ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ
Team Udayavani, Jun 15, 2018, 2:25 AM IST
ಪುತ್ತೂರು: ಬುಧವಾರ ಸಂಜೆಯಿಂದ ಸುರಿಯಲಾರಂಭಿಸಿದ ಧಾರಾಕಾರ ಮಳೆಯ ಪರಿಣಾಮ ತಾಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಧ್ಯರಾತ್ರಿಯ ವೇಳೆಗೆ ಪುತ್ತೂರು ನಗರದ ಕೆಲವಡೆ ಕೃತಕ ನೆರೆ ಹಾವಳಿಯಿಂದ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ತಾಲೂಕಿನ ಹಲವು ಕಡೆಗಳಲ್ಲಿ ಧರೆ, ರಸ್ತೆಗಳು ಕುಸಿದಿದ್ದು, ಮರಗಳೂ ಉರುಳಿಬಿದ್ದು, ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.
ಬುಧವಾರ ಸಂಜೆ ಆರಂಭಗೊಂಡ ಧಾರಾಕಾರ ಮಳೆ ಗುರುವಾರ ಬೆಳಗ್ಗಿನ ತನಕವೂ ಎಡೆಬಿಡದೆ ಸುರಿದಿದೆ. ಪುತ್ತೂರು ನಗರದ ವಿವಿಧ ಕಡೆಗಳಲ್ಲಿ ಚರಂಡಿ ನೀರಿನ ಹರಿವಿಗೆ ತಡೆಯಾದ ಹಾಗೂ ಚರಂಡಿ ನೀರಿನ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಕೃತಕ ನೆರೆ ಹಾವಳಿ ಕಾಣಿಸಿಕೊಂಡಿದೆ. ಮಧ್ಯರಾತ್ರಿಯ ವೇಳೆ ಮಳೆ ನೀರು ಮನೆಗಳಿಗೆ ನುಗ್ಗಲಾರಂಭಿಸಿದ ಪರಿಣಾಮ ಜನತೆ ಆತಂಕಪಡುವಂತಾಯಿತು. ಕೆಲವೊಂದು ಕಡೆಗಳಲ್ಲಿ ಮನೆಮಂದಿಗೆ ಸ್ಥಳಾಂತರದ ಅನಿವಾರ್ಯತೆ ಎದುರಾಯಿತು.
ಮನೆಗಳಿಗೆ ಮಳೆ ನೀರು
ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆ ಬಳಿ ಮಳೆ ನೀರು ಕೆಲವು ಮನೆಗಳಿಗೆ ನುಗ್ಗಿ ನಷ್ಟ ಸಂಭವಿಸಿದೆ. ಮನೆಗೆ ಮಳೆನೀರು ನುಗ್ಗಿದ ಪರಿಣಾಮ ಮಧ್ಯರಾತ್ರಿ ವೇಳೆ ಕೆಲವರು ಏನೂ ಮಾಡಲು ತೋಚದೆ ಆದರ್ಶ ಆಸ್ಪತ್ರೆಗೆ ತೆರಳಿ ಆಶ್ರಯ ಪಡೆದಿದ್ದಾರೆ. ಎಪಿಎಂಸಿ ರಸ್ತೆಯ ಮಾಡ್ತಾ ಕಂಪೌಂಡ್ ವಠಾರದಲ್ಲಿಯೂ ಕೃತಕ ನೆರೆಯಿಂದಾಗಿ ಮಳೆ ನೀರು ಮನೆಗೆ ನುಗ್ಗಿ ಬಹುತೇಕ ವಸ್ತುಗಳು ಜಲಾವೃತಗೊಂಡಿವೆ. ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಮೀಪದ ಕಂಬಳಕೋಡಿಯಲ್ಲಿ 3 ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ. ರಾತ್ರಿ ವೇಳೆಯಲ್ಲಿ ಅಗ್ನಿಶಾಮಕ ದಳ ಹಾಗೂ ನಗರಸಭೆ ಜಂಟಿ ಕಾರ್ಯಾಚರಣೆ ನಡೆಸಿ ಅಲ್ಲಿದ್ದ ಇಬ್ಬರು ವೃದ್ಧರನ್ನು ರಕ್ಷಿಸುವ ಜತೆಗೆ ಅಲ್ಲಿನ ಮನೆಮಂದಿಯನ್ನು ಬೇರೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವ ಕೆಲಸ ಮಾಡಿದ್ದಾರೆ.
ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣ ಪರಿಸರದಲ್ಲೂ ಕೃತಕ ನೆರೆ ಹಾವಳಿ ಕಾಣಿಸಿಕೊಂಡಿದೆ. ಮುಖ್ಯ ರಸ್ತೆಯಿಂದ ಉರ್ಲಾಂಡಿಗೆ ಹೋಗುವ ಸಂಪರ್ಕ ರಸ್ತೆ ಜಲಾವೃತಗೊಂಡಿದೆ. ಹಾರಾಡಿಯಲ್ಲಿ ಚರಂಡಿ ನೀರಿನ ಒಳಹರಿವು ಹೆಚ್ಚಾದ ಪರಿಣಾಮವಾಗಿ ಮಳೆನೀರು ರಸ್ತೆಯಲ್ಲಿ ತೋಡಿನ ರೂಪದಲ್ಲಿ ಹರಿದಿದೆ. ಸಾಲ್ಮರ ಸಮೀಪ ರಸ್ತೆಯಲ್ಲಿ ನೀರು ಹರಿದ ಪರಿಣಾಮ ಕೆಲವು ಸಮಯಗಳ ಕಾಲ ಸಂಚಾರ ಸಂಕಷ್ಟ ಎದುರಾಗಿದೆ. ತಾಲೂಕಿನ ಅಮಿcನಡ್ಕ -ಬೆಳ್ಳಾರೆ ರಸ್ತೆಯಲ್ಲಿ, ಪುತ್ತೂರು ನಗರದ ಬಲ್ನಾಡು, ತೆಂಕಿಲಗಳಲ್ಲಿ ಧರೆ ಕುಸಿತ ಉಂಟಾದ ಪರಿಣಾಮ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ.
ಶಾಲೆಗಳಿಗೆ ರಜೆ
ರಾತ್ರಿಯಿಂದ ಮಳೆ ಸುರಿದ ಪರಿಣಾಮ ಗ್ರಾಮಾಂತರ ಭಾಗಗಳಲ್ಲಿ ಉಂಟಾಗಬಹುದಾದ ಪರಿಣಾಮಗಳನ್ನು ಊಹಿಸಿ ಪುತ್ತೂರು ಸಹಾಯಕ ಕಮಿಷನರ್ ಅವರು ಶಾಲೆಗಳಿಗೆ ರಜೆ ಘೋಷಣೆ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಸೂಚನೆ ನೀಡಿದ್ದಾರೆ. ಕೆಲವು ಕಡೆಗಳಲ್ಲಿ ಶಾಲೆಗೆ ಬಂದ ಮಕ್ಕಳು ರಜೆ ವಿಚಾರ ತಿಳಿದು ಹಿಂದಿರುಗಿದ್ದಾರೆ.
ಕಾರ್ಯಾಚರಣೆ
ಜಲಾವೃತ ಪ್ರದೇಶಗಳಲ್ಲಿನ ನೀರು ಸರಾಗವಾಗಿ ಹರಿದು ಹೋಗುವಂತೆ ಪುತ್ತೂರು ನಗರ ಸಭೆಯ ಅಧಿಕಾರಿಗಳು, 24×7 ತಂಡ, ಅಗ್ನಿಶಾಮಕ ದಳದ ಸಿಬಂದಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಗುರುವಾರ ಬೆಳಗ್ಗೆ ಅನಂತರ ಮಳೆಯ ಪ್ರಮಾಣ ಇಳಿಮುಖವಾದ ಕಾರಣ ನಗರದ ಜನತೆ ಆತಂಕದ ಸ್ಥಿತಿಯಿಂದ ಹೊರಬಂದು ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.