2 ವರ್ಷದಲ್ಲಿ 25 ಸಾವಿರ ಶಿಕ್ಷಕರ ನೇಮಕ
Team Udayavani, Jun 20, 2018, 6:00 AM IST
ಬೆಂಗಳೂರು: ಹತ್ತು ಸಾವಿರ ಪದವೀಧರ ಶಿಕ್ಷಕರು ಸೇರಿದಂತೆ ಎರಡು ವರ್ಷದಲ್ಲಿ 25 ಸಾವಿರ ಶಿಕ್ಷಕರನ್ನು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಘೋಷಿಸಿದರು. ನಗರದ ಸರ್ವಶಿಕ್ಷಾ ಅಭಿಯಾನದ ಕಚೇರಿಯಲ್ಲಿ ಮಂಗಳವಾರ ಹತ್ತು ಸಾವಿರ ಪದವೀಧರ ಶಿಕ್ಷಕರ ಹುದ್ದೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶ ಪ್ರಕಟಿಸಿ ಅವರು ಮಾತನಾಡಿದರು. ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್ http://www.schooleducation.kar.nic.in ನಲ್ಲಿ ಬಿಡುಗಡೆ ಮಾಡಲಾಗಿದೆ. ಜಿಲ್ಲಾ ಉಪನಿರ್ದೇಶಕರ ಮೂಲಕ ಕೌನ್ಸೆಲಿಂಗ್ ನಡೆಯಲಿದ್ದು, ಒಂದು ತಿಂಗಳೊಳಗೆ ನೇಮಕಾತಿ ಪೂರ್ಣಗೊಳ್ಳಲಿದೆ ಎಂದರು.
ಹತ್ತು ಸಾವಿರ ಪದವೀಧರ ಶಿಕ್ಷಕರು ಸೇರಿ ಇನ್ನೂ 15 ಸಾವಿರ ಶಿಕ್ಷಕರ ಹುದ್ದೆಯನ್ನು ಎರಡು ವರ್ಷದಲ್ಲಿ ಭರ್ತಿ ಮಾಡಿಕೊಳ್ಳಲಿದ್ದೇವೆ. ಪ್ರತಿ ವರ್ಷ 4 ಸಾವಿರ ಶಿಕ್ಷಕರ ಭರ್ತಿಗೆ ಅವಕಾಶ ಇದೆ. ಸದ್ಯ ಪ್ರಾಥಮಿಕ ಶಾಲೆಯಲ್ಲಿ 12,501 ಹುದ್ದೆ ಖಾಲಿ ಇದೆ. ಹತ್ತು ಸಾವಿರ ಪದವೀಧರ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗುವವರೆಗೂ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಪ್ರೌಢಶಾಲೆಯಲ್ಲಿ 3,100 ಹುದ್ದೆಗಳು ಖಾಲಿ ಇವೆ. ಪದವೀಧರ ಶಿಕ್ಷಕರ ಹುದ್ದೆ ಹೊರತುಪಡಿಸಿ ಖಾಲಿ ಇರುವ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಿಕೊಳ್ಳಲಾಗುತ್ತದೆ. ಅಲ್ಲಿಯವರೆಗೂ ಅತಿಥಿ ಶಿಕ್ಷಕರ ನೇಮಕಾತಿ ನಡೆಯಲಿದೆ ಎಂದರು.
ಜೂ.23 ರಿಂದ 30ರ ವರೆಗೆ ಮೂಲ ದಾಖಲೆಗಳ ಪರಿಶೀಲನೆ: ಹತ್ತು ಸಾವಿರ ಪದವೀಧರ ಶಿಕ್ಷಕರ ನೇಮಕಕ್ಕೆ 4 ಹಂತದಲ್ಲಿ
ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಹೈದರಾಬಾದ್ ಕರ್ನಾಟಕದ 12,077 ಹಾಗೂ ಇತರೆ ಜಿಲ್ಲೆಯ 38,556 ಅಭ್ಯರ್ಥಿಗಳು ಸೇರಿ 50,633 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಜಿಲ್ಲಾ ಉಪನಿರ್ದೇಶಕರು ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಪದವೀಧರ ಶಿಕ್ಷಕರ ಅರ್ಹತಾ ಪಟ್ಟಿಯನ್ನು 1:2 ಅನುಪಾತದಲ್ಲಿ ಪ್ರಕಟಿಸಲಾಗಿದೆ. ಜೂ.23ರಿಂದ
30ರ ವರೆಗೆ ಡಿಡಿಪಿಐ ಕಚೇರಿಯಲ್ಲಿ ಅಭ್ಯರ್ಥಿಗಳ ಅಂಕಪಟ್ಟಿ ಹಾಗೂ ಮೂಲ ದಾಖಲೆಗಳ ಪರಿಶೀಲನೆ ನಡೆಯಲಿದೆ. ಅಭ್ಯರ್ಥಿಗಳಿಂದ ಆಕ್ಷೇಪಣೆಗಳನ್ನು ಪಡೆದು, ಅಗತ್ಯ ತಿದ್ದುಪಡಿ ಇದ್ದರೆ ಜುಲೈ 7ರೊಳಗೆ ಕೇಂದ್ರೀಕೃತ ದಾಖಲಾತಿ ಘಟಕಕ್ಕೆ(ಸಿಎಸಿ) ಸಲ್ಲಿಸಲಾಗುತ್ತದೆ
ಎಂಬ ಮಾಹಿತಿ ನೀಡಿದರು.
1:1 ಅನುಪಾತದ ತಾತ್ಕಾಲಿಕ ಪಟ್ಟಿಯನ್ನು ಜುಲೈ 13ರಂದು ಪ್ರಕಟಿಸಲಾಗುತ್ತದೆ. ಜುಲೈ 23ರವರೆಗೂ ತಾತ್ಕಾಲಿಕ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇರುತ್ತದೆ. ಜುಲೈ 29ರಂದು 1:1 ಅನುಪಾತದ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ. ಆಗಸ್ಟ್ 8ರವರೆಗೆ ಡಿಡಿಪಿಐಗಳು ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸಲಿದ್ದಾರೆ. ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೂ ಕೌನ್ಸೆಲಿಂಗ್ ಮೂಲಕ ಆಯಾ ಜಿಲ್ಲಾ ಉಪನಿರ್ದೇಶಕರ ಕಚೇರಿಯಿಂದ ಕೌನ್ಸೆಲಿಂಗ್ ದಿನವೇ ನೇಮಕಾತಿ ಆದೇಶ ನೀಡಲಾಗುತ್ತದೆ ಎಂದರು.
ನೇಮಕಾತಿ ಆದೇಶ ಪಡೆದ ಸಾಮಾನ್ಯ ವರ್ಗದ ಅಭ್ಯರ್ಥಿಗಳು 15 ದಿನದೊಳಗೆ ಸಂಬಂಧಪಟ್ಟ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು. ಪರಿಶಿಷ್ಟ ಜಾತಿ, ಪಂಗಡ ಹಾಗೂ ಒಬಿಸಿ ಮೀಸಲಾತಿಯಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಾತ್ಕಾಲಿಕ ಸ್ಥಳ ನಿಯೋಜನೆ ಮಾಡಲಾಗುತ್ತದೆ. ಸಿಂಧುತ್ವ ಪ್ರಮಾಣ ಪತ್ರವು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ಬಂದ ನಂತರ ನೇಮಕಾತಿ ಆದೇಶ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಎಂ.ಟಿ.ರೇಜು, ಪ್ರಾಥಮಿಕ ಶಿಕ್ಷಣ ಲಾಖೆಯ ನಿರ್ದೇಶಕ ಬಸವರಾಜು, ಪಿಯು ಇಲಾಖೆ ನಿರ್ದೇಶಕಿ ಸಿ.ಶಿಖಾ ಉಪಸ್ಥಿತರಿದ್ದರು.
ಅಭ್ಯರ್ಥಿಗಳ ಆಕ್ರೋಶ
ಹತ್ತು ಸಾವಿರ ಪದವೀಧರ ಶಿಕ್ಷಕರ ಪಟ್ಟಿಯನ್ನು ಸಚಿವರು ಘೋಷಣೆ ಮಾಡಿದ ನಂತರವೂ ಇಲಾಖೆ ತನ್ನ ವೆಬ್ ಸೈಟ್‌ನಲ್ಲಿ ಪ್ರಕಟಿಸಿಲ್ಲ. ಇದರಿಂದ ಬೇಸರಗೊಂಡಿರುವ ಅರ್ಹ ಅಭ್ಯರ್ಥಿಗಳು ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಬೆಳಗ್ಗೆ 11.45ರ ಸುಮಾರಿಗೆ ಸಚಿವರು ಫಲಿತಾಂಶ ಪ್ರಕಟಿಸಿದ್ದಾರೆ. ಆದರೆ, ಇಲಾಖೆಯ ವೆಬ್‌ಸೈಟ್ ಅಥವಾ ಕೇಂದ್ರೀಕೃತ ದಾಖಲಾತಿ ಘಟಕದ ವೆಬ್ ಸೈಟ್‌ನಲ್ಲಿ ಈ ಸಂಬಂಧ ಯಾವುದೇ ಲಿಂಕ್ ಹಾಕಿರಲಿಲ್ಲ. ಇದು ಅರ್ಹ ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಖಾಸಗಿ ಪಿಯು ಕಾಲೇಜಿಗೆ ಅನುಮತಿ ನೀಡಿಲ್ಲ
ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಯಾವುದೇ ಖಾಸಗಿ ಪದವಿ ಪೂರ್ವ ಕಾಲೇಜಿಗೆ ಅನುಮತಿ ನೀಡಿಲ್ಲ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಹೊಸ ಖಾಸಗಿ ಪಿಯು ಕಾಲೇಜಿಗೆ ಅನುಮತಿ ನೀಡಲಾಗಿದೆ ಎಂಬ ದೂರಿನ ಸಂಬಂಧ ಸೂಕ್ತ ತನಿಖೆ ನಡೆಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಖಾಸಗಿ ಪಿಯು ಕಾಲೇಜಿಗೆ ಅನುಮತಿ ನೀಡುವ ಪೂರ್ಣ ಅಧಿಕಾರವನ್ನು ಪದವಿ ಪೂರ್ವ ಇಲಾಖೆಯ ನಿರ್ದೇಶಕರಿಗೆ ವಹಿಸುವ ಬಗ್ಗೆ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲಿದ್ದೇವೆ. ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಪಿಯು ಕಾಲೇಜು ತೆರೆಯಲು ಪ್ರಸ್ತಾವನೆ ಬಂದಿದೆ. ಯಾವುದಕ್ಕೂ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಶಿಕ್ಷಕರ ವರ್ಗಾವಣೆ ವಾರದೊಳಗೆ ಪುನಾರಂಭ
ಬೆಂಗಳೂರು: ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ರಾಜ್ಯ ಹೈಕೋರ್ಟ್ ನೀಡಿರುವ ಮಧ್ಯಂತರ ತಡೆಯಾಜ್ಞೆ ತೆರವಿಗೆ ಬೇಕಾದ ಕ್ರಮ ತೆಗೆದುಕೊಳ್ಳಲಾಗಿದ್ದು, ವಾರದೊಳಗೆ ವರ್ಗಾವಣೆ ಪ್ರಕ್ರಿಯೆಯನ್ನು ಪುನರ್ ಆರಂಭಿಸಲಿದ್ದೇವೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣಾ ನೀತಿ ಸಂಹಿತೆಯಿಂದ ವಿಳಂಬವಾಗಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಪುನರ್ ಆರಂಭಿಸುವ ಕೆಲಸಕ್ಕೆ ಚಾಲನೆ ಸಿಕ್ಕಿದೆ. ಈ ಮಧ್ಯೆ, ಹೈಕೋರ್ಟ್ ಮಧ್ಯಂತರ ತಡೆ ನೀಡಿರುವುದರಿಂದ ತಾತ್ಕಾಲಿಕವಾಗಿ ಮತ್ತೆ ಸ್ಥಗಿತಗೊಂಡಿದೆ. ವೇಳಾಪಟ್ಟಿ ಸೇರಿದಂತೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ವಾರದೊಳಗೆ ತಡೆಯಾಜ್ಞೆ ತೆರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಎಂ.ಟಿ.ರೇಜು ಮಾತನಾಡಿ, ವರ್ಗಾವಣೆ ಮಾರ್ಗಸೂಚಿ ಕಾನೂನು ಬಾಹಿರವಾಗಿದೆ ಮತ್ತು ನಗರ ಪ್ರದೇಶದ ದಂಪತಿ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆ ಸರಿಯಲ್ಲ ಎಂದು ಕೋರಿ ಕೆಲವು ಶಿಕ್ಷಕರು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ವರ್ಗಾವಣೆ ಮಾರ್ಗಸೂಚಿ ಮತ್ತು ಕಡ್ಡಾಯ ವರ್ಗಾವಣೆ ಶೇ.5ರಷ್ಟು ಎಂಬುದನ್ನು ಸ್ಪಷ್ಟಪಡಿಸಿದ್ದೆವು. ಆಗ ಕೆಎಟಿ, ಅರ್ಜಿ ವಜಾ ಮಾಡಿತ್ತು. ಇದನ್ನೇ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ಸದ್ಯ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಹೈಕೋರ್ಟ್‌ಗೂ ಸೂಕ್ತ ಮಾಹಿತಿ ನೀಡಲಿದ್ದೇವೆ ಎಂದು ಹೇಳಿದರು.
ಅವ್ಯವಹಾರ ನಡೆದಿಲ್ಲ: ಸಚಿವರ ಸ್ಪಷ್ಟನೆ
ಸರ್ವಶಿಕ್ಷಾ ಅಭಿಯಾನದಿಂದ ಶಾಲಾ ಮಕ್ಕಳಿಗೆ ನೀಡುವ ಸಮವಸ್ತ್ರದ ಟೆಂಡರ್ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಹಿಂದಿನ ಸರ್ಕಾರದ ನಿರ್ಧಾರದಂತೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 20 ಕೋಟಿ ರೂ.ಗೂ ಅಧಿಕ ಹಣ ಉಳಿತಾಯವಾಗಲಿದೆ. ಸಮವಸ್ತ್ರ ಖರೀದಿಯಲ್ಲಿ ಅವ್ಯವಹಾರ ಆಗಿಲ್ಲ. ಟೆಂಡರ್ ಪ್ರಕ್ರಿಯೆ ಆನ್‌ಲೈನ್‌ನಲ್ಲಿ ಪಾರದರ್ಶಕವಾಗಿ ನಡೆಯುತ್ತಿದೆ ಎಂದು ಸಚಿವ ಎನ್.ಮಹೇಶ್ ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫಲ: ವಿಜಯೇಂದ್ರ ಮೇಲೂ ಪರಿಣಾಮ?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.