ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆ ಶುರು
Team Udayavani, Jun 23, 2018, 6:00 AM IST
ಬೆಂಗಳೂರು: ವಿಧಾನಸಭೆ ಚುನಾವಣೆ, ಸರ್ಕಾರ ರಚನೆ ಗೊಂದಲದಿಂದಾಗಿ ಈ ಬಾರಿ ವಿಳಂಬವಾಗಿದ್ದ ಸರ್ಕಾರಿ ನೌಕರರ ವರ್ಗಾವಣೆಗೆ ಚಾಲನೆ ಸಿಕ್ಕಿದ್ದು, ಜುಲೈ 31ರೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಮ್ಮಿಶ್ರ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ತಕ್ಷಣದಿಂದಲೇ ವರ್ಗಾವಣೆ ಪ್ರಕ್ರಿಯೆ ಆರಂಭಿಸಿ ಜುಲೈ 31ರೊಳಗೆ ಪೂರ್ಣಗೊಳಿಸಬೇಕು ಎಂದು ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ 2013ರಿಂದ ಜಾರಿಯಲ್ಲಿರುವ ವರ್ಗಾವಣೆ ಮಾರ್ಗಸೂಚಿಯಂತೆ ಈ ಬಾರಿಯೂ ವರ್ಗಾವಣೆ ನಡೆಯಲಿದೆ. ಆದರೆ, ಮಾರ್ಗಸೂಚಿಯಲ್ಲಿರುವ ವರ್ಗಾವಣೆ ಮಿತಿಯನ್ನು ಒಟ್ಟು ಇರುವ ಹುದ್ದೆಗಳ ಶೇ. 6ರ ಬದಲು ಶೇ.4ಕ್ಕೆ ಇಳಿಸಲಾಗಿದೆ.
ಸಚಿವ ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಮಾತನಾಡಿ, “”ಹೊಸ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಭಾರೀ ಪ್ರಮಾಣದಲ್ಲಿ ವರ್ಗಾವಣೆ ಬೇಡ. ಆದರೆ, ವರ್ಗಾವಣೆ ನಿರೀಕ್ಷೆಯಲ್ಲಿದ್ದ ನೌಕರರಿಗೆ ನಿರಾಶೆ ಉಂಟಾಗಬಾರದು ಮತ್ತು ಅಗತ್ಯ ಇರುವವರಿಗೆ ಅನ್ಯಾಯ ಆಗಬಾರದು ಎಂಬ ಕಾರಣಕ್ಕೆ ವರ್ಗಾವಣೆ ಪ್ರಮಾಣವನ್ನು ಈ ಬಾರಿ ಶೇ. 6ರಿಂದ ಶೇ. 4ಕ್ಕೆ ಇಳಿಸಿ ಪ್ರಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ” ಎಂದು ಹೇಳಿದರು.
“”ಸಾರ್ವತ್ರಿಕ ವರ್ಗಾವಣೆಗಳನ್ನು ಪ್ರತಿ ವರ್ಷ ಮೇ ಮತ್ತು ಜೂನ್ ತಿಂಗಳಲ್ಲಿ ಮಾಡಬೇಕು ಎಂಬ ನಿಯಮ ಇದೆಯಾದರೂ ಈ ಬಾರಿ ವಿಧಾನಸಭೆ ಚುನಾವಣೆ, ನಂತರ ಸರ್ಕಾರ ರಚನೆಯಲ್ಲಿ ಉಂಟಾದ ಗೊಂದಲದಿಂದಾಗಿ ಇದುವರೆಗೆ ವರ್ಗಾವಣೆಗೆ ಅವಕಾಶ ನೀಡಿರಲಿಲ್ಲ. ಈ ಮಧ್ಯೆ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿಗಳು ಮತ್ತೆ ಮಾತೃಸಂಸ್ಥೆಯಲ್ಲಿ ಕೆಲಸ ಆರಂಭಿಸಬೇಕಿತ್ತು. ಈ ಎಲ್ಲಾ ಕಾರಣಗಳಿಂದಾಗಿ ವಿಳಂಬವಾದ ವರ್ಗಾವಣೆ ಪ್ರಕ್ರಿಯೆಯನ್ನು ಇದೀಗ ಆರಂಭಿಸಲಾಗುತ್ತಿದೆ” ಎಂದು ತಿಳಿಸಿದರು.
ಮಾರ್ಗಸೂಚಿಯಲ್ಲೇನಿದೆ?
– ವರ್ಗಾವಣೆ ಪ್ರಮಾಣ ಇಲಾಖೆಯಲ್ಲಿ ಒಟ್ಟು ಇರುವ ನೌಕರರ ಸಂಖ್ಯೆಯ ಶೇ. 4ನ್ನು ಮೀರಬಾರದು. ವರ್ಗಾವಣೆಗೊಂಡ ನೌಕರ ಕಡ್ಡಾಯ ನಿರೀಕ್ಷೆಯಲ್ಲಿ ಉಳಿಯದಂತೆ ನೋಡಿಕೊಳ್ಳಬೇಕು.
– ವರ್ಗಾವಣೆಗೊಳ್ಳಬೇಕಾದರೆ ಎ ಮತ್ತು ಬಿ ಗ್ರೂಪ್‌ನವರು 3 ವರ್ಷ, ಸಿ ಗುಂಪಿನವರು 4 ವರ್ಷ ಮತ್ತು ಡಿ ಗ್ರೂಪ್‌ನವರು 7 ವರ್ಷ ಒಂದೇ ಹುದ್ದೆಯಲ್ಲಿ ಸೇವೆ ಸಲ್ಲಿಸಿರಬೇಕು. ಅದಕ್ಕಿಂತ ಕಡಿಮೆ ಸೇವೆ ಸಲ್ಲಿಸಿದವರನ್ನು ವರ್ಗಾವಣೆ ಮಾಡುವುದಾದಲ್ಲಿ ಮಾರ್ಗಸೂಚಿಯಲ್ಲಿ ನಿಗದಿಪಡಿಸಿದ ಮಾನದಂಡಗಳನ್ನು ಅನುಸರಿಸಬೇಕು.
– ಯಾವುದೇ ನೌಕರನ ವಿರುದ್ಧ ಗಂಭೀರ ಆರೋಪಗಳಿದ್ದಲ್ಲಿ ಹಾಗೂ ಆತನ ವಿರುದ್ಧ ಇಲಾಖಾ ವಿಚಾರಣೆ ಅಥವಾ ಕ್ರಿಮಿನಲ್ ನಡವಳಿಕೆ ಆರಂಭವಾಗಿದ್ದರೆ, ಇಲ್ಲವೇ ಬಾಕಿ ಇದ್ದರೆ ಅಂಥವರನ್ನು ಸೂಕ್ಷ್ಮಹುದ್ದೆಗಳಿಗೆ ನೇಮಿಸಬಾರದು. ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ಅವಕಾಶವಿಲ್ಲದೆ ಕಾರ್ಯಕಾರಿಯೇತರ (ನಾನ್ ಎಕ್ಸಿಕ್ಯೂಟಿವ್) ಹುದ್ದೆಗಳಿಗೆ ನೇಮಿಸಬೇಕು. ಜತೆಗೆ ಆತ ಕೋರಿದ ಕಡೆ ವರ್ಗಾವಣೆ ಕೊಡಬಾರದು.
– ನಿಯೋಜನೆಯ ಗರಿಷ್ಠ ಅವಧಿ ಐದು ವರ್ಷ. ಆದರೆ, ಹಿಂದಿನ ನಿಯೋಜನೆಯ ನಂತರ ಮಾತೃ ಇಲಾಖೆಯಲ್ಲಿ 2 ವರ್ಷಗಳ ಕೂಲಿಂಗ್ ಆಫ್ ಪಿರಿಯೆಡ್ ಮುಗಿಸದ ನೌಕರನನ್ನು ಹಿಂದಿನ ನಿಯೋಜನೆಯಲ್ಲಿ ಐದು ವರ್ಷ ಕಳೆದಿದ್ದರೂ ವರ್ಗಾವಣೆಗೆ ಪರಿಗಣಿಸಬಾರದು.
– ಇಲಾಖೆ ಹುದ್ದೆ ತುಂಬಲು ಆ ಇಲಾಖೆಯಲ್ಲಿ ಸೂಕ್ತ ಅಧಿಕಾರಿಗಳು ಲಭ್ಯವಿಲ್ಲದಿದ್ದಾಗ ಮಾತ್ರ ಇನ್ನೊಂದು ಇಲಾಖೆ ಅಧಿಕಾರಿಯನ್ನು ನಿಯೋಜಿಸಬೇಕು. ಈ ರೀತಿಯ ನಿಯೋಜನೆಗಳನ್ನು ಪ್ರತಿ ವರ್ಷ ಪರಿಶೀಲಿಸಿ ಸೂಕ್ತ ಅಧಿಕಾರಿಗಳು ಇದ್ದಾರೆಯೇ ಎಂಬುದನ್ನು ನೋಡಬೇಕು.
ಜುಲೈ 5ರಂದು ಬಜೆಟ್
ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮೊದಲ ವಿಧಾನ ಮಂಡಲ ಅಧಿವೇಶನ ಜು. 2ರಿಂದ 12ರವರೆಗೆ ನಡೆಯಲಿದೆ. ಜು. 2ರಂದು ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದು, ಜು. 5ರಂದು ಹೊಸ ಸರ್ಕಾರದ ಬಜೆಟ್ ಮಂಡನೆಯಾಗಲಿದೆ.
ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಮತ್ತು ಬಜೆಟ್ ಮಂಡನೆಗೆ ಮುಹೂರ್ತವನ್ನೂ ನಿಗದಿಮಾಡಲಾಗಿದ್ದು, ಜು. 2ರಂದು ಮಧ್ಯಾಹ್ನ 12.30ಕ್ಕೆ ರಾಜ್ಯಪಾಲರು ವಿಧಾನಸಭೆ ಸಭಾಂಗಣದಲ್ಲಿ ಎರಡೂ ಸದನಗಳ ಸದಸ್ಯರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅದೇ ರೀತಿ ಜು. 5ರಂದು ಬೆಳಗ್ಗೆ 11.30ಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಸಂಪುಟ ಸಭೆಯ ನಿರ್ಣಯಗಳ ಬಗ್ಗೆ ಸುದ್ದಿಗಾರರಿಗೆ ತಿಳಿಸಿದರು.
ಹೊಸ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡುವುದರೊಂದಿಗೆ ವಿಧಾನ ಮಂಡಲ ಕಲಾಪ ಆರಂಭವಾಗಬೇಕಾಗುತ್ತದೆ. ಅದರಂತೆ ಜು. 2ರಿಂದ 12ರವರೆಗೆ ಅಧಿವೇಶನ ಕರೆಯಲಾಗಿದೆ. ಮೊದಲ ದಿನ ರಾಜ್ಯಪಾಲರ ಭಾಷಣ ಇದ್ದರೆ, ಜು. 5ರಂದು ಬಜೆಟ್ ಮಂಡನೆ ಇರುತ್ತದೆ. ಜು. 12ರವರೆಗೆ ಬಜೆಟ್ ಮೇಲೆ ಚರ್ಚೆ ನಡೆದು ಸದನದ ಅಂಗೀಕಾರ ಪಡೆಯಲಾಗುವುದು ಎಂದು ಹೇಳಿದರು.
ಫಸಲ್ ಬಿಮಾ ಯೋಜನೆ:
ರೈತರ ಅನುಕೂಲಕ್ಕಾಗಿ 2018-19ನೇ ಸಾಲಿನಲ್ಲಿ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಬೆಳೆಗಳು ಸೇರಿ ವಿಮಾ ಕಂತು ಪಾವತಿಸಲು ರಾಜ್ಯ ಸರ್ಕಾರದ ಪಾಲು 655 ಕೋಟಿ ರೂ. ಒದಗಿಸಲು ಸಂಪುಟ ಅನುಮೋದನೆ ನೀಡಿದೆ. ರೈತರು ಮುಂಗಾರಿನಲ್ಲಿ ವಿಮಾ ಮೊತ್ತದ ಶೇ. 1.5ರಷ್ಟು ಮತ್ತು ಹಿಂಗಾರಿನಲ್ಲಿ ಶೇ. 2ರಷ್ಟು ಪಾವತಿಸಬೇಕು. ಉಳಿದ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭರಿಸುತ್ತವೆ.
ರಾಜ್ಯವನ್ನು ಕ್ಲಸ್ಟರ್‌ಗಳಾಗಿ ವಿಂಗಗಡಿಸಿ ಪ್ರತಿ ಕ್ಲಸ್ಟರ್‌ಗೆ ಟೆಂಡರ್ ಕರೆದು ವಿಮಾ ಕಂಪೆನಿಗಳನ್ನು ನಿಗದಿಪಡಿಸಲಾಗುತ್ತದೆ. ಬೆಳೆ ಮೌಲ್ಯದ ಶೇ. 8.5ರಿಂದ ಶೇ. 14.5ರವರೆಗೆ ವಿಮಾ ಮೊತ್ತ ನಿಗದಿಪಡಿಸಲು ಅವಕಾಶವಿದ್ದು, ಕಡಿಮೆ ಮೊತ್ತ ನಿಗದಿಪಡಿಸಿದವರಿಗೆ ಟೆಂಡರ್ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ:
ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಸುಧಾರಿಸಲು ಆರಂಭಿಸಿರುವ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದ 2ನೇ ಹಂತಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. 2ರಿಂದ 3 ವರ್ಷ ಅವಧಿಯ ಈ ಅಭಿಯಾನಕ್ಕೆ 460 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಈ ಪೈಕಿ ಕೇಂದ್ರ ಸರ್ಕಾರ ಶೇ. 60 ಮತ್ತು ರಾಜ್ಯ ಸರ್ಕಾರ ಶೇ. 20ರಷ್ಟು ಮೊತ್ತ ಭರಿಸಲಿದೆ. ಈ ನಿಟ್ಟಿನಲ್ಲಿ ರಾಜ್ಯದ ಪಾಲು ಭರಿಸಲು ಮತ್ತು ಕೇಂದ್ರದ ಜತೆಗಿನ ಒಡಂಬಡಿಕೆಗೆ ಸಂಪುಟ ಅನುಮೋದನೆ ನೀಡಿದೆ.
ಪದ್ಮ ಶಿಫಾರಸು ಅಧಿಕಾರ ಸಿಎಂಗೆ:
ಕೇಂದ್ರ ಸರ್ಕಾರ ಪ್ರತಿ ವರ್ಷ ಕೊಡಮಾಡುವ ಪದ್ಮ ಪ್ರಶಸ್ತಿಗಳಿಗೆ ರಾಜ್ಯ ಸರ್ಕಾರ ಹೆಸರುಗಳನ್ನು ಶಿಫಾರಸು ಮಾಡಬೇಕಿದ್ದು, ಶುಕ್ರವಾರದ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ ಕೇಂದ್ರಕ್ಕೆ ಹೆಸರುಗಳನ್ನು ಶಿಫಾರಸು ಮಾಡುವ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ವಹಿಸಲಾಗಿದೆ.
ಶಾಲಾ ಮಕ್ಕಳಿಗೆ 2ನೇ ಸೆಟ್ ಸಮವಸ್ತ್ರ
ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಪೂರೈಸುವ ಯೋಜನೆ ಸಲುವಾಗಿ ಎರಡನೇ ಸೆಟ್ ಸಮವಸ್ತ್ರ ವಿತರಣೆಗೆ 115 ಕೋಟಿ ರೂ. ಅನುದಾನ ಒದಗಿಸಲು ಸಂಪುಟ ಅನುಮೋದನೆ ನೀಡಿದೆ. ವಿದ್ಯಾರ್ಥಿಗಳಿಗೆ ಮೊದಲ ಸೆಟ್ ಸಮವಸ್ತ್ರವನ್ನು ರಾಜ್ಯ ಮಟ್ಟದಲ್ಲಿ ಟೆಂಡರ್ ಕರೆದು ನೀಡಲಾಗಿತ್ತು. ಆದರೆ, ತರಗತಿಗಳು ಈಗಾಗಲೇ ಆರಂಭವಾಗಿರುವುದರಿಂದ ಟೆಂಡರ್ ಮೂಲಕ ಸಮವಸ್ತ್ರ ನೀಡಿದರೆ ವಿಳಂಬವಾಗುತ್ತದೆ ಎಂದು ಎರಡನೇ ಸೆಟ್ ಸಮವಸ್ತ್ರವನ್ನು ಶಾಲಾಭಿವೃದ್ಧಿ ಸಮಿತಿಗಳ ಮೂಲಕ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಇದಕ್ಕಾಗಿ ಪ್ರತಿ ವಿದ್ಯಾರ್ಥಿಗೆ 300 ರೂ.ನಂತೆ ಶಾಲಾಭಿವೃದ್ಧಿ ಸಮಿತಿಗಳಿಗೆ ಹಣ ಒದಗಿಸಲಾಗುವುದು ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ರಾಮನಗರ, ಹಾಸನಕ್ಕೆ ಯೋಜನೆ
ಸಂಪುಟ ಸಭೆಯಲ್ಲಿ ಒಂಬತ್ತು ವಿಷಯಗಳಿದ್ದವಾದರೂ ಆರು ವಿಷಯಗಳು ರಾಜ್ಯ ಮಟ್ಟಕ್ಕೆ ಸಂಬಂಧಿಸಿದ್ದಾಗಿವೆ. ಒಂದು ವಿಷಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ್ದಾದರೆ, ಇನ್ನೆರಡು ಜಿಲ್ಲೆಗಳಿಗೆ ಸಂಬಂಧಿಸಿದ್ದವು. ಒಂದು ಮುಖ್ಯಮಂತ್ರಿಗಳು ಪ್ರತಿನಿಧಿಸುವ ರಾಮನಗರಕ್ಕೆ ಮತ್ತು ಇನ್ನೊಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣಕ್ಕೆ ಸಿಕ್ಕಿದೆ.
ರಾಮನಗರದಲ್ಲಿ 16.85 ಕೋಟಿ ರೂ. ವೆಚ್ಚದಲ್ಲಿ ವಸತಿ ಸಹಿತ ಪ್ರಥಮ ದರ್ಜೆ ಕಾಲೇಜು ಸ್ಥಾಪಿಸಲು ನಿರ್ಧರಿಸಲಾಗಿದೆ. ಅದೇ ರೀತಿ ಚನ್ನರಾಯಪಟ್ಟಣ ತಾಲೂಕಿನ ದಂಡಿಗಾನಹಳ್ಳಿ ಹೋಬಳಿಯ 35 ಗ್ರಾಮಗಳ ವ್ಯಾಪ್ತಿಗೆ ಬರುವ 20 ಕೆರೆಗಳನ್ನು 40 ಕೋಟಿ ರೂ. ವೆಚ್ಚದಲ್ಲಿ ತುಂಬಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
BJP: ಇಂದು ಅಶೋಕ್ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ
ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ
Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.