ರೈತ ಸಂಘ ಜಿಲ್ಲಾ ಸಮಿತಿ ಕಚೇರಿ ಉದ್ಘಾಟನೆ
Team Udayavani, Jun 19, 2018, 1:38 PM IST
ಪುತ್ತೂರು: ರಾಜ್ಯದ ಎಲ್ಲ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಸರಕಾರವನ್ನು ಕೇಳಿಕೊಂಡಿದ್ದೇವೆ. ಸಮನ್ವಯ ಸಮಿತಿ ಒಪ್ಪಿಗೆ ಪಡೆದು ಜುಲೈ ಮೊದಲ ವಾರದಲ್ಲಿ ನಡೆಯುವ ಬಜೆಟ್‌ನಲ್ಲಿ ರೈತರ ಸಾಧ್ಯವಾದಷ್ಟು ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ ಎಂದು ರೈತ ಸಂಘ ಹಾಗೂ ಹಸಿರುಸೇನೆ ರಾಜಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ನಗರದ ಮಹಮ್ಮಾಯಿ ದೇವಸ್ಥಾನ ರಸ್ತೆಯ ಎಸ್‌ಕೆಎಸಿಎಂಎಸ್ ಕಟ್ಟಡದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದ.ಕ. ಜಿಲ್ಲಾ ಸಮಿತಿಯ ನೂತನ ಕಚೇರಿಯನ್ನು ಸೋಮವಾರ ಅವರು ಉದ್ಘಾಟಿಸಿದರು. ರಾಜ್ಯದ ರೈತರ ಎಲ್ಲ ಸಾಲಗಳನ್ನು ಮನ್ನಾ ಮಾಡಲು ಸರಕಾರಕ್ಕೆ 1.15 ಲಕ್ಷ ಕೋಟಿ ರೂ. ಅಗತ್ಯವಿದೆ. ಇಷ್ಟು ದೊಡ್ಡ ಮೊತ್ತವನ್ನು ಒಂದೇ ಬಾರಿಗೆ ನೀಡಲು ಸರಕಾರಕ್ಕೆ ಹೊರೆಯಾಗುವುದರಿಂದ ಅರ್ಧದಷ್ಟು ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಸಾಲ ಮನ್ನಾಕ್ಕೆ 2009 ಕಟ್‌ಆಫ್ ತೆಗೆದುಬಿಡುವಂತೆ, ಅಭಿವೃದ್ಧಿ ಸಾಲ ಮನ್ನಾ ಮಾಡುವಂತೆ, ಸಣ್ಣ ರೈತ, ದೊಡ್ಡ ರೈತ ಎಂದು ವಿಭಾಗ ಮಾಡದೆ ಎಲ್ಲರಿಗೂ ಸೌಲಭ್ಯ ಕೊಡುವಂತೆ ಕೇಳಿಕೊಂಡಿದ್ದೇವೆ ಎಂದು ಹೇಳಿದರು.
ಮೋದಿಗೆ ರೈತರ ವಿರೋಧದ ಎಚ್ಚರಿಕೆ
ದೇಶದಲ್ಲಿ ಸ್ವಾತಂತ್ರ್ಯ ನಂತರ 70 ವರ್ಷಗಳಲ್ಲಿ ಕೃಷಿ ಹಾಗೂ ಕೃಷಿಕರನ್ನು ಕಡೆಗಣಿಸಲಾಗಿದೆ. ಕೃಷಿ ಉತ್ಪನ್ನಗಳಿಗೆ
ಯೋಗ್ಯ ಬೆಲೆ ನೀಡುವ ನಿಟ್ಟಿನಲ್ಲಿ ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸುವುದಾಗಿ ಬಿಜೆಪಿಯ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿ, ನರೇಂದ್ರ ಮೋದಿ ಪ್ರಚಾರ ನಡೆಸಿದ್ದರು. ಅದಿನ್ನೂ ಜಾರಿಗೊಳಿಸಿಲ್ಲ. ರೈತರ ಬಗ್ಗೆ ಗಮನ ಹರಿಸದ ಮೋದಿಯವರು ರೈತರ ವಿರೋಧ ಎದುರಿಸಬೇಕಾಗುತ್ತದೆ. ಹಾಗೆಂದು ಕುಮಾರಸ್ವಾಮಿ ನಮ್ಮ ಚಿಕ್ಕಪ್ಪನ ಮಗ ಅಲ್ಲ. ರೈತರ ಬೆಳೆಗಳಿಗೆ ಯೋಗ್ಯ ಬೆಲೆಗಾಗಿ ಯಾರ ವಿರುದ್ಧವೂ ನಾವು ಹೋರಾಟ ನಡೆಸುತ್ತೇವೆ ಎಂದರು.
ಗೌರವಾರ್ಪಣೆ
ಸಂಘದ ಹಿರಿಯ ಸದಸ್ಯರಾದ ಸ್ವಾತಂತ್ರ್ಯ ಹೋರಾಟಗಾರ ಇಬ್ರಾಹಿಂ ಮತ್ತು ಕೃಷಿಕ, ಹಿರಿಯ ಪತ್ರಕರ್ತ ಪುರಂದರ ಶೆಟ್ಟಿ ಅವರನ್ನು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸಮ್ಮಾನಿಸಿ ಗೌರವಿಸಿದರು.
ನೋಟ್ ಬ್ಯಾನ್ ಬಳಿಕದಲ್ಲಿ ಅಡಿಕೆಗೆ 280 ರೂ.ನಿಂದ 210ಕ್ಕೆ ಇಳಿಕೆ, ಆಮದು ಶುಲ್ಕ ಏರಿಸಿದರೂ ಕುಸಿತದಲ್ಲಿರುವ ಕಾಳುಮೆಣಸಿನ ದರ, ಅಡಿಕೆ ಬೆಲೆಯ ಮೇಲಿನ ತೂಗುಗತ್ತಿ, ಅಡಿಕೆಯನ್ನು ವಾಣಿಜ್ಯ ಬೆಳೆ ಎಂದು ಪರಿಗಣಿಸಬೇಕು, ಸಾಲ ಮನ್ನಾದಲ್ಲಿ ತಾರತಮ್ಯ, ರೈತರ ಮೇಲಿನ ಸುಳ್ಳು ಕೇಸು ಹಿಂಪಡೆಯಬೇಕು, ಕುಮ್ಕಿ ಹಕ್ಕು ನೀಡಬೇಕು, ಯಶಸ್ವಿನಿ ಯೋಜನೆಯ ಗೊಂದಲ ಬಗೆಹರಿಸಬೇಕು ಮೊದಲಾದ ವಿಚಾರಗಳ ಕುರಿತು ಚರ್ಚೆ ನಡೆಯಿತು.
ರೈತ ಸಂಘದ ದ.ಕ. ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ, ಜಿಲ್ಲಾ ಮುಖಂಡರಾದ ಧನಕೀರ್ತಿ ಬಲಿಪ, ಗುಂಡ್ಯಡ್ಕ ವೆಂಕಟ್ರಮಣ ಭಟ್ ಉಪಸ್ಥಿತರಿದ್ದರು. ರೈತ ಸಂಘದ ರಾಜ್ಯ ಕಾರ್ಯದರ್ಶಿ ಸಿ. ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಕಾರ್ಯಕ್ರಮ ನಿರ್ವಹಿಸಿದರು. ರೈತ ಸಂಘದ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ವಿಚಾರಗೋಷ್ಠಿ
ಕೃಷಿ ಸವಾಲುಗಳು ಮತ್ತು ಪರಿಹಾರ ಮಾರ್ಗದ ಕುರಿತು ರೈತರು, ಮುಖಂಡರು ಹಾಗೂ ರೈತರ ಸಂಬಂಧಿ ಇಲಾಖೆಗಳ ಅಧಿಕಾರಿಗಳ ವಿಚಾರಗೋಷ್ಠಿ ನಡೆಯಿತು. ಕೃಷಿ ಇಲಾಖೆಯ ಅಧಿಕಾರಿ ಪದ್ಮನಾಭ ರೈ, ಸಹಕಾರಿ ಸಂಘಗಳ ಪುತ್ತೂರು ವಿಭಾಗದ ಸಹಾಯಕ ಉಪನಿಬಂಧಕ ಗೋಪಾಲಯ್ಯ, ಸಹಾಯಕ ಹಿರಿಯ ತೋಟಗಾರಿಕಾ ನಿರ್ದೇಶಕಿ ರೇಖಾ ಬಿ.ಎಸ್. ಇಲಾಖೆಯ ಸೌಲಭ್ಯಗಳ ಕುರಿತು ತಿಳಿಸಿ, ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.