ಮಲೇಷ್ಯದ ಕತೆ: ಸೊಳ್ಳೆ ಮತ್ತು ತಿಗಣೆ
Team Udayavani, Jun 17, 2018, 10:05 AM IST
ಒಂದು ಸಲ ಕಾಡಿನ ರಾಣಿಯ ಮಗಳಿಗೆ ಸ್ವಯಂವರ ನಡೆಯುತ್ತದೆ ಎಂದು ಸುದ್ದಿ ಕೇಳಿ ಎಲ್ಲ ಮೃಗ, ಪಕ್ಷಿಗಳೂ ಸಂತಸದಿಂದ ಕುಣಿದಾಡಿದವು. ಸುಂದರಿಯಾದ ಅವಳನ್ನು ಕೈ ಹಿಡಿಯಬೇಕೆಂದು ಕನಸು ಕಾಣುತ್ತ ಅವಳ ಮನಸ್ಸನ್ನು ಗೆಲ್ಲಲು ಏನು ಮಾಡಬೇಕೆಂದು ಚಿಂತನೆ ಆರಂಭಿಸಿದವು. ಇದನ್ನು ನೋಡಿ ಕೀಟಗಳೂ ಸುಮ್ಮನಿರಲಿಲ್ಲ. ತಾವೂ ಕಾಡಿನ ರಾಣಿಯ ಮಗಳನ್ನು ವರಿಸಲು ಒಂದು ಕೌಶಲವನ್ನು ಸಂಪಾದಿಸಿಕೊಂಡರೆ ಸ್ವಯಂವರದಲ್ಲಿ ಅವಳು ತಮ್ಮ ಕೊರಳಿಗೇ ಮಾಲೆ ಹಾಕಬಹುದೆಂದು ಎಣಿಕೆ ಹಾಕಿದವು. ಜೀರುಂಡೆ ಮೊದಲು ಈ ಪ್ರಯತ್ನವನ್ನು ಆರಂಭಿಸಿತು. ಕಾಡಿನ ಅಂಚಿನಲ್ಲಿರುವ ಬೆಟ್ಟದ ತುದಿಗೇರಿ ತಪಸ್ಸು ಮಾಡಿತು. ಒಂದು ದೇವತೆಯನ್ನು ಒಲಿಸಿಕೊಂಡಿತು. “”ಇಡೀ ಕಾಡಿನಲ್ಲೇ ಕೇಳಿಬರುವ ದೊಡ್ಡ ದನಿ ನನ್ನ ಗಂಟಲಿಗೆ ಬರಬೇಕು. ನನ್ನ ದೇಹ ಚಿಕ್ಕದಾದರೂ ಈ ಧ್ವನಿಯ ಅಬ್ಬರ ಕೇಳಿ ಕಾಡಿನ ರಾಣಿಯ ಮಗಳಿಗೆ ನಾನು ಇಷ್ಟವಾಗಬಹುದು” ಎಂದು ಕೇಳಿ ವರ ಪಡೆದುಕೊಂಡಿತು. ಆದರೆ ದೇವತೆಯ ಕೃಪೆಯಿಂದ ವರ ಸಿಕ್ಕಿದರೂ ಜೀರುಂಡೆಗೆ ಸುಖ ಸಿಗಲಿಲ್ಲ. ಅದರ ಕರ್ಕಶವಾದ ಧ್ವನಿಯಿಂದ ಎಲ್ಲ ಮೃಗ, ಪಕ್ಷಿಗಳಿಗೂ ಕಿವಿಯ ತಮ್ಮಟೆ ಒಡೆದು ಹೋಗುವ ಪರಿಸ್ಥಿತಿ ಎದುರಾಯಿತು. ಅವು ರೊಚ್ಚಿಗೆದ್ದು ಅದನ್ನು ಕಾಡು ಬಿಟ್ಟು ಓಡಿಸಿದವು. ಜೀರುಂಡೆ ಮದುವೆಯಾಗುವ ಕನಸು ತೊರೆದು ನಾಡಿಗೆ ಬಂದು ರೈತರ ಹೊಲಗಳ ಪಕ್ಕದಲ್ಲಿ ಜೀವನ ಆರಂಭಿಸಿತು. ಮಳೆಗಾಲದಲ್ಲಿ ಹೊಲದಲ್ಲಿ ದುಡಿಯುವ ರೈತರಿಗೆ ಕತ್ತಲಾಯಿತೆಂದು ತನ್ನ ಕೂಗಿನಿಂದ ಎಚ್ಚರಿಸುವ ಕೆಲಸ ಮಾಡಿತು.
ಒಂದು ಸೊಳ್ಳೆ ಮತ್ತು ತಿಗಣೆ ಕಾಡಿನಲ್ಲಿ ಜೊತೆಯಾಗಿದ್ದವು. ಅವು ಜೀರುಂಡೆಗೆ ಬಂದ ಗತಿಯನ್ನು ನೋಡಿ ದುಃಖೀ ಸಿದವು. “”ಬುದ್ಧಿವಂತನೇನೋ ನಿಜ. ಆದರೆ ಎಡವಟ್ಟು ಮಾಡಿಕೊಂಡಿತು. ತಪಸ್ಸು ಮಾಡಿ ಕಷ್ಟಪಟ್ಟು ದೇವತೆಯನ್ನು ಒಲಿಸಿಕೊಂಡರೂ ವರ ಕೇಳುವಾಗ ಯೋಚನೆ ಮಾಡಬೇಕಿತ್ತು” ಎಂದಿತು ಸೊಳ್ಳೆ. “”ಹೌದು, ಈಗ ನಮ್ಮ ಸರದಿ. ನಾವೂ ಜೊತೆಯಾಗಿ ತಪಸ್ಸು ಮಾಡಿ ದೇವತೆಯನ್ನು ಒಲಿಸಿಕೊಳ್ಳುವ. ಒಳ್ಳೆಯ ವರವನ್ನೇ ಕೇಳುವ” ಎಂದು ತಿಗಣೆ ಹುರಿದುಂಬಿಸಿತು.
” “ನಿಜ ಗೆಳೆಯ. ನಾವು ರಾಣಿಯ ಮಗಳಿಗೆ ಇಷ್ಟವಾಗುವ ಒಂದು ವಿದ್ಯೆಯನ್ನೋ ಅಥವಾ ಬೇರೆ ಏನಾದರೂ ಒಂದು ವಿಶೇಷ ವಿಷಯವನ್ನೋ ವರವಾಗಿ ಕೇಳ್ಳೋಣ, ಈಗಲೇ ನಡೆ” ಎಂದು ಸೊಳ್ಳೆ ತಿಗಣೆಯನ್ನು ಜೊತೆಗೂಡಿಕೊಂಡು ಬೆಟ್ಟದ ತುದಿಗೆ ಹೋಯಿತು. ಒಂಟಿಗಾಲಿನಲ್ಲಿ ನಿಂತು ಅವು ಬಹುಕಾಲ ದೇವತೆಯನ್ನು ತಪಸ್ಸು ಮಾಡಿದವು. ದೇವತೆ ಪ್ರತ್ಯಕ್ಷವಾಗಿ, “”ಪುಟಾಣಿಗಳೇ, ಕಣ್ಣು ತೆರೆಯಿರಿ, ನಿಮಗೆ ಬೇಕಾದ ವರ ನೀಡಲು ನಾನು ಬಂದಿದ್ದೇನೆ. ಏನು ಬೇಕಿದ್ದರೂ ಕೇಳಿಕೊಳ್ಳಿ” ಎಂದಳು. ಸೊಳ್ಳೆಯು, “”ನಮಗೆ ಕಾಡಿನ ರಾಣಿಯ ಮಗಳ ಮನಸ್ಸು ಗೆಲ್ಲಬೇಕೆಂಬ ಹಟವಿದೆ. ಅದಕ್ಕಾಗಿ ನನಗೆ ಮಧುರವಾದ ರಾಗವೊಂದನ್ನು ಹಾಡುವ ಶಕ್ತಿಯನ್ನು ದಯಪಾಲಿಸು” ಎಂದು ಬೇಡಿತು. “”ಸದಾಕಾಲ ನಿನ್ನ ಗಂಟಲಿನಿಂದ ಹಾಡು ಹೊರಹೊಮ್ಮುವಂತಾಗಲಿ” ಎಂದು ದೇವತೆ ಅದರ ಗಂಟಲನ್ನು ಸವರಿ ಹರಸಿದಳು. ತಿಗಣೆಯು, “”ನನ್ನ ಮೈಯಿಂದ ಸುಗಂಧ ಸೂಸುತ್ತಲೇ ಇರಬೇಕು” ಎಂದು ಪ್ರಾರ್ಥಿಸಿಕೊಂಡಿತು. ದೇವತೆ ತಿಗಣೆಯ ದೇಹವನ್ನು ಕೈಯಿಂದ ಪೂಸಿದಳು. “”ನೀನು ಬಯಸಿದಂತೆ ಆಗಲಿ” ಎಂದು ಹೇಳಿ ಮಾಯವಾದಳು.
“”ದೇವತೆಯ ಕೃಪೆಯಿಂದ ಒಳ್ಳೆಯ ವರಗಳನ್ನೇ ಪಡೆದಿದ್ದೇವೆ. ಇನ್ನೇನು ಕಾಡಿನ ರಾಣಿಗೆ ನಮ್ಮಲ್ಲಿ ಯಾರಾದರೊಬ್ಬರು ಅಳಿಯನಾಗುವುದು ನಿಶ್ಚಯ” ಎಂದು ತಿಗಣೆ ಸಂಭ್ರಮಪಟ್ಟಿತು. ಸೊಳ್ಳೆ ಮುಖ ಬಾಡಿಸಿತು. “”ಆದರೆ ಗೆಳೆಯಾ, ತಪಸ್ಸಿಗೆ ತೊಡಗಿದ ಕಾರಣ ಉಪವಾಸವಿದ್ದೆವು. ಎದ್ದು ನಿಲ್ಲಲೂ ಶಕ್ತಿಯಿಲ್ಲ. ಯಾವುದಾದರೂ ಪ್ರಾಣಿಗೆ ಕಚ್ಚಿ ಸ್ವಲ್ಪ ರಕ್ತ ಕುಡಿದರೆ ಸುಧಾರಿಸಿಕೊಳ್ಳಬಹುದು” ಎಂದು ಹೇಳಿತು. “”ಹೌದು, ನನಗೂ ತುಂಬ ನಿಃಶಕ್ತಿಯಾಗಿದೆ. ಅದೋ ಅಲ್ಲಿ ಒಂದು ಮುದಿ ನರಿ ಬರುತ್ತ ಇದೆ. ಹೋಗಿ ಅದರ ಮೈಯಿಂದ ಬೇಕಾದಷ್ಟು ರಕ್ತ ಕುಡಿಯೋಣ” ಎಂದು ತಿಗಣೆ ಸೊಳ್ಳೆಯೊಂದಿಗೆ ನರಿಯ ಮೈಯನ್ನೇರಿತು. ಅವು ನರಿಗೆ ಕಚ್ಚಿ ರಕ್ತ ಕುಡಿಯಲು ಪ್ರಯತ್ನಿಸಿದವು. ಆಗ ನರಿಯು, “”ಯಾಕೋ ನನ್ನ ಮೈಯನ್ನು ಕಚ್ಚುತ್ತಿದ್ದೀರಿ? ವೃದ್ಧನಾಗಿದ್ದೇನೆ. ಈ ದೇಹದಲ್ಲಿ ಎಲುಬು, ಚರ್ಮ ಬಿಟ್ಟರೆ ಬೇರೆ ಏನೂ ಇಲ್ಲ. ನೀವು ದೇವತೆಯನ್ನು ಒಲಿಸಿ ವರ ಸಂಪಾದಿಸಿದವರು. ದೊಡ್ಡ ಪ್ರಾಣಿಗಳ ರಕ್ತ ಹೀರಿ ಅವರಷ್ಟೇ ದೊಡ್ಡವರಾಗಬೇಕಲ್ಲದೆ ಸಣ್ಣವರ ರಕ್ತ ಹೀರಿ ಇನ್ನೂ ಸಣ್ಣವರಾಗಬಾರದು” ಎಂದು ನೀತಿ ಹೇಳಿತು.
“”ಹೌದು, ನರಿಯ ಮಾತು ನಿಜ’ ಎಂದು ತಿಗಣೆ ಸೊಳ್ಳೆಯೊಂದಿಗೆ ದೊಡ್ಡ ಪ್ರಾಣಿಯನ್ನು ಹುಡುಕಿಕೊಂಡು ಮುಂದೆ ಹೋಯಿತು. ಎದುರಿಗೆ ಆನೆಯೊಂದು ಬರುತ್ತಿತ್ತು. ಇದಕ್ಕಿಂತ ದೊಡ್ಡ ಪ್ರಾಣಿ ಬೇರೆ ಯಾವುದಿದೆ ಎಂದು ಯೋಚಿಸಿ ಸೊಳ್ಳೆ ಆನೆಯ ಬೆನ್ನ ಮೇಲೆ ಕುಳಿತು ರಕ್ತ ಕುಡಿಯಲು ಕೊಂಡಿಯನ್ನು ಚುಚ್ಚಲು ನೋಡಿತು. ತಿಗಣೆ ಅದರ ಕೈಯ ಮೇಲೆ ಕುಳಿತುಕೊಂಡು ಕಚ್ಚಲು ಪ್ರಯತ್ನಿಸಿತು. ಆದರೆ ಸೊಳ್ಳೆಯ ಕೊಂಡಿ ಮುರಿಯಿತು. ತಿಗಣೆಯ ಹಲ್ಲು ತುಂಡಾಯಿತು. ಅವುಗಳ ಅವಸ್ಥೆಯನ್ನು ನೋಡಿ ಆನೆ ಪಕಪಕನೆ ನಕ್ಕಿತು. “”ಬುದ್ಧಿಗೇಡಿಗಳೇ, ನೀವು ಎಷ್ಟು ಪ್ರಯತ್ನಿದರೂ ನನ್ನ ಚರ್ಮವನ್ನು ಕೊರೆಯಲು ನಿಮ್ಮಿಂದ ಆಗುವುದಿಲ್ಲ. ದೇವತೆಯ ಕೃಪೆಯ ಮೂಲಕ ಒಳ್ಳೊಳ್ಳೆಯ ವರಗಳನ್ನು ಪಡೆದಿದ್ದೀರಿ. ನಿಮಗೆ ಈಗ ಶಕ್ತಿ ಸಂಪಾದಿಸುವುದು ಮುಖ್ಯ ತಾನೆ? ಅದಕ್ಕೆ ಮೃದುವಾದ ಚರ್ಮವಿರುವ ಮನುಷ್ಯನ ಮೈಯನ್ನೇರಿದರೆ ಹೊಟ್ಟೆ ತುಂಬ ರಕ್ತ ಕುಡಿಯಬಹುದು. ಸೊಳ್ಳೆಯಲ್ಲಿ ಹಾಡುವ ಶಕ್ತಿಯಿದೆ. ತಿಗಣೆಯ ಮೈಯಿಂದ ಸುಗಂಧ ಹೊರಸೂಸುತ್ತದೆ. ಇದೆರಡೂ ಮನುಷ್ಯನಿಗೆ ಇಷ್ಟವಾಗುವುದರಿಂದ ಯಾಕೆ ತಡ ಮಾಡುತ್ತೀರಿ? ನಿಮ್ಮಲ್ಲಿರುವ ಶಕ್ತಿಯನ್ನು ಉಪಯೋಗಿಸಿ ಮನುಷ್ಯನನ್ನು ಮರುಳು ಮಾಡಿ ಕೆಲಸ ಸಾಧಿಸಿಕೊಳ್ಳಿ” ಎಂದು ಆನೆ ಊರಿನ ಕಡೆಗೆ ದಾರಿ ತೋರಿಸಿತು.
ಸೊಳ್ಳೆ ತಿಗಣೆಯ ಜೊತೆಗೆ ಊರಿನ ಹಾದಿ ಹಿಡಿಯಿತು. “”ನಾವು ಬಡವರ ರಕ್ತ ಕುಡಿಯುವುದು ಬೇಡ. ರಾಜನ ಮನೆಗೇ ಹೋಗೋಣ. ರಾಜನಿಗಾದರೆ ಸಂಗೀತದಲ್ಲಿ ಅಭಿರುಚಿ ಇರುತ್ತದೆ. ಸುಗಂಧವೂ ಇಷ್ಟವಾಗುತ್ತದೆ. ಒಳ್ಳೆಯ ಆಹಾರ ತಿಂದು ಸುಖವಾಗಿರುವ ಅವನ ರಕ್ತದಿಂದ ನಮಗೂ ಹೆಚ್ಚಿನ ಶಕ್ತಿ ಸಿಗುತ್ತದೆ” ಎಂದು ಅರಮನೆಯ ಒಳಗೆ ಹೋಯಿತು. ರಾಜ ಮೃಷ್ಟಾನ್ನ ಊಟ ಮಾಡಿ ಹಾಸಿಗೆಯಲ್ಲಿ ಮಲಗಿಕೊಂಡಿದ್ದ. ಸೊಳ್ಳೆ ಮಧುರವಾದ ರಾಗ ನುಡಿಸುತ್ತ ಅವನ ಕಿವಿಯ ಬಳಿಗೆ ಬಂದು ಕಿವಿಯನ್ನೊಮ್ಮೆ ಕಚ್ಚಿತು. ರಾಜನು ನೋವಿನಿಂದ ಬಲವಾಗಿ ಕಿವಿಯ ಮೇಲೆ ಕೈ ಬೀಸಿದನು. ಆಗ ಬಡಪಾಯಿ ಸೊಳ್ಳೆ ಅಪ್ಪಚ್ಚಿಯಾಗಿ ಸತ್ತುಹೋಯಿತು.
“‘ಅವಸರ ಮಾಡಿದರೆ ಹೀಗೆಯೇ ಆಗುವುದು. ಸೊಳ್ಳೆಯ ಸಂಗೀತ ಕೇಳುತ್ತ ರಾಜನು ನಿದ್ರೆಗೊಳಗಾಗುವ ಮೊದಲೇ ಅದು ಕಚ್ಚಬಾರದಿತ್ತು. ಈಗ ನನ್ನ ದೇಹದ ಸುಗಂಧವನ್ನು ಬೀರಿ ಅವನನ್ನು ತನ್ಮಯಗೊಳಿಸುತ್ತೇನೆ” ಎಂದು ಹಾಸಿಗೆಯ ಮೂಲೆಯಲ್ಲಿ ಮಲಗಿಕೊಂಡು ತಿಗಣೆ ತನ್ನ ದೇಹದ ಗಂಧವನ್ನು ಬೀರಿತು. ಅದರ ವಾಸನೆಯಿಂದ ರಾಜನು ಮೂಗರಳಿಸಿದ. ಸೇವಕರನ್ನು ಕರೆದ. “”ಹಾಸಿಗೆಯಿಂದ ಸಹಿಸಲಾಗದ ಯಾವುದೋ ವಾಸನೆ ಬರುತ್ತಿದೆ, ಅದು ಏನೆಂಬುದನ್ನು ಸರಿಯಾಗಿ ನೋಡಿ” ಎಂದು ಆಜಾnಪಿಸಿದ. ಸೇವಕರು ಹಾಸಿಗೆ, ಹೊದ್ದಿಕೆಗಳನ್ನು ಕೊಡವಿ ಶೋಧನೆ ಮಾಡಿದಾಗ ವಾಸನೆ ಬೀರುತ್ತಿದ್ದ ತಿಗಣೆ ಕಾಣಿಸಿತು. ಅವರು ಅದನ್ನು ಹೊಸಕಿ ಕೊಂದು ಹಾಕಿದರು. ಕಷ್ಟಪಟ್ಟು ತಪಸ್ಸು ಮಾಡಿ ವರ ಗಳಿಸಿದರೂ ಸ್ವಯಂವರದಲ್ಲಿ ಗೆಲ್ಲುವ ಅವುಗಳ ಕನಸು ನನಸಾಗಲಿಲ್ಲ. ಸ್ವಯಂವರದಲ್ಲಿ ರಾಣಿಯ ಮಗಳು ಬಲಶಾಲಿಯಾದ ಸಿಂಹರಾಜನ ಕೊರಳಿಗೆ ಮಾಲೆ ಹಾಕಿ ಅದನ್ನು ವರಿಸಿದಳು.
ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.