ಜಲಪಾತ ಅಭಿವೃದ್ಧಿಗೆ ನಿರುತ್ಸಾಹ
Team Udayavani, Jun 11, 2018, 11:46 AM IST
ಯಾದಗಿರಿ: ಗಿರಿ ಜಿಲ್ಲೆಯ ಏಕೈಕ ನಜರಾಪುರ ಜಲಪಾತವನ್ನು ಅಭಿವೃದ್ಧಿಗೊಳಿಸಲು ಜಿಲ್ಲಾಡಳಿತ ನಿರುತ್ಸಾಹ ತೋರುತ್ತಿದ್ದು, ಇಲ್ಲಿ ಹಲವು ಮೂಲ ಸೌಲಭ್ಯಗಳ ಕೊರತೆಯಿದೆ. ಬಿಸಿಲ ನಾಡಿನಲ್ಲೂ ನೈಸರ್ಗಿಕ ಸೌಂದರ್ಯದ
ನಡುವೆ ಗುಡ್ಡಗಾಡು ಪ್ರದೇಶದಲ್ಲಿರುವ ನಜರಾಪುರ ಫಾಲ್ಸ್ ಪ್ರವಾಸಿಗರನ್ನು ಆಕರ್ಷಿಸುವ ಸ್ಥಳವಾಗಿದೆ. ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿಮೀ ದೂರದಲ್ಲಿರುವ ಫಾಲ್ಸ್ ಈ ಭಾಗದ ಒಳ್ಳೆಯ ಪ್ರವಾಸಿ ತಾಣ.
ಮಳೆಗಾಲ ಬಂತೆಂದರೆ ಈ ತಾಣ ಮಲೆನಾಡಿನ ಸೋಬಗನ್ನೇ ಮರೆಸುತ್ತದೆ. ಇತ್ತೀಚೆಗೆ ಸುರಿದ ಮಳೆಯಿಂದ ಮೈತುಂಬಿ ಹರಿಯುತ್ತಿರುವ ಇಲ್ಲಿನ ಫಾಲ್ಸ್ ವೀಕ್ಷಣೆಗೆ ಜಿಲ್ಲೆಯಲ್ಲದೇ ಕಲಬುರಗಿ, ಬೀದರ, ತೆಲಂಗಾಣ ಸೇರಿದಂತೆ ಹಲವೆಡೆಯಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ನೈಸರ್ಗಿಕ ತಾಣವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಬೇಸಿಗೆಯಲ್ಲಿ ನೀರಿಲ್ಲದೇ ಸೊರಗಿದ್ದ ಫಾಲ್ಸ್‌ಗೆ ಇತ್ತೀಚೆಗೆ ಸುರಿದ ಧಾರಾಕಾರ ಮಳೆ ಜೀವಕಳೆ ತುಂಬಿದೆ. ಸುತ್ತಲು ಹಚ್ಚ ಹಸಿರಿನಿಂದ ಕೂಡಿದ ಗುಡ್ಡಗಳು ಮನಸ್ಸಿಗೆ ಮುದ ನೀಡುತ್ತಿವೆ. ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ವನ ಭೋಜನಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ. ಈ ಜಲಪಾತ ವೀಕ್ಷಿಸಲು ಸಾಕಷ್ಟು ಬಾರಿ ಬಂದಿದ್ದೇವೆ. ಪುನಃ ಪುನಃ ಮನಸ್ಸು ಇಲ್ಲಿಗೆ ಎಳೆಯುತ್ತದೆ.
ಆದರೆ ಜಲಪಾತ ವೀಕ್ಷಣೆಗೆ ಸೂಕ್ತ ವ್ಯವಸ್ಥೆಯಿಲ್ಲ. ಮಕ್ಕಳು ಮತ್ತು ಮಹಿಳೆಯರಿಗೆ ತೊಂದರೆಯಾಗುತ್ತದೆ. ಇದನ್ನು ಅಭಿವೃದ್ಧಿಪಡಿಸಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಪ್ರವಾಸಿಗರಾದ ಭೀಮರಾಯ, ಅಭಿಮನ್ಯು, ಮಹಮೂದ, ಶಿವು, ತಾಯಪ್ಪ, ಮಲ್ಲು ಹಾಗೂ ಬಸಂತು.
ಪ್ರವಾಸಿಗರ ಜೀವಕ್ಕಿಲ್ಲ ಗ್ಯಾರಂಟಿ: ಜಿಲ್ಲೆಯ ಜಲಪಾತದ ಅಭಿವೃದ್ಧಿಯನ್ನು ಜಿಲ್ಲಾಡಳಿತ ಮರೆತಿದೆ. ಇಲ್ಲಿಗೆ ಬರುವ ಪ್ರವಾಸಿಗರ ಜೀವಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ. ರಸ್ತೆ ಪಕ್ಕದ ಆಳದಲ್ಲಿರುವ ಫಾಲ್ಸ್ ವೀಕ್ಷಣೆಗೆ ಸೂಕ್ತ ವ್ಯವಸ್ಥೆಯಿಲ್ಲ. ಸುತ್ತಲೂ ದಟ್ಟ ಗುಡ್ಡಗಳಿಂದ ಕೂಡಿದ್ದು, ಅಪಾಯದಲ್ಲಿ ಜನರು ಸಮಯ ಕಳೆಯುವಂತಾಗಿದೆ.
ಜಲಪಾತಕ್ಕೆ ಈ ಹಿಂದೆ ಯಾದಗಿರಿಯ ಜಿಲ್ಲಾಧಿಕಾರಿಯಾಗಿದ್ದ ಎಫ್.ಆರ್. ಜಮಾದಾರ, ಮನೋಜ್ ಜೈನ್, ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ್ ಚಿಂಚನಸೂರ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಜಲಪಾತಕ್ಕೆ ಭೇಟಿ ನೀಡಿ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದರು. ಸುಮಾರು ವರ್ಷಗಳು ಉರುಳಿದರೂ ಭರವಸೆ ಇನ್ನೂ ಕನಸಾಗಿಯೇ ಉಳಿದಿದೆ. ಜಲಪಾತದ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ ಹಣ ಬಿಡುಗಡೆಯಾಗಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಜಲಪಾತ ಮಾತ್ರ ಅಭಿವೃದ್ಧಿಯಾಗಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಉತ್ತರಿಸಬೇಕಿದೆ.
ಜಿಲ್ಲೆಯ ಏಕೈಕ ಪ್ರವಾಸಿ ತಾಣವಾಗಿರುವ ನಜರಾಪುರ ಫಾಲ್ಸ್ ಅಭಿವೃದ್ಧಿಗೆ ಜಿಲ್ಲಾಡಳಿತ ಮುಂದಾಗಬೇಕು. ಜಲಪಾತ ವೀಕ್ಷಣೆಗೆ ಸೂಕ್ತ ವ್ಯವಸ್ಥೆಯಿಲ್ಲ. ಈ ಕುರಿತು ಕ್ರಮ ಕೈಗೊಳ್ಳಬೇಕು.
ಅಭಿಮನ್ಯು, ಪ್ರವಾಸಿಗ
ಅನೀಲ ಬಸೂದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.