ನಾಟ್ಯ ಮಯೂರಿ: ನೃತ್ಯವೇ ಜೀವ, ನೃತ್ಯವೇ ಜೀವನ
Team Udayavani, Jun 13, 2018, 6:00 AM IST
ಮಾಡ್ ಡ್ರೆಸ್‌ಗಿಂತ ಸೀರೇನೇ ಇಷ್ಟ
8 ಬಗೆಯ ಡ್ಯಾನ್ಸ್ ಗೊತ್ತುಂಟು…
ತಡರಾತ್ರಿ ಎದ್ದು ಕಾಫೀ ಕುಡಿಯುವ ಹುಡುಗಿ
ಮಯೂರಿ ಉಪಾಧ್ಯ, ಕನ್ನಡದ ಹೆಸರಾಂತ ನೃತ್ಯಗಾತಿ, ನೃತ್ಯ ನಿರ್ದೇಶಕಿ. ಖ್ಯಾತ ಗಾಯಕ, ಸಂಗೀತಗಾರ ರಘು ದೀಕ್ಷಿತ್‌ರ ಪತ್ನಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕಲಾವಿದೆ. “ಡ್ಯಾನ್ಸಿಂಗ್ ಸ್ಟಾರ್’ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುವ ಮೂಲಕ ವೀಕ್ಷಕರಿಗೆ ಹತ್ತಿರವಾದವರು. ಚಿಕ್ಕ ವಯಸ್ಸಿನಿಂದ ನೃತ್ಯವನ್ನೇ ಆರಾಧಿಸುತ್ತಾ ಬಂದ ಇವರು ಹಲವಾರು ಹಿಂದಿ ಮತ್ತು ಕನ್ನಡದ ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಇವರ ನೃತ್ಯಸಂಯೋಜನೆ ತನ್ನ ವಿಶಿಷ್ಟ ಶೈಲಿಯಿಂದಲೇ ಜನರನ್ನು ಸೆಳೆಯುತ್ತದೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ…
– ನೃತ್ಯವನ್ನು ಗಂಭೀರವಾಗಿ ಸ್ವೀಕರಿಸಿದ್ದು ಯಾವ ವಯಸ್ಸಿನಲ್ಲಿ?
ಪುಟ್ಟ ಹುಡುಗಿಯಾಗಿದ್ದಾಗಿನಿಂದ ನೃತ್ಯ ನನ್ನ ನೆಚ್ಚಿನ ಚಟುವಟಿಕೆ. ಟಿ.ವಿ.ಯಲ್ಲಿ ನೃತ್ಯ ಕಾರ್ಯಕ್ರಮ ಬಂದರೆ ಕಣ್ಣು ಮಿಟುಕಿಸದೇ ನೋಡುತ್ತಿದ್ದೆ. ನಟಿ ಶ್ರೀದೇವಿಯವರ ಡ್ಯಾನ್ಸ್ ಅನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದೆ. ನನ್ನ ಆಸಕ್ತಿಯನ್ನು ಗುರುತಿಸಿದ ಹೆತ್ತವರು 6 ವರ್ಷ ಇರುವಾಗಲೇ ಭರತನಾಟ್ಯ ಕಲಿಕೆಗೆ ಸೇರಿಸಿದರು. ಭರತನಾಟ್ಯ ಸ್ವಲ್ಪ ಕಷ್ಟ ಎನಿಸುತ್ತಿತ್ತು. ಹಾಗಾಗಿ ಬೇರೆ ಬೇರೆ ನೃತ್ಯ ಪ್ರಕಾರಗಳ ಶಾಸ್ತ್ರೀಯ ತರಬೇತಿ ಪಡೆಯಲೂ ಶುರುಮಾಡಿದೆ. ಚಿಕ್ಕ ವಯಸ್ಸಿನಿಂದಲೇ ನೃತ್ಯ ಪ್ರದರ್ಶನಗಳನ್ನು ನೀಡಲು ಆರಂಭಿಸಿದೆ. ನಾನು ಒಟ್ಟು 8 ಪ್ರಕಾರಗಳ ನೃತ್ಯ ಕಲಿತಿದ್ದೇನೆ.
– ಸಂಯೋಜನೆಯಲ್ಲಿ ನಿಮ್ಮದೇ ಒಂದು ಛಾಪು ಮೂಡಿಸಲು ಸಾಧ್ಯವಾಗಿದ್ದು ಹೇಗೆ?
ನೃತ್ಯ ಸಂಯೋಜಕಿಯಾಗಿ ನನಗೆ ನನ್ನದೇ ಆದ ಸ್ಟೈಲ್ ಇದೆ. ಹಲವಾರು ಪ್ರಕಾರಗಳ ನೃತ್ಯ ಕಲಿತಿರುವುದು ಸಂಯೋಜನೆಯಲ್ಲಿ ಸಹಕಾರಿಯಾಗಿದೆ. ನೃತ್ಯ ಸಂಯೋಜಿಸುವಾಗ ನನಗೆ ಕಥೆ ತುಂಬಾ ಮುಖ್ಯವಾಗುತ್ತದೆ. ಕಥೆಯನ್ನು ನೋಡುಗರಿಗೆ ನೃತ್ಯದ ಮೂಲಕ ದಾಟಿಸುವುದು ನನ್ನ ಗುರಿ. ಎಷ್ಟೋ ಬಾರಿ ಡ್ಯಾನ್ಸ್ ಪ್ರಕಾರಕ್ಕಿಂತ ದೂರ ಹೋಗಿ ನನ್ನದೇ ಶೈಲಿಯಲ್ಲಿ ನೃತ್ಯ ಸಂಯೋಜನೆ ಮಾಡುತ್ತೇನೆ. “ನೃತರುತ್ಯ’ ಎಂಬ ನಮ್ಮದೇ ಸಂಸ್ಥೆ ಇದೆ. ಅದು ನೃತ್ಯದಲ್ಲಿ ಹೊಸ ಹೊಸ ಪ್ರಯೋಗಗಳಿಗೆ ತೆರೆದುಕೊಂಡಿದೆ.
– ನಿಮ್ಮ ಬಾಲ್ಯ ಹೇಗಿತ್ತು?
ಚಿಕ್ಕಂದಿನಿಂದಲೂ ನಾನು ಬಹಳ ಚಟುವಟಿಕೆಯ ಹುಡುಗಿ. ಆಗ ನನಗೆ ಸ್ನೇಹಿತರು ಕಡಿಮೆಯೇ. ಆದರೆ, ನಾನು ನನ್ನದೇ ಲೋಕದಲ್ಲಿ ಖುಷಿಯಾಗಿ ಇರ್ತಾ ಇದ್ದೆ. ನಮ್ಮ ಮನೆ ಬಳಿ ಖಾಲಿ ಸೈಟು, ಖಾಲಿ ಜಾಗ ತುಂಬಾ ಇತ್ತು. ನನಗೆ ಸಾಕಾಗುವಷ್ಟು ಹೊತ್ತು ಹೊರಗೇ ಆಟವಾಡ್ತಾ ಇರುತ್ತಿದ್ದೆ. ಚಿಕ್ಕಂದಿನಲ್ಲಿ ಹೆಚ್ಚಿನ ಮಕ್ಕಳಿಗೆ ತಮ್ಮ ಜೀವನದ ಗುರಿಯ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಆದರೆ, ನನಗೆ ಆಗಲೇ ಅಂಥ ಸ್ಪಷ್ಟತೆ ಇತ್ತು. ನೃತ್ಯವನ್ನೇ ನಾನು ಆಗಲೂ ಉಸಿರಾಡುತ್ತಿದ್ದೆ. ನೃತ್ಯವನ್ನೇ ವೃತ್ತಿಯನ್ನಾಗಿ ತೆಗೆದುಕೊಳ್ಳುವ ಬಗ್ಗೆ ನಿರ್ಧಾರ ಮಾಡಿದ್ದು ಕಾಲೇಜು ಮುಗಿದ ಬಳಿಕವೇ. ಹೆತ್ತವರೂ ನನ್ನ ಆಸಕ್ತಿಗೆ ನೀರೆರೆದರು.
– ಶಾಲೆ, ಓದು ಎಲ್ಲಾ ಹೇಗೆ ಸಾಗುತ್ತಿತ್ತು?
ಓದಿನ ಬಗ್ಗೆ ಅಂಥಾ ಆಸಕ್ತಿಯೇನೂ ಇರಲಿಲ್ಲ. ಆದರೆ, ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸುತ್ತಿದ್ದೆ. ನನಗೆ ಪರೀಕ್ಷೆ ಇದೆ ಎಂದರೆ ನನಗಿಂತ ಜಾಸ್ತಿ ಅಮ್ಮನಿಗೆ ಆತಂಕವಾಗುತ್ತಿತ್ತು. ಅವರೇ ನನಗೆ ಮನೆಯಲ್ಲಿ ಪಾಠ ಹೇಳಿಕೊಡುತ್ತಿದ್ದರು. ಪುಸ್ತಕ ಹಿಡಿದು ಅವರು ನನಗೆ ಪಾಠ ಹೇಳುತ್ತಾ ನನ್ನ ಹಿಂದೆ ಹಿಂದೆ ಸುತ್ತಬೇಕಿತ್ತು. ಅಷ್ಟು ತುಂಟ ಹುಡುಗಿಯಾಗಿದ್ದೆ. ನನ್ನ ಅಮ್ಮ ನನ್ನನ್ನು ಹೇಗೆ ಸಂಭಾಳಿಸಿದರೋ ಅವರಿಗೇ ಗೊತ್ತು.
– ಮಾಸ್ಟರ್ ಡ್ಯಾನ್ಸರ್ ಅನುಭವ ಹೇಗಿದೆ?
“ಮಾಸ್ಟರ್ ಡಾನ್ಸರ್’ನ ಜಡ್ಜ್ ಪದವಿ ನನಗೆ ಕೊಟ್ಟ ಅನುಭವ ಜೀವನದಲ್ಲೇ ಮರೆಯಲಾರದಂಥ ಅನುಭವ. ರಿಯಾಲಿಟಿ ಶೋಗಳು ನಕಲಿ, ಇಲ್ಲಿ ವ್ಯಕ್ತವಾಗುವ ಭಾವನೆಗಳು ನಕಲಿ ಎಂದೆಲ್ಲಾ ಸುಳ್ಳು ಪ್ರಚಾರ ಮಾಡುತ್ತಾರೆ. ಆದರೆ, “ಮಾಸ್ಟರ್ ಡ್ಯಾನ್ಸರ್’ನ ಸ್ಪರ್ಧಿಗಳೆಲ್ಲರ ಹಿಂದೆಯೂ ಒಂದು ಕಥೆ ಇದೆ. ನೃತ್ಯದಲ್ಲಿ ಏನನ್ನಾದರೂ ಸಾಧಿಸಬೇಕೆಂದು ಒಂದೊಂದು ರೂಪಾಯಿಯನ್ನೂ ಸೇರಿಸಿ ಡ್ಯಾನ್ಸ್ ಕಲಿಯುತ್ತಿದ್ದಾರೆ. ನಮ್ಮ ಸಲಹೆಗಳನ್ನು ಗಂಭೀರವಾಗಿ ಸ್ವೀಕರಿಸುತ್ತಾರೆ. ಕರ್ನಾಟಕದ ಅದ್ಭುತ ಡ್ಯಾನ್ಸರ್ ಬೆಳಕಿಗೆ ಬರುತ್ತಿದ್ದಾರೆ ಎಂಬುದೇ ಖುಷಿ.
– ಮಾಧ್ಯಮದಿಂದ ದೂರವೇ ಉಳಿಯುತ್ತಿದ್ದ ನೀವು ರಿಯಾಲಿಟಿ ಶೋ ತೀರ್ಪುಗಾರ ಜವಾಬ್ದಾರಿಯನ್ನು ಹೇಗೆ ಒಪ್ಪಿಕೊಂಡಿರಿ?
“ಡ್ಯಾನ್ಸಿಂಗ್ ಸ್ಟಾರ್’ ರಿಯಾಲಿಟಿ ಶೋಗೆ ನಿರ್ದೇಶಕರು ಕರೆದಾಗ ನಿರ್ದೇಶಕರಿಗೆ ಮತ್ತು ನನಗೆ ಇಬ್ಬರಿಗೂ, ನಾನು ಜಡ್ಜ್ ಆಗಿ ಪ್ರೇಕ್ಷಕರನ್ನು ತಲುಪುವ ಬಗ್ಗೆ ಅನುಮಾನಗಳಿದ್ದವು. ನನಗಂತೂ ಈ ರಿಯಾಲಿಟಿ ಶೋಗೆ ಸೂಕ್ತವಾಗುವ ರೀತಿ ಅಭಿಪ್ರಾಯ ಕೊಡುತ್ತೇನೊ ಇಲ್ಲವೋ ಎಂಬ ಸಂದೇಹ ಬಹಳ ಇತ್ತು. ಮೊದಲ ದಿನದ ಸ್ಪರ್ಧೆಗೆ ಅಳುಕುತ್ತಲೇ ಹೋದೆ. ಮೊದಲ ಸ್ಪರ್ಧಿಗೆ ನಾನು ನೀಡಿದ ಕಮೆಂಟ್ ನಿರ್ದೇಶಕರಿಗೆ, ನೆರೆದಿದ್ದ ಜನರಿಗೆ ತುಂಬಾ ಇಷ್ಟ ಆಯಿತು. ಆಮೇಲೆ ನನಗೆ ನಾನು ಜನರನ್ನು ತಲುಪುತ್ತೇನೆ ಎಂಬ ವಿಶ್ವಾಸ ಮೂಡಿತು.
– ಚಿಕ್ಕಂದಿನಿಂದ ನಿಮ್ಮನ್ನು ತುಂಬಾ ಉತ್ತೇಜಿಸಿದ ಡ್ಯಾನ್ಸರ್ ಯಾರು?
ಚಿಕ್ಕಂದಿನಿಂದ ಈಗಿನವರೆಗೂ ಹಲವರು ನನಗೆ ಸ್ಫೂರ್ತಿಯಾಗಿದ್ದಾರೆ. ಪ್ರಭುದೇವ, ಗಣೇಶ್ ಆಚಾರ್ಯ, ಮೈಕಲ್ ಜಾಕ್ಸನ್, ಸುರುಪಾ ಸೇನ್, ವೈಭವಿ ಮರ್ಚೆಂಟ್ ಮತ್ತು ನನ್ನ ಗುರುಗಳೂ ಸೇರಿ ತುಂಬಾ ಜನ ಇದ್ದಾರೆ.
– ನಿಮಗೆ ಸಾಕಷ್ಟು ತೃಪ್ತಿ ತಂದ ಸಾಧನೆ ಯಾವುದು?
ಕಳೆದ ವರ್ಷ 60ರ ದಶಕದ “ಮುಘಲ್ ಎ ಅಜಮ್’ ಸಿನಿಮಾದ ನೃತ್ಯರೂಪಕವನ್ನು ಪ್ರಸ್ತುತಪಡಿಸಿದ್ದೆ. ಇದು ಭಾರತದ ನೃತ್ಯರೂಪಕ ಇತಿಹಾಸದಲ್ಲೇ ಅತ್ಯಂತ ಉದ್ದದ ನೃತ್ಯ ರೂಪಕ. ಇದಕ್ಕೆ ನನಗೆ “ಬ್ರಾಡ್‌ವೇ’ ಪ್ರಶಸ್ತಿ ಸಿಕ್ಕಿತು. 55 ದೇಶಗಳು ನನ್ನನ್ನು ಈ ಪ್ರಶಸ್ತಿಗೆ ಆರಿಸಿದ್ದವು.
– ಉದಯೋನ್ಮುಖ ನೃತ್ಯಗಾರರಿಗೆ ಏನು ಸಲಹೆ ನೀಡುತ್ತೀರಿ?
ನೃತ್ಯವನ್ನೇ ವೃತ್ತಿಯನ್ನಾಗಿ ಮಾಡಿಕೊಂಡರೆ ಒಂದೇ ಬಾರಿ ದುಡ್ಡು ಸಿಗುವುದಿಲ್ಲ. ಹಣ, ಯಶಸ್ಸು ಎರಡೂ ದೊರಕಲು ಸಾಕಷ್ಟು ಸಮಯ ಹಿಡಿಯುತ್ತದೆ. ಸಾಧನೆಯ ಹಾದಿಯಲ್ಲಿ ಇರುವವರು ಶ್ರದ್ಧೆ, ಶಿಸ್ತನ್ನು ರೂಢಿಸಿಕೊಳ್ಳಬೇಕು. ದಿನಕ್ಕೆ ಕನಿಷ್ಠ 4ರಿಂದ 5 ಗಂಟೆ ಅಭ್ಯಾಸ ಮಾಡಬೇಕು. ನಾನು ಪ್ರದರ್ಶನ ನೀಡುತ್ತಿದ್ದ ಸಮಯದಲ್ಲಿ 5 ಗಂಟೆ ಅಭ್ಯಾಸ ಮಾಡುತ್ತಿದ್ದೆ. ಈಗ 2 ಗಂಟೆ ಮಾಡುತ್ತೇನೆ. ರಿಯಾಲಿಟಿ ಶೋಗಳಲ್ಲಿ ನೃತ್ಯಗಾರರಿಗೆ ತಮ್ಮ ಪ್ರತಿಭೆ ತೋರಿಸಲು ವೇದಿಕೆ ಸಿಗುತ್ತದೆ ಅಷ್ಟೇ. ಆದರೆ, ವೃತ್ತಿಗೆ ಅಷ್ಟೇ ಸಾಲುವುದಿಲ್ಲ.
– ನಿಮ್ಮ ಫ್ಯಾಷನ್ ಸೆನ್ಸ್ ಮೇಲೆಯೆ ಎಲ್ಲರ ಕಣ್ಣು. ನಿಮ್ಮ ವಸ್ತ್ರವಿನ್ಯಾಸದ ಹಿಂದಿನ ಗುಟ್ಟು ಏನು?
ನಾನು ಮತ್ತು ನನ್ನ ಸ್ಟೈಲಿಷ್ಟ್ ಇಬ್ಬರೂ ಚರ್ಚಿಸಿಯೇ ನನ್ನ ವಸ್ತ್ರವನ್ನು ನಿರ್ಧರಿಸುತ್ತೇವೆ. ನನಗೆ ತೀರಾ ಮಾಡರ್ನ್ ಉಡುಗೆಗಳು ಅಷ್ಟು ಇಷ್ಟವಾಗುವುದಿಲ್ಲ. ಸೀರೆ ಬಹಳ ಇಷ್ಟ. ಹಾಗಾಗಿ ಸೀರೆ ಮತ್ತು ಇತರ ಭಾರತೀಯ ಉಡುಗೆಗಳಿಗೆ ತುಸು ಮಾಡರ್ನ್ ಸ್ಪರ್ಷ ನೀಡಿ ವಸ್ತ್ರವಿನ್ಯಾಸ ಮಾಡಿಸುತ್ತೇನೆ. ಇಂಥ ಉಡುಗೆಯಲ್ಲೇ ನಾನು ಸುಂದರವಾಗಿ ಕಾಣುವುದು ಎಂಬ ನಂಬಿಕೆ ನನ್ನದು.
– ನಿಮ್ಮ ಡಯಟ್ ಹೇಗಿರುತ್ತದೆ?
ಪ್ರತ್ಯೇಕ ಡಯಟ್ ಅಂತ ಏನ್ನನೂ ಮಾಡುವುದಿಲ್ಲ. ನಾನು ಹಿಂದಿನ ದಿನ ಎಷ್ಟೇ ದಣಿದಿದ್ದರೂ ಬೆಳಗ್ಗಿನ ಜಾವ 6ಕ್ಕೇ ಏಳುವುದು. ದೊಡ್ಡ ಮಗ್ ತುಂಬಾ ಟೀ ಸವಿಯುತ್ತೇನೆ. ಪಕ್ಕಾ ಸಸ್ಯಾಹಾರಿ ನಾನು. ಬೆಳಗ್ಗೆ ಹೊಟ್ಟೆತುಂಬಾ ತಿಂಡಿ ತಿನ್ನುತ್ತೇನೆ. ಮಧ್ಯಾಹ್ನದ ಊಟ ತಿಂಡಿಗಿಂತ ಕೊಂಚ ಕಡಿಮೆ. ರಾತ್ರಿ 7.30ಕ್ಕೆ ಮಿತಾಹಾರ ಸೇವಿಸುತ್ತೇನೆ. ಬಳಿಕ ಏನನ್ನೂ ತಿನ್ನುವುದಿಲ್ಲ.
– ಬಿಡುವಿನ ಸಮಯವನ್ನು ಹೇಗೆ ಕಳೆಯುತ್ತೀರಿ?
ನನಗೆ ಬಿಡುವೆಂಬುದೇ ಇಲ್ಲ. ಬಿಡುವು ಸಿಕ್ಕರೆ ಪುಸ್ತಕಗಳನ್ನು ಓದುತ್ತೇನೆ. ಆತ್ಮಕಥೆಗಳನ್ನು ಓದಲು ಇಷ್ಟ. ಗಾರ್ಡನಿಂಗ್‌ನಲ್ಲಿ ಆಸಕ್ತಿ ಇದೆ. ಹತ್ತಿರದ ಸ್ನೇಹಿತರೊಂದಿಗೆ ಕೂತು ತಡರಾತ್ರಿ ಕಾಫಿ ಕುಡಿಯುತ್ತಾ ಅಥವಾ ಊಟ ಮಾಡುತ್ತಾ ಹರಟೆ ಹೊಡೆಯುವುದು ಇಷ್ಟ. ಕೊಡಗು, ಚಿಕ್ಕಮಗಳೂರಿನಂಥ ತಣ್ಣಗಿನ ಜಾಗಗಳಿಗೆ ಭೇಟಿಕೊಡಲು ತುಂಬಾ ಇಷ್ಟ. ಹೆಚ್ಚು ಸಮಯ ಇದೆ ಎಂದಾದರೆ ವಿದೇಶ ಪ್ರವಾಸ ಹೋಗುತ್ತೇನೆ.
– ರಘು ದೀಕ್ಷಿತ್‌ರ ಯಾವ ಹಾಡು ನಿಮ್ಮ ಆಲ್ ಟೈಮ್ ಫೇವರಿಟ್?
ರಘು, ಸ್ಟೇಜ್ ಮೇಲೆ ಬ್ಯಾಂಡ್ ಜೊತೆ ಹಾಡುವ ಹಾಡೊಂದಿದೆ “ಅಂಬರ್’ ಅಂತ. ಅದು ನನ್ನ ಫೇವರಿಟ್.
– ಚೇತನ ಜೆ.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.