ರಾಮಾಯಣದ ಮರು ಮಥನ; ರಮ್ಯ ಸೃಜನಶೀಲ ತಿದ್ದುಪಡಿ
Team Udayavani, Jun 23, 2018, 4:03 PM IST
ವಾಲ್ಮೀಕಿ ವಿರಚಿತ ಮೂಲ ರಾಮಾಯಣದಿಂದ ಕವಲೊಡೆದು ರೂಪು ತಳೆದಿರುವ ರಾಮಾಯಣದ ಕೃತಿಗಳು ಅನೇಕ. “ತಿಣುಕಿದನು ಫಣಿರಾಯ ರಾಮಾಯಣಗಳ ಭಾರದಲಿ’ ಎಂದು ಒಬ್ಬ ಕವಿ ಹಾಡಿರುವುದು ಈ ಕಾರಣಕ್ಕಾಗಿಯೇ. ರಾಮಾಯಣ ಕೃತಿಯನ್ನು ಹಲವರು ತಾವು ನಂಬಿದ ಧರ್ಮ, ಸಿದ್ಧಾಂತ ಮತ್ತು ನೆಲೆಗಳ ಹಿನ್ನೆಲೆಯಲ್ಲಿ ದರ್ಶಿಸಿದ್ದಾರೆ. ಅವುಗಳನ್ನು ಕೃತಿಯಾಗಿಸಿದ್ದಾರೆ. ಒಂದೊಂದು ರಾಮಾಯಣದಲ್ಲಿ ಒಂದೊಂದು ಕಥೆ. ಮುಖ್ಯವಾಗಿರುವುದು ರಾಮ- ರಾವಣರ ಯುದ್ಧದ ಕಥೆಯೇ ಆದರೂ, ಪಾತ್ರ ಪೋಷಣೆಗಳು ಧರ್ಮದ ಹಿನ್ನೆಲೆಯಲ್ಲಿ ಮೂಲಕ್ಕಿಂತ ವಿಭಿನ್ನವಾಗಿ ರೂಪುಗೊಂಡಿವೆ. ನಾಗಚಂದ್ರನ ಕಾವ್ಯದಲ್ಲಿ ರಾವಣ ಖಳನಾಯಕಲ್ಲ, ಬದಲಾಗಿ ವಿಧಿಯ ಸೆಳೆತಕ್ಕೆ ಸಿಕ್ಕಿ ರೂಪುಗೊಂಡವನು. “ಅಬ್ದಿಯುಂ ಒರ್ಮೆ ಕಾಲವಶದಿಂದ ಮರ್ಯಾದೆಯಂ ದಾಂಟದೆ?’ ಎಂಬುದನ್ನು ನಾಗಚಂದ್ರ, ರಾವಣನಿಗೆ ಸಮೀಕರಿಸುತ್ತಾನೆ. ಆಧುನಿಕ ಸಂದರ್ಭದಲ್ಲಿ ಕುವೆಂಪು ಅವರ “ರಾಮಾಯಣ ದರ್ಶನಂ’ ಕೂಡ ಕೆಲ ಪಾತ್ರಗಳಿಗೆ ಸಂಬಂಧಿಸಿದಂತೆ ಹೊಸ ದರ್ಶನ ಮಂಡಿಸಿದೆ. ಮಂಥರೆ ಎಲ್ಲರಿಂದ ದೂಷಣೆಗೆ ಒಳಗಾಗಿದ್ದರೂ, ಅದನ್ನು ಕುವೆಂಪುರವರು ಆ ಪಾತ್ರದ ಒಳಹೊರಗನ್ನು ಚಿತ್ರಿಸಿರುವ ರೀತಿ ಅನನ್ಯ. ಹೀಗೆ ರಾಮಾಯಣ ಕೆಲವರ ವಿರೋಧದ ನಡುವೆಯೂ ಕಾಲ ದೇಶಗಳನ್ನ ಮೀರುತ್ತ ತನ್ನ ಪರಿಧಿಯನ್ನು ಇಂದಿಗೂ ವಿಸ್ತರಿಸಿಕೊಳ್ಳುತ್ತಲೇ ಇದೆ.
ಈ ಹಿನ್ನೆಲೆಯಲ್ಲಿ, ಈಚೆಗೆ ಮಲ್ಲೇಶ್ವರದ ಸೇವಾಸದನದಲ್ಲಿ “ಸಂಧ್ಯಾ ಕಲಾವಿದರು’ ತಂಡ ಪ್ರದರ್ಶಿಸಿದ “ಪೌಲಸ್ತ್ಯನ ಪ್ರಣಯ ಕಥೆ’, ರಾವಣನ ದೃಷ್ಟಿಯಲ್ಲಿ ರಾಮಾಯಣದ ಮರುಮಥನದಂತೆ ಇತ್ತು.
ವಾಲ್ಮೀಕಿ ರಾಮಾಯಣದ ಪ್ರಕಾರ ರಾವಣ ಒಬ್ಬ ಖಳನಾಯಕ. ಆದರೆ, “ಪೌಲಸ್ತ್ಯನ ಪ್ರಣಯ ಕಥೆ’ ನಾಟಕ ಲತಾವಂಶಿಯವರ ಕಾದಂಬರಿ ಆಧಾರಿತವಾದದ್ದು. ಇಲ್ಲಿ ಇಡೀ ರಾಮಾಯಣವನ್ನು ರಾವಣನ ಹಿನ್ನೆಲೆಯಲ್ಲಿ ಮರುದರ್ಶಿಸಲಾಗಿದೆ. ಖಳನಾಯಕ ಪಟ್ಟದ ಬದಲಿಗೆ ರಾವಣನನ್ನು ಪ್ರತಿನಾಯಕನನ್ನಾಗಿಸಿ ದರ್ಶಿಸಿದ್ದಾರೆ. ಒಂದು ರೀತಿಯಲ್ಲಿ ಇದು ಅತ್ಯಂತ ರಮ್ಯ ಸೃಜನಶೀಲ ತಿದ್ದುಪಡಿಯ ರೀತಿ ಕಾಣಿಸುತ್ತದೆ. ರಾವಣನ ಉದಾತ್ತತೆ, ಅವನಿಗಿದ್ದ ಸಂಗೀತ ಜ್ಞಾನ, ವಿಧಿ ಅವನ ಜೊತೆಗೆ ಆಡಿದ ಪರಿ, ಅದನ್ನು ಆತ ಸಮಚಿತ್ತದಿಂದ ಸ್ವೀಕರಿಸಿದ್ದ ರೀತಿ… ಹೀಗೆ ಒಂದೊಂದೂ ಸುಂದರ. ರಾಮಾಯಣದ ರಚನೆಯ ಸಂದರ್ಭದಿಂದಲೇ, ವಾಲ್ಮೀಕಿಯ ಜೊತೆಗೆ ರಾವಣನ ಕಥನ ಆರಂಭವಾಗಿ ಇಡೀ ಸನ್ನಿವೇಶ ಊಹಿಸಲಿಕ್ಕೂ ಸಾಧ್ಯವಾಗದ ತಿರುವುಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತದೆ. ಸಮಂಜಸ ತರ್ಕಗಳಿದ್ದಂತೆ ಇಲ್ಲಿ ಅಷ್ಟೇ ಸಮಂಜಸ ಉತ್ತರಗಳೂ ಇವೆ. ರಾವಣನ ಪಾತ್ರ ಮಾತ್ರವಲ್ಲದೆ ಮಂಡೋದರಿ, ಸೀತೆಯ ಹುಟ್ಟು, ಅಂಗದನ ಹುಟ್ಟು, ರಾವಣನೇ ರಾಮನ ಮದುವೆ ಮಾಡಿಸುವುದು… ಒಂದೊಂದೂ ಚಿಂತನೆಗೆ ಹಚ್ಚುವಂತೆ ಮಾಡುತ್ತ ಹೊಸ ಲೋಕದ ಅನಾವರಣವಾಗುತ್ತದೆ.
ಇದನ್ನು ರಂಗರೂಪಕ್ಕೆ ತಂದು ನಿರ್ದೇಶನದ ಹೊಣೆ ಹೊರುವುದರ ಜೊತೆಗೆ, ರಾವಣನ ಮುಖ್ಯಭೂಮಿಕೆಯಲ್ಲಿ ನಟಿಸಿದ ಎಸ್.ವಿ. ಕೃಷ್ಣಶರ್ಮರ ಅಧ್ಯಯನಶೀಲತೆ ಮತ್ತು ಪರಿಶ್ರಮ ದೊಡ್ಡದು. ಜೊತೆಗೆ ಅವರ ಸಾಹಸವನ್ನು ಮೆಚ್ಚಲೇಬೇಕು. ಈಗ ಜನ ಒಂದೂವರೆ ಗಂಟೆಗಿಂತ ಒಂದು ನಿಮಿಷ ಹೆಚ್ಚು ಕಾಲ ಕೂತು ನಾಟಕ ನೋಡುವುದಿಲ್ಲ ಎಂದೊಂದು ಟ್ಯಾಬೊ ಹುಟ್ಟಿಕೊಂಡಿದೆ. ಆದರೆ, ಇದು ಭರಪೂರ ಎರಡೂವರೆ ಗಂಟೆಗಳ ನಾಟಕ. ರಂಗಮಂದಿರ ತುಂಬಿತ್ತು. ಜನ ಮಿಸುಕದಂತೆ ನೋಡಿದರು. ಈ ಟ್ಯಾಬೊಗೆ ಲೆಕ್ಕಿಸದೆ ಕಾದಂಬರಿಯ ಕಥನವನ್ನು ರಂಗಕ್ಕೆ ಸಮರ್ಥವಾಗಿ ತಂದಿರುವುದು ಕೃಷ್ಣಶರ್ಮರ ಹೆಗ್ಗಳಿಕೆ. ನಾಟಕ ನೋಡುತ್ತಿದ್ದಾಗ, ರಾವಣನ ಕುರಿತ ಕಣಗಾಲ್ ಪ್ರಭಾಕರ ಶಾಸಿŒಗಳ “ಪ್ರಚಂಡ ರಾವಣ’ ನಾಟಕ ನೆನಪಾಗುತ್ತಿತ್ತು. ಅಲ್ಲೂ ರಾವಣನ ಭವ್ಯ ಪ್ರಭಾವಳಿ ಇದೆ. ಆದರೆ, ಅಲ್ಲಿ ವಸ್ತುವಿಗೆ ಅನುಗುಣವಾಗಿ ಮಾತುಗಳ ಚಮತ್ಕಾರವಿದೆ. ಪರಾಕ್ರಮದ ಬೀಡುಬೀಸು ಇದೆ. ಆದರೆ, ಪೌಲಸ್ತ್ಯನ ಪ್ರಣಯ ಕಥೆಯಲ್ಲಿ ಆ ಅಬ್ಬರ ಇಲ್ಲ. ಬದಲಿಗೆ ನಮ್ಮನ್ನು ತೀವ್ರವಾಗಿ ಕಲಕುವ ಬೌದ್ಧಿಕತೆ ಇದೆ. ಮರುದರ್ಶನವಿದೆ. ಪ್ರತಿಯೊಂದಕ್ಕೂ ಸಮಂಜಸ ಸ್ಪಷ್ಟೀಕರಣಗಳಿದ್ದಾವೆ. ಈ ಎಲ್ಲವನ್ನೂ ಹೇಳಲು ಕಾಲ ವಿಸ್ತರಿಸಿಕೊಳ್ಳುವುದು ಅನಿವಾರ್ಯವೇ. ಇದನ್ನು ಶರ್ಮರು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಎಲ್ಲರ ಅಭಿನಯವನ್ನೂ ತಿದ್ದಿದ್ದಾರೆ. ಪರಿಣಾಮವಾಗಿ ಯಾರ ಅಭಿನಯವೂ ಪೇಲವ ಅನಿಸಲಿಲ್ಲ. ತೀರಾ ಹಳ್ಳಿ ಪೌರಾಣಿಕ ನಾಟಕಗಳ ರೀತಿಯಲ್ಲಿ ಮೇಲಿಂದ ಮೇಲೆ ಹಾಡುಗಳಿಲ್ಲದಿದ್ದರೂ ಸಂದಭೋìಚಿತವಾಗಿ ಹಾಡುಗಳಿದ್ದವು. ರಾವಣನಾಗಿ ಕೃಷ್ಣಶರ್ಮರ ಅಭಿನಯ ಅಮೋಘ. ಹಳೇ ಕಾಲದ ಪೌರಾಣಿಕ ನಾಟಕದ ಭವ್ಯತೆಯನ್ನು ಮತ್ತೂಮ್ಮೆ ನೆನಪಿಸಿತು. ಕಣ್ಣಿಗೆ ಬಣ್ಣ, ಮನಕ್ಕೆ ವಿಚಾರ, ಸುಲಲಿತ ಭಾಷೆ ಎಲ್ಲವೂ ಮಿಶ್ರಣವಾಗಿ ರಾಮಾಯಣ ಹೊಸ ಪರಿಭಾಷೆಯಲ್ಲಿ ಕಲಕಲು ಆರಂಭಿಸಿತ್ತು.
ಎನ್.ಸಿ. ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.