ಪ್ಲಾಸ್ಟಿಕ್ ನಿಷೇಧ ಆದೇಶ ಜಾರಿಗೆ ತನ್ನಿ
Team Udayavani, Jun 21, 2018, 3:59 PM IST
ಬೀದರ: ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಆದೇಶದ ಅನುಷ್ಠಾನಕ್ಕೆ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಡಿಯೋ ಕಾನ್ಸ್ರೆನ್ಸ್ ಮೂಲಕ ತಾಲೂಕಿನ ಅಧಿಕಾರಿಗಳ ಜೊತೆ ಮಾತನಾಡಿದ ಅವರು, ಜೂನ್ 19ರಂದು ಅಂತಿಮ ಗಡುವು ಮುಗಿದಿದ್ದು, ಇನ್ಮುಂದೆ ನಿಷೇಧಿತ ಪ್ಲಾಸ್ಟಿಕ್ ಬಳಕೆ ಕಂಡು ಬಂದಲ್ಲಿ ಅಂಥವರ ಮೇಲೆ ಶಿಸ್ತು ಕ್ರಮ ಜರುಗಿಸಿ ಎಂದು ನಿರ್ದೇಶನ ನೀಡಿದರು. ಈ ಕಾರ್ಯಾಚರಣೆಯಲ್ಲಿ ಆಯುಕ್ತರು ಮತ್ತು ತಹಶೀಲ್ದಾರರ ಪಾತ್ರ ಅತ್ಯಂತ ಪ್ರಮುಖವಾದುದಾಗಿದೆ ಎಂದು ತಿಳಿಸಿದರು.
ಪ್ಲಾಸ್ಟಿಕ್‌ನಿಂದ ತಯಾರಿಸಿದ ಕಪ್ಪು, ಚಮಚ, ಪ್ಲೆಕ್ಸ್, ಬ್ಯಾನರ್, ಥರ್ಮಾಕೋಲ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಜೂನ್ 19ರಿಂದ ಕಡ್ಡಾಯ ನಿಷೇಧಿಸಲಾಗಿದ್ದು, ಇನ್ಮುಂದೆ ಯಾರು ಕೂಡ ನಿಷೇಧಿತ ಪ್ಲಾಸ್ಟಿಕ್ ಬಳಸಬಾರದು. ಹಾಗೊಂದು ವೇಳೆ ಬಳಸಿದ್ದು ಕಂಡುಬಂದಲ್ಲಿ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿ ಕ್ರಮ ವಹಿಸುತ್ತೇವೆ ಎಂಬುದನ್ನು ಜಿಲ್ಲೆಯ ಎಲ್ಲ ಜನತೆಗೆ ತಿಳಿಸಬೇಕಿದೆ ಎಂದರು.
ಈ ಕಾಯ್ದೆಯ ಅನುಷ್ಠಾನ ಹಿನ್ನೆಲೆಯಲ್ಲಿ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಡಿವೈಎಸ್‌ಪಿ
ಅವರನ್ನೊಳಗೊಂಡು ತಂಡ ರಚಿಸಬೇಕು. ಈ ತಂಡವು ಪ್ರತಿದಿನ ಎರಡು ಗಂಟೆಗಳ ಕಾಲ ದಾಳಿ ನಡೆಸಲು ಸಮಯ ಮೀಸಲಿಡಬೇಕು. ನಿಷೇಧಿತ ಪ್ಲಾಸ್ಟಿಕ್ ಬಳಸುವುದು ಕಂಡುಬಂದಲ್ಲಿ ಅಂಥವರ ಮೇಲೆ ಮೊಕದ್ದಮೆ ದಾಖಲಿಸಬೇಕು ಎಂದು ಸೂಚಿಸಿದರು.
ಪ್ರಾಚಾರ ಮಾಡಿ: ಪಟ್ಟಣ, ನಗರ ಪ್ರದೇಶಗಳಲ್ಲಿ ಸೇರಿದಂತೆ ಜಿಲ್ಲಾದ್ಯಂತ ಎಲ್ಲಾ ಕಡೆಗಳಲ್ಲಿ ಪ್ಲಾಸ್ಟಿಕ್
ಅನ್ನು ನಿಷೇಧಿಸಲಾಗಿದೆ. ಆದ್ದರಿಂದ ಹಳ್ಳಿಗಳಲ್ಲಿ ಕೂಡ ಈ ಬಗ್ಗೆ ಅರಿವು ಮೂಡಿಸಬೇಕಿದೆ. ಎಲ್ಲಾ ಹಳ್ಳಿಗಳಲ್ಲಿ
ಈ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಡ್ಡಾಯ ಒಂದು ವಾರಗಳ ಕಾಲ ಡಂಗೂರ ಬಾರಿಸಿ
ಜನತೆಗೆ ಮಾಹಿತಿ ನೀಡುವಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಮೂಲಕ ಕ್ರಮ ವಹಿಸಲು ಎಲ್ಲಾ
ತಾಲೂಕುಗಳ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಣಾಧಿಕಾರಿಗಳಿಗೆ ಸೂಚಿಸಲಾಯಿತು.
ಕಚೇರಿಯಲ್ಲಿ ಬಳಸಬೇಡಿ: ಜಿಲ್ಲೆಯಲ್ಲಿನ ಯಾವುದೇ ಇಲಾಖೆಯಲ್ಲಿ ಜೂನ್ 19ರಿಂದ ಪ್ಲಾಸ್ಟಿಕನ್ನು
ಬಳಸಬಾರದು. ಈ ಬಗ್ಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದು
ತಿಳಿಸಲಾಯಿತು. ನಮ್ಮ-ನಮ್ಮ ಕಚೇರಿಯಲ್ಲಿಯೇ ಪ್ಲಾಸ್ಟಿಕನ್ನು ಬಳಸುತ್ತ ಇತರರಿಗೆ ಬಳಸಬೇಡಿ ಎಂದು
ಹೇಳುವುದು ಸರಿಯಲ್ಲ. ಆದ್ದರಿಂದ ಎಲ್ಲಾ ಇಲಾಖೆ ಕಚೇರಿಗಳಲ್ಲಿ ಪ್ಲಾಸ್ಟಿಕ್ ಕಪ್, ಪ್ಲಾಸ್ಟಿಕ್ ಗ್ಲಾಸ್‌ಗಳ
ಬಳಕೆಯನ್ನು ಕಡ್ಡಾಯ ಬಿಡಬೇಕು ಎಂದು ನಿರ್ದೇಶನ ನೀಡಲಾಯಿತು.
ಫಂಕ್ಷನ್ ಹಾಲ್‌ಗಳಿಗೆ ಬಿಸಿ ಮುಟ್ಟಿಸಿ: ಹೆಚ್ಚಾಗಿ ಪ್ಲಾಸ್ಟಿಕ್ ವಸ್ತುಗಳ ಬಳಕೆಯು ನಾನಾ ಪಂಕ್ಷನ್
ಹಾಲ್‌ಗಳಲ್ಲಿಯೇ ನಡೆಯುತ್ತದೆ. ಇದಕ್ಕೆ ಕಡಿವಾಣ ಹಾಕಬೇಕು. ನಗರಸಭೆ, ಪುರಸಭೆ ಹಾಗೂ ಪಟ್ಟಣ
ಪಂಚಾಯಿತಿ ಇಲ್ಲವೇ ಗ್ರಾಪಂ ವ್ಯಾಪ್ತಿಯಲ್ಲಿ ಇರುವ ಪಂಕ್ಷನ್ ಹಾಲ್‌ಗಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ
ನಿಷೇಧಿತ ಪ್ಲಾಸ್ಟಿಕ್ ಕಪ್, ಗ್ಲಾಸ್, ಚಮಚ, ಬ್ಯಾನರ್, ಪ್ಲೇಕ್ಸ್‌ನ್ನು ಬಳಸದಂತೆ ಅವರಿಗೆ ಕಟ್ಟುನಿಟ್ಟಿನ ಸೂಚನೆ
ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.
ಅಂಗಡಿಗಳ ಮಾಲೀಕರಿಗೆ ಸೂಚನೆ ನೀಡಿ: ನಗರದಲ್ಲಿರುವ ಪ್ರಿಂಟಿಂಗ್ ಪ್ರೇಸ್, ಟೆಂಟ್ ಹೌಸ್, ಸಗಟು ವ್ಯಾಪಾರಿಗಳು, ನಾನಾ ಅಂಗಡಿಗಳ ಮಾಲೀಕರಿಗೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬೇಡಿ ಎಂದು ಮತ್ತೂಮ್ಮೆ ಮಾಹಿತಿ ನೀಡಬೇಕು.ಇನ್ಮುಂದೆ ಪ್ಲಾಸ್ಟಿಕ್‌ನ್ನು ಬಳಸಬೇಡಿ ಎಂದು ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಇಲ್ಲದಿದ್ದರೆ
ಕ್ರಮ ವಹಿಸುವುದಾಗಿ ಅವರಿಗೆ ಎಚ್ಚರಿಸಿ ಎಂದು ಅಧಿಕಾರಿಗಳಿಗೆ ತಿಳಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.