ಅಮ್ಮನ ಉಸಿರಿಗೆ ಮಗನ ಭಿಕ್ಷೆ
Team Udayavani, Jun 15, 2018, 6:11 PM IST
ತಾಯಿ: ಸಿದ್ದು, ನಾನು ಸತ್ತು ಹೋಗ್ತಿನೇನೋ?
ಮಗ : ಇಲ್ಲಮ್ಮ, ಹಾಗೇನೂ ಆಗಲ್ಲ.
ತಾಯಿ: ನನ್ನ ಉಳಿಸಿಕೊಳ್ತೀಯಾ ಸಿದ್ದು? ಇನ್ನೂ, ಸ್ವಲ್ಪ ದಿನ ಉಳಿಬೇಕು ನಾನು…?
– ಹೀಗೆ ಕೋಮಾದಲ್ಲಿರುವ ಅಮ್ಮ ತನ್ನೊಂದಿಗೆ ಮಾತಾಡಿದ್ದೆಲ್ಲ ಕನಸು ಅಂತ ಗೊತ್ತಾದಾಗ, ತನ್ನ ಹೆತ್ತಮ್ಮನನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆಂಬ ಆ ಜೀವ ಒದ್ದಾಡುತ್ತೆ. ಕೋಟ್ಯಾಧೀಶ್ವರನಾಗಿದ್ದರೂ, ವಿಧಿ ಮುಂದೆ ಕೈ ಕಟ್ಟಿ ಕೂರಬೇಕಾದ ಸ್ಥಿತಿ ಅವನದು. ಆದರೆ, ಅಲ್ಲೊಂದು ನಂಬಿಕೆ ಅವನನ್ನು ಆವರಿಸಿಕೊಳ್ಳುತ್ತೆ. ಅದೇ, ತನ್ನ ತಾಯಿಗಾಗಿ ಎಲ್ಲವನ್ನೂ ತೊರೆದು, 48 ದಿನಗಳ ಕಾಲ ಒಬ್ಬ ಸಾಮಾನ್ಯ ಭಿಕ್ಷುಕನಾಗಿ ಬದುಕಿ, ಹರಕೆ ತೀರಿಸಬೇಕು. ಸ್ವಾಮೀಜಿಯೊಬ್ಬರ ಈ ಮಾತು ಅವನೊಳಗೆ ಬಲವಾಗಿ ಬೇರೂರಿ, ಅಮ್ಮನಿಗಾಗಿ ಭಿಕ್ಷುಕನಾಗ್ತಾನೆ.
ಅವನ ಹರಕೆ ಫಲಿಸುತ್ತಾ, ಇಲ್ಲವಾ? ಇದು ಕಥೆ. ಅಂದಹಾಗೆ, ಇದು ತಮಿಳಿನ “ಪಿಚ್ಚೈಕಾರನ್’ನ ಕನ್ನಡ ಅವತರಣಿಕೆ. ಯಥಾವತ್ ನಕಲು ಇಲ್ಲಿದ್ದರೂ, ಕನ್ನಡದ ಸತ್ವಕ್ಕೆ ಮೋಸ ಆಗದಂತೆ ನಿರ್ದೇಶಕರು ನೋಡಿಕೊಂಡಿದ್ದಾರೆ. ಅಮ್ಮನಿಗಾಗಿ ಏನು ಬೇಕಾದರೂ ಮಾಡುವ ಮಕ್ಕಳ ಕಥೆವುಳ್ಳ ಚಿತ್ರಗಳು ಕನ್ನಡಕ್ಕೆ ಹೊಸದೇನಲ್ಲ. ಆದರೆ, ಕೋಮಾದಲ್ಲಿರುವ ಅಮ್ಮನಿಗಾಗಿ ಕೋಟ್ಯಾಧಿಪತಿ ಮಗನೊಬ್ಬ, ಭಿಕ್ಷೆ ಬೇಡಿ ಹರಕೆ ತೀರಿಸುವ ಅಂಶ ಕನ್ನಡಕ್ಕೆ ಸ್ವಲ್ಪ ಹೊಸದೆನಿಸಿದರೂ, ಮೂಲ ಕಥೆ, ಚಿತ್ರಕಥೆಗೆ ಚೆಂದದ ನಿರೂಪಣೆಯ ಜವಾಬ್ದಾರಿಯನ್ನು ನಿರ್ದೇಶಕರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆಂಬುದೇ ಸಮಾಧಾನ.
ಅಮ್ಮ-ಮಗನ ಪ್ರೀತಿ, ವಾತ್ಸಲ್ಯ ಮತ್ತು ಬಾಂಧವ್ಯ ಎಲ್ಲಕ್ಕಿಂತಲೂ ಮಿಗಿಲು ಎಂಬುದನ್ನು ಕೇಳಿದವರಿಗೆ, ಇಲ್ಲಿರುವ ಹೂರಣದ ಚಿತ್ರಣ ಇನ್ನಷ್ಟು ಹತ್ತಿರವಾಗದೇ ಇರದು. ಸಿನಿಮಾ ಅಂದರೆ, ಮನರಂಜನೆಗಷ್ಟೇ ಸೀಮಿತ ಎಂಬ ಮಾತು ಎಷ್ಟು ನಿಜವೋ, ಸಿನಿಮಾ ಅನ್ನೋದು ಮನಸ್ಸುಗಳ ಬೆಸುಗೆಯಾಗಿ, ಭಾವ-ಭಾಷೆಯನ್ನು ಮೀರಿ ಭಾವುಕತೆಗೂ ಮೀಸಲಾಗಬೇಕು, ಆ ಮೂಲಕ ಸಣ್ಣದ್ದೊಂದು ಆಶಾಭಾವನೆಯೂ ಮೂಡಬೇಕು ಎಂಬುದು ಅಷ್ಟೇ ಸತ್ಯ. ಇಲ್ಲಿ ಅಮ್ಮ-ಮಗನ ಬಾಂಧವ್ಯ, ವಾತ್ಸಲ್ಯ ನೋಡುಗನ ಎದೆಭಾರವಾಗಿಸುತ್ತಲೇ, ಕೆಲವೆಡೆ ಕಣ್ಣುಗಳನ್ನು ಒದ್ದೆಯಾಗಿಸಿಬಿಡುತ್ತೆ.
ಅದೇ ಇಲ್ಲಿರುವ ತಾಕತ್ತು. ಹಾಗಂತ, ಇಲ್ಲಿ ಬರೀ, ಭಾವನಾತ್ಮಕ ಸಂಬಂಧ, ಭಾವುಕತೆಯ ಆಳವಷ್ಟೇ ಇಲ್ಲ, ಮಾನವೀಯತೆ ಮೌಲ್ಯದ ಸಾರವಿದೆ. ಅಂಗೈ ಅಗಲದಷ್ಟು ಪ್ರೀತಿಯ ಬೆಸುಗೆ ತುಂಬಿದೆ, ಸ್ವಾರ್ಥ ಮನೋಭಾವವುಳ್ಳ ಮನಸ್ಸುಗಳ ವಿಲಕ್ಷಣ ನೋಟವಿದೆ, ಎಲ್ಲವನ್ನೂ ಬದಿಗೊತ್ತಿ, ನಿರೀಕ್ಷೆ ಮೀರಿ ಮಾಡುವ ಒಂದು ಕೆಲಸದಲ್ಲಿ ಬದುಕಿನ ಸಾರವಿದೆ, ಸತ್ಯದ ರುಚಿ ಇದೆ ಎಂಬುದನ್ನು ಸಂದರ್ಭದ ಸಂಗತಿಗಳ ಕ್ಷಣವನ್ನು ಮನ ಮುಟ್ಟುವಂತೆ, ಅಲ್ಲಲ್ಲಿ ಕಲಕುವಂತೆ ಮಾಡಿರುವ ಪ್ರಯತ್ನ ಸಾರ್ಥಕ.
ಮೂಲ ಚಿತ್ರ ನೋಡಿದವರಿಗೆ, ಕನ್ನಡದ ಈ “ಅಮ್ಮ’ನ ಅಪ್ಪುಗೆ ಅಷ್ಟೊಂದು ಮುದ ಅನಿಸದೇ ಹೋದರೂ, ಅಲ್ಲಲ್ಲಿ, ಕಾಡುವ ಕೆಲ ದೃಶ್ಯಗಳಿಂದಾಗಿ ಅಮ್ಮನನ್ನು ಪ್ರೀತಿಸದೇ ಇರಲಾಗದು. ಇಂತಹ ಗೌರವಕ್ಕೆ ನಿರ್ದೇಶಕರಾದಿಯಾಗಿ, ದೃಶ್ಯಗಳನ್ನು ಸೆರೆ ಹಿಡಿದ, ಅದಕ್ಕೆ ಅರ್ಥಪೂರ್ಣ ಹಿನ್ನೆಲೆ ಸಂಗೀತದ ಸ್ವಾದ ಕಟ್ಟಿಕೊಟ್ಟವರು, ತೆರೆ ಮೇಲೆ ಅಲ್ಲಲ್ಲಿ ಅಳಿಸಿ, ದುಗುಡ ತುಂಬಿಸಿ, ನಗಿಸಿದವರೂ ಪಾತ್ರರಾಗುತ್ತಾರೆ. ಚಿತ್ರದ ಮೊದಲರ್ಧದ ವೇಗಮಿತಿ ಕೊಂಚ ಕಡಿಮೆ ಎನಿಸಿದರೂ, ದ್ವಿತಿಯಾರ್ಧದ ವೇಗ ಮೊದಲರ್ಧದ ಕಾಲಮಿತಿಯನ್ನು ಸರಿದೂಗಿಸಿದೆ ಎನ್ನಬಹುದು.
ಒಂದು ರಿಮೇಕ್ ಚಿತ್ರ ಮಾಡುವುದು ಸುಲಭವೋ, ಕಷ್ಟವೋ? ಗೊತ್ತಿಲ್ಲ. ಆದರೆ, ಇಲ್ಲಿನ ಕೆಲ ಅಂಶಗಳು ಮಾತ್ರ ಸವಾಲೆನಿಸುತ್ತವೆ. ಅಂತಹ ಸವಾಲುಗಳ ನಡುವೆ ಮೂಡಿದ ಚಿತ್ರದಲ್ಲಿ ಎಳ್ಳಷ್ಟೂ ಮನರಂಜನೆ ಬಯಸುವಂತಿಲ್ಲ. ಆದರೆ, ಎದೆಭಾರಕ್ಕಂತೂ ಕೊರತೆ ಇಲ್ಲ. ಅಮ್ಮ ಮತ್ತು ಮಗ ಹೇಗಿರಬೇಕು, ಸಮಾಜದಲ್ಲಿ ಎಂತೆಂಥಾ ಜನ ಎದುರಾಗುತ್ತಾರೆ, ಎಷ್ಟೆಲ್ಲಾ ಸಮಸ್ಯೆಗಳು ಸುಳಿದಾಡುತ್ತವೆ, ಅವೆಲ್ಲವನ್ನೂ ಎದುರಿಸಿ, ತಾಯಿ ಮಮತೆ ಮತ್ತು ಮಗನ ಪ್ರೀತಿಯನ್ನು ಹೇಗೆಲ್ಲಾ ಕಾಣಬಹುದು ಎಂಬುದಕ್ಕೆ ಈ ಚಿತ್ರ ಕಣ್ಣೆದುರಿಗಿನ ಸಾಕ್ಷಿಯಾಗುತ್ತೆ.
ಇಡೀ ಚಿತ್ರ ನೋಡಿ ಹೊರಬಂದವರಿಗೆ, ಕಳೆದುಕೊಂಡ ತಾಯಿ ನೆನಪಾಗಬಹುದು, ದೂರವಿರುವ ಅಮ್ಮನ ನೆನಪು ಕಾಡಬಹುದು, ಆಸ್ತಿ-ಅಂತಸ್ತಿಗೂ ಮಿಗಿಲಾದದ್ದೂ ಇದೆ ಎಂಬ ಸತ್ಯದ ಅರಿವಾಗಬಹುದು. ಎಲ್ಲಕ್ಕಿಂತ ಹೆಚ್ಚಾಗಿ ನಂಬಿಕೆ ಮತ್ತು ದೈವ ಮನುಷ್ಯನ ಸಾರ್ವಕಾಲಿಕ ಸತ್ಯ ಎಂಬುದನ್ನೂ ತಿಳಿಯಬಹುದು. ಇಷ್ಟೆಲ್ಲಾ ಹೇಳಿದ ಮೇಲೂ “ಅಮ್ಮ ಐ ಲವ್ ಯು’ ಒಳಗಿರುವ ಸತ್ವ ಮತ್ತು ಸತ್ಯ ತಿಳಿಯಬೇಕಾದರೆ, ಒಮ್ಮೆ ಅಮ್ಮ-ಮಗನ ಒಡನಾಟ ನೋಡಿ ಎದೆಭಾರವಾಗಿಸಿಕೊಂಡು ಅವರಿಬ್ಬರೂ ಅಂತರಾಳದ ಬಾಂಧವ್ಯಕ್ಕೆ ಜೈ ಎನ್ನಬಹುದು.
ಚಿರಂಜೀವಿ ಸರ್ಜಾ ಭಿಕ್ಷುಕನಾಗಿ ಅಷ್ಟೊಂದು ಹತ್ತಿರವೆನಿಸದಿದ್ದರೂ, ಒಬ್ಬ ಕೋಟ್ಯಾಧಿಪತಿಯಾಗಿ, ಎದುರಾಳಿಗಳನ್ನು ಹಿಗ್ಗಾಮುಗ್ಗ ಥಳಿಸುವನಾಗಿ, ಸಾಮಾನ್ಯ ಹುಡುಗಿ ಹೃದಯಕ್ಕೆ ಹತ್ತಿರದವನಾಗುವುದನ್ನು ಒಪ್ಪಬಹುದು. ಅಳುವ ಮತ್ತು ಹೊಡೆದಾಡುವ ದೃಶ್ಯಕ್ಕೆ ಕೊಟ್ಟಷ್ಟು ಒತ್ತು, “ಭಿಕ್ಷೆ ಬೇಡುವ’ ದೃಶ್ಯಕ್ಕೂ ಕೊಡಬೇಕಿತ್ತು. ನಿಶ್ಚಿಕಾಗೆ ಇಲ್ಲಿ ಹೆಚ್ಚು ಕೆಲಸವಿಲ್ಲ. ಆದರೂ, ಇರುವಷ್ಟು ಸಮಯ ಗ್ಲಾಮರ್‌ಗಷ್ಟೇ ಸೀಮಿತ ಎಂಬತಾಗಿದ್ದಾರೆ. ಅಮ್ಮನಾಗಿ ಸಿತಾರಾ ಇಷ್ಟವಾದರೆ, ಪ್ರಕಾಶ್ ಬೆಳವಾಡಿ, ರವಿ ಕಾಳೆ ಗಮನಸೆಳೆಯುತ್ತಾರೆ.
ಭಿಕ್ಷುಕರಾಗಿ ಚಿಕ್ಕಣ್ಣ, ಬಿರಾದಾರ್ ಸೇರಿದಂತೆ ಇತರೆ ಕಲಾವಿದರು ನ್ಯಾಯ ಸಲ್ಲಿಸಿದ್ದಾರೆ. ಗಿರಿ ದ್ವಾರಕೀಶ್, ಸರ್ದಾರ್ ಸತ್ಯ, ತರಂಗ ವಿಶ್ವ ಇತರರು ನಿರ್ದೇಶಕರು ಕೊಟ್ಟ ಪಾತ್ರಕ್ಕೆ ಮೋಸ ಮಾಡಿಲ್ಲ. ಗುರುಕಿರಣ್ ಸಂಗೀತದ ಒಂದು ಹಾಡು ಪರವಾಗಿಲ್ಲ. ಹಿನ್ನೆಲೆ ಸಂಗೀತ ಪೂರಕವಾಗಿದೆ. ಶೇಖರ್ ಚಂದ್ರ ಛಾಯಾಗ್ರಹಣದಲ್ಲಿ ಅಮ್ಮ, ಮಗನ ಪ್ರೀತಿ, ಉಳಿದವರು ಕಂಡಂತಹ ರೀತಿ, ನೀತಿಗಳು ಅಲ್ಲಲ್ಲಿ ಖುಷಿಪಡಿಸುತ್ತವೆ.
ಚಿತ್ರ: ಅಮ್ಮ ಐ ಲವ್ ಯು
ನಿರ್ಮಾಣ: ದ್ವಾರಕೀಶ್
ನಿರ್ದೇಶನ: ಕೆ.ಎಂ.ಚೈತನ್ಯ
ತಾರಾಗಣ: ಚಿರಂಜೀವಿ ಸರ್ಜಾ, ನಿಶ್ಚಿಕಾ, ಸಿತಾರಾ, ಪ್ರಕಾಶ್ ಬೆಳವಾಡಿ, ರವಿಕಾಳೆ, ಚಿಕ್ಕಣ್ಣ, ಗಿರಿ ದ್ವಾರಕೀಶ್, ಸರ್ದಾರ್ ಸತ್ಯ, ಬಿರಾದಾರ್, ತರಂಗ ವಿಶ್ವ ಮುಂತಾದವರು
* ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.