ಕಟ್ಟಡ ಕುಸಿತ, ಮರಗಳು ಧರಾಶಾಯಿ, ಸಂಚಾರ ಅಸ್ತವ್ಯಸ್ತ
Team Udayavani, Jun 10, 2018, 10:18 AM IST
ಮಹಾನಗರ: ಮಂಗಳೂರಿನಲ್ಲಿ ಶನಿವಾರ ದಿನವಿಡೀ ಧಾರಾಕಾರ ಮಳೆ ಸುರಿದು ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿತು. ಮಳೆ ಸಹಿತ ಗಾಳಿಯೂ ಜೋರಾಗಿದ್ದರಿಂದ ಕೆಲವೆಡೆ ಮರ ಬಿದ್ದು ವಾಹನಗಳಿಗೆ ಹಾನಿ ಉಂಟಾಯಿತು. ನಸುಕಿನ ವೇಳೆಗೆ ಮಳೆ ಆರಂಭವಾದ್ದರಿಂದ ಕೆಲಸ ಕಾರ್ಯಗಳಿಗೆ ತೆರಳುವವರಿಗೆ ತೀವ್ರ ಅಡಚಣೆ ಉಂಟಾಯಿತು.
ಶುಕ್ರವಾರದಿಂದ ಪ್ರಾರಂಭವಾದ ಮಳೆ ಶನಿವಾರವೂ ಮುಂದುವರಿದು ಜನಜೀವನಕ್ಕೆ ತೀವ್ರ ಸಮಸ್ಯೆ ಉಂಟಾಯಿತು. ನಗರದ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ಎಮ್ಮೆಕೆರೆ, ಬಿಜೈ ಕಾಪಿಕಾಡ್, ಅಳಕೆ, ಕುದ್ರೋಳಿ ಮುಂತಾದೆಡೆ ನೀರು ನಿಂತು ಸಮಸ್ಯೆ ಸೃಷ್ಟಿಸಿತು. ಕೆಲವೆಡೆ ಮನೆ ಬಾಗಿಲಿನವರೆಗೂ ಮಳೆ ನೀರು ನುಗ್ಗಿ ಮತ್ತೆ ಮೇ 29ರಂದು ಬಂದ ಮಹಾ ಮಳೆಯ ಆತಂಕ ಸೃಷ್ಟಿಸಿತು.
ಸಂಚಾರ ಅಸ್ತವ್ಯಸ್ತ
ಮುಂಜಾವಿನಿಂದಲೇ ಸುರಿದ ಭಾರೀ ಮಳೆಯಿಂದಾಗಿ ವಾಹನ ಸಂಚಾರಕ್ಕೂ ಅಡ್ಡಿಯುಂಟಾಯಿತು. ಬಹುತೇಕ ರಸ್ತೆಗಳಲ್ಲಿರುವ ಹೊಂಡಗಳಲ್ಲಿ ನೀರು ತುಂಬಿ ರಸ್ತೆ, ಹೊಂಡ ಯಾವುದೆಂದು ತಿಳಿಯದೆ ವಾಹನ ಚಾಲನೆ ಮಾಡಲು ಚಾಲಕರು ಪ್ರಯಾಸಪಟ್ಟರು. ರಸ್ತೆ ಹೊಂಡಗಳು ತಿಳಿಯದೆ ಕೆಲವು ಕಡೆಗಳಲ್ಲಿ ದ್ವಿಚಕ್ರ ವಾಹನ ಸವಾರರು ಬಿದ್ದ ಪ್ರಸಂಗವೂ ನಡೆಯಿತು. ರಸ್ತೆಯ ಮೇಲ್ಮುಖದಿಂದ ಇಳಿಜಾರಿನ ಕಡೆ ಬರುವ ನೀರು ರಸ್ತೆಯ ಅಲ್ಲಲ್ಲಿ ನಿಂತು ವಾಹನ ಚಾಲಕರು ಪರದಾಡುವಂತಾಯಿತು. ದ್ವಿಚಕ್ರ ವಾಹನ ಸವಾರರು ರೈನ್ ಕೋಟ್ ಇದ್ದರೂ ಭಾರೀ ಮಳೆಯಿಂದಾಗಿ ಸಂಪೂರ್ಣ ಒದ್ದೆಯಾಗಿಕೊಂಡೇ ಸಂಚರಿಸಬೇಕಾಯಿತು.
ರಸ್ತೆಗಳಲ್ಲಿ ತುಂಬಿದ ನೀರು
ಕಂಕನಾಡಿ, ಪಂಪ್‌ವೆಲ್, ಬಂಟ್ಸ್ ಹಾಸ್ಟೆಲ್, ಕೆ.ಎಸ್. ರಾವ್ ರಸ್ತೆ, ಕೊಟ್ಟಾರ ಚೌಕಿ, ಜಲ್ಲಿಗುಡ್ಡ, ಆಕಾಶಭವನ ರಸ್ತೆಗಳಲ್ಲಿ ನೀರು ತುಂಬಿ ಬಹುತೇಕ ಹೊಳೆಯಂತಾಗಿತ್ತು. ಈ ರಸ್ತೆಯಾಗಿ ತೆರಳುವ ಪಾದಚಾರಿಗಳು, ವಾಹನ ಸವಾರರಿಗೆ ನದಿ ದಾಟಿದಂತೆಯೇ ರಸ್ತೆಯಲ್ಲಿ ದಾಟಿಕೊಂಡು ಹೋಗಬೇಕಾಯಿತು. ಕಂಕನಾಡಿ ಬಸ್ ನಿಲ್ದಾಣದ ಮುಂಭಾಗ ಸಂಪೂರ್ಣ ರಸ್ತೆ ಬ್ಲಾಕ್ ಆಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಇಲ್ಲಿ ನೀರು ನಿಂತಿದ್ದರಿಂದಾಗಿ ಸಾರ್ವಜನಿಕರು ಓಡಾಡಲು ತೀರಾ ಸಮಸ್ಯೆ ಎದುರಿಸುವಂತಾಯಿತು.
ಮಳೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ದ.ಕ. ಜಿಲ್ಲಾಡಳಿತವು ಶಾಲೆಗಳಿಗೆ ಶನಿವಾರವೂ ರಜೆ ಘೋಷಿಸಿದ್ದರಿಂದ ಶಾಲಾ ಮಕ್ಕಳಿಗೆ ಯಾವುದೇ ಸಮಸ್ಯೆ ಉಂಟಾಗಲಿಲ್ಲ.
ಧರಾಶಾಹಿಯಾದ ಮರಗಳು
ಭಾರೀ ಮಳೆಯೊಂದಿಗೆ ಗಾಳಿಯೂ ಇದ್ದ ಕಾರಣ ನಗರದ ಅಲ್ಲಲ್ಲಿ ಮರಗಳು ಧರೆಗುರುಳಿದ್ದವು. ನಗರದ ಕೆಲವು ರಸ್ತೆ ಬದಿಗಳಲ್ಲಿ ಮರ-ಗಿಡಗಳ ಸಣ್ಣ ಗೆಲ್ಲುಗಳು ಬಿದ್ದಿರುವುದು ಕಂಡು ಬಂತು. ನೆಹರೂ ಮೈದಾನದ ಬಳಿ ಆರ್‌ಟಿಓ ಕಚೇರಿ ಮುಂಭಾಗದಲ್ಲಿ ಬೃಹತ್ ಮರವೊಂದು ಧರಾಶಾಹಿಯಾಗಿದೆ. ಇದು ಮುಖ್ಯರಸ್ತೆಯಾಗಿರುವುದರಿಂದ ತತ್‌ಕ್ಷಣಕ್ಕೆ ಕಾರ್ಯಪ್ರವೃತ್ತರಾದ ಸಾರ್ವಜನಿಕರು ಮತ್ತು ಅಗ್ನಿಶಾಮಕ ದಳದ ಸಿಬಂದಿ ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಜೈಲುರಸ್ತೆಯಲ್ಲಿ ಬೃಹತ್ ಮರ ವೊಂದು ವಿದ್ಯುತ್ ತಂತಿಗಳ ಮೇಲೆ ಉರುಳಿ ಬಿದ್ದು, ಸಂಚಾರ ವ್ಯತ್ಯಯ ಉಂಟಾಯಿತು.
ಮೆಸ್ಕಾಂನವರು ಬಿದ್ದಿದ್ದ ತಂತಿಗಳನ್ನು ತೆರವುಗೊಳಿಸಿ ಸಂಭವನೀಯ ಅಪಾಯಗಳನ್ನು ತಪ್ಪಿಸಿದರು. ಬಳಿಕ ಅಗ್ನಿಶಾಮಕ ದಳ ಸಿಬಂದಿ ಆಗಮಿಸಿ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇಲ್ಲಿ ಮರ ಬಿದ್ದ ರಭಸಕ್ಕೆ ಪಕ್ಕದಲ್ಲಿದ್ದ ತಡೆಗೋಡೆಯೂ ಕುಸಿದು ಬಿದ್ದಿದೆ. ಹಂಪನಕಟ್ಟೆ ರೈಲ್ವೇ ಸ್ಟೇಷನ್ ಬಳಿಯೂ ಮರವೊಂದು ಉರುಳಿ ಬಿದ್ದಿದ್ದು, ಬಳಿಕ ಅದನ್ನು ತೆರವುಗೊಳಿಸಲಾಯಿತು.
ಕೈಕೊಟ್ಟ ವಿದ್ಯು ತ್
ಭಾರೀ ಮಳೆಯಿಂದಾಗಿ ಎಲ್ಲೆಡೆ ವಿದ್ಯುತ್ ಕೈಕೊಟ್ಟ ಪ್ರಸಂಗವೂ ನಡೆಯಿತು. ಬೆಳಗ್ಗಿನಿಂದಲೇ ಕಣ್ಣಾಮುಚ್ಚಾಲೆಯಾಡುತ್ತಿದ್ದ ವಿದ್ಯುತ್ ಕೆಲಸಗಳಿಗೂ ಸಮಸ್ಯೆ ಉಂಟು ಮಾಡಿತು. ಕಚೇರಿ, ಇತರ ದಿನಗೆಲಸಗಳಿಗೆ ಹೊರಡುವ ತರಾತುರಿಯಲ್ಲಿದ್ದವರಿಗೆ ವಿದ್ಯುತ್ ಇಲ್ಲದ್ದರಿಂದಾಗಿ ತೀವ್ರ ಸಮಸ್ಯೆಯಾಯಿತು. ಅಲ್ಲದೆ ಕೆಲಸ ನಿರ್ವಹಿಸಲು ವಿದ್ಯುತ್ ಅವಶ್ಯವಾದ ಕಂಪೆನಿಗಳಲ್ಲಿ ಕೆಲಸ ಕಾರ್ಯಗಳನ್ನೂ ಸ್ಥಗಿತಗೊಳಿಸಬೇಕಾದ ಅನಿವಾರ್ಯ ಉಂಟಾಯಿತು. ಹಂಪನಕಟ್ಟೆ ವೃತ್ತದ ಬಳಿಯಲ್ಲಿ ಕಟ್ಟಡವೊಂದರಲ್ಲಿದ್ದ ಫ್ಲೆಕ್ಸ್ ಹಾರಿ ಸನಿಹದಲ್ಲಿದ್ದ ವಿದ್ಯುತ್ ತಂತಿಗಳ ಮೇಲೆ ಬಿದ್ದು ನೇತಾಡುವ ಸ್ಥಿತಿಯಲ್ಲಿತ್ತು. ಇದರಿಂದ ಸಾರ್ವಜನಿಕರೂ ಆತಂಕಕ್ಕೊಳಗಾದರು. ಪಚ್ಚನಾಡಿಯಲ್ಲಿ ಟ್ರಾನ್ಸ್‌ಫಾರ್ಮರ್ ಮೇಲೆ ಮರ ಬಿದ್ದು, ಟ್ರಾನ್ಸ್‌ಫಾರ್ಮರ್ ಧ್ವಂಸಗೊಂಡಿದೆ.
ಅಪಾಯಕಾರಿ ಮರ ತೆರವು
ಕಂಕನಾಡಿ ಕರಾವಳಿ ಸರ್ಕಲ್ ಬಳಿ ಮರವೊಂದು ಕೆಳಗಡೆ ವಾಲಿ ನಿಂತು ಬೀಳುವ ಹಂತದಲ್ಲಿದ್ದರಿಂದ ಆ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಿ ಅಪಾಯಕಾರಿ ಮರವನ್ನು ತೆರವುಗೊಳಿಸಲಾಯಿತು. ಮರ ತೆರವಿಗಾಗಿ ಪಂಪ್ ವೆಲ್- ಕಂಕನಾಡಿ ಮುಖ್ಯ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಿ ಪರ್ಯಾಯ ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಪಂಪ್‌ವೆಲ್ ಕಡೆಯಿಂದ ಕಂಕನಾಡಿಗೆ ಬರುವ ವಾಹನಗಳಿಗೆ ಪಂಪ್‌ವೆಲ್‌ನಿಂದ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯ ಬಳಿಯಿರುವ ಒಳರಸ್ತೆಯಲ್ಲಿ ತೆರಳಲು ಹಾಗೂ ಪಂಪ್‌ವೆಲ್ ಮುಖಾಂತರ ನೇರ ನಂತೂರು ಕಡೆಗೆ ತೆರಳಲು ಅನುವು ಮಾಡಿಕೊಡಲಾಯಿತು. ಇದರಿಂದ ಪಂಪ್‌ವೆಲ್-ಎಕ್ಕೂರು ಮಾರ್ಗದಲ್ಲಿ ಟ್ರಾಫಿಕ್ ಜಾಂ ಉಂಟಾಯಿತು. ಕುದ್ರೋಳಿ ಬೆಂಗ್ರೆಯಲ್ಲಿ ಬೇಬಿ ಅವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. 40 ಸಾವಿರ ರೂ. ನಷ್ಟ ಉಂಟಾಗಿದೆ. ಬಜಾಲ್‌ನಲ್ಲೂ ಮನೆಯೊಂದಕ್ಕೆ ಹಾನಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್ ಕುಮಾರ್ ರೈ ಭೇಟಿ
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.