇ ಕೈಯಲ್ಲಿ ಇಡೀಮನೆ ಕೆಲಸ ಮಾಡಲು ಸಾಧ್ಯವೇ ಇಲ್ಲ. ಯಾಕೆಂದರೆ ಮಕ್ಕಳಿಂದ ಹಿಡಿದು ಮುದುಕರ ವರೆಗೆ ನಿಂತಲ್ಲಿ ನೀರು ಕುಂತಲ್ಲಿ ಮಣೆ ಕೊಡಬೇಕಾದವಳೂ ಯಜಮಾಂತಿಯೇ. ಯಾರು ಬಂದರೂ ಹೋದರೂ ದಾತುಪುಕಾರು ಮಾಡುವವಳೂ ಅವಳೇ. ಮನೆ ಬೆಕ್ಕು “ಮ್ಯಾಂವ’ ಅನ್ನಲಿ, ಮರಿಹಾಕಲಿ, ಅದರ ಉಸಾಬರಿ ನೋಡುವವಳೂ ಅವಳೇ. ಇನ್ನು ಹೊತ್ತು ಹೊತ್ತಿಗೆ ಸರಿಯಾಗಿ ಕೊಚ್ಚಿ ಕೊರೆದು, ಹೆರೆದು ರುಬ್ಬಿ ಕುದಿಸಿ ಬೇಯಿಸಿ ಬಡಿಸುವದಂತೂ ಅವಳ ಆಜನ್ಮಸಿದ್ಧª ಹಕ್ಕೇ ಆಯಿತು ಬಿಡಿ. ಮೇಲಿಂದ ಟಿ.ವಿ. ಧೂಳು ಒರೆಸು, ಫ್ರಿಜ್ಜನ್ನು ಚೊಕ್ಕ ಮಾಡು, ಮಕ್ಕಳು ಜೋತಾಡಿಸಿಟ್ಟ ಕಂಪ್ಯೂಟರ ಬಾಲ ಸುತ್ತಿಡು, ಯಜಮಾನ್ರು ಅಡ್ಡತಿಡ್ಡ ಹಾಕಿಟ್ಟ ದಿವಾನ-ಸೋಫಾ ದಿಂಬುಗಳನ್ನು ನೆಟ್ಟಗಿರಿಸು, ಹೀಗೆ ಮನುಷ್ಯರಿದ್ದು ಮಾತ್ರವಲ್ಲದೆ ವಸ್ತುಗಳ ಆರೈಕೆಯನ್ನೂ ಅವಳೇ ಮಾಡಬೇಕು. ಹೀಗಾಗಿ, ಅವಳಿಗೊಂದು ಹೆಲ್ಪರ್ ಬೇಕೇ ಬೇಕು.
ಇನ್ನು ನಮ್ಮ ನಮ್ಮ ಎಂಜಲು ಪಾತ್ರೆಯನ್ನೂ ತೊಳೆಯಲಿಕ್ಕಾಗದಿದ್ದರೆ ಅಡಿಗೆ ಪಡಿಗೆ ಎಲ್ಲ ಯಾಕೆ? ಅಂದರೆ ಪ್ರಶ್ನೆ ಬೇರೆಯೇ ಇದೆ. ಮಂತ್ರಕ್ಕಿಂತ ಉಗುಳೇ ಜಾಸ್ತಿ ಅಂದಾØಂಗೆ ಇಂದು ಅಡಿಗೆ ಮಾಡಿದ ಪಾತ್ರೆಗಳಿಗಿಂತ ಉಣ್ಣುವ ಸಲಕರಣೆಗಳ ಆರ್ಭಟವೇ ಹೆಚ್ಚು! ಹೊಟೇಲ್ ಪೂರ್ವಯುಗದಲ್ಲಿ ಅಂದರೆ ಈಗೊಂದೈವತ್ತು ವರ್ಷಗಳ ಹಿಂದೆ ಬಾಳೆಲೆಯೊ, ಪತ್ರಾವಳಿಯೊ ನೆಲಕ್ಕೆ ಹಾಕಿಕೊಂಡು ಅನ್ನ ಸಾರು, ರೊಟ್ಟಿ ಪಲ್ಲೆ, ಮಾತ್ರವಲ್ಲ, ಕಡಬು ಕಜ್ಜಾಯವಿರಲಿ, ಪಾಯಸ ಪರಮಾನ್ನವಿರಲಿ ಕಣ ಕುಸುಮ ಆಚೀಚೆ ಹೋಗದಂತೆ ಪೈಟಾಗಿ ಕುಂತು ಉಂಡೇಳುತ್ತಿದ್ದಾಗ ಈ ಮಾಯಿಯರ ರಗಳೆಯೇ ಬೇಕಿರಲಿಲ್ಲ. ಅನ್ನದ ಚರಿಗೆ, ಸಾರಿನ ಬೋಗುಣಿ, ಗೊಜ್ಜಿನ ತಾಂಬಾಣಗಳೊಂದಿಗೆ ನಾಲ್ಕು ಸೌಂಟುಗಳನ್ನು ತೊಳೆದರಾಗಿತ್ತು ಅಷ್ಟೆ. ಯಾವಾಗ ಮಕ್ಕಳು ಮುದುಕರೆನ್ನದೆ ಹೊಟೇಲ್ ರುಚಿ ಹತ್ತಿಸಿಕೊಂಡರು ನೋಡಿ, ಮನೆ ಹೆಂಗಸರ ಕತೆ ವ್ಯಥೆಯಾಗುತ್ತ ಹೋಯಿತು. ಹೊಟೇಲಲ್ಲಿ ಅನ್ನಕ್ಕೆ, ಸಾರಿಗೆ, ಪಲ್ಯಕ್ಕೆ, ಚಟ್ನಿಗೆ ಮಾತ್ರವಲ್ಲ, ಹಪ್ಪಳಕ್ಕೂ ಬೇರೆ ತಾಟು ಕೊಡುತ್ತ ನೂರಾ ಎಂಟು ಬೌಲುಗಳನ್ನು ಚಮಚೆಗಳನ್ನೂ ಮುಸುರೆ ಮಾಡುವಂತೆ ಮನೆ ಮನೆಯಲ್ಲೂ ಗಂಡಸರು, ಮಕ್ಕಳು ಬೌಲು ಚಮಚೆ ಕೇಳತೊಡಗಿದರು. ಒಬ್ಬನ ಊಟಕ್ಕೆ ಹತ್ತು ತಟ್ಟೆ ಹುಟ್ಟಿನ ಸಾಂಬ್ರಣಿಗೆ ಬೇಕಾಯಿತು. ಹೀಗೆ ಬುಟ್ಟಿಗಟ್ಲೆ ಪಾತ್ರೆ ತೊಳೆಯಲು ಮಾಯಿ ಬೇಕಾದಳು. ಮಾಯಿಯೊಂದಿಗೆ ಒಂದಿಷ್ಟು ತಾಪತ್ರಯಗಳೂ ಬಂದವು. ಅಂದ ಹಾಗೆ ನಮ್ಮ ನಿಸರ್ಗ ಚಿಕಿತ್ಸಕರು ಹೇಳುವಂತೆ ನಮ್ಮ ಮೂಲಕ್ಕೆ ಮರಳಿ ನೈಸರ್ಗಿಕ ಆಹಾರ ಅಂದರೆ ಹಾದಿ ಹುಲ್ಲು, ಕವಳಿ ಕಾಯಿ, ಗುರಿಗೆ ಸೊಪ್ಪು$, ಸೆಳ್ಳೆ ಹಣ್ಣು ಇತ್ಯಾದಿ ಮೆಂದುಕೊಂಡಿದ್ದರೆ ಈ ಯಾವ ರಗಳೆಯೂ ಇಲ್ಲ ನೋಡಿ. ಆರೋಗ್ಯಕ್ಕೆ ಆರೋಗ್ಯವೂ ಆಯಿತು, ಮನೆವಾರೆ¤ಯ ಮತ್ತು ಮಾಯಿಯರೊಂದಿಗಿನ ಪ್ರೇಮಾಲಾಪವೂ ತಪ್ಪಿತು. ಸೀತಾ ಮಾತೆಯಂತೆ ಅಡಿಗೆ-ಊಟಗಳೆಂಬ ಗೊಡವೆಯು ನಮಗಿಲ್ಲ ಅಡವಿಯ ಹಣ್ಣೆ ಫಲಾಹಾರ ಎಂದು ಕಲ್ಯಾಣಿ ರಾಗದಲ್ಲಿ ಹಾಡುತ್ತ ಕುಂತರಾಯಿತು.
ಯಾರೇನೆ ಅನ್ನಲಿ, ನಾನಂತೂ ನಾಳೆಯಿಂದ ನಿಸರ್ಗಕ್ಕೆ ಮರಳುವವಳೇ ಹೌದು ಎಂಬ ಭೀಷ್ಮ ಪ್ರತಿಜ್ಞೆ ಮಾಡಿಬಿಟ್ಟಿದ್ದೇನೆ. “”ಛೆ ಛೆ! ನೀ ಅದೆಷ್ಟು ಮಳ್ಳಿದ್ಯೆ ಮಾರಾಯ್ತಿ? ಕಾಲಿಗೊಂದು ಕೈಗೊಂದು ಯಂತ್ರಗಳು ಸದಾ ನಮ್ಮ ಸೇವೆಗೇ ಕಟಿಬದ್ಧರಾಗಿರುವ ಈ ಕಾಲದಲ್ಲೂ ಮಾಯಿಯರ ಪುನಶ್ಲೋಕ ಊದಿ¤àಯಲ್ಲ” ಎಂದು ನೆಗ್ಯಾಡಬೇಡಿ. ಹೌದು, ಪ್ರತಿಯೊಂದು ಮನೆಯಲ್ಲೂ ಇಂದು ಜನರ ನಾಲ್ಕು ಪಟ್ಟು ಯಂತ್ರಗಳೇ ಕುಂತಿರುತ್ತವೆ. ಕಾರ್ಖಾನೆಗಳು ತಮ್ಮ ತಮ್ಮ ಲಾಭಕ್ಕೆ ಹೊಸ ಹೊಸ ಮಶೀನುಗಳನ್ನು ತಯಾರಿಸಿ ಕಳಿಸಿದಂತೆಲ್ಲ ಬೇಕೊ ಬೇಡವೊ, ಜನ ಅವರವರ ಜೇಬಿನ ತೂಕಕ್ಕೆ ಸರಿಯಾಗಿ ತಂದು ತಂದು ಮನೆ ತುಂಬಿಕೊಳ್ಳುತ್ತಾರೆ ನಿಜ. ಎಲ್ಲಿ ವಾಶಿಂಗ್ ಮಶಿನ್ನು, ನೀರೆತ್ತಲು ಪಂಪು, ನೆಲ ಒರೆಸಲು ನಾನಾ ಬಗೆಯ ಕೋಲುಗಳು, ಗುಡಿಸಲು ವ್ಯಾಕ್ಯೂಮ್ ಕ್ಲೀನರು, ಮಿಕ್ಸರು-ಗ್ರೆ„ಂಡರು-ಕುಕ್ಕರುಗಳಂತೂ ಸರಿಯೇ ಸರಿ, ಡಿಶ್ ವಾಶರ್ ಕೂಡ ಬಂದಿದೆಯಂತೆ. ಅಷ್ಟೇ ಅಲ್ಲ, ಮನೆ ಒರೆಸುವ ರೋಬೋಟ್ ಕೂಡ ಇದೆಯಂತೆ! ಆದರೂ ಮಾಯಿಯರಿಗೆ ದಿನದಿಂದ ದಿನಕ್ಕೆ ಡಿಮಾಂಡು ಹೆಚ್ಚಾಗುತ್ತಿರುವದು ಯಾಕೆ? ಎಂಬ ಯಕ್ಷಪ್ರಶ್ನೆಗೆ ಉತ್ತರಿಸಲು ಬಹುಶಃ ಆ ಧರ್ಮರಾಜನೇ ಬರಬೇಕೇನೊ! ಅದಕ್ಕಿಂತ ಹೆಚ್ಚಾಗಿ ಆ ಮಶಿನ್ನುಗಳನ್ನೆಲ್ಲ ನಾವೇ ನಡೆಸಬೇಕಲ್ಲ, ತಂತಾನೆ ಕೆಲಸ ಮಾಡುತ್ತಿರಲು ಅವು ಮಾಯಿಯಲ್ಲ ! ಅಲ್ಲದೆ ಮಾನವ ಕೈಗಳ ಕರಾಮತ್ತೇ ಬೇರೆ, ಯಂತ್ರಗಳ ತಂತ್ರ ಬೇರೆ. ಕೈಕೆಲಸಕ್ಕೆ ಒಗ್ಗಿಕೊಂಡ ಅಮ್ಮಂದಿರಿಗೆ ನಿರ್ಜೀವ ಯಂತ್ರ ಏನಂದ್ರೂ ಸರಿಯಾಗುವದೇ ಇಲ್ಲ. ಅದೇನು ಊರ ಮ್ಯಾಲಿನ ಸುದ್ದಿ ಪಿಸುಗುಟ್ಟುತ್ತದೆಯೆ? ಯಾರ್ಯಾರ ಮನೆಯಲ್ಲಿ ಏನೇನಾಯಿತೆಂದು ರನ್ನಿಂಗ್ ಕಾಮೆಂಟ್ರಿ ಬಿತ್ತರಿಸುತ್ತದೆಯೆ? ಯಾವುದೊ ಮನೆಯ ಗಂಡ-ಹೆಂಡಿರ ಜಗಳದ ಅಂತರ್ರಾಷ್ಟೀಯ ಮಹತ್ವದ ವಾರ್ತೆಯನ್ನು ಹೂಬೇ ಹೂಬು ಬಣ್ಣಿಸುತ್ತದೆಯೆ? ಉಹುಂ, ಏನೇನೂ ಇಲ್ಲ. ಬರಿ ಬುರ್ನಾಸು! ಆದ್ದರಿಂದಲೇ ನಾವು ಮಾಯಿಯರಿಗಾಗಿ ಇಷ್ಟೊಂದು ಹಾತೊರೆಯುವದು. ಹೆಚ್ಚು ಕಡಿಮೆ ಅವರನ್ನು ಸುಧಾರಿಸಿಕೊಂಡು ಹೋಗುವದು.
ಹಾಗೆಂದು ಎಲ್ಲರನ್ನೂ ಒಂದೇ ಕೊಳಗದಲ್ಲಿ ಅಳೆಯುವಂತಿಲ್ಲ. ಎಲ್ಲ ಮಾಯಿಯರೂ ಅತ್ತೆ-ಸೊಸೆ ಸಂಬಂಧದವರಲ್ಲ. ನನ್ನ ಒಬ್ಬ ಮಾಯಿ ಹದಿಮೂರು ವರ್ಷ ಒಂದೇ ಒಂದು ಜಗಳ-ತಂಟೆ ಇಲ್ಲದೆ ಕೆಲಸ ಮಾಡಿ ವಯಸ್ಸಿನ ಕಾರಣದಿಂದಾಗಿ ಬಿಟ್ಟಳು. ಇನ್ನೊಬ್ಬಳು, “”ಏನಂದ್ರೂ ಅಮ್ಮನ ಮನೆ ಚಾ ತಪ್ಪಿಸ್ಕೊಳ್ಳೋದಿಲ್ಲ” ಅನ್ನುತ್ತ ಬೇರೆ ಊರಿಗೆ ಹೋಗಬೇಕಾದ್ದರಿಂದ ಬಿಡಬೇಕಾಯಿತು. ಮೂರನೆಯವಳಂತೂ ನಿಜಕ್ಕೂ ನನ್ನ ತಂಗಿಯಂತೆ ಇವತ್ತಿಗೂ ನನ್ನ ನೆನೆಸಿಕೊಂಡು ಆಗಾಗ ಬಂದು ಹೋಗುತ್ತಾಳೆ. ಆದರೂ ಕೂಡ ಇದೊಂದು ಬಿಟ್ಟೂ ಬಿಡದ ವಿಚಿತ್ರ ಗಂಟು, ಅಂದರೆ ಲವ್-ಹೇಟ್ ರಿಲೇಶನ್ಶಿಪ್ ಅಂತಾರಲ್ಲ ಹಾಗೆ. ಅದೇನೇ ಇದ್ರೂ ನಮ್ಮ ಮಾಯಿ ನನಗೆ ಬೇಕೇ ಬೇಕು. ಅರೆ ಅರೆ ಅರೆ! ಇದೇ ಹೊತ್ತಿಗೆ ನನ್ನ ಮಡ್ಡು ತಲೆಯಲ್ಲೇನೊ ಪಕ ಪಕಾ ಅಂತಿದೆಯಲ್ಲ ! ಈ ಕಗ್ಗಂಟನ್ನು ಬಿಡಿಸುವ ಒಂದುಪಾಯ ಮಿಣಿ ಮಿಣಿಗುಟ್ಟುತ್ತಿದೆಯಲ್ಲ. ಏನೆಂದರೆ ಉಂಡು ಮುಗಿಯದ ಹಸಿವಿನ, ಕುಡಿದು ತಣಿಯದ ದಾಹದ, ತೊಳೆದು ತೀರದ ಕೊಳಕಿನ ಈ ನರಜನ್ಮದ ಬದಲಾಗಿ ನಾವೂ ದೇವತೆಗಳಾಗಿಬಿಟ್ಟರೆ? ಅವರಿಗೆ ಹುಟ್ಟು ಸಾವು ಇಲ್ಲವಂತೆ. ಅಡಿಗೆ ಊಟದ ಗೊಡವೆಯೂ ಇಲ್ಲವಂತೆ. ಭಕ್ತಾಗ್ರೇಸರರು ಇಲ್ಲಿಂದ ಕಳಿಸಿದ ಹವಿಸ್ಸನ್ನು ಅಲ್ಲಿ ಮೂಸಿಬಿಟ್ಟರಾಯಿತಂತೆ. ಅವರ ಮೈ ಬೆವರುವದೂ ಇಲ್ಲವಂತೆ. ಹಾಗಾಗಿ ನಿತ್ಯ ನಿರ್ಮಲ, ಪರಮ ಪವಿತ್ರರಾಗಿರುತ್ತಾರಂತೆ. ಅಥವಾ ಶರಣ ಜನರು ಇಲ್ಲಿ ಅವರ ಮೂರ್ತಿಗಳಿಗೆ ಅಭಿಷೇಕ ಮಾಡಿದ್ದು ಅಲ್ಲಿಗೆ ಹೋಗಿ ಮುಟ್ಟಿ ಅವರ ಮೈ ತೊಳೆಯುತ್ತದೆಯೊ ಏನೊ. ಒಟ್ಟಿನಲ್ಲಿ ನಾವು ಆಯುಷ್ಯದುದ್ದ ಇಡೀ ದಿನ ನಡೆಸಬೇಕಾದ ಸ್ವತ್ಛತಾ ಕಾರ್ಯಕ್ರಮದ ರಗಳೆ ದೇವತೆಗಳಿಗಿಲ್ಲವೆಂದಾದರೆ ನಾವೂ ಯಾಕೆ ದೇವರಾಗಬಾರದು? ಬಹುಶಃ ಬದುಕೆಲ್ಲ ತೊಳೆದು ಬಳಿದು, ಗುಡಿಸಿ ಸಾರಿಸುವ ನರಕವನ್ನು ಕಂಡೇ ಕವಿ ಹಾಡಿದ್ದಿರಬೇಕು. “ಹಾರೈಸು ಹಾರೈಸು ಹಾರೈಸು ಜೀವ, ಹಾರೈಸು ನಿನಾಗುವನ್ನೆಗಂ ದೇವ’ ಎಂದು. ಸರಿ ಸರಿ, ನಾನಂತೂ ದೇವನಾಗುವ ತಪಸ್ಸು ಮಾಡಲು ಈಗಿಂದೀಗ ಹಿಮಾಲಯಕ್ಕೆ ಹೊರಟೆ. ಬರುವದಾದರೆ ನೀವೂ ಬನ್ನಿ.
ಭಾಗೀರಥಿ ಹೆಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ
Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್ ಅರ್ಜಿ ತಿರಸ್ಕೃತ
Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.