“ಬಾಳೆ’ಯಿಂದ ಹೊಸ ಬಾಳು
Team Udayavani, Jun 18, 2018, 4:12 PM IST
ಪೇಟೆಯಲ್ಲಿದ್ದು ದುಡಿಯುತ್ತಿದ್ದರೂ ಹುಟ್ಟೂರಿನಲ್ಲಿ ಏನಾದರೂ ಕೃಷಿ ಮಾಡಬೇಕೆಂಬ ಹಂಬಲ ನಾರಾಯಣ ಹೆಗಡೆಯವರನ್ನು ಕಾಡುತ್ತಲೇ ಇತ್ತು. ನಾಲ್ಕಾರು ಮಂದಿಯ ಸಲಹೆ ಪಡೆದು, ತಂದೆ ಬಿಟ್ಟು ಹೋಗಿರುವ ಜಮೀನಿನಲ್ಲಿ ಬಾಳೆ ಬೆಳೆಯಲು ನಿರ್ಧರಿಸಿದರು.
ಒಂದು ಕಾಲದಲ್ಲಿ ಅಪ್ಪ ತೋಟ ಮಾಡಬೇಕು ಎಂದು ಬಯಸಿದ್ದ ಸ್ಥಳ ಅದಾಗಿತ್ತು. ಅಪ್ಪನ ಅಗಲಿಕೆಯ ನಂತರವೂ ಅಲ್ಲಿ ಜಾಗ ಖಾಲಿ ಇತ್ತು. ಅಲ್ಲೊಂದು ಇಲ್ಲೊಂದು ತೆಂಗಿನ ಮರಗಳು, ಒಂದು ನೀರಿನ ಟ್ಯಾಂಕಿ ಬಿಟ್ಟರೆ ಇನ್ನೇನೂ ಇರಲಿಲ್ಲ. ಕುರುಚಲು ಗಿಡಗಳು, ಮಣ್ಣಿನ ದಿನ್ನೆಗಳು, ಬೇಲಿಯೂ ಇರದ ತೋಟವಾಗಿತ್ತದು. ಇದ್ದ ಒಬ್ಬ ಮಗ ಬೆಂಗಳೂರು ಸೇರಿಯಾಗಿತ್ತು.
ಆದರೆ, ಯಾವತ್ತು ಯೋಗ ಗುರು ಬಾಬಾ ರಾಮದೇವ ಅವರು ಕಟ್ಟಿದ ಪತಂಜಲಿ ಕಂಪನಿಯಲ್ಲಿ ನೌಕರಿಗೆ ಸೇರಿಕೊಂಡರೋ ಅಲ್ಲಿಗೆ ಇವರ ಬದುಕಿಗೂ ಹೊಸ ತಿರುವು ನೀಡಿತ್ತು. ರಾಮದೇವ್ ಅವರು ಪತಂಜಲಿ ಸಂಸ್ಥೆಯನ್ನು ಕಟ್ಟಿದ ರೀತಿ, ಅವರ ಸ್ವದೇಶಿ ಅಭಿಮಾನ ಇವರಲ್ಲೂ ಮೂಲ ನೆಲೆಯ ಸಂವೇದನೆ ಜಾಗೃತಗೊಳ್ಳಲು ಕಾರಣವಾಯಿತು. ನಾವೂ ಏನಾದರೂ ಸಾಧನೆ ಮಾಡಬೇಕು ಅನ್ನಿಸಿತು. ಆಗ ಅಪ್ಪನ ಖಾಲಿ ಜಾಗವೂ ನೆನಪಾಯಿತು. ಊರಿಗೆ ಬಂದು ಆ ಜಾಗ ನೋಡಿದರೆ ಯಥಾ ಪ್ರಕಾರ ಕುರುಚಲು ಗಿಡಗಳು ನಕ್ಕವು. ಮನೆಯ ಸಮೀಪವೇ ಇರುವ ಮೂರೂಕಾಲು ಎಕರೆ ಭೂಮಿಯಲ್ಲಿ ಏನಾದರೂ ಕೃಷಿ ಮಾಡಬೇಕು ಎಂದು ಮನಸ್ಸು ಹಂಬಲಿಸಿತು.
ಗೆಳೆಯ ಸುಬ್ರಹ್ಮಣ್ಯ ಹೆಗಡೆ ಗುಳೇಬಯಲು, ಜಿ.ವಿ.ಹೆಗಡೆ ಮುಂಡಗೆರೆ ಅವರ ಸಹಕಾರ ಕೇಳಿದರು. ಶಿರಸಿಯ ತೋಟಗಾರಿಕಾ ಇಲಾಖೆಗೂ ಹೋಗಿ ಮಾಹಿತಿ ಪಡೆದರು. ಬನವಾಸಿಯಿಂದ ಜಿ9 ಟಿಶ್ಯು ಬಾಳೆ ಸಸಿಯನ್ನೂ ತಂದರು. ಅದಕ್ಕೂ ಮೊದಲು ಇಲ್ಲಿನ ಭೂಮಿಯನ್ನು ಸ್ವತ್ಛಗೊಳಿಸಿ, ಇರುವ ಮರಗಳನ್ನು ಹಾಗೆ ಬಿಟ್ಟು 3 ಅಡಿ ಅಗಲದ ಕಾಲುವೆ ತೋಡಿಸಿದರು. ದಡ್ಡಿ ಗೊಬ್ಬರ, ಕೋಳಿ ಗೊಬ್ಬರ ಹಾಕಿ ಭೂಮಿ ಹದಗೊಳಿಸಿ ಸಸಿಯ ನಾಟಿಗೆ ಸಿದ್ಧಗೊಳಿಸಿಕೊಂಡರು. 12 ಅಡಿ ಅಗಲ 9 ಅಡಿ ಉದ್ದದ ಅಂತರದಲ್ಲಿ ಒಂದಕ್ಕೆ 12ರೂ.ಕೊಟ್ಟು ತಂದ 2000 ಬಾಳೆ ಸಸಿಗಳನ್ನು ನಾಟಿ ಮಾಡಿದರು. ನಡುವೆ 1200 ಅಡಿಕೆ ಸಸಿ ಕೂಡ ಹಾಕಿದರು. ಬೋರ್ ವೆಲ್ ತೋಡಿಸಿ ಮೈಕ್ರೋ ಜೆಟ್ ಕೂಡ ಅಳವಡಿಸಿದರು.
ಭೂಮಿ ಇದ್ದದ್ದು ಇಳಿಜಾರು ಪ್ರದೇಶ ಆಗಿದ್ದರಿಂದ ಇಲ್ಲಿ ಬಾಳೆ ಕೃಷಿ ಮಾಡಲು ಸಾಧ್ಯವಿಲ್ಲ ಎಂದು ಕೆಲವರು ಹೇಳಿದ್ದರು. ಈಗ ಅವರೆಲ್ಲಾ ಹುಬ್ಬೇರಿಸುವಂತಾಗಿದೆ. ಏಕೆಂದರೆ, ಕೇವಲ 8 ತಿಂಗಳಿಗೆ ಫಸಲು ಕಚ್ಚಿದೆ.
ಈ ಸಾಧನೆ ಮಾಡಿದ್ದು ಶಿರಸಿ ತಾಲೂಕಿನ ಸಾಲಕಣಿ ಪಂಚಾಯ್ತಿ ವ್ಯಾಪ್ತಿಯ ಮಣ್ಣೀಮನೆಯ ಗಣೇಶ ನಾರಾಯಣ ಹೆಗಡೆ. ಓದಿದ್ದು ಬಿ.ಎ. ಕೆಲಸ ಮಾಡುವದು ಬೆಂಗಳೂರಿನ ಪತಂಜಲಿ ಕಂಪೆನಿಯಲ್ಲಿ ಪ್ರಾದೇಶಿಕ ಮಾರುಕಟ್ಟೆ ವ್ಯವಸ್ಥಾಪಕ ಹುದ್ದೆಯಲ್ಲಿ ಕೆಲಸ ಮಾಡುತ್ತಾರೆ. ಹದಿನೈದು ದಿನಕ್ಕೊಮ್ಮೆ ಶನಿವಾರ ರವಿವಾರ ಊರಿಗೆ ಬಂದು ತೋಟ ನೋಡಿಕೊಳ್ಳುತ್ತಾರೆ. ಇಲ್ಲಿ ನಿರಂತರವಾಗಿ ಕೆಲಸ ಮಾಡಲು ರವಿ ಮುಕ್ರಿ ಹಾಗೂ ಅನಿತಾ ಮುಕ್ರಿ ಜೊತೆಯಾಗಿದ್ದಾರೆ. ಕಾಲ ಕಾಲಕ್ಕೆ ರೋಗಕ್ಕೆ ಔಷಧ ಹಾಕುತ್ತ, ಯೂರಿಯಾ ಡೆಎಪಿ, ಎಂಒಪಿ ರಾಸಾಯನಿಕ ಗೊಬ್ಬರ ಕೊಡುತ್ತ, ಕೋಳಿ ಗೊಬ್ಬರವನ್ನೂ ಕೊಟ್ಟು ಬೆಳಸುತ್ತಿದ್ದಾರೆ. ಈಗಾಗಲೇ ಈ ತೋಟಕ್ಕೆ ಸುಮಾರು 10 ಲಕ್ಷ ರೂ. ಖರ್ಚು ಬಂದಿದ್ದು, ಪ್ರತಿ ಗೊನೆಗಳೂ 50ರಿಂದ 60 ಕೇಜಿ ತೂಗುವ ಲಕ್ಷಣಗಳಿವೆ.
ಈಗ ಮಾರುಕಟ್ಟೆಯಲ್ಲಿ 11ರಿಂದ 12 ರೂ. ಅಂದು ಕೊಂಡರೂ ಕೋಯ್ಲಿಗೆ 6 ಲಕ್ಷ ರೂ. ಬಾಳೆ ದರ ಏರಿದರೆ ಲಾಭ. ಇದರ ನಡುವೆ ಅರ್ಧ ಎಕರೆ ಕಬ್ಬು ಕೂಡ ಬೆಳೆಸುತ್ತಿದ್ದೇನೆ ಎನ್ನುತ್ತಾರೆ ಗಣೇಶ.
ಆರಂಭದ ದಿನಗಳಲ್ಲಿ ಬೆಂಗಳೂರಿನಿಂದ ಬಂದು ಕೃಷಿ ಮಾಡಿ ವಾಪಸ್ 450 ಕಿಮಿ ಪ್ರಯಾಣ ಮಾಡುವುದು ಸಾಧ್ಯನಾ ಎಂಬ ಪ್ರಶ್ನೆ ಇತ್ತು. ಆದರೆ, ಅಷ್ಟು ದೂರದಿಂದ ಬಂದು ಹೋದರೂ ತೋಟ ನೋಡಿದರೆ ಮನಸ್ಸು ನಿರಾಳ ಆಗುತ್ತದೆ ಎನ್ನುತ್ತಾರೆ. ಊರಲ್ಲೇ ಇದ್ದು ಸಾಧನೆ ಮಾಡಲಾಗದ ಅನೇಕರಿಗೆ ದೂರದಿಂದ ಬಂದು ಗಣೇಶ ಮಾಡಿದ ಸಾಧನೆ ಬೆರಗು ತರುತ್ತಿದೆ. ಪೇಟೆಯಲ್ಲಿ ನೌಕರಿ ಮಾಡುತ್ತಲೂ ಹಳ್ಳಿಯತ್ತ ಮುಖ ಮಾಡಲು ಸಾಧ್ಯ ಎಂಬುದಕ್ಕೆ ಇವರೊಂದು ಉದಾಹರಣೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shivamogga: ಖ್ಯಾತ ಫೋಟೋ ಜರ್ನಲಿಸ್ಟ್ ಗೆ ಹೃದಯಾಘಾತ, ನಿಧನ
ಕೌನ್ ಬನೇಗಾ ಕರೋಡ್ ಪತಿ: 50 ಲಕ್ಷ ರೂ.ಗೆದ್ದ ಬಾಗಲಕೋಟೆಯ ರಮಜಾನ್
MUDA: ಮಗಳ-ಅಳಿಯಗೆ ಮುಡಾ ಸೈಟ್: ಜಿ.ಟಿ.ದೇವೇಗೌಡ ವಿರುದ್ದ ಲೋಕಾಯುಕ್ತಗೆ ದೂರು
CLP Meeting: ನಾಳೆ ಶಾಸಕಾಂಗ ಪಕ್ಷದ ಸಭೆ: ಗರಿಗೆದರಿದ ಕುತೂಹಲ
BBK11: ಮಾತನ್ನೇ ಬಂಡವಾಳ ಆಗಿಸಿಕೊಂಡಿದ್ದ ಪ್ರಬಲ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.