ಪದವಿ ಕಲಿಕೆಗೆ ಕುಂದಾಪುರ, ಬೈಂದೂರು, ಶಂಕರನಾರಾಯಣವೇ ಗತಿ!
Team Udayavani, Jun 14, 2018, 6:00 AM IST
ಕೊಲ್ಲೂರು: ಕರ್ಕುಂಜೆ ಗ್ರಾ.ಪಂ. ವ್ಯಾಪ್ತಿಯ ನೆಂಪುವಿನಲ್ಲಿ ಪ್ರಥಮ ದರ್ಜೆ ಸರಕಾರಿ ಪದವಿ ಕಾಲೇಜು ಸ್ಥಾಪನೆಯಾಗಬೇಕೆನ್ನುವ ಬೇಡಿಕೆ ಇನ್ನಾದರೂ ಈಡೇರುತ್ತಾ ಎನ್ನುವುದು ಯಕ್ಷಪ್ರಶ್ನೆಯಾಗಿದೆ.
50 ವರುಷಗಳ ಇತಿಹಾಸ ಹೊಂದಿರುವ ಇಲ್ಲಿನ ಸರಕಾರಿ ಪ್ರೌಢಶಾಲೆ ಹಾಗೂ 30 ವರುಷಗಳಿಂದ ಇರುವ ಸ.ಪ.ಪೂ. ಕಾಲೇಜು ವಠಾರವು 10 ಎಕರೆ ವಿಸ್ತೀರ್ಣದ ಬೃಹತ್ ಜಾಗವನ್ನು ಹೊಂದಿದೆ. ಈ ಭಾಗದ ನಿವಾಸಿಗಳು ಅನೇಕ ವರ್ಷಗಳಿಂದ ಇಲ್ಲೊಂದು ಪ್ರಥಮ ದರ್ಜೆ ಪದವಿ ಕಾಲೇಜು ಆರಂಭಿಸಬೇಕೆಂಬ ಬೇಡಿಕೆಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದರು. ಆದರೆ ಈ ಬಗ್ಗೆ ಸರಕಾರ ಇನ್ನೂ ಗಮನ ಹರಿಸಿಲ್ಲ ಎಂಬುದು ವಿಷಾದನೀಯ ಸಂಗತಿಯಾಗಿದೆ.
ಪದವಿಗೆ ದೂರದ ಊರೇ ಗತಿ
ನೆಂಪು ಆಸುಪಾಸಿನ ಕೊಲ್ಲೂರು, ಕೆರಾಡಿ, ಹೊಸೂರು, ಚಿತ್ತೂರು, ಆಲೂರು, ಹೆಮ್ಮಾಡಿ, ಕೊಡ್ಲಾಡಿ, ಮಾವಿನಕಟ್ಟೆಯಲ್ಲಿ ಪ.ಪೂ. ಕಾಲೇಜುಗಳಿವೆ. ಆದರೆ ಇಲ್ಲಿನವರು ಪದವಿ ವ್ಯಾಸಂಗ ಮಾಡಬೇಕಾದರೆ ದೂರದ ಕುಂದಾಪುರ, ಬೈಂದೂರು, ಶಂಕರನಾರಾಯಣಕ್ಕೇ ಹೋಗಬೇಕಾಗಿದೆ. ಇಲ್ಲಿ ಕಾಲೇಜು ಸ್ಥಾಪಿಸಿದರೆ ವಿದ್ಯಾರ್ಜನೆಗೆ ಸಮೀಪದಲ್ಲೇ ಅವಕಾಶವಾಗಲಿದೆ.
ಬಜೆಟ್ ನಿರೀಕ್ಷೆ
ಈ ಬಾರಿ ಜುಲೈನಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರಕಾರದ ಬಜೆಟ್ ಮಂಡನೆಯಾಗಲಿದ್ದು, ಈ ವೇಳೆ ನೆಂಪುವಿಗೆ ಕಾಲೇಜು ಮಂಜೂರಾಗಬಹುದೇ ಎಂಬ ಆಶಾವಾದ ಇಲ್ಲಿನವರದ್ದು. ಕರ್ಕುಂಜೆ ಹಾಗೂ ನೆಂಪು ಗ್ರಾಮಸ್ಥರು, ಇಲ್ಲಿನ ಹಳೆವಿದ್ಯಾರ್ಥಿಗಳು, ನೆಂಪು ವಿನಾಯಕ ಯುವಕ ಸಂಘ, ನೆಂಪು ಫ್ರೆಂಡ್ಸ್ ಪದವಿ ಕಾಲೇಜು ಸ್ಥಾಪನೆಗೆ ಅಗತ್ಯವಿರುವ ವಿವಿಧ ದಾಖಲೆಗಳೊಡನೆ ಸರಕಾರದ ಕದ ತಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಬೇಡಿಕೆ ಈಡೇರಲಿದೆಯೇ ಎಂಬ ಕುತೂಹಲವಿದೆ.
ಬಹಳಷ್ಟು ಪ್ರಯೋಜನ
ನೆಂಪುವಿನಲ್ಲಿ ಸರಕಾರಿ ಪದವಿ ಕಾಲೇಜು ಆರಂಭಿಸಿದಲ್ಲಿ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಅದರಿಂದ ಬಹಳಷ್ಟು ಪ್ರಯೋಜನವಾಗಲಿದೆ. ಈ ಬಗ್ಗೆ ಸರಕಾರದ ಮೇಲೆ ಒತ್ತಡ ಹೇರಿ ಪ್ರಾಮಾಣಿಕ ಯತ್ನ ಮಾಡುತ್ತೇನೆ.
– ಬಿ.ಎಂ. ಸುಕುಮಾರ ಶೆಟ್ಟಿ,
ಬೈಂದೂರು ಶಾಸಕರು
ಮೂಲೆ ಸೇರಿದ ಕಡತ
ಪದವಿ ಕಾಲೇಜಿಗೆ ಕಳೆದ 5 ವರ್ಷಗಳಿಂದ ಶತಪ್ರಯತ್ನ ಮಾಡಲಾಗಿದೆ. ಆದರೆ ಆ ಕಡತವು ಬೆಂಗಳೂರಿನ ಕಮಿಷನರ್ ಕಚೇರಿಯಲ್ಲೇ ಬಿದ್ದಿರುವುದು ಮನಸ್ಸಿಗೆ ನೋವನ್ನುಂಟುಮಾಡಿದೆ.
– ಸಂತೋಷ್ ಮಂಗಲ್ಸನಕಟ್ಟೆ,
ನೆಂಪು ವಿನಾಯಕ ಯುವಕ ಸಂಘದ ಅಧ್ಯಕ್ಷರು
ನಿರ್ಮಾಣಕ್ಕೆ ಯೋಗ್ಯ
ದೂರದ ಪ್ರದೇಶಗಳಿಗೆ ಹೋಗುವ ಬದಲು ನೆಂಪುವಿನಲ್ಲೇ ಪದವಿ ಕಾಲೇಜು ಸ್ಥಾಪಿಸಿದರೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತದೆ. 10 ಎಕರೆ ವಿಸ್ತೀರ್ಣದ ಈ ವಠಾರ ಕಾಲೇಜು ನಿರ್ಮಾಣಕ್ಕೆ ಯೋಗ್ಯವಾಗಿದೆ
– ಜಿ.ಕೆ. ಹಾಲಪ್ಪ, ನೆಂಪು ಸ.ಪ.ಪೂ. ಕಾಲೇಜು ಪ್ರಾಂಶುಪಾಲರು
ಶಾಸಕರು ಯತ್ನಿಸಲಿ
ನೆಂಪು ಹಾಗೂ ಕರ್ಕುಂಜೆ ಗ್ರಾಮಸ್ಥರ ಬಹಳಷ್ಟು ವರುಷಗಳ ಸರಕಾರಿ ಪದವಿ ಕಾಲೇಜಿನ ಬೇಡಿಕೆಯನ್ನು ಈಡೇರಿಸುವಲ್ಲಿ ನೂತನ ಶಾಸಕರು ಯತ್ನಿಸಬೇಕು.
– ಜಯರಾಜ ಶೆಟ್ಟಿ,
ವಂಡ್ಸೆ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರು
– ಡಾ| ಸುಧಾಕರ ನಂಬಿಯಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.