ಕರಾವಳಿಯಾದ್ಯಂತ ಗಾಳಿ ಸಹಿತ ಭಾರೀ ಮಳೆ; ಮಹಿಳೆ ಸಾವು
Team Udayavani, Jun 10, 2018, 6:00 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶನಿವಾರವೂ ಭಾರೀ ಮಳೆ ಮುಂದುವರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಳ್ತಂಗಡಿ ತಾಲೂಕಿನ ವೇಣೂರು ಠಾಣಾವ್ಯಾಪ್ತಿಯ ಶಿರ್ಲಾಲಿನಲ್ಲಿ ಮಹಿಳೆಯೊಬ್ಬರು ಮುಳುಗಿ ಮೃತಪಟ್ಟಿದ್ದಾರೆ. ಮಳೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತವು ಶಾಲೆಗಳಿಗೆ ಶನಿವಾರವೂ ರಜೆ ಘೋಷಿಸಿತ್ತು.
ಶನಿವಾರ ಸುರಿದ ಗಾಳಿ ಮಳೆಗೆ ಅಲ್ಲಲ್ಲಿ ಮರಗಳು ಧರೆಗುರುಳಿದ್ದು ಕೆಲವು ಕಡೆ ಮನೆ ಹಾಗೂ ಕಟ್ಟಡಗಳಿಗೆ ಹಾನಿ ಸಂಭವಿಸಿದೆ. ಮಂಗಳೂರಿನಲ್ಲಿ ಭವಂತಿ ಸ್ಟ್ರೀಟ್‌ನಲ್ಲಿ ಕಟ್ಟಡದ ಮುಂಭಾಗ ಕುಸಿದು ಬಿದ್ದಿದ್ದು ಎರಡು ಬೈಕ್, ಒಂದು ವ್ಯಾನ್‌ಗೆ ಹಾನಿಯಾಗಿದೆ. ಸುರತ್ಕಲ್‌ನಲ್ಲಿ ಮರ ಬಿದ್ದು ಎರಡು ಮನೆಗಳು ಹಾನಿಗೊಂಡಿವೆ. ದೇರಳಕಟ್ಟೆ ಸಮೀಪದ ಕುತ್ತಾರ್‌ನಲ್ಲಿ ಮರ ಬಿದ್ದು ಮನೆ ಮತ್ತು ಅಂಗಡಿಗೆ ಹಾನಿಯಾಗಿದೆ. ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ಅಂಬಡ್ಯಾರ್ ಎಂಬಲ್ಲಿ ಬಂಟ್ವಾಳ-ಕಡೂರು ರಸ್ತೆಯಲ್ಲಿ ಮರಬಿದ್ದು ಸುಮಾರು ಒಂದು ತಾಸಿಗಿಂತಲೂ ಅಧಿಕ ಕಾಲ ಸಂಚಾರ ಸ್ಥಗಿತಗೊಂಡಿತ್ತು.
ಸುಬ್ರಹ್ಮಣ್ಯದಲ್ಲಿ ನಿರಂತರ ಸುರಿದ ಮಳೆಯಿಂದಾಗಿ ನದಿ ತುಂಬಿ ಹರಿಯುತ್ತಿದ್ದು ಕುಮಾರಧಾರಾ ಸ್ನಾನ ಘಟ್ಟ ಮುಳುಗಿದೆ. ಬಂಟ್ವಾಳದಲ್ಲಿ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರುತ್ತಿದ್ದು ಶನಿವಾರ ಸಂಜೆ 3.8 ಮೀಟರಿಗೆ ತಲುಪಿದೆ. ಕುಮಾರಧಾರಾ ನದಿಯಲ್ಲಿ ನೀರಿನಮಟ್ಟ 19 ಮೀಟರ್ ತಲುಪಿದೆ.
ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕಿನಾದ್ಯಂತ ಭಾರಿ ಮಳೆಯಾಗಿದ್ದು ಗಾಳಿ ಮಳೆಗೆ ಮರಗಳು ಉರುಳಿ ಬಿದ್ದಿವೆ.
ಕಾಲುಜಾರಿ ನದಿಗೆ ಬಿದ್ದು ಸಾವು
ವೇಣೂರು, ಜೂ.9 ಶಿರ್ಲಾಲಿನಲ್ಲಿ ಬಟ್ಟೆ ಒಗೆಯಲೆಂದು ನದಿಗೆ ತೆರಳಿದ್ದ ಮಹಿಳೆಯೊಬ್ಬರು ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಆನೆಕೊಡಂಗೆ ನಿವಾಸಿ ರೇವತಿ (60) ಸಾವನ್ನಪ್ಪಿದವರು. ಅವರು ಶನಿವಾರ ಬೆಳಗಿನಜಾವ ಬಟ್ಟೆ ಒಗೆಯಲೆಂದು ಎಂದಿನಂತೆ ಮನೆ ಸಮೀಪದ ಫಲ್ಗುಣಿ ನದಿಯ ಬೈರವಗುಂಡಿ ಬಳಿ ತೆರಳಿದ್ದರು. ಮಳೆಯಿಂದಾಗಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿತ್ತು. ಇದನ್ನು ಗಮನಿಸದೆ ಅವರು ನೀರಿಗೆ ಇಳಿದಿದ್ದು, ನೀರಿನ ರಭಸಕ್ಕೆ ಕೊಚ್ಚಿಹೋಗಿ ಪೊದೆಯಲ್ಲಿ ಸಿಲುಕಿಕೊಂಡರು. ಈ ವೇಳೆ ಸೇತುವೆಯಲ್ಲಿ ಬರುತ್ತಿದ್ದ ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದಾಗಲೇ ಅವರು ಮೃತಪಟ್ಟಿದ್ದರು. ವೇಣೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.