ಪೌರ ಕಾರ್ಮಿಕರಿಗೆ ವೇತನ ವಿಳಂಬ: ಕಸ ಸಂಗ್ರಹ ಮಾಡದೆ ಪ್ರತಿಭಟನೆ
Team Udayavani, Jun 15, 2018, 11:13 AM IST
ಮಹಾನಗರ: ಇತ್ತೀಚೆಗೆ ಬೆಂಗಳೂರಿನಲ್ಲಿ ಕಸ ಸಂಗ್ರಹ ನಡೆಸುತ್ತಿರುವ ಕಾರ್ಮಿಕರು ನಡೆಸಿದ ಮುಷ್ಕರದಿಂದಾಗಿ ಒಂದೆರಡು ದಿನ ರಾಜಧಾನಿಯಲ್ಲಿ ಸಮಸ್ಯೆ ಉಂಟಾದ ಘಟನೆ ಮಾಸುವ ಮುನ್ನವೇ, ಮಂಗಳೂರಿನಲ್ಲಿ ಇದೇ ಸಮಸ್ಯೆ ಗುರುವಾರ ಕಾಣಿಸಿಕೊಂಡಿದೆ. ಕಸ ಸಂಗ್ರಹ ನಡೆಸುತ್ತಿರುವ ಕಾರ್ಮಿಕರಿಗೆ ವೇತನ ಪಾವತಿ ಮಾಡಿಲ್ಲ ಎಂದು ಆರೋಪಿಸಿ ಆ್ಯಂಟನಿ ವೇಸ್ಟ್ ಮ್ಯಾನೇಜ್ ಮೆಂಟ್‌ನ ಕಾರ್ಮಿಕರು ಗುರುವಾರ ಕಸ ಸಂಗ್ರಹ ನಡೆಸದೆ, ಪ್ರತಿಭಟಿಸಿದ್ದಾರೆ. ಈ ಮೂಲಕ ನಗರದಲ್ಲಿ ಕಸ ಸಂಗ್ರಹ ಗುರುವಾರ ನಡೆಯಲಿಲ್ಲ.
‘ಎಲ್ಲ ಕಾರ್ಮಿಕರಿಗೆ ಮಾಸಿಕ ವೇತನ ಸಮರ್ಪಕವಾಗಿ ನೀಡುವವರೆಗೆ ನಾವು ಕೆಲಸಕ್ಕೆ ಹಾಜರಾಗುವುದಿಲ್ಲ’ ಎಂದು ಆ್ಯಂಟನಿ ಸಂಸ್ಥೆಯ ಪ್ರತಿಭಟನನಿರತ ಕಾರ್ಮಿಕರು ತಿಳಿಸಿದರೆ, ‘ಆ್ಯಂಟನಿ ಸಂಸ್ಥೆಗೆ ಮನಪಾ ವತಿಯಿಂದ ಪಾವತಿಸಲು ಬಾಕಿ ಇರುವ 2.10 ಕೋ.ರೂ.ಗಳನ್ನು ಗುರುವಾರ ಮಧ್ಯಾಹ್ನವೇ ನೀಡಲಾಗಿದ್ದು, ಇದರಿಂದಾಗಿ ಶುಕ್ರವಾರದಿಂದ ಕಸ ಸಂಗ್ರಹ ಎಂದಿನಂತೆ ಆರಂಭವಾಗಲಿದೆ’ ಎಂದು ಮನಪಾ ಮೂಲಗಳು ತಿಳಿಸಿವೆ.
ಮಳೆಯೊಂದಿಗೆ ಗಬ್ಬು ನಾರುವ ತ್ಯಾಜ್ಯ
ಗುರುವಾರ ಬೆಳಗ್ಗೆ ತ್ಯಾಜ್ಯ ಸಂಗ್ರಹ ಮಾಡಲು ಹೊರಟಿದ್ದ ಕಾರ್ಮಿ ಕರು ಕೂಳೂರು ಯಾರ್ಡ್‌ನಲ್ಲಿ ವಾಹನಗಳನ್ನು ನಿಲ್ಲಿಸಿ ಕಸ ಸಂಗ್ರಹ ಮಾಡಲು ಮುಂದಾಗಲಿಲ್ಲ. ಹೀಗಾಗಿ ಮಂಗಳೂರಿ ನಾದ್ಯಂತ ಕಸದ ರಾಶಿ ಶುರುವಾಗಿದೆ. ಮಂಗಳೂರಿನ ಮಾರುಕಟ್ಟೆ ಸೇರಿದಂತೆ ವಿವಿಧ ಪ್ರದೇಶದಲ್ಲಿ ತ್ಯಾಜ್ಯ ತುಂಬಿದೆ. ಈ ಮಧ್ಯೆ ಮಂಗಳೂರಿನಲ್ಲಿ ವ್ಯಾಪಕ ಮಳೆ ಬರುತ್ತಿರುವ ಕಾರಣ ತ್ಯಾಜ್ಯವು ಮಳೆ ನೀರಿನೊಂದಿಗೆ ಸೇರಿ ಸ್ಥಳದಲ್ಲಿ ಗಲೀಜು ವ್ಯಾಪಿಸಿ, ನಾರುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.
ಹೆಸರು ಹೇಳಲು ಇಚ್ಛಿಸದ ಕಾರ್ಮಿಕರೊಬ್ಬರು ‘ಸುದಿನ’ ಜತೆಗೆ ಮಾತನಾಡಿ, ‘ಪ್ರತಿ ತಿಂಗಳು ಕಸ ನಿರ್ವಹಣೆ ಮಾಡುವ ಕಾರ್ಮಿಕರ ಸಮಸ್ಯೆಯನ್ನು ಕೇಳುವವರೇ ಇಲ್ಲವಾಗಿದ್ದಾರೆ. ಮಾಸಿಕವಾಗಿ ಸಂಬಳವನ್ನು ನಿಗದಿತ ದಿನಾಂಕದಂದೇ ನೀಡಬೇಕು ಎಂಬ ಬೇಡಿಕೆ ಈಡೇರುವುದೇ ಇಲ್ಲ. ಎಪ್ರಿಲ್ ತಿಂಗಳ ಸಂಬಳ ನಮಗೆ ಮೇ 28ಕ್ಕೆ ದೊರಕಿತ್ತು. ಈ ತಿಂಗಳ ಸಂಬಳ ಜೂ. 10ರೊಳಗೆ ಸಿಗಬೇಕಿತ್ತು. ಇನ್ನೂ ಸಿಗುವ ಅಂದಾಜಿಲ್ಲ. ಕಸ ಸಂಗ್ರಹ ಮಾಡದೆ ಪ್ರತಿಭಟನೆಯ ಮೂಲಕವೇ ನಾವು ನಮ್ಮ ಬೇಸರವನ್ನು ತಿಳಿಸಬೇಕಿದೆ. ಹೀಗಾಗಿ ಗುರುವಾರ ಕಸ ಸಂಗ್ರಹ ನಡೆಸಲಿಲ್ಲ’ ಎಂದರು. ‘ಸಂಸ್ಥೆಯಲ್ಲಿ ಸುಮಾರು 600ರಷ್ಟು ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಕಂಪೆನಿಯವರಿಗೆ ಪಾಲಿಕೆ ಹಣ ನೀಡಿದ ಬಗ್ಗೆ ಮಾಹಿತಿ ಇದ್ದು, ಇದು ಕಾರ್ಮಿಕರ ಖಾತೆಗೆ ಹಂಚಿಕೆಯಾದ ಬಳಿಕವಷ್ಟೇ ಶುಕ್ರವಾರ ಕಸ ಸಂಗ್ರಹ ಆರಂಭಿಸಲಿದ್ದೇವೆ’ ಎಂದವರು ಹೇಳಿದರು.
ಕೊನೆ ಘಳಿಗೆಯಲ್ಲಿ ಪಾಲಿಕೆ ಅಲರ್ಟ್ !
ಮನಪಾ ಹಾಗೂ ಕಸ ವಿಲೇವಾರಿಯ ಗುತ್ತಿಗೆ ವಹಿಸಿಕೊಂಡಿರುವ ಆ್ಯಂಟನಿ ವೇಸ್ಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ನಡುವಿನ ಬಿಕ್ಕಟ್ಟಿನಿಂದಾಗಿ ಗುತ್ತಿಗೆ ಕಾರ್ಮಿಕರಿಗೆ ಸಂಬಳ ಸಿಗದೆ ಕಾರ್ಮಿಕರು ಮುಷ್ಕರ ನಡೆಸಿರುವುದು ಇದೇ ಮೊದಲಲ್ಲ. ಕಳೆದ ವರ್ಷ ನವೆಂಬರ್‌ನಲ್ಲೂ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಎರಡು ದಿನ ಕಾರ್ಮಿಕರು ಕಸ ವಿಲೇವಾರಿ ನಡೆಸದೆ, ಪ್ರತಿಭಟಿಸಿದ್ದರು. 2016ರಲ್ಲೂ ಇದೇ ರೀತಿ ಕಾರ್ಮಿಕರು ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ಕಸ ಸಂಗ್ರಹ ವ್ಯತ್ಯಯವಾಗಿತ್ತು. ಇನ್ನೂ ಕೆಲವು ಸಂದರ್ಭ ಇಂತಹುದೇ ಪ್ರತಿಭಟನೆ ನಡೆದಿತ್ತು. ವೇತನ ಪಾವತಿಯಾಗಿಲ್ಲ ಎಂದು ಆರೋಪಿಸಿ ಕಾರ್ಮಿಕರು ಮುಷ್ಕರ ನಡೆಸುತ್ತಿರುವುದನ್ನು ಅರಿತು ಕೊನೆ ಘಳಿಗೆಯಲ್ಲಿ ಮಂಗಳೂರು ಪಾಲಿಕೆಯು ಮಧ್ಯಪ್ರವೇಶಿಸಿ ಬಾಕಿ ಹಣ ಪಾವತಿಗೆ ಮುಂದಾಗುತ್ತದೆ. ಕಳೆದ ಒಂದೂವರೆ ವರ್ಷದಲ್ಲಿ ನಗರ ವ್ಯಾಪ್ತಿಯಲ್ಲಿ ಈ ರೀತಿ ಕಾರ್ಮಿಕರಿಗೆ ವೇತನ ಪಾವತಿ ವಿಳಂಬವಾಗಿದ್ದ ಹಿನ್ನೆಲೆಯಲ್ಲಿ ಐದಾರು ಬಾರಿ ಕಸ ವಿಲೇವಾರಿ ಮಾಡದೆ ಪ್ರತಿಭಟನೆ ನಡೆದಿತ್ತು.
ಇಂದಿನಿಂದ ಕಸ ಸಂಗ್ರಹ ಆರಂಭ
ಮಾಸಿಕವಾಗಿ ಪಾಲಿಕೆಯು ಆ್ಯಂಟನಿ ಸಂಸ್ಥೆಗೆ ನೀಡಬೇಕಾದ 2.10 ಕೋ.ರೂ.ಗಳನ್ನು ಗುರುವಾರ ಮಧ್ಯಾಹ್ನವೇ ಚೆಕ್ ಮೂಲಕ ನೀಡಲಾಗಿದೆ. ಚುನಾವಣಾ ನೀತೆ ಸಂಹಿತೆ ಸಹಿತ ಇತರ ಕಾರ್ಯದಲ್ಲಿ ಅಧಿಕಾರಿಗಳು ಒತ್ತಡದಲ್ಲಿದ್ದ ಕಾರಣದಿಂದ ಹಣ ನೀಡಲು ಸಾಧ್ಯವಾಗಿರಲಿಲ್ಲ. ಹಣ ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಮತ್ತೆ ಎಂದಿನಂತೆ ಕಸ ಸಂಗ್ರಹ ನಡೆಯಲಿದೆ.
– ನವೀನ್ ಡಿ’ಸೋಜಾ
ಅಧ್ಯಕ್ಷರು, ಆರೋಗ್ಯ ಸ್ಥಾಯೀ ಸಮಿತಿ, ಮನಪಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.