ಕಾದಂಬರಿ ಆಧರಿತ ಚಿತ್ರ ಕನ್ನಡದಲ್ಲೇ ಹೆಚ್ಚು
Team Udayavani, Jun 11, 2018, 11:53 AM IST
ಬೆಂಗಳೂರು: ಕನ್ನಡ ಭಾಷೆಯಲ್ಲಿ ಬಂದಷ್ಟು ಕಾದಂಬರಿ ಆಧಾರಿತ ಚಲನಚಿತ್ರಗಳು ಬೇರೆ ಯಾವ ಭಾಷೆಯಲ್ಲೂ ಬಂದಿಲ್ಲ ಎಂದು ಹಿರಿಯ ಚಲನಚಿತ್ರ ನಿರ್ದೇಶಕ ಎಸ್.ಕೆ.ಭಗವಾನ್ ಹೇಳಿದರು.
ನಾಡೋಜ ಡಾ.ಬರಗೂರು ಪ್ರತಿಷ್ಠಾನ ಭಾನುವಾರ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಹಮ್ಮಿಕೊಂಡಿದ್ದ “ಪ್ರೊ.ಬರಗೂರು ಮತ್ತು ಶ್ರೀಮತಿ ರಾಜಲಕ್ಷ್ಮಿ ಬರಗೂರು’ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ವರ್ಷದ ಬರಗೂರು ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಕನ್ನಡ ಚಲನಚಿತ್ರರಂಗದಲ್ಲಿ 170ಕ್ಕೂ ಹೆಚ್ಚು ಕನ್ನಡ ಕಾದಂಬರಿಗಳನ್ನು ಸಿನಿಮಾಗಳಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಡಾ.ಪಾರ್ವತಮ್ಮ ರಾಜ್‌ಕುಮಾರ್ ಅವರು ಹೆಚ್ಚು ಕಾದಂಬರಿ ಆಧರಿತ ಚಿತ್ರಗಳನ್ನು ಮಾಡಿದ್ದಾರೆ. ಬಯಲುದಾರಿ, ಹೊಸ ಬೆಳಕು, ಸಮಯದ ಗೊಂಬೆ ಇದಕ್ಕೆ ಉದಾಹರಣೆ. ಇದು ಕನ್ನಡ ಸಿನಿಮಾ ಜಗತ್ತು ಮತ್ತು ಕನ್ನಡ ಸಾಹಿತ್ಯಕ್ಕೆ ಇರುವ ಅವಿನಾಭಾವ ಸಂಬಂಧವನ್ನು ತೊರಿಸಿಕೊಡುತ್ತದೆ ಎಂದು ಹೇಳಿದರು.
ಇದೇ ವೇಳೆ ಡಾ.ರಾಜ್‌ಕುಮಾರ್ ಅವರೊಂದಿಗಿನ ಬರಗೂರು ರಾಮಚಂದ್ರಪ್ಪ ಅವರ ಸಂಬಂಧವನ್ನು ಸ್ಮರಿಸಿಕೊಂಡ ಭಗವಾನ್, ಬರಗೂರು ರಾಮಚಂದ್ರಪ್ಪನವರು ಕನ್ನಡ ಸಾಹಿತ್ಯ ಮತ್ತು ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಇವರನ್ನು ಕಂಡರೆ ರಾಜ್‌ಕುಮಾರ್ ಅವರಿಗೆ ಅಪಾರ ಪ್ರೀತಿ. ಅದೇ ರೀತಿ ರಾಜ್‌ಕುಮಾರ್ ಅವರ ಬಗ್ಗೆ ಬರಗೂರು ಅವರಿಗೆ ಎಲ್ಲಿಲ್ಲದ ಗೌರವ ಇತ್ತು. ಬರಗೂರು ಮನೆಗೆ ಬಂದಾಗ ಅವರನ್ನು ಆತ್ಮೀಯತೆಯಿಂದ ಅಪ್ಪಿಕೊಂಡು ರಾಜ್‌ಕುಮಾರ್ ಮಾತನಾಡುತ್ತಿದ್ದರು ಎಂದರು.
ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ನಟಿ ಪದ್ಮಭೂಷಣ ಡಾ.ಬಿ.ಸರೋಜಾದೇವಿ ಮಾತನಾಡಿ, ಚಿಕ್ಕವಳಿದ್ದಾಗ ಕಿತ್ತೂರ ರಾಣಿ ಚೆನ್ನಮ್ಮ ಪಾತ್ರವನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡಿದ್ದೆ. ಈಗಲೂ ಆ ಪಾತ್ರ ಕೊಟ್ಟರೆ ಅಷ್ಟೇ ಚೆನ್ನಾಗಿ ನಟಿಸುತ್ತೇನೆ ಎಂಬ ವಿಶ್ವಾಸವಿದೆ.
ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ, ಧರ್ಮ ಮತ್ತು ನ್ಯಾಯದ ಮಾರ್ಗದಲ್ಲಿ ನಡೆದರೆ ಯಶಸ್ಸು ಖಂಡಿತ ನಮ್ಮದಾಗುತ್ತದೆ ಎಂಬುದು ನನ್ನ ಚಿತ್ರರಂಗದ ಪಯಣವೇ ಸಾಕ್ಷಿ ಎಂದರು. ಮತ್ತೂಬ್ಬ ಪ್ರಶಸ್ತಿ ಪುರಸ್ಕೃತ ಡಾ. ಬಿ.ಎಲ್.ವೇಣು ಮಾತನಾಡಿ, ಸಿನಿಮಾ ಕ್ಷೇತ್ರದಲ್ಲಿ ನನಗೆ ಯಾರೂ ಗಾಡ್‌ಫಾದರ್ ಇಲ್ಲ. ಇದು ನನಗೆ ಬಯಸದೇ ಬಂದ ಭಾಗ್ಯ.
ಸಿನಿಮಾ ಜಗತ್ತು ಒಂದು ಮಾಯಾ ಲೋಕ ಇದ್ದಂತೆ. ಇದು ಕೆಲವರಿಗೆ ಸಂದರೆ, ಇನ್ನೂ ಕೆಲವರಿಗೆ ಸಲ್ಲುವುದಿಲ್ಲ. 80ರ ದಶಕದಲ್ಲಿ ಸಿನಿಮಾ ಕ್ಷೇತ್ರ ಪ್ರವೇಶಿದ ನನ್ನನ್ನು ಮೊದಲು ಅನೇಕರು ಉಡಾಫೆಯಾಗಿ ಕಂಡರು. ಈಗ ಗಾಂಧಿನಗರ ನನ್ನನ್ನು ಕಾಯುತ್ತಿದೆ ಎಂದರು.
ಸಿನಿಮಾ ಕ್ಷೇತ್ರದಲ್ಲಿ ಎಸ್.ಕೆ.ಭಗವಾನ್ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಡಾ.ಬಿ.ಎಲ್. ವೇಣು ಅವರಿಗೆ ಈ ವರ್ಷದ ಬರಗೂರು ಪ್ರಶಸ್ತಿ ಪ್ರದಾನ ಮಾಡಲಾಯಿತು. ಅದೇ ರೀತಿ ಈ ವರ್ಷದಿಂದ ಆರಂಭಿಸಲಾಗಿರುವ ಬರಗೂರು ಅವರ ಪತ್ನಿಯವರ ಹೆಸರಲ್ಲಿ ಕೊಡುವ “ರಾಜಲಕ್ಷ್ಮಿ ಬರಗೂರು’ ಪ್ರಶಸ್ತಿಯನ್ನು ವಿಮರ್ಶಕ ಡಾ.ಜಿ.ರಾಮಕೃಷ್ಣ ಹಾಗೂ ಕಾದಂಬರಿಗಾರ್ತಿ ರೇಖಾ ಕಾಖಂಡಕಿ ಅವರಿಗೆ ಪ್ರದಾನ ಮಾಡಲಾಯಿತು.
ರಾಜಲಕ್ಷ್ಮಿ ಬರಗೂರು ಅವರ ಕುರಿತು ಮೈಸೂರಿನ ಡಾ. ರಾಜ್‌ಕುಮಾರ್ ಫಿಲ್ಮ್ ಇನ್‌ಸ್ಟಿಟ್ಯೂಟ್ ನಿರ್ಮಿಸಿ ನಟ್ರಾಜ್ ಶಿವು ನಿರ್ದೇಶಿಸಿರುವ “ಅನ್ನ ನೀಡಿದ ಅಮ್ಮ’ ಸಾಕ್ಷ್ಯಚಿತ್ರದ ಡಿ.ವಿ.ಡಿ ಯನ್ನು ಇದೇ ವೇಳೆ ಬಿಡುಗೊಡೆಗೊಳಿಸಲಾಯಿತು. ಕವಿ ಡಾ. ಎಚ್.ಎಸ್. ವೆಂಕಟೇಶ್‌ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 48,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.